HomePage_Banner
HomePage_Banner
HomePage_Banner
HomePage_Banner

ದ.ಕ.ಜಿಲ್ಲಾ ಲಗೋರಿ ಅಸೋಸಿಯೇಶನ್ ಸ್ಥಾಪನೆಯ ಪೂರ್ವಭಾವಿ ಸಭೆ

 

ಮಂಗಳೂರು : ಗ್ರಾಮೀಣ ಕ್ರೀಡೆಗಳಿಗೆ ನಿಯಮಾವಳಿ ರೂಪಿಸಿ ಹೊಸ ಸ್ವರೂಪ ನೀಡುವ ಮೂಲಕ  ಜನಪ್ರಿಯಗೊಳಿಸಲು  ಯತ್ನಿಸುವ  ಪ್ರಯತ್ನ ಸ್ವಾಗತಾರ್ಹ ಎಂದು ಅಂತಾರಾಷ್ಟ್ರೀಯ ಕಬಡ್ಡಿ ಆಟಗಾರ ಉದಯ ಚೌಟ ಹೇಳಿದರು.

ನಗರದ ಕ್ವಾಲಿಟಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ನಡೆದ ದ.ಕ.ಜಿಲ್ಲಾ ಲಗೋರಿ ಅಸೋಸಿಯೇಶನ್ ಸ್ಥಾಪನೆಯ ಪೂರ್ವಭಾವಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ‘ ನಮ್ಮ ಮಣ್ಣಿನ ಕ್ರೀಡೆಯಾದ ಕಬಡ್ಡಿ ಇಂದು ಜಗತ್ತಿನ ವಿವಿಧ ದೇಶಗಳಲ್ಲಿ ಜನಪ್ರಿಯತೆ ಪಡೆಯುತ್ತಿರುವುದು ಹೆಮ್ಮೆಯ ವಿಷಯ.  ಲಗೋರಿಯಂತಹ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾಸಕ್ತರನ್ನು ಒಳಗೊಂಡ ಅಸೋಸಿಯೇಶನ್ ರಚನೆ ಅವಶ್ಯವಾಗಿದೆ’ಎಂದರು.

ಲಗೋರಿ ಆಟದ ನಿಯಮಾವಳಿ ರೂಪಿಸಿದ ದೈಹಿಕ ಶಿಕ್ಷಣ ಶಿಕ್ಷಕ ದೊಡ್ಡಣ್ಣ ಬರಮೇಲು ಮಾತನಾಡಿ ‘ ಈಗಾಗಲೇ ಸುಳ್ಯ ಮತ್ತು ಪುತ್ತೂರಿನಲ್ಲಿ ಲಗೋರಿ ಅಸೋಸಿಯೇಶನ್ ಸ್ಥಾಪನೆಯಾಗಿದ್ದು, ಹಲವು ಲಗೋರಿ ಪಂದ್ಯಾಟಗಳನ್ನು ಆಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಅಸೋಸಿಯೇಶನ್ ರಚನೆ ಬಳಿಕ ಎಲ್ಲ ತಾಲೂಕುಗಳಲ್ಲಿ ಅಸೋಸಿಯೇಶನ್ ರಚಿಸಲಾಗುವುದು. ಆಸಕ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಲಗೋರಿ ಆಟದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಲು ತರಬೇತಿ ನೀಡಲಾಗುವುದು ಎಂದರು. ಲಗೋರಿ ಆಟದ  ನಿಯಮಾವಳಿಗಳ ಬಗ್ಗೆ  ಅವರು ವಿವರ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸುಳ್ಯ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಎನ್.ಎ.ರಾಮಚಂದ್ರ ಮಾತನಾಡಿ  ಕಳೆದ ೧೮ ವರ್ಷಗಳಿಂದ ದೊಡ್ಡಣ್ಣ ಬರೆಮೇಲು ಅವರು ಲಗೋರಿ ಆಟವನ್ನು ಜನಪ್ರಿಯಗೊಳಿಸಲು ನಿರಂತರ ಶ್ರಮ ವಹಿಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಅಸೋಸಿಯೇಶನ್ ರಚನೆಯಿಂದ ಲಗೋರಿ ಆಟದ ಬೆಳವಣಿಗೆಗೆ ಹೊಸ ಆಯಾಮ ದೊರೆಯಲಿದೆ ಎಂದರು.

ಮುಖ್ಯ ಅತಿಥಿಗಳಾಗಿದ್ದ ದ.ಕ.ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಪೂಜಾರಿ, ದ.ಕ.ಜಿಲ್ಲಾ ವಾಲಿಬಾಲ್ ಅಸೋಸಿಯೇಶನ್‌ನ ಉಪಾಧ್ಯಕ್ಷ ಸಂಶುದ್ದೀನ್ ಸುಳ್ಯ, ಪತ್ರಕರ್ತ ಪಿ.ಬಿ.ಹರೀಶ್ ರೈ ಲಗೋರಿ ಅಸೊಸಿಯೇಶನ್ ರಚನೆ ಸಂಬಂಧಿಸಿ ಸಲಹೆ ಸೂಚನೆ ನೀಡಿದರು. ಕ್ರೀಡಾ ತರಬೇತುದಾರ ಬಿ.ಕೆ.ಮಾಧವ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ದ.ಕ.ಜಿಲ್ಲಾ ಲಗೋರಿ ಅಸೊಸಿಯೇಶನ್‌ಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.