ವಾಟ್ಸಪ್ ಗ್ರೂಪ್‌ಗೆ ಸೇರಿಸದಂತೆ ತಡೆಯಬಹುದು! ಫೇಕ್ ಸುದ್ದಿಯನ್ನು ಗುರುತಿಸಲೂಬಹುದು… ಬಂದಿದೆ ಹೊಸ ಟ್ರಿಕ್ಸ್!!

Puttur_Advt_NewsUnder_1
Puttur_Advt_NewsUnder_1

ಸಿಶೇ ಕಜೆಮಾರ್

  • ಫೇಕ್ ಸುದ್ದಿಯನ್ನು ಗುರುತಿಸಲೂಬಹುದು… ಬಂದಿದೆ ಹೊಸ ಟ್ರಿಕ್ಸ್  

ಪುತ್ತೂರು: ಸಾಮಾಜಿಕ ಜಾಲತಾಣಗಳು ಎಷ್ಟು ಒಳ್ಳೆಯದೋ ಅಷ್ಟೇ ಕೆಟ್ಟದ್ದು ಕೂಡ ಹೌದು. ಹಾಗಂತ ಅವುಗಳನ್ನು ದೂರ ತಳ್ಳಿ ಇರಲೂ ಸಾಧ್ಯವಿಲ್ಲದಂತಹ ಸ್ಥಿತಿಯಲ್ಲಿ ನಾವಿದ್ದೇವೆ. ಸ್ಮಾರ್ಟ್ ಫೋನ್ ಬಳಕೆ ಮಾಡುವ ಪ್ರತಿಯೊಬ್ಬನೂ ಒಂದಲ್ಲ ಒಂದು ಸಾಮಾಜಿಕ ಜಾಲತಾಣದಲ್ಲಿ ಬ್ಯುಸಿಯಾಗಿರುತ್ತಾನೆ. ಅದು ವಾಟ್ಸಫ್,ಫೇಸ್‌ಬುಕ್,ಟ್ವಿಟ್ಟರ್ ಅಥವಾ ಬೇರೆ ಇತರ ಯಾವುದಾದರೂ ಒಂದು ಮಾಧ್ಯಮದಲ್ಲಿ ತೊಡಗಿಸಿಕೊಂಡಿರುವುದು ಸಹಜ. ಆದರೆ ಕೆಲ ವರ್ಷಗಳಿಂದ ಅತ್ಯಂತ ಹೆಚ್ಚು ಜನರು ಬಳಕೆ ಮಾಡುವ ಸಾಮಾಜಿಕ ಜಾಲತಾಣದಲ್ಲಿ ವಾಟ್ಸಪ್ ಮೊದಲನೆ ಸ್ಥಾನದಲ್ಲಿದೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಪ್ರತಿಯೊಬ್ಬರಲ್ಲೂ ವಾಟ್ಸಪ್ ಇದ್ದೇ ಇದೆ. ಬಹಳ ಸುಲಭದಲ್ಲಿ ವಾಟ್ಸಪ್ ಅನ್ನು ನಿರ್ವಹಣೆ ಮಾಡಬಹುದಾಗಿದೆ. ಸ್ಮಾರ್ಟ್ ಫೋನ್‌ನಲ್ಲಿ ಒಮ್ಮೆಗೆ ವಾಟ್ಸಪ್ ಆಪ್ ಡೌನ್‌ಲೋಡ್ ಮಾಡಿಬಿಟ್ಟು ಆಕ್ಟೀವ್ ಮಾಡಿಬಿಟ್ಟರೆ ನಿರಂತರವಾಗಿ ಬಳಕೆ ಮಾಡಬಹುದಾಗಿದೆ. ಆದರೆ ಇದೇ ವಾಟ್ಸಪ್ ಕೆಲವೊಮ್ಮೆ ತಲೆ ನೋವನ್ನು ತಂದಿಡುವ ಪ್ರಸಂಗ ಎದುರಾಗುತ್ತದೆ. ತಿಂಗಳಿನಿಂದ ತಿಂಗಳಿಗೆ ವಾಟ್ಸಪ್‌ನಲ್ಲಿ ಹೊಸ ಹೊಸ ವರ್ಸನ್‌ಗಳನ್ನು ಕಂಪೆನಿ ಹೊರತರುತ್ತಿದ್ದು ಯುವ ಜನಾಂಗವನ್ನು ಅಲ್ಲೋಲ ಕಲ್ಲೋಲ ಮಾಡಿಬಿಡುತ್ತಿದೆ. ಎಲ್ಲರನ್ನು ಪೇಚಿಗೆ ಸಿಲುಕಿಸುವಂತಹ ವಿಷಯಗಳಲ್ಲಿ ಸುಳ್ಳು ಸುದ್ದಿಗಳು ಮತ್ತು ಗ್ರೂಪ್ ರಚನೆಯೂ ಸೇರಿದೆ.

ಗ್ರೂಪ್‌ಗೆ ಸೇರಿಸದಂತೆ ತಡೆಯಬಹುದು
ವಾಟ್ಸಪ್ ಇತ್ತೀಚೆಗೆ ಹೊಸದೊಂದು ಟ್ರಿಕ್ಸ್ ಅನ್ನು ಜಾರಿಗೆ ತಂದಿದೆ. ಇದನ್ನು ನೀವು ನಿಮ್ಮ ಮೊಬೈಲ್‌ನಲ್ಲಿ ಸೆಟ್ಟಿಂಗ್ ಮಾಡಿಕೊಂಡರೆ ನಿಮ್ಮನ್ನು ಗ್ರೂಪ್‌ಗೆ ಸೇರಿಸುವ ಯಾವುದೇ ಪ್ರಸಂಗವು ಬರುವುದಿಲ್ಲ. ಅದು ಹೇಗೆ ಅಂತೀರಾ? ನಿಮ್ಮ ಮೊಬೈಲ್‌ನಲ್ಲಿ ವಾಟ್ಸಪ್ ತೆರೆಯಿರಿ.ಬಲ ಬದಿಯಲ್ಲಿ ಮೇಲ್ಬಾಗದಲ್ಲಿರುವ ಮೂರು ಚುಕ್ಕಿಗಳ ಮೇಲೆ ಕ್ಲಿಕ್ ಮಾಡಿ. ಸೆಟ್ಟಿಂಗ್ಸ್ ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಅಕೌಂಟ್ ಆಯ್ಕೆ ಮಾಡಿಕೊಳ್ಳಿ. ನಂತರ ಪ್ರೈವೆಸಿ ಕ್ಲಿಕ್ ಮಾಡಿ.ಆರಂಭದಲ್ಲಿ ಇದರಲ್ಲಿ ನೀವು ಯಾವ ಸಮಯದಲ್ಲಿ ಕೊನೆಯ ಬಾರಿಗೆ ವಾಟ್ಸಪ್‌ನಲ್ಲಿ ಸಕ್ರೀಯವಾಗಿದ್ದೀರಿ (ಲಾಸ್ಟ್ ಸೀನ್) ಎಂದು ನಿಮ್ಮ ಸಂಪರ್ಕ ಸಂಖ್ಯೆ ಇರುವ ಎಲ್ಲರಿಗೂ ತಿಳಿಯುವಂತೆ ಕಾಣಿಸುವ ಆಯ್ಕೆ ಇರುತ್ತದೆ. ಅದನ್ನು ಕ್ಲಿಕ್ ಮಾಡಿ ನೋಬಡಿ ಆಯ್ಕೆ ಮಾಡಿಕೊಂಡರೆ ಯಾರಿಗೂ ಈ ಮಾಹಿತಿ ಕಾಣಿಸುವುದಿಲ್ಲ. ಇದರಲ್ಲೂ ಕೂಡ ಬೇರೆ ಬೇರೆ ಆಯ್ಕೆಗಳಿವೆ. ಇನ್ನು ಕೆಳಕ್ಕೆ ಬಂದರೆ ಗ್ರೂಪ್ಸ್ ಅಂತ ಬರೆದಿರುತ್ತದೆ. ಅದನ್ನು ಕ್ಲಿಕ್ ಮಾಡಿ. ಅದರಲ್ಲಿಯೂ ಮೂರು ಆಯ್ಕೆಗಳಿವೆ. ನಿಮ್ಮನ್ನು ಯಾವುದೇ ಗ್ರೂಪ್‌ಗೆ ಯಾರೆಲ್ಲಾ ಸೇರಿಸಿಕೊಳ್ಳಬಹುದು ಎಂದು ಅಲ್ಲೇ ಆಯ್ದುಕೊಳ್ಳಬಹುದು. ನೋಬಡಿ ಆಯ್ಕೆ ಮಾಡಿದರೆ ಯಾರು ಕೂಡ ನಿಮ್ಮನ್ನು ಮತ್ತೆ ಮತ್ತೆ ಗ್ರೂಪ್‌ಗೆ ಸೇರಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಒಂದು ವೇಳೆ ನಿಮ್ಮನ್ನು ಸೇರಿಸಬೇಕೆಂದರೆ ಆಡ್ಮಿನ್ ನಿಮಗೆ ಖಾಸಗಿ ಸಂದೇಶ ಕಳುಹಿಸಿ ನಿಮ್ಮ ಅನುಮತಿ ಪಡೆದೇ ಸೇರಿಸಿಕೊಳ್ಳಬೇಕಾಗುತ್ತದೆ. ನಿಮಗಿಷ್ಟವಿದ್ದರೆ ಆ ಗ್ರೂಪ್‌ಗೆ ಸೇರಿಕೊಳ್ಳಬಹುದು ಅದು ನಿಮ್ಮ ಆಯ್ಕೆಗೆ ಬಿಟ್ಟಿರುತ್ತದೆ.

ಸುಳ್ಳು ಸುದ್ದಿಗಳನ್ನು ತಡೆಯಿರಿ
ಇತ್ತೀಚಿನ ದಿನಗಳಲ್ಲಿ ವಾಟ್ಸಫ್‌ನಲ್ಲಿ ಸುಳ್ಳು ಸುದ್ದಿಗಳು ಅತೀ ಹೆಚ್ಚು ಹರಿದಾಡುತ್ತಿರುವುದನ್ನು ಕಾಣಬಹುದಾಗಿದೆ. ಇದರಿಂದ ಬಹಳಷ್ಟು ತೊಂದರೆಗಳು ಉಂಟಾಗುತ್ತದೆ. ಫೇಕ್ ಸುದ್ದಿಗಳು ಯಾವುವು ಎಂದು ಸುಲಭದಲ್ಲಿ ಪತ್ತೆ ಹಚ್ಚುವುದು ಕೂಡ ಕಷ್ಟ. ಕೆಲವೊಮ್ಮೆ ನಾವೇ ಇಕ್ಕಟ್ಟಿಗೆ ಸಿಲುಕಿ ಬಿಡುತ್ತೇವೆ. ಅದೆಷ್ಟೋ ಫೇಕ್ ಸುದ್ದಿಗಳನ್ನು ನಾವು ಫಾರ್ವರ್ಡ್ ಮಾಡಿಬಿಟ್ಟಿರುತ್ತೇವೆ. ಆದ್ದರಿಂದ ಫೇಕ್ ಸುದ್ದಿಗಳನ್ನು ಫಾರ್ವರ್ಡ್ ಮಾಡುವ ಮುಂಚೆ ಆಲೋಚನೆ ಮಾಡಬೇಕಾಗುತ್ತದೆ.ಇದಕ್ಕಾಗಿಯೇ ವಾಟ್ಸಪ್ ಹೊಸತೊಂದು ಟ್ರಿಕ್ಸ್ ತಂದಿದೆ. ಸಾಮಾನ್ಯವಾಗಿ ನಮಗೆ ಬರುವ ಮೇಸೇಜ್‌ಗಳ ಮೇಲ್ಬಾಗದಲ್ಲಿ ಫಾರ್ವರ್ಡೆಡ್‌ನ ಬಳಿ ಒಂದು ಬಾಣದ ಗುರುತು ಕಾಣಿಸುತ್ತದೆ. ಆದರೆ ಕೆಲವೊಂದು ಮೆಸೇಜ್‌ಗಳ ಮೇಲ್ಬಾಗದಲ್ಲಿ ಒಂದು ಬಾಣದ ಗುರುತಿನ ಬದಲು ಎರಡು ಬಾಣದ ಗುರುತು ಕಾಣಿಸುತ್ತದೆ. ಈ ರೀತಿ ಎರಡು ಬಾಣದ ಗುರುತು ಇದ್ದರೆ ಈ ಮೆಸೇಜ್ ಫೇಕ್ ಆಗಿರಬಹುದೇ ಎಂದು ನಮಗೆ ಆಲೋಚಿಸಲು ಅನುವು ಮಾಡಿಕೊಡುತ್ತದೆ. ಈ ರೀತಿಯಾಗಿ ಎರಡು ಬಾಣದ ಗುರುತು ಕಂಡರೆ ಆ ಸುದ್ದಿಯನ್ನು ಸರಿಯಾಗಿ ಯೋಚಿಸಿ ಫಾರ್ವರ್ಡ್ ಮಾಡಿ. ಇದು ವಾಟ್ಸಪ್‌ನಲ್ಲಿ ಇತ್ತೀಚೆಗೆ ಅಳವಡಿಸಿದ ಹೊಸ ವೈಶಿಷ್ಟ್ಯ. ಬನ್ನಿ ಸುಳ್ಳು ಸುದ್ದಿಗಳು ಹರಡುವುದನ್ನು ತಡೆಯೋಣ. ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯದಕ್ಕೆ ಬಳಸೋಣ.

ಸ್ನೇಹಿತರ ಗ್ರೂಪ್‌ಗಳು
ಎಲ್ಲರಲ್ಲೂ ವಾಟ್ಸಫ್ ಇರುವುದರಿಂದ ಗ್ರೂಪ್ ರಚಿಸುವುದು ಕೂಡ ಜಾಸ್ತಿಯಾಗುತ್ತಿದೆ. ನಿಮ್ಮನ್ನು ಕೂಡ ನಿಮ್ಮ ಸ್ನೇಹಿತರು ಒಂದಲ್ಲ ಒಂದು ಗ್ರೂಪ್‌ಗೆ ಸೇರಿಸಿಯೇ ಬಿಟ್ಟಿರುತ್ತಾರೆ. ನಮ್ಮ ಅನುಮತಿ ಪಡೆದು ಸೇರಿಸುವುದು ಬೇರೆ ವಿಚಾರ ಆದರೆ ನಮಗೆ ಗೊತ್ತಿಲ್ಲದೆಯೇ ಯಾವುದೋ ಗ್ರೂಪ್‌ನಲ್ಲಿ ನಮ್ಮನ್ನು ಸೇರಿಸಲಾಗುತ್ತಿರುವುದು ನಮಗೆ ಬಹಳಷ್ಟು ಮುಜುಗರ ತರುತ್ತದೆ. ಕೆಲವೊಮ್ಮೆ ಗ್ರೂಪ್‌ನಿಂದ ನಿರ್ಗಮಿಸುವುದಕ್ಕೆ (ಲೆಫ್ಟ್) ದಾರ್ಕ್ಷಿಣ್ಯ, ಆತ್ಮೀಯತೆ ಅಡ್ಡಿ ಬರುತ್ತದೆ. ಉಪಯುಕ್ತ ಗ್ರೂಪ್ ಆದರೆ ಪರ್‍ವಾಗಿಲ್ಲ ಆದರೆ ಸುಖಾಸುಮ್ಮನೆ ಗುಡ್ ಮಾರ್ನಿಂಗ್, ಚಹಾ ಆಯಿತಾ, ಕಾಫಿ ಆಯಿತಾ ಇತ್ಯಾದಿ ಮೆಸೇಜ್‌ಗಳೇ ಹರಿದಾಡುವ ಗ್ರೂಪ್‌ನಿಂದ ಒಮ್ಮೆ ಹೊರಕ್ಕೆ ಬಂದರೆ ಸಾಕು ಎನಿಸುತ್ತದೆ. ಕೆಲವು ಗ್ರೂಪ್‌ಗಳಲ್ಲಿ ಅನಗತ್ಯ ಚರ್ಚೆಗಳು, ಕೆಟ್ಟ ಸಂದೇಶಗಳು ನಮಗೆ ಕಿರಿಕಿರಿ ಉಂಟು ಮಾಡುತ್ತವೆ. ಹಿಂದೆ ಒಂದು ಗ್ರೂಪ್‌ಗೆ ಒಬ್ಬನೇ ಆಡ್ಮಿನ್ ಇದ್ದ ಆದರೆ ಈಗ ಎಷ್ಟು ಮಂದಿಯನ್ನು ಬೇಕಾದರೂ ಆಡ್ಮಿನ್ ಮಾಡಬಹುದಾಗಿದೆ. ಒಂದು ವೇಳೆ ನೀವು ಗ್ರೂಪ್‌ನಿಂದ ಲೆಫ್ಟ್ ಆದರೆ ಮತ್ತೊಬ್ಬ ಆಡ್ಮಿನ್ ನಿಮ್ಮನ್ನು ಮತ್ತೆ ಗ್ರೂಪ್‌ಗೆ ಸೇರಿಸಿಕೊಳ್ಳುವ ಚಾನ್ಸ್ ಇದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.