- ಅವಶ್ಯಕತೆ ಇರುವಲ್ಲಿ ಕಾಲು ಸಂಕ ರಚನೆಗೆ ಜಿಲ್ಲಾ ಪಂಚಾಯತಿಗೆ ಬೇಡಿಕೆ ಸಲ್ಲಿಸಲು ನಿರ್ಣಯ
ನಿಡ್ಪಳ್ಳಿ: ಇಲ್ಲಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತೀ ಅಗತ್ಯ ಇರುವಲ್ಲಿ ಕಾಲು ಸಂಕ ರಚನೆ ಮಾಡಲು ಕೋರಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆಗೆ ಬೇಡಿಕೆ ಸಲ್ಲಿಸಲು ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಯಿತು.
ಗ್ರಾಮ ಸಭೆ ಅ.13 ರಂದು ಅಧ್ಯಕ್ಷೆ ಸುಮತಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಕಾಲು ಸಂಕ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳಗಳು ; ಕೋಡಿ- ನುಳಿಯಾಲು ದಾರಿಯಲ್ಲಿ ತೋಡಿಗೆ ಕಾಲು ಸಂಕ, ಕೂಟೇಲು- ಚಿಕ್ಕೋಡಿಗಾಗಿ ನಿಡ್ಪಳ್ಳಿ ಶಾಲೆಗೆ ಬರುವ ಕಾಲು ದಾರಿಯ ಚಿಕ್ಕೋಡಿ ಎಂಬಲ್ಲಿ ತೋಡಿಗೆ ಕಾಲು ಸಂಕ. ಹೊಸಮನೆ- ಬರೆ- ನಿಡ್ಪಳ್ಳಿ ಶಾಲೆಗೆ ಬರುವ ಬರೆ ಎಂಬಲ್ಲಿ ತೋಡಿಗೆ ಕಾಲು ಸಂಕ. ಪಾದೆಕಂಡ- ತಂಬುತ್ತಡ್ಕ ಕಾಲು ದಾರಿಗೆ ಪಾದೆಕಂಡ ಎಂಬಲ್ಲಿ ಕಾಲು ಸಂಕಕ್ಕೆ ಕೈತಾಂಗು ಅಳವಡಿಕೆ. ತಂಬುತ್ತಡ್ಕ- ಕೂವೆಂಜ ಕಾಲು ದಾರಿಯಲ್ಲಿ ತಂಬುತ್ತಡ್ಕ ಎಂಬಲ್ಲಿ ತೋಡಿಗೆ ಕಾಲು ಸಂಕ. ತಂಬುತ್ತಡ್ಕ- ನಿಡ್ಪಳ್ಳಿ ಶಾಲೆಗೆ ಹೋಗುವ ಕಾಲುದಾರಿಯಲ್ಲಿ ಕಾನ ಎಂಬಲ್ಲಿ ತೋಡಿಗೆ ಕಾಲು ಸಂಕ. ಕೊಂತಿಮೂಲೆ- ನುಳಿಯಾಲು ಕಾಲು ದಾರಿಯ ತೋಡಿಗೆ ಕಾಲು ಸಂಕ. ಇಷ್ಟು ಕಡೆಗಳಲ್ಲಿ ಸಾರ್ವಜನಿಕರ ಅನುಕೂಲತೆಗಾಗಿ ಕಾಲು ಸಂಕ ಅಗತ್ಯವಿದ್ದು ಇದರ ರಚನೆಗಾಗಿ ಜಿಲ್ಲಾ ಪಂಚಾಯತ್ ಗೆ ಬೇಡಿಕೆ ಸಲ್ಲಿಸುವುದೆಂದು ಸರ್ವ ಸದಸ್ಯರ ಒತ್ತಾಯದ ಮೇರೆಗೆ ನಿರ್ಣಯಿಸಲಾಯಿತು. ಪಂಚಾಯತ್ ವ್ಯಾಪ್ತಿಯ ಮಹಿಳೆಯರನ್ನು ಸೇರಿಸಿ ಸ್ತನ್ಯ ಪಾನ ದಿನಾಚರಣೆ ಬಗ್ಗೆ ಮಾಹಿತಿ ನೀಡುವುದೆಂದು ನಿರ್ಣಯಿಸಲಾಯಿತು.
ಪ್ರಾಥಮಿಕ ಆರೋಗ್ಯ ಉಪ ಕೇಂದ್ರದ ಗಡಿಗುರುತಿಗೆ ಸರ್ವೆ ಇಲಾಖೆಗೆ ಬರೆಯುವುದು – ನಿಡ್ಪಳ್ಳಿ ಜನತಾ ಕಾಲನಿ ಪಕ್ಕ ಇರುವ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪ ಕೇಂದ್ರಕ್ಕೆ ಸರಿಯಾದ ಆವರಣ ಇಲ್ಲದೆ ಸಮಸ್ಯೆಯಾಗಿದ್ದು ಅದರ ಗಡಿಗುರುತು ಮಾಡಿ ಸರಿಯಾದ ಆವರಣಕ್ಕೆ ವ್ಯವಸ್ಥೆ ಕಲಿಸುವಂತೆ ಕಿರಿಯ ಆರೋಗ್ಯ ಸಹಾಯಕಿ ಕುಸುಮಾವತಿ ಪಂಚಾಯತಿಗೆ ಮನವಿ ಸಲ್ಲಿಸಿದ ಬಗ್ಗೆ ಪಿಡಿಒ ಸಭೆಗೆ ತಿಳಿಸಿದರು. ಇದರ ಬಗ್ಗೆ ಚರ್ಚಿಸಿ ಗಡಿಗುರುತು ಮಾಡಲು ಸರ್ವೆ ಇಲಾಖೆಗೆ ಬರೆಯುವುದು. ಮತ್ತು ತಾಲೂಕು ಆರೋಗ್ಯಾಧಿಕಾರಿಯವರ ಗಮನಕ್ಕೂ ತರುವುದೆಂದು ನಿರ್ಣಯಿಸಲಾಯಿತು.
ಪಂಚಾಯತಿನ 14 ನೇ ಹಣಕಾಸು ಯೋಜನೆಯ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ ಚರ್ಚಿಸಲಾಯಿತು.. ಸಾರ್ವಜನಿಕ ಅರ್ಜಿಗಳನ್ನು ಪರಿಶೀಲಿಸಲಾಯಿತು. ಸುತ್ತೋಲೆಯ ಬಗ್ಗೆ ಚರ್ಚಿಸಲಾಯಿತು. ಕಿರಿಯ ಆರೋಗ್ಯ ಸಹಾಯಕಿ ಕುಸುಮಾವತಿ ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಉಪಾಧ್ಯಕ್ಷ ಅವಿನಾಶ್ ರೈ, ಬಾಲಚಂದ್ರ ರೈ, ಲಕ್ಷ್ಮಣ ನಾಯ್ಕ, ಪ್ರತಿಮಾ ಬೋರ್ಕರ್, ಆಶಾಲತಾ, ಗುಲಾಬಿ, ನಂದಿನಿ ಅರ್.ರೈ ಆಶಾಕಾರ್ಯಕರ್ತೆಯರಾದ ಪವಿತ್ರ.ಎಂ, ದಿವ್ಯಾ ಸಿ.ಎಚ್, ಗೀತಾ.ಕೆ ಉಪಸ್ಥಿತರಿದ್ದರು.