Home_Page_Advt
Home_Page_Advt
Home_Page_Advt
Breaking News

ಪ್ರಕೃತಿ ವಿಕೋಪದ ಅಡಿಯಲ್ಲೇ ಶಾಲೆಗಳ ದುರಸ್ಥಿ – ತಾ.ಪಂ ಸಾಮಾನ್ಯ ಸಭೆ

 • 2 ದಿನದಲ್ಲಿ ಪಟ್ಟಿಕೊಡಲು ಸಿ.ಆರ್.ಪಿಗಳಿಗೆ ಸೂಚನೆ ನೀಡಿ – ರಾಧಾಕೃಷ್ಣ ಬೋರ್ಕರ್
 • ತಾ.ಪಂ ಗೌರವ ಧನ ನೆರೆಪರಿಹಾರಕ್ಕೆ
 • ಅಂಗನವಾಡಿಗಳ ಗಡಿ ಗುರುತು ಇನ್ನೂ ಬಾಕಿ
 • ಕಡಬದಲ್ಲಿ ತಿಂಗಳೊಳಗೆ ಕೆ.ಎಸ್.ಆರ್.ಟಿ.ಸಿ ಸಭೆ
 • ಬಸ್ ಪಾಸ್ 70 ಕಿ.ಮೀ ವ್ಯಾಪ್ತಿಗೆ ಏರಿಸಲು ನಿರ್ಣಯ
 • 94 ಸಿ ಗೆ ಅರಣ್ಯ ಗುಪ್ಪೆಯ ಗೊಂದಲ
 • ಗ್ರಾ.ಪಂನಲ್ಲಿ ತಾ.ಪಂ ಸದಸ್ಯರಿಗೆ ಆಸನದ ವ್ಯವಸ್ಥೆ ಕಡ್ಡಾಯ
 • ಪಿಂಚಣಿ ಬಾರದೆ 3 ತಿಂಗಳು
 • ಆಧಾರ್ ಕಾರ್ಡ್‌ನಲ್ಲಿ ಡೇಟ್ ಆಫ್ ಬರ್ತ್ ತಿದ್ದುಪಡಿ ತಡ
 • ಕೊಳೆರೋಗ ಪರಿಹಾರ ಬಂದಿಲ್ಲ
 • ದುಡ್ಡಿದ್ದರೆ ಬೆಡ್, ಆಯಷ್ಮಾನ್ ಕಾರ್ಡ್ ಇದ್ದರೆ ಬೆಡ್ ಇಲ್ಲ
 • ಕಳಪೆ ಗುಣಮಟ್ಟದ ಕಿಂಡಿಅಣೆಕಟ್ಟು


ಪುತ್ತೂರು: ಪ್ರಕೃತಿ ವಿಕೋಪದಿಂದಾಗಿ ಬಿರುಕು ಬಿಟ್ಟ ಶಾಲೆಗಳು ಬಹುತೇಕ ಇದೆ. ಇದಕ್ಕೆ ಅನುಗುಣವಾಗಿ ಪ್ರಕೃತಿ ವಿಕೋಪದಿಂದ ಶಾಲಾ ದುರಸ್ಥಿಗೆ ಅನುದಾನ ಮಂಜೂರುಗೊಳ್ಳಲಿದೆ. ಈ ನಿಟ್ಟಿನಲ್ಲಿ ಹಿಂದೆ ನೀಡಿದ ಪಟ್ಟಿಯನ್ನು ಸೇರಿದಂತೆ ಬಿಟ್ಟು ಹೋದ ಶಾಲೆಗಳ ಪಟ್ಟಿಯನ್ನು 2 ದಿನದೊಳಗೆ ಕೊಡುವಂತೆ ಮತ್ತು ಪಟ್ಟಿಯ ಪ್ರತಿಯನ್ನು ಜನಪ್ರತಿನಿಧಿಗಳಿಗೂ ನೀಡುವಂತೆ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಅವರಿಗೆ ತಿಳಿಸಿದರು.

ತಾ.ಪಂ ಸಾಮಾನ್ಯ ಸಭೆ ಸೆ.11ರಂದು ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯೆ ಕೆ.ಟಿ. ವಲ್ಸಮ್ಮ ಅವರು ಮಾತನಾಡಿ ನೇರ್ಲ ಶಾಲೆಯ ದುರಸ್ಥಿ ಕುರಿತು 6 ತಿಂಗಳ ಹಿಂದೆ ಪಟ್ಟಿ ಕೊಡಲಾಗಿದ್ದು ಅನುದಾನ ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು. ಧ್ವನಿಗೂಡಿಸಿದ ಸದಸ್ಯೆ ಉಷಾ ಅಂಚನ್ ಅವರು ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿ ಹಣ ಬಿಡುಗಡೆ ಆಗುವುದು ವಿಳಂಬವಾಗುತ್ತಿದೆ. ಈ ಕುರಿತು ಸರಕಾರದ ಗಮನ ಸೆಳೆಯಲು ಶಾಸಕರ ಮೂಲಕ ಮನವಿ ಮಾಡುವ ಎಂದರು. ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಈಗಾಗಲೇ ಶಿಕ್ಷಣ ಉಪನಿರ್ದೇಶಕರು ಅಪಾಯದ ಅಂಚಿನಲ್ಲಿರುವ ಶಾಲೆಗಳ ಪಟ್ಟಿಯನ್ನು ಶಿಕ್ಷಣಾಧಿಕಾರಿಗಳ ಮೂಲಕ ಪಡಿದಿದ್ದಾರೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿಯವರು ಮಾತನಾಡಿ ರೂ.1.93 ಕೋಟಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರಲ್ಲದೆ ಅನುದಾನಕ್ಕಾಗಿ ಸಲ್ಲಿಸಲಾದ ಶಾಲೆಗಳ ಪಟ್ಟಿಯನ್ನು ಸಭೆಯಲ್ಲಿ ಮಂಡಿಸಿದರು. ಇದರಲ್ಲಿ ನೇರ್ಲ ಶಾಲೆಯ ಹೆಸರು ಇಲ್ಲದಿರುವುದನ್ನು ಗಮನಿಸಿದ ಸದಸ್ಯೆ ಕೆ.ಟಿ.ವಲ್ಸಮ್ಮ ಆಕ್ಷೇಪ ವ್ಯಕ್ತಪಡಿಸಿದರು. ಉತ್ತರಿಸಿದ ಬಿ.ಇ.ಒ ಅವರು ನಿಮ್ಮ ಭಾಗದ ಸಿ.ಆರ್.ಪಿ ಅವರು ಪಟ್ಟಿ ಕೊಟ್ಟಿಲ್ಲ ಎಂದರು. ಆಕ್ಷೇಪಿಸಿದ ಜಿ.ಪಂ ಸದಸ್ಯ ಸರ್ವೋತ್ತಮ ಗೌಡ ಅವರು ತುರ್ತು ಬೇಕಾದ ಶಾಲೆಗಳ ಪಟ್ಟಿಯನ್ನು ಸಲ್ಲಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು. ಧ್ವನಿಗೂಡಿಸಿದ ಕೆ.ಟಿ.ವಲ್ಸಮ್ಮ ಅವರು ಅಧಿಕಾರಿಗಳು ಸುಳ್ಳು ಹೇಳುವುದು ಬೇಡ. ಬೇಕಾದರೆ ಶಾಲಾ ಮುಖ್ಯ ಶಿಕ್ಷರಲ್ಲೇ ವಿಚಾರಿಸಿ ಎಂದರಲ್ಲದೆ ಶಾಲಾ ಶಿಕ್ಷಕರಿಗೆ ಫೋನ್ ಮಾಡಿ ಅಧ್ಯಕ್ಷರಿಗೆ ನೀಡಿದರು. ಎಲ್ಲೋ ಕೂತುಕೊಂಡು ಶಾಲಾ ಪಟ್ಟಿ ತಯಾರಿ ಮಾಡಲಾಗಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದರು. ಶಾಲೆಗಳ ಪಟ್ಟಿ ಮಾಡುವಾಗ ಜನಪ್ರತಿನಿಧಿಗಳ ಗಮನಕ್ಕೆ ತರಬೇಕಾಗಿತ್ತು ಎಂದು ಜಿ.ಪಂ ಸದಸ್ಯ ಪಿ.ಪಿ.ವರ್ಗೀಸ್ ಅವರು ಹೇಳಿದರು. ಅಧ್ಯಕ್ಷರು ಮಾತನಾಡಿ ಸಿ.ಆರ್.ಪಿಗಳಿಗೆ ಇವತ್ತೇ ಸೂಚನೆ ನೀಡಿ 2  ದಿನಗಳೊಳಗೆ ಬಿಟ್ಟು ಹೋಗಿರುವ ಶಾಲೆಗಳ ಪಟ್ಟಿಯನ್ನು ಸೇರಿಸಿ ಕೊಡುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು.

ತಾ.ಪಂ ಗೌರವ ಧನ ನೆರೆ ಪರಿಹಾರಕ್ಕೆ:
ತಾ.ಪಂ ಸದಸ್ಯರ ಒಂದು ತಿಂಗಳ ಗೌರವ ಧನವನ್ನು ಮುಖ್ಯಮಂತ್ರಿ ಪ್ರಕೃತಿ ವಿಕೋಪ ನೆರೆಪರಿಹಾರ ನಿಧಿಗೆ ನೀಡುವಂತೆ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ವಿನಂತಿಸಿದರು. ಸದಸ್ಯೆ ಕೆ.ಟಿ. ವಲ್ಸಮ್ಮ ಅವರು ಮಾತನಾಡಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಕೊಡುವ ಬದಲು ನಾವೇ ಕುದ್ದು ನೆರೆಪೀಡಿತ ಪ್ರದೇಶಕ್ಕೆ ಹೋಗಿ ಅವರಿಗೆ ಪರಿಹಾರ ನೀಡುವ ಕುರಿತು ಸಲಹೆ ನೀಡಿದರು.

ಅಂಗನವಾಡಿಗಳ ಗಡಿ ಗುರುತು ಇನ್ನೂ ಬಾಕಿ:
ತಾಲೂಕಿನ 11 ಅಂಗನವಾಡಿಗಳ ಗಡಿ ಗುರುತು ಇನ್ನು ಬಾಕಿ ಇದೆ ಎಂದು ಸಿಡಿಪಿಒ ಭಾರತಿ ಅವರು ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದರು. 6 ತಿಂಗಳಾದರೂ ಇನ್ನೂ ಗಡಿ ಗುರುತು ಬಾಕಿ ಇರಲು ಕಾರಣ ಏನು ಎಂದು ಅಧ್ಯಕ್ಷರು ತಹಶೀಲ್ದಾರನ್ನು ಪ್ರಶ್ನಿಸಿದರು. ಉತ್ತರಿಸಿದ ತಹಶೀಲ್ದಾರ್ ಅವರು ಬಾಕಿ ಇರುವ ಅಂಗನವಾಡಿಗಳ ಪಟ್ಟಿ ಕೊಡಿ ಎಂದರು. ಸದಸ್ಯೆ ಕುಸುಮಾ ಅವರು ಮಾತನಾಡಿ 72 ಕಾಲೋನಿ ಮತ್ತು ಎನ್‌ಕೂಪ್ ರಬ್ಬರ್ ಇಲಾಖೆ ಅಡಿಯಲ್ಲಿದೆ. ಅದರು ಅರಣ್ಯ ಜಾಗ. ಈ ನಿಟ್ಟಿನಲ್ಲಿ ಅಂತಿಬೆಟ್ಟುವಿನಲ್ಲಿ ಅಂಗನವಾಡಿ ಆರ್.ಟಿ.ಸಿ ಮಾಡಿಸುವಂತೆ ಸಭೆಯಲ್ಲಿ ಪ್ರಸ್ತಾಪಿಸಿದರು.

ಕಡಬದಲ್ಲಿ ತಿಂಗಳೊಳಗೆ ಕೆ.ಎಸ್.ಆರ್.ಟಿ.ಸಿಸಭೆ
ಕಡಬ ತಾಲೂಕು ಆಗಿ ಹಲವು ಸಮಯ ಆದರೂ ನಮಗೆ ಸರಕಾರಿ ಬಸ್‌ನ ಸಮಸ್ಯೆಗೆ ಪರಿಹಾರ ಆಗಿಲ್ಲ. ಇನ್ನಾದರೂ ಕೆಎಸ್‌ಆರ್‌ಟಿಸಿ ಸಭೆ ಕಡಬದಲ್ಲಿ ನಡೆಯಬೇಕು ಎಂದು ಸದಸ್ಯೆ ಕೆ.ಟಿ.ವಲ್ಸಮ್ಮ ಪ್ರಸ್ತಾಪಿಸಿದರು. ಉತ್ತರಿಸಿದ ಅಧ್ಯಕ್ಷರು ಹೊಸದಾಗಿ ಬಂದ ಕೆಎಸ್‌ಆರ್‌ಟಿಸಿ ಡಿ.ಸಿ ಅವರು ಕರ್ತವ್ಯಕ್ಕೆ ಹಾಜರಾಗಿ 15 ದಿನಗಳಾಯಿತಷ್ಟೆ. ಅವರಿಗೆ ಈ ವಿಚಾರ ಪ್ರಸ್ತಾಪ ಮಾಡಿದ್ದೇನೆ. ಒಂದು ತಿಂಗಳೊಳಗೆ ಶಾಸಕರ ನೇತೃತ್ವದಲ್ಲಿ ಕಡಬದಲ್ಲಿ ಸಭೆ ಮಾಡುವ ಕುರಿತು ಅವರು ಭರವಸೆ ನೀಡಿದ್ದಾರೆ.

ಬಸ್ ಪಾಸ್ 70 ಕಿ.ಮೀ ವ್ಯಾಪ್ತಿಗೆ ಏರಿಸಲು ನಿರ್ಣಯ:
ಕೆಎಸ್‌ಆರ್‌ಟಿಸಿ ಸಂಸ್ಥೆಯಿಂದ ಕೊಡುವ ಬಸ್ ಪಾಸ್‌ನ ವ್ಯಾಪ್ತಿ ೬೦ ಕಿ.ಮೀ ಮಾತ್ರ. ಆದರೆ ಮಂಗಳೂರಿನಿಂದ ಗೋಳಿತ್ತೊಟ್ಟುವಿಗೆ ೬೦ ಕಿ.ಮೀ ಆದರೆ ಪ್ರಯಾಣಿಸುವ ವಿದ್ಯಾರ್ಥಿಗೆ ಮೂರು ಕಿ.ಮೀ ಮುಂದೆ ಹೋಗಲು ಮತ್ತೆ ಹಣ ಕೊಡುವ ಪರಿಸಸ್ಥಿತಿ ಇದೆ. ಆ 3 ಕಿ.ಮೀಗೆ ದಿನಕ್ಕೆ ಹೋಗಿ ಬರಲು ರೂ. 20 ಹೆಚ್ಚುವರಿ ಖರ್ಚು ತಗಲುತ್ತದೆ. ಬಸ್ ಪಾಸ್ ಮೂಲಕ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಹಣ ಕೊಟ್ಟು ಪ್ರಯಾಣಿಸುವ ಪ್ರಸಂಗ ಎದುರಾಗಿದೆ ಎಂದು ಉಷಾ ಅಂಚನ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಉತ್ತರಿಸಿದ ಅಧ್ಯಕ್ಷರು ಈ ಕುರಿತು ತಾ.,ಪಂ ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ಕಡಿಮೆ ಪಕ್ಷ 70 ಕಿ.ಮೀ ವ್ಯಾಪ್ತಿಗೆ ಬಸ್ ಪಾಸ್ ಕೊಡುವಂತೆ ನಿರ್ಣಯ ಕೈಗೊಳ್ಳುವ ಎಂದರು.

94 ಸಿಗೆ ಅರಣ್ಯ ಗುಪ್ಪೆಯ ಗೊಂದಲ :
ಅರಣ್ಯ ಪ್ರದೇಶದ ಸಮೀಪ ವಾಸ್ತವ್ಯ ಇರುವವರಿಗೆ ೯೪ ಸಿ ಹಕ್ಕು ಪತ್ರ ಇನ್ನೂ ಲಭ್ಯವಾಗಿಲ್ಲ. ಮನೆ ವಾಸ್ತವ್ಯ ಇರುವವರು ಗುಪ್ಪೆಯಿಂದ ೧೦೦ ಮೀಟರ್ ಬಿಟ್ಟು ಮನೆ ಕಟ್ಟಿದ್ದರೂ ಅರಣ್ಯ ಇಲಾಖೆ ಉಪಸರಂಕ್ಷಣಾಧಿಕಾರಿಗಳಿಗೆ ವರದಿ ಕೊಡುತ್ತಾರೆ. ಅದರೆ ಈ ಹಿಂದೆ ಗುಪ್ಪೆಯಿಂದ ೧೦೦ ಮೀಟರ್ ಅಂತರದಲ್ಲಿ ಇರುವರಿಗೆ ಹಕ್ಕುಪತ್ರ ಕೊಟ್ಟ ಉದಾಹರಣೆ ಇದೆ. ಪ್ರಸ್ತುತ ದಿನದಲ್ಲಿ ಅರಣ್ಯ ಇಲಾಖೆಯವರು ಆಕ್ಷೇಪಣ ಪತ್ರಕ್ಕೆ ಷರ ಬರೆದು ಕಂದಾಯ ಇಲಾಖೆಯ ಜಂಟಿ ಸರ್ವೆಗೆ ಬರೆಯುತ್ತಾರೆ. ಆದರೆ ಈ ಸರ್ವೆ ಕಾರ್ಯವೂ ನಡೆಯುವುದಿಲ್ಲ. ಸುಮ್ಮನೆ ಸಮಯ ವ್ಯರ್ಥ ಆಗುತ್ತಿದೆ ಎಂದು ಸದಸ್ಯರು ಆಕ್ಷೇಪಿಸಿದರು. ಸದಸ್ಯೆ ಆಶಾಲಕ್ಷ್ಮಣ್ ಅವರು ಮಾತನಾಡಿ ಅರಣ್ಯ ಇಲಾಖೆ ೯೪ ಸಿಗೆ ಸಂಬಂಧಿಸಿ ವರದಿ ಕೊಡುತ್ತೇನೆಂದು ಹೇಳುತ್ತಾರೆ ಹೊರತು ಉತ್ತರ ಕೊಡುವುದಿಲ್ಲ. ದಾರಿ ತಪ್ಪಿಸುತ್ತಾರೆ ಎಂದರು. ಜಿ.ಪಂ ಸದಸ್ಯರಾದ ಪಿ.ಪಿ ವರ್ಗಿಸ್, ಸರ್ವೋತ್ತಮ ಗೌಡ, ತಾ.ಪಂ ಸದಸ್ಯರಾದ ಉಷಾ ಅಂಚನ್, ಫಝಲ್ ಮಾತನಾಡಿದರು. ಅಧ್ಯಕ್ಷರು ಮಾತನಾಡಿ ಅರಣ್ಯ ಗುಪ್ಪೆಯಿಂದ ನೂರು ಮೀಟರ್ ಹೊರಗೆಗ ಇರುವಂತವರಿಗೆ ೯೪ ಸಿ ಹಕ್ಕು ಪತ್ರ ಕೊಡುವಂತೆ ತಾ.ಪಂ ನಿರ್ಣಯ ಕೈಗೊಳ್ಳಲಾಗುವುದು ಎಂದರು.

ಗ್ರಾ.ಪಂನಲ್ಲಿ ತಾ.ಪಂ ಸದಸ್ಯರಿಗೆ ಆಸನದ ವ್ಯವಸ್ಥೆ ಕಡ್ಡಾಯ:
ಗ್ರಾ.ಪಂ ಕಚೇರಿಯಲ್ಲಿ ತಾ.ಪಂ ಸದಸ್ಯರಿಗೆ ಆಸನದ ವ್ಯವಸ್ಥೆ ಕುರಿತು ಪಾಲನಾ ವರದಿಯಲ್ಲಿ ಪ್ರಸ್ತಾಪಗೊಂಡಾಗ ಸದಸ್ಯೆ ಕೆ.ಟಿ.ವಲ್ಸಮ್ಮ ಅವರು ಇನ್ನೂ ಕೂಡಾ ಇದು ಅನುಷ್ಠಾನಗೊಂಡಿಲ್ಲ ಎಂದರು. ಉಷಾ ಅಂಚನ್ ಧ್ವನಿಗೂಡಿಸಿದರು. ಉತ್ತರಿಸಿದ ಅಧ್ಯಕ್ಷರು ತಕ್ಷಣ ವಾರದೊಳಗೆ ಎಲ್ಲಾ ಗ್ರಾ.ಪಂ ಕಚೇರಿಯಲ್ಲಿ ತಾ.ಪಂ ಸದಸ್ಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಬೇಕೆಂದು ಗ್ರಾ.ಪಂ ಪಿಡಿಒಗಳಿಗೆ ತಿಳಿಸಬೇಕೆಂದು ತಾ.ಪಂ ಕಾರ್ಯನಿರ್ವಹಕಾಧಿಕಾರಿಗೆ ಅಧ್ಯಕ್ಷರು ಸೂಚಿಸಿದರು.

ಪಿಂಚಣಿ ಬಾರದೆ 3 ತಿಂಗಳು :
ತಂತ್ರಾಂಶ ಕೆ೧ ನಿಂದ ಕೆ೨ ಗೆ ವರ್ಗಾವಣೆಗೊಂಡಿದ್ದ ಹಿನ್ನೆಲೆಯಲ್ಲಿ ಕೆಲವೊಂದು ದೋಷಗಳಿಂದಾಗಿ ಪಿಂಚಣಿ, ವಿಕಲಚೇತನ, ವೃದ್ದಾಪ್ಯ ವೇತನದಲ್ಲಿ ತೊಂದರೆ ಆಗಿರಬಹುದು. ಆದರೂ ಸಮಸ್ಯೆ ಇದ್ದವರ ಪಟ್ಟಿ ಕೊಡಿ ಪರಿಶೀಲಿಸುತ್ತೇವೆ ಎಂದು ತಹಶೀಲ್ದಾರ್ ಅನಂತ ಶಂಕರ್ ಸದಸ್ಯರ ಪ್ರಶ್ನೆಗೆ ಉತ್ತರಿಸಿರು. ಸದಸ್ಯ ಫಝಲ್ ಅವರು ಮಾತನಾಡಿ ಅರ್ಜಿ ಕೊಟ್ಟಾಗ ಸ್ವೀಕೃತಿ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು. ಉತ್ತರಿಸಿದ ಕಡಬ ತಹಶೀಲ್ದಾರ್ ಜೋನ್ ಪ್ರಕಾಶ್ ಅವರು ಅರ್ಜಿಗಳು ಎಲ್ಲಾ ಆನ್‌ಲೈನ್‌ನಲ್ಲೇ ನಡೆಯುತ್ತವೆ. ನಿಮಗೆ ಅಟೋಮೆಟಿಕ್ ಆಗಿ ಸಂದೇಶ ಬರುತ್ತದೆ ಎಂದರು. ಸದಸ್ಯರಾದ ಉಷಾ ಅಂಚನ್, ರಾಮಪಾಂಬರು ಮಾತನಾಡಿದರು.

ಆಧಾರ್ ಕಾರ್ಡ್‌ನಲ್ಲಿ ಡೇಟ್ ಆಫ್ ಬರ್ತ್ ತಿದ್ದುಪಡಿ ತಡ:
ಆಧಾರ್ ಕಾರ್ಡ್‌ನಲ್ಲಿ ಡೇಟ್ ಆಫ್ ಬರ್ತ್ ತಿದ್ದುಪಡಿ ೨ ತಿಂಗಳು ಆದರೂ ಆಗುವುದಿಲ್ಲ ಎಂದು ಸದಸ್ಯೆ ಉಷಾ ಅಂಚನ್ ಪ್ರಸ್ತಾಪಿಸಿದರು. ಉತ್ತರಿಸಿದ ತಹಶೀಲ್ದಾರ್ ಜೋನ್ ಪ್ರಕಾಶ್ ಅವರು ಡೇಫ್ ಆಫ್ ಬರ್ತ್‌ನ ತಿದ್ದುಪಡಿಗೆ ವೈದ್ಯರ ಪತ್ರ ಬೇಕು ಎಂದರು.

ಕೊಳೆರೋಗ ಪರಿಹಾರ ಬಂದಿಲ್ಲ:
ಕೊಳೆರೋಗ ಪರಿಹಾರಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸಿದವರಿಗೆ ಇನ್ನೂ ಪರಿಹಾರ ಬಂದಿಲ್ಲ ಎಂದು ಜಿ.ಪಂ ಶಿಕ್ಷಣ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ಸಭೆಯಲ್ಲಿ ಪ್ರಸ್ತಾಪಿಸಿದರು. ಈ ಕುರಿತು ಸದಸ್ಯರು ಧ್ವನಿಗೂಡಿಸಿದರು. ಪರಿಹಾರ ಧನಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸಿದ ಸಮಯ ಏನಾದರು ಮಾಹಿತಿ ಫಿಲ್ ಮಾಡುವಲ್ಲಿ ತೊಂದರೆ ಆಗಿದ್ದಲ್ಲಿ ಇನ್ನೊಮ್ಮೆ ಅರ್ಜಿ ಸಲ್ಲಿಸಬಹುದು. ವಿ.ಎ ಲಾಗಿನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ತಹಸೀಲ್ದಾರ್ ಮಾಹಿತಿ ನೀಡಿದರು. ಸದಸ್ಯ ಲಕ್ಷ್ಮಣ ಗೌಡ ಅವರು ಮಾತನಾಡಿ ಬೆಳ್ಳಿಪ್ಪಾಡಿ ಪರಿಸರದಲ್ಲಿ ಕೊಳೆರೋಗಕ್ಕೆ ಸಂಬಂಧಿಸಿ ಅಧಿಕಾರಿಗಳು ಬಂದು ಸಮೀಕ್ಷೆ ನಡೆಸಿಲ್ಲ ಎಂದರು.

ದುಡ್ಡಿದ್ದರೆ ಬೆಡ್, ಆಯಷ್ಮಾನ್ ಕಾರ್ಡ್ ಇದ್ದರೆ ಬೆಡ್ ಇಲ್ಲ:
ಕೇಂದ್ರ ಸರಕಾರದ ಉತ್ತಮ ಯೋಜನೆಯಾದ ಆಯುಷ್ಮಾನ್ ಯೋಜನೆಯನ್ನು ವೈದ್ಯರು ತಪ್ಪು ಮಾಹಿತಿ ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಅನಾರೋಗ್ಯದ ವ್ಯಕ್ತಿಯೋರ್ವರನ್ನು ಪುತ್ತೂರು ಆಸ್ಪತ್ರೆಯಿಂದ ವೆನ್‌ಲಾಕ್ ಆಸ್ಪತ್ರೆಗೆ ಸಿಫ್ಟ್ ಮಾಡಿದ ಬಳಿಕ ಅಲ್ಲಿಂದ ಏ.ಜೆ. ಮತ್ತು ಕೆ.ಎಮ್.ಸಿ ಆಸ್ಪತ್ರೆಗೆ ಕಳುಹಿಸಿ ಕೊನೆಗೆ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ ಮೃತ ದೇಹ ಬಿಟ್ಟುಕೊಡಲು ಆಸ್ಪತ್ರೆಯವರು ರೂ. 60ಸಾವಿರ ಬಿಲ್ ಮಾಡಿದ ಪ್ರಸಂಗ ಬಂದಿತ್ತು ಎಂದ ಸದಸ್ಯೆ ತೇಜಸ್ವಿನಿ ಕಟ್ಟಪುಣಿ ಅವರು ಇಲ್ಲಿ ದುಡ್ಡು ಇದ್ದವರಿಗೆ ಬೆಡ್, ಆಯುಷ್ಮಾನ್ ಕಾರ್ಡ್ ಇದ್ದವರಿಗೆ ಬೆಡ್ ಇಲ್ಲ ಎಂದು ಆರೋಪಿಸಿದರು.

ಧ್ವನಿಗೂಡಿಸಿದ ಸದಸ್ಯ ರಾಮ ಪಾಂಬಾರು ಅವರು ನನ್ನ ತಾಯಿಯ ಕಣ್ಣಿನ ಪರೀಕ್ಷೆಗೂ ಆಯುಷ್ಮಾನ್ ಯೋಜನೆಯ ಸೌಲಭ್ಯ ಪಡೆಯಲು 8 ದಿನ ಕಾಯಬೇಕಾಯಿತು ಎಂದರು. ಈ ಕುರಿತು ವೈದ್ಯರು ಯೋಜನೆಯ ಸಮರ್ಪಕ ಮಾಹಿತಿ ನೀಡಬೇಕೆಂದು ಸದಸ್ಯರು ತಿಳಿಸಿದರು. ಸದಸ್ಯೆ ಆಶಾಲಕ್ಷ್ಮಣ್ ಅವರು ಮಾತನಾಡಿ ಆಯುಷ್ಮಾನ್ ಯೋಜನೆಯ ಸೌಲಭ್ಯ ಪಡೆಯಲು ಅದರ ರೀತಿ ನೀತಿಗಳನ್ನು ಅನುಸರಿಸಿಕೊಂಡು ಹೋಗಬೇಕು. ಆಗ ತಕ್ಷಣ ಸೌಲಭ್ಯ ಸಿಗುತ್ತದೆ. ನಮ್ಮ ಪರಿಸರದ ವ್ಯಕ್ತಿಗೆ ಚಿಕಿತ್ಸೆಗಾಗಿ ತಕ್ಷಣ ರೂ. 2.5ಲಕ್ಷ ಸಿಕ್ಕಿದೆ ಎಂದರು. ಸದಸ್ಯೆ ಉಷಾ ಅಂಚನ್ ಧ್ವನಿಗೂಡಿಸಿದರು. ಕೊನೆಗೆ ಆಯುಷ್ಮಾನ್ ಯೋಜನೆ ಕುರಿತು ಸದಸ್ಯರಿಗೆ ಸರಕಾರಿ ಆಸ್ಪತ್ರೆಯ ಹರೀಶ್ ಮಾಹಿತಿ ನೀಡಿದರು.

ಕೆರೆಗಳ ಗಡಿಗುರುತು ಇದ್ದಲ್ಲಿ ತಿಳಿಸಿ
ಕೆರೆಗಳಿಗೆ ಸಂಬಂಧಿಸಿ ಈಗಾಗಲೇ ಗಡಿಗುರುತು ಮಾಡಲಾಗಿದೆ. ಬಿಟ್ಟು ಹೋಗಿದ್ದರೆ ತಿಳಿಸಿ. ಗಡಿಗುರುತು ಆದ ಕೆರೆಗಳ ವರದಿಯನ್ನು ಕೆಪಿಸಿಎಲ್‌ಗೆ ನೀಡಲಾಗಿದೆ. ಕೊಟ್ಟ ವರದಿಗೆ ಸಂಬಂಧಿಸಿ ಕೆರೆಗಳ ಒತ್ತುವರಿ ಇದೆ ಎಂದಲ್ಲಿ ಅಂತಹ ಕೆರೆಗಳ ಸರ್ವೆನಂಬರ್ ನೋಡಿ ಅಳತೆ ಮಾಡಲಾಗುವುದು ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

ಕಳಪೆ ಗುಣಮಟ್ಟದ ಕಿಂಡಿಅಣೆಕಟ್ಟು:
ಸದಸ್ಯೆ ತೇಜಸ್ವಿನಿ ಕಟ್ಟಪುಣಿ ಅವರು ಮಾತನಾಡಿ ಆಲಂತಾಯದಲ್ಲಿ 2 ಕಿಂಡಿ ಅಣೆಕಟ್ಟುಗಳು ಕಳಪೆ ಗುಣಮಟ್ಟದಾಗಿದೆ. ಕಿಂಡಿಅಣೆಕಟ್ಟಿನಲ್ಲಿ ನೀರು ನಿಲ್ಲುತ್ತಿಲ್ಲ ಎಂದು ಪ್ರಸ್ತಾಪಿಸಿದರು. ಜಲನಯನ ಇಲಾಖೆ ಸಹಾಯಕ ನಿರ್ದೇಶಕರು ಈ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು. ಫೌಝಿಯ ಅವರು ಮಾತನಾಡಿ ಪಳ್ಳತ್ತೂರಿನ ಬೆಳ್ಳಿಚಡವು ರಸ್ತೆ ದುರಸ್ಥಿ ಕಾರ್ಯ ಮಾಡಬೇಕೆಂದು ಆಗ್ರಹಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಕೊರತೆ ಇದೆ ಎಂದು ಸದಸ್ಯ ಶಿವರಂಜನ್ ಅಧಿಕಾರಿಗಳ ಗಮನ ಸೆಳೆದರು. ತಾ.ಪಂ ಉಪಪಾಧ್ಯಕ್ಷೆ ಲಲಿತಾ ಈಶ್ವರ್, ಕಾರ್ಯನಿರ್ವಹಕಾಧಿಕಾರಿ ನವೀನ್ ಭಂಡಾರಿ, ತಹಶೀಲ್ದಾರ್ ಅನಂತಶಂಕರ್, ಕಡಬ ತಹಸೀಲ್ದಾರ್ ಜೋನ್ ಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾ.ಪಂ ಸದಸ್ಯರಾದ ಸಾಜ ರಾಧಾಕೃಷ್ಣ ಅಳ್ವ, ಗಣೇಶ್ ಕೈಕುರೆ, ಪರಮೇಶ್ವರ ಭಂಡಾರಿ, ಮುಕುಂದ ಗೌಡ, ಸುಜಾತ ಕೃಷ್ಣ, ಜಯಂತಿ ಗೌಡ, ಮೀನಾಕ್ಷಿ ಮಂಜುನಾಥ್, ಭವಾನಿ ಚಿದಾನಂದ್, ತಾರಾ ತಿಮ್ಮಪ್ಪ, ರಾಜೇಶ್ವರಿ ಮತ್ತು ಐತ್ತೂರು ಗ್ರಾ.ಪಂ ಅಧ್ಯಕ್ಷ ಸತೀಶ್ ಕೆ, ಮರ್ದಾಳ ಗ್ರಾ.ಪಂ ಅಧ್ಯಕ್ಷ ಶ್ರೀಲತಾ ಹಾಗೂ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.