Home_Page_Advt
Home_Page_Advt
Home_Page_Advt
Breaking News

ಜೇನಿನ ಗೂಡಿನಲ್ಲಿ ಅಡಗಿದೆ ಸವಿ ಜೀವನ – ಜೇನಿನ ಒಗ್ಗಟ್ಟು ಬದುಕಿನ ಗುಟ್ಟು

ಜಗ-ಜಗಲಿ
ಶರತ್ ಆಳ್ವ ಚನಿಲ
ಉಪನ್ಯಾಸಕರು
ಸಂತ ಫಿಲೋಮಿನಾ ಪಿ.ಯು ಕಾಲೇಜು
ಪುತ್ತೂರು


ಜೇನು ಎಂದೊಡನೆ ಬಾಯಿ ಚಪ್ಪರಿಸದವರು ಯಾರಿದ್ದಾರೆ ..!? ಜೇನು ಕೇವಲ ಸಿಹಿಯಾದುದು ಮಾತ್ರವಲ್ಲದೇ ಅನೇಕ ಔಷಧೀಯ ಗುಣಗಳನ್ನೂ ಹೊಂದಿದ್ದು, ಬೇಕರಿ ತಿಂಡಿ ತಿನಿಸುಗಳ ಉತ್ಪಾದನೆಯಲ್ಲೂ ಬಳಕೆಯಾಗುತ್ತಿದೆ. ವಿದೇಶಗಳಲ್ಲಿಯೂ ಭಾರೀ ಬೇಡಿಕೆಯಿದ್ದು, ಭಾರತದ ಗುಣಮಟ್ಟದ ಜೇನು ಆಮದಿಗೆ ಹಲವು ರಾಷ್ಟ್ರಗಳು ಹಾತೊರೆಯುತ್ತಿವೆ. ಪ್ರಕೃತಿಯಲ್ಲಿ ವಿಫುಲವಾಗಿ ದೊರಕುವ ಮಕರಂದ ವ್ಯರ್ಥವಾಗಿ ಹೋಗುವ ಬದಲು ಅದನ್ನು ಬಳಸಿಕೊಂಡು ಆರೋಗ್ಯಕರ ಕೃಷಿಯೊಂದಿಗೆ ಉತ್ತಮ ಆದಾಯವನ್ನೂ ಪಡೆಯಬಹುದಾಗಿದ್ದು ಪರ್ಯಾಯ ಅಥವಾ ಪ್ರಧಾನ ವೃತ್ತಿಯನ್ನಾಗಿಯೂ, ಸುಲಭವಾಗಿಯೂ ಈ ಕೃಷಿ ಮಾಡಬಹುದು.

“ಶ್ರೇಷ್ಟ ಜೇನು ಕೃಷಿಕ ಸಾಕಾಣಿಕೆ ಮಾಡುತ್ತಿದ್ದನ್ನು ಕಂಡು ಅವರಿಂದ ಪ್ರೇರೇಪಣೆಗೊಂಡು, ರಜಾ ಅವಧಿಯಲ್ಲಿ ಗುಡ್ಡೆ ಬೆಟ್ಟ ಸುತ್ತಿ ಕಾಡುಜೇನು ಹುಡುಕಿ ಕುಟುಂಬ ತಂದು ಸಾಕಾಣಿಕೆ ಮಾಡುತ್ತಿದ್ದೆನು. ಕೇವಲ ಒಂದು ಪೆಟ್ಟಿಗೆಯಿಂದ ಆರಂಭಿಸಿದ ಜೇನು ಸಾಕಾಣಿಕೆ ಪ್ರಸ್ತುತ ಬರೋಬ್ಬರಿ 700 ಪೆಟ್ಟಿಗೆಯವರೆಗೆ ಮುಂದುವರಿಯಿತು” ಎನ್ನುತ್ತಾರೆ ಒಬ್ಬ ಜೇನು ಕೃಷಿಕ.

ಜೇನು ಕೃಷಿ ಮಾಡುವಿರೊ ಹೀಗೆ ಬನ್ನಿ…..
ಜೇನು ಸಾಕಾಣಿಕೆಯ ಮೂರು ಹಂತಗಳು:
ಜೇನು ಸಾಕಾಣಿಕೆಯನ್ನು ವರ್ಷವೊಂದಕ್ಕೆ ಮೂರು ಕಾಲ ಅಥವಾ ಅವಧಿಗಳನ್ನಾಗಿ ವಿಭಾಗಿಸಲಾಗಿದೆ. ಹೆಚ್ಚಿನವರು ಹವ್ಯಾಸವಾಗಿ ಸಾಕಾಣಿಕೆ ಮಾಡಲು ಹೋಗಿ ಈ ಅವಧಿಗಳ ತಿಳುವಳಿಕೆಯಿಲ್ಲದೇ ವಿಫಲರಾಗಿ ‘ಇದು ಆಗುವ ಹೋಗುವ ಕೆಲಸವಲ್ಲ’ ಎಂದು ಹೇಳಿ ಹಿಂಜರಿಯುವವರೂ ಇದ್ದಾರೆ.

ಅಭಾವ ಕಾಲ (ಜೂನ್ – ಜುಲೈ – ಅಗೋಸ್ತು):
ಈ ಸಮಯದಲ್ಲಿ ಜೇನು ಕುಟುಂಬದ ಪೋಷಣೆ ಮಾಡಬೇಕು. ಆಹಾರದ ಕೊರತೆ ನೀಗಿಸಲು ಕೃತಕವಾಗಿ ಸಕ್ಕರೆ ನೀರನ್ನು 1:1 ಪ್ರಮಾಣದಲ್ಲಿ ಸಪ್ಟೆಂಬರ್ ತಿಂಗಳವರೆಗೆ ನೀಡಬೇಕು. ಯಾವುದೇ ತೊಂದರೆಗಳಾಗದಂತೆ ಸೂಕ್ಷ್ಮವಾಗಿ ನೋಡಿಕೊಳ್ಳಬೇಕು.

ಅಭಿವೃದ್ಧಿ ಹೊಂದುವ ಕಾಲ (ಸೆಪ್ಟೆಂಬರ್ – ಅಕ್ಟೋಬರ್ -ಡಿಸೆಂಬರ್):
ಈ ಸಮಯದಲ್ಲಿ ಜೇನು ಕುಟುಂಬ ವೃದ್ಧಿಯಾಗಿ ಒಂದು ಕುಟುಂಬ ಹಲವು ಕುಟುಂಬಗಳಾಗಿ ಒಡೆಯುತ್ತವೆ. ಇಂತಹ ಸಮಯದಲ್ಲಿ ರಾಣಿ ನೊಣವನ್ನು ಬೇರ್ಪಡಿಸಿ ಕುಟುಂಬ ಬೇರ್ಪಡಿಸಬೇಕು. ಜೇನು ಕುಟುಂಬಗಳಿಗೆ ಭಾರೀ ಬೇಡಿಕೆ ಇರುವುದರಿಂದ ಈ ಸಮಯದಲ್ಲಿ ಅವುಗಳನ್ನು ಮಾರಾಟ ಮಾಡಬಹುದಾಗಿದೆ. ಒಂದು ಕುಟುಂಬದಲ್ಲಿ ಸುಮಾರು 8ಕುಟುಂಬಗಳನ್ನು ಪಡೆಯಲು ಸಾಧ್ಯವಿದೆ ಎನ್ನುತ್ತಾರೆ ಮನಮೋಹನ್‌ರವರು.

ಜೇನು ಬರುವ ಕಾಲ (ಜನವರಿ-ಫೆಬ್ರವರಿ-ಮಾರ್ಚ್-ಏಪ್ರಿಲ್-ಮೇ):
ಈ ಸಮಯದಲ್ಲಿ ಪೆಟ್ಟಿಗೆಯಲ್ಲಿರುವ ಎರಿಗಳು ಜೇನು ತುಂಬಿ ಪಕ್ವವಾಗಿರುತ್ತವೆ. ಸಂಸಾರದ ಎರಿ ಬಿಟ್ಟು ಉಳಿದ ಎರಿಗಳಿಂದ ಜೇನು ತೆಗೆಯಬೇಕು. ಈ ಅವಧಿಯಲ್ಲಿ ಸುಮಾರು 6 ಸಲ (8 ದಿವಸಕ್ಕೊಮ್ಮೆ) ಜೇನು ತೆಗೆಯಬಹುದಾಗಿದೆ.

ಜೇನು ಕೃಷಿಗೆ ಸರಕಾರದ ಸಹಾಯವೇನು..?
ಜೇನು ಕೃಷಿ ಮಾಡುವ ಆಸಕ್ತಿಯುತ ಮನಸ್ಸು ಇದಕ್ಕಿರುವ ಕೊರತೆಗಳನ್ನು ನೀಗಿಸುತ್ತದೆ. ಜೇನು ಕುಟುಂಬ ಖರೀದಿಸಲು ಮತ್ತು ಪೆಟ್ಟಿಗೆಗೆ ಸರಕಾರದಿಂದ ತೋಟಗಾರಿಕೆ ಇಲಾಖೆ ಮೂಲಕ ಶೇ. 40 ರಷ್ಟು ಸಹಾಯಧನ ದೊರಕುತ್ತಿದೆ. ಜೇನು ತೆಗೆಯುವ ಯಂತ್ರ ಖರೀದಿಗೂ ಶೇ. 40 ಸಹಾಯಧನವಿದೆ. ಮಾತ್ರವಲ್ಲದೇ ಇಲಾಖೆಯ ವತಿಯಿಂದಲೇ ಪ್ರತೀ ವರ್ಷ 3 ದಿನಗಳ ಪ್ರಮಾಣೀಕೃತ ತರಬೇತಿಯೂ ನೀಡಲಾಗುತ್ತಿದೆ.

ಜೇನು ಕೃಷಿಗೆ ಉತ್ತಮ ಧಾರಣೆಯಿದೆಯೇ..?
ಸದ್ಯ ಊರಿನ ಜೇನುಗೆ ಮಾರುಕಟ್ಟೆಯಲ್ಲಿ ರೂ. 350 ರಿಂದ 450 ರಷ್ಟು ಧಾರಣೆಯಿದೆ. ರಬ್ಬರ್ ತೋಟದ ಜೇನುವಿಗೆ ರೂ. 250 ರಷ್ಟಿದೆ. ಜೇನು ಜೊತೆ ಒಂದು ಜೇನು ಕುಟುಂಬ ಮಾರಾಟ ಮಾಡಿದರೆ 800 ರೂ. ಇದೆ. ಇನ್ನು ಜೇನು ಮೇಣಕ್ಕೆ ಕೆ.ಜಿ.ಗೆ 400 ರೂ. ಇದೆ.

1 ಎಕ್ರೆಯಲ್ಲಿ 50 ಪೆಟ್ಟಿಗೆಯ ತಯಾರಿ.. 
ಇಂದು ಎಕರೆ ಜಾಗ ಪ್ರದೇಶದಲ್ಲಿ ಅಡಿಕೆ ತೋಟಗಳ ಎಡೆಯಲ್ಲಿ 10ಅಡಿ ಅಂತರದಲ್ಲಿ ಸುಮಾರು ೫೦ ಪೆಟ್ಟಿಗೆಗಳನ್ನು ಇಡಬಹುದಾಗಿದೆ. ಒಂದು ಪೆಟ್ಟಿಗೆಯಲ್ಲಿ ವರ್ಷವೊಂದಕ್ಕೆ ಸರಾಸರಿ 10-20 ಕೆ.ಜಿ. ಜೇನು ಪಡೆಯಬಹುದು. ಜೇನು ಬರುವ ಕಾಲದಲ್ಲಿ ವಾರದಲ್ಲಿ ಒಂದು ಪೆಟ್ಟಿಗೆಗೆ 5ನಿಮಿಷಗಳ ದುಡಿಮೆ ಸಾಕಾಗುತ್ತದೆ. ಹಾಗಾಗಿ ಪೆಟ್ಟಿಗೆಯೊಂದರಲ್ಲಿ ಕನಿಷ್ಟ 10 ಕೆ.ಜಿ. ಜೇನು ಸಿಕ್ಕಿದರೂ ನಷ್ಟವಿಲ್ಲ ಎನ್ನುತ್ತಾರೆ ಅರಂಬ್ಯರವರು.

ಅಪರೂಪದ ರೋಗ ಯಾವುದು ಗೊತ್ತೆ…!
ಜೇನು ನೊಣಗಳಿಗೆ ರೋಗ ಬರುವುದಿಲ್ಲ. ಬಂದರೂ ಅಪರೂಪಕ್ಕೆ ‘ತಾಯಿ ಸಾಕ್ ಬ್ರೋಡ್’ ಎಂಬ ರೋಗ ಬಾಧೆಯಿದೆ. ಅರಿಶಿನ ಹುಡಿ ಹಾಕುವುದರಿಂದ ಇದನ್ನು ನಿಯಂತ್ರಿಸಬಹುದಾಗಿದೆ.

ಕಡಿಮೆ ಆಳು ಸಾಕು..!
ಜೇನು ಸಾಕಾಣಿಕೆಯಲ್ಲಿ ಕಡಿಮೆ ಅವಧಿಯ ದುಡಿಮೆಯಿರುತ್ತದೆ. ಸಾಮಾನ್ಯವಾಗಿ 50-150 ಪೆಟ್ಟಿಗೆಯವರೆಗೆ ಓರ್ವನಿಗೆ ನಿರ್ವಹಣೆ ಮಾಡಬಹುದು. ಅದರಿಂದ ಹೆಚ್ಚಾದಾಗ ಜೇನು ತೆಗೆಯುವ ಸಂದರ್ಭದಲ್ಲಿ ಮಾತ್ರ ಒಂದೀರ್ವರ ಸಹಾಯ ಬೇಕಾಗಬಹುದು.

ಜೇನು ತೆಗೆಯುವ ಯಂತ್ರದ ಬಗ್ಗೆ ಒಂದಿಷ್ಟು…
ಜೇನು ತೆಗೆಯುವ ಯಂತ್ರ ಖರೀದಿಸಲೂ ಇಲಾಖೆಯಿಂದ ಸಹಾಯಧನ ಪ್ರೋತ್ಸಾಹವಿದೆ. ನೊಣಗಳು ೮ ಕೆ.ಜಿ.ಯಷ್ಟು ಜೇನು ತಿಂದು ಸುಮಾರು 1 ಕೆ.ಜಿ.ಯ ಮೇಣ ತಯಾರಿಸಿರುವುದರಿಂದ ಎರಿಯನ್ನು ಯಂತ್ರಕ್ಕೆ ಕೊಡುವಾಗ ಜಾಗೃತೆ ವಹಿಸಬೇಕಾಗುತ್ತದೆ.

1 ಜೇನು ಪೆಟ್ಟಿಗೆ ಸುಮಾರು 5 ವರ್ಷಗಳವರೆಗೆ ಬಾಳ್ವಿಕೆ ಬರುತ್ತದೆ. ಸಂಘದಲ್ಲಿ ಪೆಟ್ಟಿಗೆ ದೊರೆಯುತ್ತದೆ. 2000 ರೂ. ನ ಪೆಟ್ಟಿಗೆಗೆ ಮತ್ತು ಜೇನು ಕುಟುಂಬಕ್ಕೆ ರೂ. 800+800 ಸಹಾಯಧನವಿದೆ.

ಆದರೆ ಹವಾಮಾನ ವೈಪರೀತ್ಯ, ಕ್ರಿಮಿಕೀಟಗಳು ಮತ್ತು ನೊಣಗಳ ರಕ್ಷಣೆ ಇತ್ಯಾದಿಗಳನ್ನು ಗಮನಿಸುವಾಗ ಜೇನು ಕೃಷಿ ತುಸು ಕಷ್ಟದಾಯಕ ಎನಿಸುತ್ತದೆ. ಆದರೆ ಜೇನು ಕೃಷಿಯನ್ನೇ ಕಾಯಕವನ್ನಾಗಿಸುವವರು ಈ ಮಾತನ್ನು ಅಲ್ಲಗಳೆಯುತ್ತಾರೆ. ವಿಶ್ರಾಂತಿಯ ಸಮಯದಲ್ಲೊ ಅಥವಾ ಹವ್ಯಾಸಿಯಾಗಿಯೋ ಜೇನು ಕೃಷಿ ಮಾಡಿ ಆದಾಯ ಗಳಿಸಬಹುದು ಎನ್ನುತ್ತಾರೆ. ಹವ್ಯಾಸವಾಗಿ ಬೆಳೆದ ಜೇನು ಸಾಕಾಣಿಕೆಯ ಆಸಕ್ತಿ ತನ್ನ ಜೀವನ ನಿರ್ವಹಣೆಯ ದಾರಿಯನ್ನೇ ಕಂಡುಕೊಳ್ಳಬಲ್ಲುದು ಎಂದು ಊಹಿಸಿರಲಿಲ್ಲ ಎನ್ನುತ್ತಾರೆ ಕೆಲವರು. ಹಾಗಾದರೆ ನಾವೂ ಕೂಡ ಜೇನು ಕೃಷಿಗೆ ಮುಂದಡಿ ಇಡೋಣವಲ್ಲವೇ…..

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.