Home_Page_Advt
Home_Page_Advt
Home_Page_Advt

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿ ಕಾವು ಹೇಮನಾಥ ಶೆಟ್ಟಿ

Puttur_Advt_NewsUnder_1
Puttur_Advt_NewsUnder_1

* ಅವಕಾಶ ನೀಡುವಂತೆ ಜಾಲತಾಣದ ಮೂಲಕ ಅಭಿಮಾನಿಗಳ ಆಗ್ರಹ
*ವೀಕ್ಷಕ ಸೂರಜ್ ಹೆಗ್ಡೆಯವರಿಂದ ಅಭಿಪ್ರಾಯ ಸಂಗ್ರಹ
*ಶಕುಂತಳಾ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ ನೇತೃತ್ವದ ಪ್ರತ್ಯೇಕ ನಿಯೋಗದಿಂದ ವೀಕ್ಷಕರ ಭೇಟಿ

*ಯೂಸುಫ್ ರೆಂಜಲಾಡಿ
ಪುತ್ತೂರು: ದ.ಕ. ಸೇರಿದಂತೆ ರಾಜ್ಯದ 10 ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಮುಂದಾಗಿರುವ ಕೆಪಿಸಿಸಿ ಈ ಕುರಿತು ವೀಕ್ಷಕರನ್ನು ನೇಮಿಸಿ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷತೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ನಾಯಕ ಕಾವು ಹೇಮನಾಥ ಶೆಟ್ಟಿಯವರೂ ಓರ್ವ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಅವರಿಗೆ ಈ ಬಾರಿ ಅಧ್ಯಕ್ಷ ಪಟ್ಟ ನೀಡುವಂತೆ ಅವರ ಅಭಿಮಾನಿಗಳಿಂದ, ಕಾರ್ಯಕರ್ತರಿಂದ ಆಗ್ರಹ ವ್ಯಕ್ತವಾಗಿದ್ದು ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲೂ ವ್ಯಾಪಕವಾಗಿ ಸಂದೇಶಗಳು ಹರಿದಾಡುತ್ತಿದೆ. ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ಇರುವ ಕಾರಣ ಹೇಮನಾಥ ಶೆಟ್ಟಿಯವರಿಗೆ ಅಧ್ಯಕ್ಷ ಹುದ್ದೆ ಸಿಗಲಿದೆಯೋ ಅಥವಾ ಹೈಕಮಾಂಡ್ ಬೇರೆ ಹುದ್ದೆಯನ್ನು ನೀಡುತ್ತದೆಯೋ ಎಂಬುವುದು ಜಿಲ್ಲೆಯ ರಾಜಕೀಯ ವಲಯದಲ್ಲಿ ಕುತೂಹಲ ಸೃಷ್ಟಿಸಿದ್ದು ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
1987ರಲ್ಲಿ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಸೆನೆಟ್ ಪ್ರತಿನಿಧಿಯಾಗಿ ರಾಜಕೀಯ ಎಂಟ್ರಿ ಪಡೆದ ಕಾವು ಹೇಮನಾಥ ಶೆಟ್ಟಿಯವರು ಆ ಬಳಿಕ ಪುತ್ತೂರು ಎನ್‌ಎಸ್‌ಯುಐ ವಿದ್ಯಾರ್ಥಿ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಪಕ್ಷದ ಸೇವೆ ಆರಂಭಿಸಿದ್ದರು. 1989ರಲ್ಲಿ ನಡೆದ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದರೂ ಕೊನೆ ಗಳಿಗೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿಸಿಕೊಂಡರು.
1999ರ ಬಳಿಕ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಪಕ್ಷದಲ್ಲಿ ಯುವ ನಾಯಕನಾಗಿ ಗುರುತಿಸಿಕೊಂಡಿದ್ದರು. 2004ರಲ್ಲಿ ಮತ್ತೆ ವಿಧಾನಸಭಾ ಚುನಾವಣೆ ನಡೆದಾಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎರಡನೇ ಬಾರಿ ಅರ್ಜಿ ಸಲ್ಲಿಸಿದ್ದರು. ಆದರೆ ಕೊನೇ ಗಳಿಗೆಯಲ್ಲಿ ಕೈತಪ್ಪಿತ್ತು. 2006ರಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಕೆಪಿಸಿಸಿ ನೇಮಕ ಮಾಡುವ ಮೂಲಕ ಮೊದಲ ಬಾರಿಗೆ ಹೇಮನಾಥ ಶೆಟ್ಟಿಯವರು ಬ್ಲಾಕ್ ತನ್ನ ಹಿಡಿತದಲ್ಲಿಟ್ಟುಕೊಳ್ಳುವಲ್ಲಿ ಯಶಸ್ವಿಯಾದರು.
ಬಳಿಕ ನಿರಂತರ 9 ವರ್ಷಗಳ ಕಾಲ ಪುತ್ತೂರು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಮುಂದುವರೆದಿದ್ದರು. ಆ ವೇಳೆ ನಡೆದ ಪುರಸಭೆ, ತಾ.ಪಂ. ಹಾಗೂ ಜಿ.ಪಂ. ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಗೆಲವು ಸಾಧಿಸಿದ್ದು ಹೇಮನಾಥ ಶೆಟ್ಟಿಯವರು ಪಕ್ಷದಲ್ಲಿ ಇನ್ನಷ್ಟು ಗಟ್ಟಿಗೊಳ್ಳಲು ಸಹಕಾರ ನೀಡಿತ್ತು.
2013ರಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಮೂರನೇ ಬಾರಿಗೆ ಟಿಕೆಟ್ ಆಕಾಂಕ್ಷಿಯಾಗಿ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿ ಸ್ಪರ್ದೆಗಾಗಿ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಆದರೆ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಪುತ್ತೂರು ಶಾಸಕರಾಗಿದ್ದ ಶಕುಂತಳಾ ಶೆಟ್ಟಿಯವರನ್ನು ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿದ ಹೈಕಮಾಂಡ್ ಅವರಿಗೆ ಅವಕಾಶ ನೀಡಿದ್ದು ಆ ಚುನಾವಣೆಯಲ್ಲಿ ಶಕುಂತಳಾ ಶೆಟ್ಟಿ ಗೆಲುವು ಸಾಧಿಸಿದ್ದರು. ಹಾಗಾಗಿ ಮೂರನೇ ಬಾರಿಯೂ ವಿಧಾನಸಭಾ ಸ್ಪರ್ಧೆಯ ಅವಕಾಶ ಹೇಮನಾಥ ಶೆಟ್ಟಿ ಕೈ ತಪ್ಪಿತ್ತು. ಶಕುಂತಳಾ ಶೆಟ್ಟಿಯವರು ಶಾಸಕರಾಗಿ ಆಯ್ಕೆಯಾದಾಗಲೂ ಹೇಮನಾಥ ಶೆಟ್ಟಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
೨೦೧೪ರಲ್ಲಿ ಭಾರತೀಯ ಹಿಂದೂ ಪರಿಷತ್ ಸಂಘಟನೆಯನ್ನು ರಚನೆ ಮಾಡಿ ಕಾಂಗ್ರೆಸ್‌ನವರೂ ಹಿಂದುತ್ವದಲ್ಲಿದ್ದಾರೆ. ಜಾತ್ಯಾತೀತ ಹಿಂದುತ್ವ ಕಾಂಗ್ರೆಸ್‌ಗೆ ಅನಿವಾರ್ಯತೆ ಎಂಬಂತೆ ಬಿಂಬಿಸುವ ಪ್ರಯತ್ನವನ್ನು ಮಾಡಿದ್ದರು. ಆದರೆ ಪಕ್ಷದ ಹಿರಿಯ ನಾಯಕರ ವಿರೋಧದಿಂದ ಅದು ಅಷ್ಟೊಂದು ವರ್ಕೌಟ್ ಆಗಿರಲಿಲ್ಲ. ಬಳಿಕ ಕೆಪಿಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರೂ ಅದೂ ಕೈತಪ್ಪಿತ್ತು.
2017ರಲ್ಲಿ ಜಿಲ್ಲಾ ಕಾಂಗ್ರೆಸ್‌ಗೆ ಪೈಪೋಟಿ: 2017ರಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗಾಗಿ ತೀವ್ರ ಪೈಪೋಟಿ ನಡೆಸಿದ್ದ ಹೇಮನಾಥ ಶೆಟ್ಟಿಯವರು ಅಧ್ಯಕ್ಷರಾಗುತ್ತಾರೆ ಎಂದೇ ಹೇಳಲಾಗಿತ್ತು. ಅಧ್ಯಕ್ಷ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದ ಹಾಲಿ ಅಧ್ಯಕ್ಷ ಹರೀಶ್ ಕುಮಾರ್ ಮತ್ತು ಕಾವು ಹೇಮನಾಥ ಶೆಟ್ಟಿ ಮಧ್ಯೆ ರಾಜಿ ಮಾತುಕತೆ ನಡೆಸಿ ಅಧ್ಯಕ್ಷ ಹುದ್ದೆಯನ್ನು ಹರೀಶ್‌ಕುಮಾರ್‌ಗೆ ಬಿಟ್ಟು ಕೊಟ್ಟಿದ್ದರು ಎನ್ನಲಾಗುತ್ತಿದೆ. ಇದೀಗ 2019ರಲ್ಲಿ ಮತ್ತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಪ್ರಬಲ ಆಕಾಂಕ್ಷಿಯಗಿದ್ದಾರೆ. ಈ ಬಾರಿಯೂ ಪ್ರಬಲ ಆಕಾಂಕ್ಷಿಗಳ ಸಾಲಿನಲ್ಲಿ ಕಾವು ಹೇಮನಾಥ ಶೆಟ್ಟಿಯವರಿದ್ದು ಕೊನೆ ಗಳಿಗೆಯಲ್ಲಿ ಏನು ಆಗುತ್ತೋ ಗೊತ್ತಿಲ್ಲ. ಹೇಮನಾಥ ಶೆಟ್ಟಿಯವರಿಗೆ ಅವಕಾಶ ನೀಡುವಂತೆ ಕೆಲವರಿಂದ ಒತ್ತಡಗಳೂ ಇದೆ ಎಂಬ ಮಾಹಿತಿಯೂ ಇದ್ದು, ಅದಕ್ಕೆ ಒಂದು ಗುಂಪು ಒಳಗಿಂದೊಳಗೆ ವಿರೋಧ ವ್ಯಕ್ತಪಡಿಸುತ್ತಿದೆ ಎಂದೂ ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಯಾರ ಪರವಾಗಲಿದೆಯೋ ಕಾದು ನೋಡಬೇಕಿದೆ.

ಒಲಿಯಲಿದೆಯೇ ಅಧ್ಯಕ್ಷ ಪಟ್ಟ…?
ಹರೀಶ್ ಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಹಿನ್ನಡೆಯಾಗಿರುವುದು ಹಾಗೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ನಳಿನ್ ಕುಮಾರ್ ಕಟೀಲ್‌ರವರು ಭರ್ಜರಿ ಅಂತರದಿಂದ ಗೆದ್ದಿರುವುದು ಹೈಕಮಾಂಡ್ ಗಮನದಲ್ಲಿದೆ. ಪುತ್ತೂರಿನಲ್ಲಿ ಶಕುಂತಳಾ ಶೆಟ್ಟಿ-ಹೇಮನಾಥ ಶೆಟ್ಟಿ ಬಣ ರಾಜಕೀಯ, ಆಂತರಿಕ ಕಚ್ಚಾಟಗಳ ದುಷ್ಪರಿಣಾಮವನ್ನು ಈಗಾಗಲೇ ಪಕ್ಷ ಅನುಭವಿಸಿದ್ದು ಮುಂದಕ್ಕೆ ಅದೆಲ್ಲವನ್ನೂ ಬಿಟ್ಟು ಹೇಮನಾಥ ಶೆಟ್ಟರಿಗೆ ಒಂದು ಬಾರಿ ದೊಡ್ಡ ಹುದ್ದೆ ನೀಡಿ ಪ್ರಯೋಗ ಮಾಡಲು ಕಾಂಗ್ರೆಸ್ ಹೈಕಮಾಂಡ್ ಆಲೋಚನೆ ಮಾಡಿದೆ ಎನ್ನಲಾಗುತ್ತಿದೆ. ರಮಾನಾಥ ರೈ ಈ ಹಿಂದೆ ಜಿಲ್ಲೆಯ ನೇತೃತ್ವವನ್ನು ವಹಿಸಿಕೊಂಡಿದ್ದರಿಂದ ಹಾಗೂ ಹೇಮನಾಥ ಶೆಟ್ಟಿ ಅನೇಕ ವರ್ಷಗಳಿಂದ ಹುದ್ದೆಯ ಆಕಾಂಕ್ಷಿಯಾಗಿರುವುದರಿಂದ ಈ ಬಾರಿ ಹೇಮನಾಥ ಶೆಟ್ಟರಿಗೆ ಅಧ್ಯಕ್ಷ ಗಾದಿ ಒಲಿಯುವ ಸಾಧ್ಯತೆ ಅಧಿಕವಾಗಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ. ಹೇಮನಾಥ ಶೆಟ್ಟಿಯವರು ರಮಾನಾಥ ರೈ ಮತ್ತು ಐವನ್ ಡಿಸೋಜಾ ಅವರ ಆಪ್ತರಾಗಿರುವುದು ಮತ್ತು ಜಿಲ್ಲೆಯಲ್ಲೇ ತನ್ನದೇ ಆದ ಅಭಿಮಾನಿ ಬಳಗವನ್ನು ಹೊಂದಿರುವುದು ಕೂಡಾ ಅವರ ಆಯ್ಕೆಗೆ ಸಹಕಾರಿಯಾಗಲಿದೆ ಎಂಬ ಲೆಕ್ಕಾಚಾರವೂ ನಡೆಯುತ್ತಿದೆ. ಹೇಮನಾಥ ಶೆಟ್ಟಿಯವರಂತೆ ಅವರ ಪತ್ನಿ ಅನಿತಾ ಹೇಮನಾಥ ಶೆಟ್ಟಿಯವರೂ ರಾಜಕೀಯದ ನಾಡಿಮಿಡಿತಗಳನ್ನು ಚೆನ್ನಾಗಿ ಅರಿತವರಾಗಿರುವುದರಿಂದ ಹೇಮನಾಥ ಶೆಟ್ಟರ ಆಯ್ಕೆಯೇ ಈ ಬಾರಿ ಬೆಟರ್ ಎಂದು ಜಿಲ್ಲೆಯ ಕಾಂಗ್ರೆಸ್ ನಾಯಕರು ಮತ್ತು ಹೈಕಮಾಂಡ್ ಹೊಸ ಪ್ರಯೋಗಕ್ಕೆ ಮುಂದಾದರೂ ಅಚ್ಚರಿ ಇಲ್ಲ. ಹೇಮನಾಥ ಶೆಟ್ಟಿಯವರಿಗೆ ಈ ಬಾರಿಯೂ ಹೈ(ಕೈ)ಕಮಾಂಡ್ ಕೈ ಕೊಡುತ್ತಾ ಅಥವಾ ಜಿಲ್ಲಾಧ್ಯಕ್ಷ ಸ್ಥಾನ ನೀಡಿ ಪಕ್ಷದ ಮಹತ್ತರ ಜವಾಬ್ದಾರಿ ನೀಡುತ್ತಾ ಎಂಬುವುದು ಸದ್ಯದಲ್ಲೇ ಗೊತ್ತಾಗಲಿದೆ.

ನಾನು ಆಕಾಂಕ್ಷಿ ನಿಜ
ನಾನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ನಿಜ. ಪಕ್ಷ ಅವಕಾಶ ಕೊಟ್ಟರೆ ಗರಿಷ್ಠ ಶ್ರಮ ಹಾಕಿ ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸುವೆ ಎಂದು ಕಾವು ಹೇಮನಾಥ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ಎಂದರೆ ಅದರಲ್ಲಿರುವ ಎಲ್ಲರೂ ಒಂದೇ, ಒಂದೇ ಕುಟುಂಬದಂತೆ ಎಲ್ಲರೂ ನಮ್ಮವರು ಎಂದು ಅವರು ತಿಳಿಸಿದ್ದಾರೆ. ಜಿಲ್ಲಾಧ್ಯಕ್ಷ ಹುದ್ದೆ ಲಭಿಸಿದರೆ ಪುತ್ತೂರಿನಲ್ಲಿ ಹಿಂದಿನಿಂದಲೂ ಇದ್ದ ಬಣ ರಾಜಕೀಯ ಶಮನ ನಿಮ್ಮಿಂದ ಸಾಧ್ಯವೇ ಎಂಬ `ಸುದ್ದಿಯ’ ಪ್ರಶ್ನೆಗೆ ಉತ್ತರಿಸಿದ ಅವರು ಹಾಗೆಲ್ಲಾ ಇಲ್ಲ, ಅವೆಲ್ಲವೂ ಮುಗಿದ ಅಧ್ಯಾಯ. ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲರೂ ಕಾಂಗ್ರೆಸಿಗರೇ, ಎಲ್ಲರನ್ನೂ ಒಟ್ಟಾಗಿ ವಿಶ್ವಾಸಕ್ಕೆ ತೆಗೆದು ಮುನ್ನಡೆಯುವೆ ಎಂದು ಹೇಳಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.