Home_Page_Advt
Home_Page_Advt
Home_Page_Advt
Breaking News

ವಾಹನ ಚಾಲನೆಯಲ್ಲಿ ಮೋಜು ಮಸ್ತಿ ಮಾಡಬೇಡಿ.. ದಾಖಲೆ ಪತ್ರ ಇಟ್ಟುಕೊಂಡೇ ವಾಹನ ಚಲಾಯಿಸಿ

ವರದಿ: ಸಿಶೇ ಕಜೆಮಾರ್

ಹೆಲ್ಮೆಟ್ ಧರಿಸಿ, ಸೀಟ್ ಬೆಲ್ಟ್ ಹಾಕಿಕೊಳ್ಳಿ…ಸಂಚಾರ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ಗ್ಯಾರಂಟಿ

ಪುತ್ತೂರು: ದೇಶಾದ್ಯಂತ ಹೊಸ ವಾಹನ ಖರೀದಿ ಸಂಖ್ಯೆ ವರ್ಷದಿಂದ ವರ್ಷಕ್ಕೆ ದ್ವಿಗುಣಗೊಳ್ಳುತ್ತಲೇ ಇದೆ. ಅಷ್ಟೇ ಪ್ರಮಾಣದಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಗಳು, ಅಪಘಾತ ಪ್ರಕರಣಗಳು ಹೆಚ್ಚುತ್ತಲೇ ಇದೆ. ಹೀಗಾಗಿ ಮೋಟಾರ್ ವೆಹಿಕಲ್ ಕಾಯ್ದೆಗೆ ಕೆಲವು ತಿದ್ದುಪಡಿ ತರಲಾಗಿದ್ದು, ಪ್ರಸ್ತುತ ಇರುವ ದಂಡಗಳ ಮೊತ್ತದಲ್ಲಿ ಭಾರೀ ಪ್ರಮಾಣದ ಹೆಚ್ಚಳ ಮಾಡಲಾಗಿದೆ. ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ಅಪಘಾತಗಳು ಹೆಚ್ಚುತ್ತಿದ್ದು ಒಬ್ಬರು ಮಾಡುವ ತಪ್ಪಿನಿಂದಾಗಿ ಅಪಘಾತಗಳಲ್ಲಿ ಅಮಾಯಕರೇ ಹೆಚ್ಚು ಜೀವ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಂಡದ ಮೊತ್ತವನ್ನು ದುಪ್ಪಟ್ಟು ಮಾಡಲಾಗಿದ್ದು ಈ ಹೊಸ ನಿಯಮ ದೇಶದಾದ್ಯಂತ ಸೆ.1ರಿಂದಲೇ ಜಾರಿಗೆ ಬಂದಿದೆ. ಪುತ್ತೂರು ತಾಲೂಕಿನಲ್ಲೂ ಸೆ.1 ರಿಂದ ನಿಯಮ ಜಾರಿಯಾಗಿದೆ. ಸರಕಾರ ನಿಗದಿಪಡಿಸಿದ ಎಲ್ಲಾ ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿದೆ ಎಂದು ಆರ್‌ಟಿಓ ಆನಂದ ಗೌಡರವರು ತಿಳಿಸಿದ್ದಾರೆ.

ಗರಿಷ್ಠ ಪ್ರಮಾಣದ ದಂಡ: ಹೊಸತಾಗಿ ಬಂದಿರುವ ನಿಯಮಗಳಲ್ಲಿ ಕೆಲವು ಪ್ರಕರಣಗಳ ಮೇಲೆ ಗರಿಷ್ಠ ಪ್ರಮಾಣದ ದಂಡಗಳನ್ನು ವಿಧಿಸಲಾಗಿದ್ದು, ವಾಹನ ಸವಾರರು ತಪ್ಪು ಮಾಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸುವಂತಿದೆ. ಈ ಹಿಂದೆ ಇದ್ದ ದಂಡದ ಮೊತ್ತಗಳಲ್ಲಿ ಭಾರೀ ಬದಲಾವಣೆ ತರಲಾಗಿದೆ. ಹಿಂದೆ ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡಿದರೆ ಕೇವಲ 100 ರೂಪಾಯಿ  ದಂಡ ವಿಧಿಸಲಾಗುತ್ತಿತ್ತು. ಆದರೆ ಹೊಸ ಕಾನೂನಿನ ಪ್ರಕಾರ 1 ಸಾವಿರ ರೂಪಾಯಿ ದಂಡ ವಿಧಿಸಬೇಕಾಗುತ್ತದೆ.

ರ್‍ಯಾಶ್ ಡ್ರೈವಿಂಗ್: ವಾಹನಗಳಲ್ಲಿ ಮೋಜು ಮಸ್ತಿ ಮಾಡುವವರು ಹೆಚ್ಚಾಗಿ ಯುವಕರೇ ಆಗಿರುತ್ತಾರೆ. ರ್‍ಯಾಶ್ ಡ್ರೈವಿಂಗ್ ಮಾಡುವುದೆಂದರೆ ಒಂಥರಾ ಕ್ರೇಜ್. ರ್‍ಯಾಶ್ ಡ್ರೈವಿಂಗ್‌ನಿಂದಲೇ ಅದೆಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರ್‍ಯಾಶ್ ಡ್ರೈವಿಂಗ್ ವಿರುದ್ಧ ಕಠಿಣ ಕ್ರಮ ಜರಗಿಸಲಾಗಿದ್ದು ಈ ಹಿಂದೆ ಇದ್ದ 500ರೂಪಾಯಿ ಬದಲಾಗಿ 5 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ದಂಡ ಕಟ್ಟಿದ ಮೇಲೂ ಮುಂದುವರಿದು ಸಿಕ್ಕಿಬಿದ್ದರೆ ಜೈಲಿಗೆ ಹೋಗುವ ಪರಿಸ್ಥಿತಿ ಎದುರಾಗಬಹುದು ಇಲ್ಲವೇ ಭಾರೀ ಪ್ರಮಾಣದ ದಂಡ ತೆರಬೇಕಾಗುತ್ತದೆ.

ಚಾಲನೆ ವೇಳೆ ಮೊಬೈಲ್ ಬಳಕೆ: ಚಾಲನೆ ವೇಳೆ ಮೊಬೈಲ್ ಫೋನ್ ಬಳಸುತ್ತಿರುವುದು ಸಾಮಾನ್ಯವಾಗಿ ಎಲ್ಲರು ಮಾಡುವ ತಪ್ಪು. ಆದ್ರೆ ಇದರಿಂದ ಬಹಳಷ್ಟು ಅನಾಹುತಗಳು ನಡೆಯುತ್ತವೆ. ಹೊಸ ನಿಯಮದನ್ವಯ ಒಂದು ಬಾರಿ ಸಿಕ್ಕಿ ಬಿದ್ದರೆ 1 ಸಾವಿರ, 2ನೇ ಬಾರಿ 2ಸಾವಿರ ರೂ ಮೂರನೇ ಬಾರಿ ಸಿಕ್ಕಿಬಿದ್ದಲ್ಲಿ ಅಧಿಕ ಮೊತ್ತದ ದಂಡದ ಜೊತೆಗೆ ಲೈಸೆನ್ಸ್ ರದ್ದಾಗುತ್ತದೆ.

ವಿಮೆ ಇಲ್ಲದೆ ವಾಹನ ಚಾಲನೆ: ಪ್ರತಿಯೊಂದು ವಾಹನಕ್ಕೂ ಮೂರನೇ (ಥರ್ಡ್‌ಪಾರ್ಟಿ)ಇನ್ಸೂರೆನ್ಸ್ ಹೊಂದಿರುವುದು ಈಗಾಗಲೇ ಕಡ್ಡಾಯವಾಗಿದ್ದು, ಅಪಘಾತಗಳ ಸಂದರ್ಭದಲ್ಲಿ ಇದು ಗಾಯಾಳು ಅಥವಾ ಸಾವನ್ನಪ್ಪಿದ ಬಲಿಪಶುಗೆ ಪರಿಹಾರ ಒದಗಿಸಲು ಸಹಕಾರಿಯಾಗಿದೆ. ಇನ್ಸೂರೆನ್ಸ್ ಇಲ್ಲದಿದ್ದರೆ ಈ ಮೊದಲು 1ಸಾವಿರ ದಂಡ ಇತ್ತು. ಹೊಸ ನಿಯಮದ ಪ್ರಕಾರ 2ಸಾವಿರ ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

ಆಂಬುಲೆನ್ಸ್‌ಗೆ ಅಡ್ಡಿ ಮಾಡಿದರೆ: ರೋಗಿಗಳನ್ನು ನಿಗದಿತ ಸಮಯಕ್ಕೆ ಆಸ್ಪತ್ರೆಗಳಿಗೆ ತಲುಪಿಸುವಲ್ಲಿ ಆಂಬುಲೆನ್ಸ್‌ಗಳ ಪಾತ್ರ ದೊಡ್ಡದು. ಆದರೆ ಕೆಲವು ಸಂದರ್ಭದಲ್ಲಿ ಇಂತಹ ಆಂಬುಲೆನ್ಸ್‌ಗೂ ವಾಹನ ಚಾಲಕರು ದಾರಿ ಮಾಡಿಕೊಡದೆ ಅಡ್ಡಿ ಪಡಿಸುತ್ತಾರೆ. ಯಾರಾದರೂ ಅಪ್ಪಿತಪ್ಪಿ ಆಂಬುಲೆನ್ಸ್‌ಗೆ ಅಡ್ಡಿಪಡಿಸಿದರೆ ಅಂತಹ ವಾಹನ ಚಾಲಕರಿಗೆ ರೂ.10 ಸಾವಿರ ದಂಡ ವಿಧಿಸುವ ಅವಕಾಶವಿದೆ.

ಹೆಲ್ಮೆಟ್ ರಹಿತ ಚಾಲನೆ/ ಸಿಗ್ನಲ್ ಜಂಪ್ ಮಾಡಿದರೆ: ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುವುದರಲ್ಲಿ ಯುವಕರೇ ಜಾಸ್ತಿ. ಎಲ್ಲಾದರೂ ಟ್ರಾಫಿಕ್ ಪೊಲೀಸರನ್ನು ಕಂಡರೆ ಮಾತ್ರವೇ ಹೆಲ್ಮೆಟ್ ಬಳಕೆ ಮಾಡುತ್ತಾರೆ. ಆದ್ರೆ ನಮ್ಮ ಜೀವ ಕಾಪಾಡುವ ಹೆಲ್ಮೆಟ್ ಧರಿಸುವುದು ನಮಗೇ ಒಳ್ಳೆಯದು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿ ಸಿಕ್ಕಿಬಿದ್ದರೆ 2 ಸಾವಿರ ರೂಪಾಯಿ ದಂಡ ತೆರಬೇಕಾಗುತ್ತದೆ. ಇದಲ್ಲದೆ ಲೈಸನ್ಸ್ ರದ್ದು ಮಾಡುವ ಅಥವಾ 3ತಿಂಗಳ ಸೆರೆವಾಸ ಕೂಡ ಆಗಬಹುದು. ಹಾಗೆಯೇ ಸಿಗ್ನಲ್ ಜಂಪ್ ಮಾಡಿದರೂ ದಂಡ ಕಟ್ಟಬೇಕಾಗುತ್ತದೆ.

ಲೈಸನ್ಸ್ ಇಲ್ಲದೆ ವಾಹನ ಚಾಲನೆ/ ಅಪ್ರಾಪ್ತರ ಕೈಗೆ ವಾಹನ ಕೊಡುವುದು: ಅಧಿಕೃತವಾಗಿ ಚಾಲನಾ ಪರವಾನಗೆ ಪಡೆಯದೇ ವಾಹನಗಳನ್ನು ಚಾಲನೆ ಮಾಡುವ ವಾಹನ ಸವಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದ್ದು, ಲೈಸನ್ಸ್ ಇಲ್ಲದೆ ವಾಹನ ಚಾಲನೆ ಮಾಡಿದರೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದೆ. ಅದೇ ರೀತಿ ಅಪ್ರಾಪ್ತರ ಕೈಗೆ ವಾಹನಗಳನ್ನು ನೀಡುವ ಪೋಷಕರಿಗೂ ಭರ್ಜರಿ ದಂಡವನ್ನು ವಿಧಿಸಲಾಗುತ್ತಿದ್ದು, ಪದೇ ಪದೇ ತಪ್ಪು ಮಾಡಿದ್ದಲ್ಲಿ ನೇರವಾಗಿ ಜೈಲಿಗೆ ಹೋಗಬೇಕಾದ ಪ್ರಮೇಯ ಬರಬಹುದು. ಲೈಸನ್ಸ್ ತಿರಸ್ಕೃತಗೊಂಡ ಬಳಿಕವೂ ವಾಹನ ಚಾಲನೆ ಮಾಡಿದರೆ 10 ಸಾವಿರ ರೂ. ದಂಡ ಕಟ್ಟಬೇಕಾಗುತ್ತದೆ.

ಕುಡಿದು ವಾಹನ ಚಾಲನೆ: ರಜಾದಿನಗಳಲ್ಲಿ ಎಣ್ಣೆ ಗಮ್ಮತ್ತು ಎಲ್ಲಾ ಕಡೆ ಇದ್ದೆ ಇರುತ್ತದೆ. ಎಲ್ಲಾದರೂ ಹೊಟೇಲ್, ಬಾರ್‌ಗಳಲ್ಲಿ ಎಣ್ಣೆ ಪಾರ್ಟಿ ಮಾಡಿ ವಾಹನ ಚಾಲನೆ ಮಾಡಿಕೊಂಡು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದರೆ ಭರ್ಜರಿ ದಂಡ ಗ್ಯಾರಂಟಿ. ರೂ.10 ಸಾವಿರ ರೂಪಾಯಿ ದಂಡದೊಂದಿಗೆ ಜೈಲುವಾಸ ಅನುಭವಿಸಬೇಕಾಗುತ್ತದೆ. ಈ ವೇಳೆ ಪೊಲೀಸ್ ಅಧಿಕಾರಿಗಳೊಂದಿಗೆ ದುರ್ವತನೆ ತೋರಿದರೆ 2 ಸಾವಿರ ದಂಡ ಕಟ್ಟಬೇಕಾಗುತ್ತದೆ.ಒಮ್ಮೆ ದಂಡ ಕಟ್ಟಿದ ಮೇಲೆ ಮತ್ತೊಮ್ಮೆ ಸಿಕ್ಕಿಬಿದ್ದರೆ 15 ಸಾವಿರ ರೂಪಾಯಿ ದಂಡ ಮತ್ತು 2 ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗಬಹುದು.

ತ್ರಿಬಲ್ ರೈಡಿಂಗ್, ಇಯರ್ ಫೋನ್ ಬಳಕೆಗೂ ದಂಡ: ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡ್ ಮಾಡುವುದು, ಕಾನೂನು ಬಾಹಿರವಾಗಿ ವಾಹನಗಳನ್ನು ಮೋಡಿಫೈ ಮಾಡುವುದು, ಚಾಲನೆ ವೇಳೆ ಇಯರ್ ಫೋನ್, ಬ್ಲೂಟೂತ್ ಬಳಸುವುದು ಮತ್ತು ಫುಟ್‌ಫಾತ್‌ಗಳ ಮೇಲೆ ವಾಹನ ಚಾಲನೆ ಮಾಡುವುದು ಇತ್ಯಾದಿ ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಭಾರೀ ಪ್ರಮಾಣದ ದಂಡ ವಿಧಿಸಲಾಗುತ್ತಿದೆ. ದ್ವಿಚಕ್ರ ವಾಹನದಲ್ಲಿ ತ್ರಿಬಲ್ ರೈಡಿಂಡ್ ಮಾಡಿದರೆ2 ಸಾವಿರ ದಂಡ ಹಾಗೂ 3 ತಿಂಗಳು ಚಾಲನಾ ಪರವಾನಗೆ ರದ್ದುಗೊಳಿಸುವ ಕಾನೂನು ಇದೆ. ಇಂತಹ ತಪ್ಪುಗಳನ್ನು ಮಾಡಿದರೆ ದಂಡ ತೆರಬೇಕಾಗುತ್ತದೆ.

ಟ್ರಾಫಿಕ್ ಉಲ್ಲಂಘನೆಗೆ ನಿಗದಿಪಡಿಸಿದ ದಂಡ
1. ಕುಡಿದು ವಾಹನ ಚಾಲನೆ- ಹಾಲಿ ಮೊತ್ತ2000- ಹೊಸ ಮೊತ್ತ 10ಸಾವಿರ (ಪುನರಾವರ್ತಿಸಿದರೆ 15ಸಾವಿರ ಮತ್ತು 2 ವರ್ಷ ಜೈಲು ಶಿಕ್ಷೆ)
2. ಲೈಸನ್ಸ್ ಇಲ್ಲದೆ ವಾಹನ ಚಾಲನೆ-ಹಾಲಿ ಮೊತ್ತ ರೂ. 500-ಹೊಸ ಮೊತ್ತ 5ಸಾವಿರ ರೂ.
3. ಆಂಬುಲೆನ್ಸ್‌ಗೆ ದಾರಿ ಮಾಡಿಕೊಡದಿದ್ದರೆ-ದಂಡ ಇರಲಿಲ್ಲ -ಹೊಸ ಮೊತ್ತ10 ಸಾವಿರ ರೂಪಾಯಿ .
4. ಪರ್ಮಿಟ್ ಇಲ್ಲದಿದ್ದರೆ-ಹಾಲಿ ಮೊತ್ತ ರೂ.500-ಹೊಸ ಮೊತ್ತ ಗರಿಷ್ಠ 10 ಸಾವಿರ ರೂ.
5. ಅತೀ ವೇಗದ ಚಾಲನೆ-ಹಾಲಿ ಮೊತ್ತ 400 ರೂ.-ಹೊಸ ಮೊತ್ತ 1 ಸಾವಿರ ರೂ. ಲಘು ವಾಹನಗಳಿಗೆ, 2 ಸಾವಿರ ರೂ. ಪ್ರಯಾಣಿಕರ ಸಾಗಣೆ ವಾಹನಗಳಿಗೆ.
6. ಓವರ್ ಲೋಡಿಂಗ್ -ಹಾಲಿ ಮೊತ್ತ 2ಸಾವಿರ ರೂ. (ನಂತರ ಪ್ರತಿ ಟನ್‌ಗೆ 1 ಸಾವಿರ ಹೆಚ್ಚುವರಿ)- ಹೊಸ ಮೊತ್ತ 20 ಸಾವಿರ ರೂ. (ನಂತರ ಪ್ರತಿ ಟನ್‌ಗೆ 2 ಸಾವಿರ ರೂ.)
7. ಪ್ರಯಾಣಿಕರ ಓವರ್ ಲೋಡಿಂಗ್-ಹಾಲಿ ಮೊತ್ತ ಇರಲಿಲ್ಲ- ಹೊಸ ಮೊತ್ತ 1 ಸಾವಿರ ರೂ. ಪ್ರತಿ ಪ್ರಯಾಣಿಕರಿಗೆ.
8. ದ್ವಿಚಕ್ರ ವಾಹನದಲ್ಲಿ ಓವರ್ ಲೋಡಿಂಗ್-ಹಾಲಿ ಮೊತ್ತ 100 ರೂ.- ಹೊಸ ಮೊತ್ತ 2 ಸಾವಿರ ರೂ. ಹಾಗೂ 3 ತಿಂಗಳು ಚಾಲನಾ ಪರವಾನಗೆ ರದ್ದು.
9. ವಿಮೆ ಇಲ್ಲದಿದ್ದರೆ-ಹಾಲಿ ಮೊತ್ತ 1 ಸಾವಿರ ರೂ.-ಹೊಸ ಮೊತ್ತ 2 ಸಾವಿರ ರೂ.
10. ರೇಸಿಂಗ್ ಮಾಡಿದರೆ- ಹಾಲಿ ಮೊತ್ತ 500 ರೂ.-ಹೊಸ ಮೊತ್ತ 5 ಸಾವಿರ ರೂ.
11. ಸೀಟ್ ಬೆಲ್ಟ್, ಹೆಲ್ಮೆಟ್ ಇಲ್ಲದಿದ್ದರೆ-ಹಾಲಿ ಮೊತ್ತ 100 ರೂ.-ಹೊಸ ಮೊತ್ತ 1 ಸಾವಿರ ರೂ. ಮತ್ತು 3ತಿಂಗಳು ಚಾಲನಾ ಪರವಾನಗೆ ರದ್ದು.

ವಾಹನ ಚಾಲಕರು ಮಾಡಬೇಕಾದದ್ದೇನು ಗೊತ್ತಾ?
1. ನಿಮ್ಮ ವಾಹನ ಪರವಾನಗೆ ಮತ್ತು ವಾಹನ ನೋಂದಣಿ ಪತ್ರದ ಮೂಲಪ್ರತಿ ವಾಹನದ ಜೊತೆ ಇಟ್ಟುಕೊಳ್ಳಿ
2. ಫುಟ್‌ಫಾತ್ ಮೇಲೆ ವಾಹನ ಓಡಿಸುವುದನ್ನು ಈ ಕ್ಷಣದಿಂದ ಬಿಟ್ಟುಬಿಡಿ
3. ವಾಹನದ ವಿಮೆಯನ್ನು ಅಪ್‌ಡೇಟ್ ಮಾಡಿಟ್ಟುಕೊಳ್ಳಿ ಮತ್ತು ಅದರ ಪ್ರತಿಯನ್ನು ಜೊತೆಗಿಟ್ಟುಕೊಳ್ಳಿ.
4. ಎಮಿಷನ್ ಟೆಸ್ಟ್( ಹೊಗೆ ಚೆಕ್‌ಅಪ್) ಮಾಡಿರುವ ಮೂಲ ಪ್ರತಿಯನ್ನು ಜೊತೆಗೆ ಇಟ್ಟುಕೊಳ್ಳಿ.
5. ಯಾವುದೇ ಕಾರಣಕ್ಕೂ ಸಿಗ್ನಲ್ ಜಂಪ್ ಮಾಡಲು ಹೋಗಬೇಡಿ, ಒನ್‌ವೇ ಬಗ್ಗೆ ನಿಗಾ ಇಟ್ಟುಕೊಳ್ಳಿ.
6. ಆಂಬುಲೆನ್ಸ್‌ಗೆ ದಾರಿ ಮಾಡಿಕೊಡಿ. ಒಂದು ವೇಳೆ ನೀವು ಆಂಬುಲೆನ್ಸ್‌ಗೆ ದಾರಿ ಮಾಡಿಕೊಡದಿದ್ದರೆ ಭಾರೀ ದಂಡ ಕಟ್ಟಬೇಕಾಗುತ್ತದೆ ನೆನಪಿಡಿ.
7. ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹೆಲ್ಮೆಟ್ ಕಡ್ಡಾಯ ಧರಿಸಿ. ಒಂದು ವೇಳೆ ನೀವು ಹೆಲ್ಮೆಟ್ ಇಲ್ಲದೇ ಸಿಕ್ಕಿಬಿದ್ದರೆ ಹೆಲ್ಮೆಟ್‌ಗಿರುವ ಬೆಲೆಗಿಂತ ದುಪ್ಪಟ್ಟು ದಂಡ ಕಟ್ಟಬೇಕಾಗುತ್ತದೆ.
8. ಯಾವುದೇ ಕಾರಣಕ್ಕೂ ನಿಮ್ಮ ವಾಹನಗಳನ್ನು ಇತರರ ಕೈಗೆ ಕೊಡಬೇಡಿ. ಒಂದು ವೇಳೆ ಅವರು ಸಿಗ್ನಲ್ ಜಂಪ್ ಮಾಡಿದರೆ ಅಥವಾ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಬಂದರೆ ಸಿಸಿ ಕ್ಯಾಮರದಲ್ಲಿ ನಿಮ್ಮ ವಾಹನದ ನಂಬರ್ ದಾಖಲಾಗಿ ನಿಮ್ಮ ಮನೆ ವಿಳಾಸಕ್ಕೆ ದಂಡದ ಚೀಟಿ ಬರುತ್ತದೆ.
9. ವಾಹನ ಚಾಲನೆ ವೇಳೆ ಶೋಕಿ ಮಾಡಲು ಹೋಗಬೇಡಿ. ಸರಿಯಾದ ರೀತಿಯಲ್ಲಿ ಕಾನೂನು ಕ್ರಮದಂತೆ ವಾಹನ ಚಲಾಯಿಸಿ.

ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಸೆ.1 ರಿಂದಲೇ ದೇಶದಾದ್ಯಂತ ಜಾರಿಗೆ ಬಂದಿದೆ. ತಾಲೂಕಿನಲ್ಲಿ ಕಟ್ಟುನಿಟ್ಟಾಗಿ ಕಾನೂನು ಜಾರಿಗೆ ತಂದಿದ್ದೇವೆ. ಸಂಚಾರ ನಿಯಮಗಳನ್ನು ಉಲ್ಲಂಸಿದರೆ ಭಾರೀ ದಂಡ ತೆರಬೇಕಾಗುತ್ತದೆ. ವಾಹನ ಚಾಲಕ, ಮಾಲಕರು ಕಾಯ್ದೆ ಉಲ್ಲಂಘನೆ ಆಗದಂತೆ ಎಚ್ಚರ ವಹಿಸಿಕೊಂಡು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು – ಚೆಲುವಯ್ಯ, ಪ್ರಭಾರ ಎಸ್.ಐ. ಪುತ್ತೂರು ನಗರ ಸಂಚಾರ ಠಾಣೆ

ಸರಕಾರ ಹೊರಡಿಸಿರುವ ಸಾರಿಗೆ ನಿಯಮದ ತಿದ್ದುಪಡಿ ಕಾಯಿದೆ ನಿಯಮಗಳನ್ನು ಸೆ.1 ರಿಂದಲೇ ಪುತ್ತೂರು ತಾಲೂಕಿನಲ್ಲೂ ಕಟ್ಟು ನಿಟ್ಟಿನಲ್ಲಿ ಜಾರಿಗೆ ತಂದಿದ್ದೇವೆ. ವಾಹನ ಚಾಲಕರು ತಮ್ಮ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡೇ ವಾಹನ ಚಲಾಯಿಸಿದರೆ ದಂಡದಿಂದ ತಪ್ಪಿಸಿಕೊಳ್ಳಬಹುದು. ಯಾವುದೇ ಕಾರಣಕ್ಕೂ ದಂಡದಲ್ಲಿ ರಿಯಾಯಿತಿ ಇಲ್ಲ. ಇದು ಸರಕಾರ ಹೊರಡಿಸಿದ ಕಾನೂನು -ಆನಂದ ಗೌಡ, ಆರ್‌ಟಿಓ ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.