ಪುತ್ತೂರು: ಪುರಾತನ ಸಂಪ್ರದಾಯ, ಆಚರಣೆಗಳು ಭಾರತೀಯ ಸಂಸ್ಕೃತಿಯ ಭಾಗ. ಅದಕ್ಕೆ ತನ್ನದೇ ಆದ ಮಹತ್ವವಿದೆ. ಆಟಿ ಆಚರಣೆಯ ಹೆಸರಿನಲ್ಲಿ ವಿವಿಧ ತಿನಿಸುಗಳನ್ನು ಮಾಡಲಾಗುತ್ತದೆ. ಆಚರಣೆಗಳು ಫ್ಯಾಶನ್ ರೂಪದಲ್ಲಿ ನಡೆಯದೆ ಸಂಪ್ರದಾಯ, ಆಚರಣೆಗಳನ್ನು ಉಳಿಸಲು ಸಹಕಾರಿಯಾಗಬೇಕು. ಆಚರಣೆಯ ವಿಶೇಷತೆ ಆಚರಣೆಯ ಒಂದು ದಿನಕ್ಕೆ ಸೀಮಿತವಾಗದಿರಲಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಲಯನ್ಸ್ ಕ್ಲಬ್ ಪುತ್ತೂರು, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು, ತಾಲೂಕು ಮಹಿಳಾ ಒಕ್ಕೂಟ, ನವ್ಯಶ್ರೀ ಮಹಿಳಾ ಮಂಡಲ, ವನಿತಾ ಸಮಾಜ ಹಾರಾಡಿ ಹಾಗೂ ಶಿವಳ್ಳಿ ಸಂಪದ ಮಹಿಳಾ ವಿಭಾಗ ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ಆ.13ರಂದು ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಆಟಿದ ಪೊರ್ಲು ಕಾರ್ಯಕ್ರಮವನ್ನು ಚೆನ್ನೆಮಣೆ ಆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಪೂರ್ವಜರ ಆಚರಣೆಯಲ್ಲಿದ್ದ ಪ್ರತಿಯೊಂದು ಆಚರಣೆಗಳಿಗೆ ಬೌಗೋಳಿಕ ಹಿನ್ನೆಲೆಯಿದೆ. ಪ್ರತಿಯೊಂದು ಆಹಾರ ಪದ್ದತಿಯಲ್ಲೂ ವೈಜ್ಞಾನಿಕ ಮಹತ್ವವಿದೆ. ಈ ಪುರಾತನ ಸಂಪ್ರದಾಯಗಳು ಮೂಡನಂಬಿಕೆಗಳಲ್ಲ. ಆಚರಣೆಯ ಹಿಂದೆ ವೈಜ್ಞಾನಿಕ ಹಿನ್ನೆಲೆಯಿದೆ ಎಂದರು. ಆಟಿ ಆಚರಣೆಗಳ ಮೂಲಕ ಮಾನವೀಯ ಮೌಲ್ಯಗಳ ವೃದ್ಧಿಯಾಗಬೇಕು. ಆಚರಣೆಗಳು ಇಂದಿನ ಕಾಲಕ್ಕೆ ಹೆಚ್ಚು ಸೂಕ್ತವಾಗಿದ್ದು ನಮ್ಮ ತನವನ್ನು ಉಳಿಸುವಲ್ಲಿ ಆಚರಣೆಗಳು ನಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಇಂದಿನ ಮಕ್ಕಳಲ್ಲಿ ಸಂಸ್ಕಾರದ ಕೊರತೆಯಿಂದ ಅವರು ದಾರಿ ತಪ್ಪುತ್ತಿದ್ದಾರೆ. ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಆಟಿ ಆಚರಣೆಯಂತ ಪುರಾತನ ಸಂಪ್ರದಾಯಗಳನ್ನು ನೆಪಿಸುವ ಜೊತೆಗೆ ಮಕ್ಕಳ ಭವಿಷ್ಯಕ್ಕೆ ಪೂರಕವಾದ ಸಂಸ್ಕಾರಗಳ ಅರಿವು ಮೂಡಿಸಬೇಕಾದ ಆವಶ್ಯಕತೆಯಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ನಮ್ಮ ಪೂರ್ವಜರಲ್ಲಿ ಆಚರಣೆಯಲ್ಲಿದ್ದ ಆಟಗಳು, ತಿನಿಸುಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಹಿಳಾ ಸಂಘಟನೆಗಳ ಮುಖಾಂತರ ನಡೆಯುತ್ತಿದೆ ಎಂದರು.
ಮಂಗಳೂರು ಮಹಿಳಾ ಮಂಡಲ ಅಧ್ಯಕ್ಷೆ ಚಂಚಲಾಕ್ಷಿ ಮಾತನಾಡಿ, ಆಟಿ ಆಚರಣೆಯಂತ ಕಾರ್ಯಕ್ರಮಗಳು ಮಹಿಳೆಯರಿಗೂ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಉತ್ತಮ ಅವಕಾಶವಾಗಿದೆ ಎಂದರು.
ಪ್ರಭಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಭಾರತಿ, ನಿವೃತ್ತ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ.ಹೆಗಡೆ, ಲಯನ್ಸ್ ಕ್ಲಬ್ನ ಕಾರ್ಯದರ್ಶಿ ಹರಿಪ್ರಸಾದ್ ಸಂದರ್ಭೋಚಿತವಾಗಿ ಮಾತನಾಡಿದರು. ಆಟಿ ಆಚರಣೆಯ ಅಂಗವಾಗಿ ನಡೆಸಲಾಗಿದ್ದು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ಅನ್ನಪೂರ್ಣ ಹಾಗೂ ಜ್ಯೋತಿ ಆರ್.ನಾಯಕ್ ಪ್ರಾರ್ಥಿಸಿದರು. ಲಯನ್ಸ್ ಕ್ಲಬ್ ಕೋಶಾಧಿಕಾರಿ ಜಯಶ್ರೀ ಎಸ್.ಶೆಟ್ಟಿ ಪ್ರಾರ್ಥಿಸಿದರು. ಸುರೇಖಾ ಹೆಬ್ಬಾರ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ವನಿತ ಸಮಾಜದ ಉಪಾಧ್ಯಕ್ಷೆ ವತ್ಸಲಾ ರಾಜ್ಞಿ ಬಹುಮಾನ ವಿಜೇತರ ಪಟ್ಟಿ ಓದಿದರು. ನಗರ ಸಭಾ ಸದಸ್ಯೆ ಗೌರಿ ಬನ್ನೂರು ಕಾರ್ಯಕ್ರಮ ನಿರೂಪಿಸಿ, ನವ್ಯಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ರಾವ್ ವಂದಿಸಿದರು.