Home_Page_Advt
Home_Page_Advt
Home_Page_Advt
Breaking News

ಮಳೆ ಬಂದರೆ ಸಂಪರ್ಕ ಕಡಿತ, ವಿದ್ಯಾರ್ಥಿಗಳಿಂದ ಸರ್ಕಸ್‌ ಯಾನ! ರಾಗಿದಕುಮೇರು ಅಂದ್ರಟ್ಟದಲ್ಲಿ ಅಪಾಯ ಸ್ಥಿತಿಯಲ್ಲಿದೆ ಶಿಥಿಲಗೊಂಡ ಕಿಂಡಿ ಅಣೆಕಟ್ಟು

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ರಾಗಿದಕುಮೇರು ಅಂದ್ರಟ್ಟದಲ್ಲಿ ಸುಮಾರು ೪೦ ವರ್ಷಗಳ ಹಿಂದೆ ಬೆದ್ರಾಳ ಹೊಳೆಗೆ ನಿರ್ಮಾಣಗೊಂಡಿರುವ ಉಪಯೋಗಕ್ಕಿಲ್ಲದ ಕಿಂಡಿ ಅಣೆಕಟ್ಟು ಪ್ರಸ್ತುತ ಕೇವಲ ಸಂಪರ್ಕ ಸಾಧನವಾಗಿದೆಯಾದರೂ ಇದೀಗ ಸಂಕದ ಅಡಿಪಾಯಕ್ಕೆ ಹಾನಿಯಾಗಿದ್ದು, ಅಪಾಯದ ಮಟ್ಟದಲ್ಲಿದ್ದು ಸಾವಿನ ಮನೆಯ ಕದ ತಟ್ಟುತ್ತಿದೆ. ಇದೇ ದಾರಿಯಲ್ಲಿ ಅನೇಕ ಮಂದಿ ಸಾರ್ವಜನಿಕರು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳ ಸಂಪರ್ಕಕ್ಕೆ ಸರ್ಕಸ್ ಯಾನ ಮಾಡುತ್ತಿದ್ದಾರೆ.

ಮಳೆಗಾಲದಲ್ಲಿ ನೀರಿನ ಒಳಹರಿವಿನ ತೀವ್ರತೆ ಹೆಚ್ಚಾಗಿರುವುದರಿಂದ ಈಗಾಗಲೇ ಕಿಂಡಿ ಅಣೆಕಟ್ಟಿನ ಮಧ್ಯ ಭಾಗ ಮತ್ತು ಅಂಚಿನ ಕಳ ಬದಿಯಲ್ಲಿ ಅಡಿಪಾಯ ಎದ್ದು ಹೋಗಿದ್ದು ಬರಿ ಕಬ್ಬಿಣಗಳು ಮಾತ್ರ ಕಾಣುತ್ತಿವೆ. ಮತ್ತೊಂದು ಕಡೆ ನೆರೆ ನೀರಿನಲ್ಲಿ ಕೊಚ್ಚಿ ಬಂದಿರುವ ಭಾರೀ ಗಾತ್ರದ ಮರದ ದಿಮ್ಮಿಗಳು ಕಿಂಡಿ ಅಣೆಕಟ್ಟಿಗೆ ಬಡಿದು ಕಲ್ಲುಗಳು ಎದ್ದು ಹೋಗಿವೆ. ದುರಸ್ತಿಪಡಿಸದೆ ಹೋದಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಅಪಾಯ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಸ್ಥಳೀಯರು ತೀವ್ರ ಆತಂಕ ವ್ಯಕ್ತ ಪಡಿಸಿದ್ದಾರೆ.

ಒಂದು ಸಾವು, ಇಬ್ಬರು ಪಾರು: ಆ.10ರಂದು ಇದೇ ಕಿಂಡಿ ಅಣೆಕಟ್ಟಿನಲ್ಲಿ ಮಳೆ ಬರುವ ಸಂದರ್ಭ ಸ್ಥಳೀಯ ನಿವಾಸಿ ಜನಾರ್ದನರವರು ಕಾಲು ಜಾರಿ ಹೊಳೆಯಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಅದಕ್ಕಿಂತಲೂ ಹಿಂದೆ ಸ್ಥಳೀಯ ಇಬ್ಬರು ವ್ಯಕ್ತಿಗಳು ಅಣೆಕಟ್ಟನ್ನು ದಾಟುತ್ತಿರುವ ಸಂದರ್ಭ ನೀರಿನ ರಭಸಕ್ಕೆ ಕಾಲು ಜಾರಿ ಹೊಳೆಯಲ್ಲಿ ಕೊಚ್ಚಿ ಹೋದರೂ ಪಕ್ಕದ ಗಿಡಗಂಟಿಗಳನ್ನು ಹಿಡಿದು ಅದೃಷ್ಟವಶಾತ್ ತಮ್ಮ ಜೀವ ಕಾಪಾಡಿಕೊಂಡಿದ್ದಾರೆ. ಇಷ್ಟೆಲ್ಲಾ ಅನಾಹುತಗಳಾದರೂ ಇದೇ ದಾರಿಯಲ್ಲಿ ಜಿಡೆಕಲ್ಲು ಪ್ರ.ದ. ಕಾಲೇಜು ಮತ್ತು ರಾಗಿದಕುಮೇರು ಶಾಲೆಗೆ ಬರುವ ಅನೇಕ ವಿದ್ಯಾರ್ಥಿಗಳು ಇದೇ ಕಿಂಡಿ ಅಣೆಕಟ್ಟು ಬಳಸಿ ಶಾಲೆಗೆ ಬರುತ್ತಾರೆ. ಇಂತಹ ಸಂದರ್ಭ ದಲ್ಲಿ ಮುಂಜಾಗರುಕತೆಯಿಂದ ತಕ್ಷಣ ಇಲ್ಲೊಂದು ಸಂಪರ್ಕ ಸೇತುವೆ ನಿರ್ಮಾಣ ಆಗ ಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೋಟಿಕಟ್ಟೆಗೆಯಾಗಿದ್ದ ಕಿಂಡಿ ಅಣೆಕಟ್ಟು: ಬಹಳ ವರ್ಷಗಳ ಹಿಂದೆ ಕೃಷಿಗೆ ನೀರು ಸಂಗ್ರಹಕ್ಕಾಗಿ ಇಲ್ಲೊಂದು ಮಣ್ಣಿನ ದಿಡ್ಡೆಯಲ್ಲಿ ನಿರ್ಮಾಣಗೊಂಡಿದ್ದ ಅಣೆಕಟ್ಟು ಇತ್ತು. ಮಳೆಯ ಪ್ರಮಾಣ ಕಡಿಮೆ ಆದಾಗ ಕೃಷಿಗೆ ಇಲ್ಲಿಂದ ನೀರು ಹಾಯಿಸಲಾಗು ತ್ತಿತ್ತು. ಕೃಷಿ ತೋಟಕ್ಕೆ ನೀರು ಸರಬರಾಜನ್ನು ಅಣೆಕಟ್ಟಿನ ಪಕ್ಕದಲ್ಲಿ ದಂಡೆ ನಿರ್ಮಾಣ ಮಾಡಿ ಕಳುಹಿಸುವ ವ್ಯವಸ್ಥೆ ಆಗುತ್ತಿತ್ತು. ಈ ಕುರಿತು, ನೀರನ್ನು ನಾಲೆಯ ಮೂಲಕ ಕಳುಹಿಸುತ್ತಿದ್ದ ಕುರುಹು ಈಗಲೂ ಕಾಣಸಿಗುತ್ತದೆ. ಕಾಲ ಕ್ರಮೇಣ ಸಣ್ಣ ನೀರಾವರಿ ಇಲಾಖೆಯಿಂದ ಮರದ ಹಲಗೆಯನ್ನು ಇಟ್ಟು ನೀರು ಸಂಗ್ರಹ ಮಾಡಲು ಕಿಂಡಿಅಣೆಕಟ್ಟು ನಿರ್ಮಾಣ ಮಾಡಲಾಗಿತ್ತು. ಆದರೆ ಕಾಲ ಕ್ರಮೇಣ ಮರದ ಹಲಗೆ ಇರಿಸಲು ಮಾಡಿದ ಶೆಡ್ ಮತ್ತು ಮರದ ಹಲಗೆಗಳು ಮಾಯವಾಗಿದೆ. ಕೃಷಿ ಮಾಡುವ ಹೆಚ್ಚಿನವರು ಕೊಳವೆ ಬಾವಿ ತೋಡಿದ ಹಿನ್ನೆಲೆಯಲ್ಲಿ ಕಿಂಡಿ ಅಣೆಕಟ್ಟು ಕೇವಲ ಸಂಪರ್ಕ ಸಾಧನವಾಗಿದೆ. ಆದರೆ ಈ ಸಂಪರ್ಕ ಸಾಧನವೇ ಈಗ ಅಪಾಯದ ಸ್ಥಿತಿಯಲ್ಲಿದೆ. ಇದು ಕುಸಿದು ಸಂಪರ್ಕ ಕಡಿದುಕೊಳ್ಳುವ ಅಥವಾ ಬೇರೇನಾದರೂ ಅನಾಹುತಗಳಾಗುವ ಮೊದಲೇ ಸಂಬಂಧಿಸಿದವರು ಗಮನಿಸಿ ಅಗತ್ಯ ವ್ಯವಸ್ಥೆ ಮಾಡಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಭಯದ ವಾತಾವರಣ
ಇದೇ ಅಣೆಕಟ್ಟನ್ನು ಬಳಸಿಕೊಂಡು ನೂರಾರು ಮಂದಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ಬರುತ್ತಾರೆ. ಜೋರಾಗಿ ಮಳೆ ಬಂದರೆ ಅಣೆಕಟ್ಟಿನ ಮೇಲ್ಭಾಗದಿಂದ ನೀರು ಹರಿದು ಹೋಗುವುದರಿಂದ ಅಪಾಯ ಇದೆ. ಇತ್ತೀಚೆಗೆ ಮೃತಪಟ್ಟ ಜನಾರ್ದನರವರು ಈ ಹಿಂದೆ ಮಕ್ಕಳನ್ನು ಜಾಗ್ರತೆಯಿಂದ ಅಣೆಕಟ್ಟಿನಿಂದ ದಾಟಿಸುವ ಕೆಲಸವನ್ನು ಮಾಡುತ್ತಿದ್ದರಲ್ಲದೆ ಅಣೆಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡ ಕಸಗಳನ್ನು ತೆರವು ಮಾಡುವ ಮೂಲಕ ಸಾರ್ವಜನಿಕ ಸೇವೆ ಮಾಡುತ್ತಿದ್ದರು. ಇದೀಗ ಅವರು ಮೃತಪಟ್ಟ ಬಳಿಕ ಆ ಪರಿಸರದಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿ ಭಯದ ವಾತಾವರಣ ಇದೆ ಎಂದು ಅಶೋಕ್ ರಾಗಿದಕುಮೇರು ಮತ್ತು ಹರೀಶ್ ಬೆದ್ರಾಳರವರು ತಿಳಿಸಿದ್ದಾರೆ.

ಹೊಸ ಅಣೆಕಟ್ಟಿಗೆ ಪ್ರಸ್ತಾವನೆ:
ಎಲ್ಲೆಲ್ಲಾ ಹೊಳೆಗಳಿಗೆ ಸಂಪರ್ಕ ಸಾಧನವಾಗಿ ಇರುವ ಕಾಲು ಸಂಕಗಳು, ಅಣೆಕಟ್ಟುಗಳಿವೆಯೋ ಅವುಗಳನ್ನು ಪರಿಶೀಲನೆ ನಡೆಸಿ ಶಿಥಿಲಗೊಂಡಿದ್ದಲ್ಲಿ ಹೊಸ ಅಣೆಕಟ್ಟು ನಿರ್ಮಾಣ ಅಥವಾ ದುರಸ್ತಿ ಕಾರ್ಯ ಮಾಡಲಾಗುವುದು. ಹೊಸ ಅಣೆಕಟ್ಟಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲು ವರದಿ ಸಿದ್ಧಪಡಿಸಲಾಗಿದೆ. ಅಂದ್ರಟ್ಟದಲ್ಲಿ ಸಂಪರ್ಕ ಸಾಧನವಾಗಿ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಕಾಲು ಸಂಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು
ಸಂಜೀವ ಮಠಂದೂರು, ಶಾಸಕರು, ಪುತ್ತೂರು

ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಹೊಳೆ, ತೋಡು, ತೊರೆಯನ್ನು ದಾಟಿ ಬರುವ ಸಂದರ್ಭ ಇರುವ ಹಂತದಲ್ಲಿ ಆ ಭಾಗಕ್ಕೆ ಕಾಲು ಸಂಕ ನಿರ್ಮಾಣಕ್ಕೆ ಇಲಾಖೆಯಿಂದ ಅನುದಾನವಿದೆ. ಈ ಕುರಿತು ಶಾಲೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ವರದಿ, ಪ್ರಸ್ತಾವನೆ ಕಳುಹಿಸಬೇಕು. ಅಲ್ಲಿಂದ ಲೋಕೋಪಯೋಗಿ ಇಲಾಖೆಗೆ ವರದಿ ಬಂದ ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಕಾಲು ಸಂಕ ನಿರ್ಮಾಣಕ್ಕೆ ಸಿದ್ಧತೆ ನಡೆಸ ಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.