ಎಸ್ಪಿ ಕಚೇರಿಗೆ ಪುತ್ತೂರು ಸೂಕ್ತ: ಆಡಳಿತಾತ್ಮಕ ತೀರ್ಮಾನ-ತ್ರೈಮಾಸಿಕ ಕೆಡಿಪಿ ಸಭೆ

Puttur_Advt_NewsUnder_1
Puttur_Advt_NewsUnder_1
 • ನಗರಸಭಾ ವ್ಯಾಪ್ತಿಯಲ್ಲಿ ಜಾಗ ಗುರುತಿಸಲು ಅಧಿಕಾರಿಗಳಿಗೆ ಶಾಸಕರ ಸೂಚನೆ

 • ನೀವು ಪುತ್ತೂರಿಗೆ ಮಾತ್ರ ಸೀಮಿತ ಅಧಿಕಾರಿಯಾ ?
 • ಕಾನೂನು ವ್ಯವಸ್ಥೆಯಲ್ಲಿ ವಾಹನ ಅಪರಾಧ ಕಡಿಮೆ ಆಗಿದೆ
 • ಅಡಿಕೆ ಕೊಳೆರೋಗ ಸಮೀಕ್ಷೆ ತಕ್ಷಣ ಆಗಬೇಕು
 • ಗ್ರಾಮ ಕರಣಿಕರು ನಾಟ್‌ರೀಚೆಬಲ್
 • ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆಗೆ ರೂ.12 ಕೋಟಿ
 • ಉಪ್ಪಿನಂಗಡಿ ಐ.ಬಿ ಲೋಕೋಪಯೋಗಿ ಇಲಾಖೆಗೆ
 • ರಸ್ತೆ ಬದಿಯ ಅಪಾಯಕಾರಿ ಕೆರೆ,ಗುಂಡಿಗಳಿಗೆ ಮುಕ್ತಿ
 • ಮಾಣಿ-ಸಂಪಾಜೆ ರೂ.26 ಕೋಟಿಯಲ್ಲಿ ಚತುಷ್ಪಥ ರಸ್ತೆ
 • ಅಡ್ಡಹೊಳೆ-ನೆಲ್ಯಾಡಿ ತುರ್ತು ಪ್ಯಾಚ್‌ವರ್ಕ್ ಮಾಡಿಸಿ
 • ಕೆ.ಆರ್.ಡಿ.ಎಲ್.ಇಲಾಖೆ ಅಗತ್ಯವಿಲ್ಲ
 • ಆಯುಷ್, ಆರೋಗ್ಯ ಕರ್ನಾಟಕ-ಕ್ಲಬ್ ಆಗಿ ತೊಂದರೆ
 • ಬಾಲಸ್ನೇಹಿ ಅಂಗನವಾಡಿಗೆ ಸಿದ್ದತೆ ಮಾಡಿಕೊಳ್ಳಿ
 • ಹಾಸ್ಟೆಲ್‌ಗೆ ಮಹಿಳಾ ವಾರ್ಡನ್
 • ಕೊಳವೆ ಬಾವಿ ಸೌಲಭ್ಯ ಹೆಚ್ಚಿಸಿ
 • ತಳ್ಳಿ ಅರ್ಜಿ ಮೇಲೆ ತನಿಖೆಗೆ ಹೋಗಬೇಡಿ
 • ಕೋವಿ ಲೈಸನ್ಸ್‌ಗೆ ಸತಾಯಿಸಬೇಡಿ
 • ಸಾರ್ವಜನಿಕ ಉದ್ದೇಶಕ್ಕಾಗಿ ಸರಕಾರಿ ಜಾಗ ಗುರುತು ಮಾಡಿ
 • ಮಳೆಗಾಲದಲ್ಲಿ ಪುತ್ತೂರು ಮೆಸ್ಕಾಂಗೆ ರೂ.೧ ಕೋಟಿ ನಷ್ಟ
 • ಬಾರ್‌ಗಳಲ್ಲಿ ಎಮ್.ಆರ್.ಪಿ ಬೋರ್ಡ್
 • ಕೆ.ಎಸ್.ಆರ್.ಟಿ.ಸಿಯಲ್ಲೇ ದೊಡ್ಡ ಸಮಸ್ಯೆ
 • ಸಂತ್ರಸ್ತರಿಗೆ ತೆಂಕಿಲದಲ್ಲೇ ವಾಸ್ತವ್ಯಕ್ಕೆ ಅವಕಾಶ

ತೆಂಕಿಲ ಗುಡ್ಡೆ ಬಿರುಕು ಸಂಬಂಧಿಸಿ ಸಂತ್ರಸ್ತರು ಪ್ರಸ್ತುತ ಸಮುದಾಯ ಭವನದಲ್ಲಿ ಮತ್ತು ಸಂಬಂಧಿಕರ ಮನೆಯಲ್ಲಿ ತಂಗಿದ್ದಾರೆ. ಪ್ರಸ್ತುತ ಮಳೆ ಕಡಿಮೆ ಆಗಿದೆ.ಇನ್ನು ಅನಾಹುತ ಸಂಭವಿಸಲು ಸಾಧ್ಯವಿಲ್ಲ.ಜೋರಾಗಿ ಮಳೆ ಬರುವ ಲಕ್ಷಣ ಇದ್ದರೆ ಅವರನ್ನು ಮತ್ತೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಬಹದು.ಈ ನಿಟ್ಟಿನಲ್ಲಿ ಈಗಿರುವ ಸಂತ್ರಸ್ತರಿಗೆ ಪುನಃ ತಾವು ಹಿಂದಿದ್ದ ಸ್ಥಳದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡುವಂತೆ ಶಾಸಕರು ಪೌರಾಯುಕ್ತರಿಗೆ ತಿಳಿಸಿದರು.ಉತ್ತರಿಸಿದ ಪೌರಾಯುಕ್ತರು ಜಿಲ್ಲಾಧಿಕಾರಿಯವರು ಸಂತ್ರಸ್ತರಿಗೆ ಬೇರೆ ನಿವೇಶನ ನೋಡಲು ಹೇಳಿದ್ದಾರೆ.ಅಲ್ಲಿ ಜಿಪಿಎಸ್ ಕೂಡ ಮಾಡಲಾಗಿದೆ ಎಂದರು. ಆಕ್ಷೇಪಿಸಿದ ಶಾಸಕರು ತೆಂಕಿಲದಲ್ಲಿ ಈಗ ಯಾವುದೇ ಅಪಾಯವಿಲ್ಲ.ಅಲ್ಲಿನ ಜನರಿಗೆ ಮತ್ತೆ ಅಲ್ಲಿಗೆ ಹೋಗುವ ಮನಸ್ಸಿದೆ ಎಂದರು.ಪೌರಾಯುಕ್ತರು ಮಾತನಾಡಿ ಈಗಾಗಲೇ ನಮ್ಮ ಮಾತನ್ನು ಕೇಳದೆ 11 ಕುಟುಂಬಗಳ ಪೈಕಿ 9 ಕುಟುಂಬ ಈಗಾಗಲೇ ತೆಂಕಿಲದಲ್ಲಿ ಹಿಂದಿದ್ದ ಸ್ಥಳಕ್ಕೆ ಹೋಗಿದ್ದಾರೆ.ಎರಡು ಕುಟುಂಬದಲ್ಲಿ ವಯಸ್ಕರು ಇರುವುದರಿಂದ ಅವರು ಸಮುದಾಯ ಭವನದಲ್ಲಿ ಇದ್ದಾರೆ ಎಂದರು.ಅವರು ಅಲ್ಲಿಗೆ ಹೋಗುವುದಾದರೆ ಅವರಿಗೂ ಅವಕಾಶ ಮಾಡಿಕೊಡಿ ಎಂದು ಶಾಸಕರು ಸೂಚಿಸಿದರು. ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಸುಮಾರು ೫ ಸಾವಿರ ಅರ್ಜಿ ನಿವೇಶನಕ್ಕೆ ಬಂದಿದೆ.ನಿವೇಶನ ಕೊಡದೆ ಸುಮಾರು 9 ವರ್ಷ ಕಳೆದಿದೆ.ಅರ್ಹರಿಗೆ ನಿವೇಶನ ಕೊಡಲೇ ಬೇಕು. ಈ ನಿಟ್ಟಿನಲ್ಲಿ ತಕ್ಷಣ ಜಾಗ ಗುರುತಿಸಿಕೊಳ್ಳಿ ಎಂದು ಶಾಸಕರು ಪೌರಾಯುಕ್ತರಿಗೆ ಸೂಚಿಸಿದರು.

ಮುಂದಿನ ಕೆಡಿಪಿ ಸಭೆಯಲ್ಲಿ 10.30ಕ್ಕೆ  ಬಾಗಿಲು ಬಂದ್

ತ್ರೈಮಾಸಿಕ ಕೆಡಿಪಿ ಸಭೆಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಿರಬೇಕು. ಅಧಿಕಾರಿಗಳು ಸಭೆಯಲ್ಲಿ ಪೂರ್ತಿ ಸಮಯ ಇರಬೇಕು.ಅದೇ ರೀತಿ ತಡವಾಗಿ ಬರುವ ಅಧಿಕಾರಿಗಳು ಮುಂದೆ ಸಭೆಯಲ್ಲಿ ಇರಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬೇಕಾಗಿದೆ.ನಮ್ಮ ಪೆನ್ನಿಗೂ ಕೆಲಸ ಕೊಡಬೇಕಾಗುತ್ತದೆ. ಮುಂದಿನ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ 10.30ಕ್ಕೆ ಬಾಗಿಲು ಬಂದ್ ಮಾಡಲಾಗುತ್ತದೆ.ಮತ್ತೆ ಬರುವ ಅಧಿಕಾರಿಗಳಿಗೆ ಸಭೆಗೆ ಅವಕಾಶವಿಲ್ಲ.ಇದು ಕೊನೆಯ ಬಾರಿಯ ಎಚ್ಚರಿಕೆ ಎಂದು, ತಡವಾಗಿ ಬರುವ ಅಧಿಕಾರಿಗಳಿಗೆ ಶಾಸಕ ಸಂಜೀವ ಮಠಂದೂರು ಮುನ್ನೆಚ್ಚರಿಕೆ ನೀಡಿದರು. ತಡವಾಗಿ ಬರುವ ಅಧಿಕಾರಿಗಳ ಕುರಿತು ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆಂಬ ಮಾತು ಬರಬಾರದು.ಅನಿವಾರ್‍ಯ ಕಾರ್ಯ ಇದ್ದರೆ ಮುಂಚೆ ತಿಳಿಸಿ.ಒಟ್ಟಿನಲ್ಲಿ ಶಿಸ್ತು ಬೇಕು.ಕಳೆದ ಕೆಡಿಪಿ ಸಭೆಯಲ್ಲಿ ಒಂದಿಬ್ಬರು ಅಧಿಕಾರಿಗಳ ಕುರಿತು ಮೇಲಧಿಕಾರಿಗಳಿಗೆ ತಿಳಿಸಲಾಗಿದೆ.ಆದರೆ ಮತ್ತೂ ತಡವಾದರೆ ಅಧಿಕಾರಿಗಳು ಇಲ್ಲಿ ಉಳಿಯಬೇಕೇ ಮತ್ತೊಂದು ಕಡೆ ಹೋಗಬೇಕೋ ಎಂಬ ತೀರ್ಮಾನ ಮಾಡುತ್ತೇನೆ ಎಂದು ಶಾಸಕರು ಗರಂ ಆಗಿ ಎಚ್ಚರಿಕೆ ನೀಡಿದರು.

ಪುತ್ತೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಪುತ್ತೂರಿನಲ್ಲೇ ಆಗಬೇಕಾಗಿರುವುದು ಸೂಕ್ತ ಎಂದು ಆಡಳಿತಾತ್ಮಕ ತೀರ್ಮಾನಕೈಗೊಂಡಿರುವ ವಿಚಾರ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪ್ರಸ್ತಾಪವಾಗಿ ಈ ಕುರಿತು ನಗರಸಭಾ ವ್ಯಾಪ್ತಿಯಲ್ಲಿ ಜಾಗ ಗುರುತಿಸಲು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ತ್ರೈಮಾಸಿಕ ಕೆಡಿಪಿ ಸಭೆಯು ಸೆ.21ರಂದು ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ತಾ.ಪಂ.ಸಭಾಂಗಣದಲ್ಲಿ ನಡೆಯಿತು.

ಮಂಗಳೂರಿನಲ್ಲಿ ಪೊಲೀಸ್ ಕಮಿಷನರೇಟ್ ಇರುವುದರಿಂದ ಅಲ್ಲಿ ಎಸ್ಪಿಯವರಿಗೆ ಕೆಲಸ ಇಲ್ಲ. ಗ್ರಾಮಾಂತರ ಮತ್ತು 5 ತಾಲೂಕಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಸ್ಪಿ ಕಚೇರಿಗೆ ಪುತ್ತೂರು ಸೂಕ್ತವೆಂದು ಆಡಳಿತಾತ್ಮಕವಾಗಿ ತೀರ್ಮಾನ ಕೈಗೊಳ್ಳಲಾಗಿದೆ.ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದಲೂ ಎಸ್ಪಿ ಕಚೇರಿ ಪುತ್ತೂರಿನಲ್ಲೇ ಆಗಬೇಕು ಎಂದು ಹೇಳಿದ ಶಾಸಕರು, ಈ ಕುರಿತು ನಗರಸಭೆ ಒಳಗಡೆ ಜಾಗ ಇದ್ದರೆ ಗುರುತಿಸಿ ಎಂದು ತಹಶೀಲ್ದಾರ್ ಮತ್ತು ಪೌರಾಯುಕ್ತರಿಗೆ ತಿಳಿಸಿದರು.ಈಗಾಗಲೇ ಬಲ್ನಾಡು, ಕೆಮ್ಮಿಂಜೆಯಲ್ಲಿ ಜಾಗ ಗುರುತಿಸಲಾಗಿದೆ ಎಂಬ ವಿಚಾರವೂ ಸಭೆಯಲ್ಲಿ ಪ್ರಸ್ತಾಪವಾಯಿತು.

ನೀವು ಪುತ್ತೂರಿಗೆ ಮಾತ್ರ ಸೀಮಿತ ಅಧಿಕಾರಿಯಾ ?: ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಪುತ್ತೂರು ತಾಲೂಕಿನಲ್ಲಿ ಎಷ್ಟು ಮಂದಿಗೆ ಆರೋಗ್ಯ ಕಾರ್ಡ್ ನೀಡಲಾಗಿದೆ ಎಂದು ಶಾಸಕರು ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್‌ಕುಮಾರ್ ರೈ ಅವರನ್ನು ಪ್ರಶ್ನಿಸಿದರು. ಉತ್ತರಿಸಿದ ಆರೋಗ್ಯಾಧಿಕಾರಿ ಪುತ್ತೂರಿನಲ್ಲಿ 6 ಸಾವಿರ ಆಯುಷ್ಮಾನ್ ಕಾರ್ಡ್ ಆಗಿದೆ ಎಂದು ಮಾಹಿತಿ ನೀಡಿದರಲ್ಲದೆ ಇದರಲ್ಲಿ ಉಪ್ಪಿನಂಗಡಿಯ ಮಾಹಿತಿ ಇಲ್ಲ ಎಂದರು. ಆಕ್ರೋಶಗೊಂಡ ಶಾಸಕರು ನೀವು ಪುತ್ತೂರಿಗೆ ಮಾತ್ರ ಸೀಮಿತ ಅಧಿಕಾರಿಯಾ ಅಥವಾ ತಾಲೂಕು ಆರೋಗ್ಯಾಧಿಕಾರಿಯಾ ಎಂದು ಪ್ರಶ್ನಿಸಿ ಸರಿಯಾದ ಮಾಹಿತಿ ನೀಡಬೇಕು ಎಂದು ಎಚ್ಚರಿಸಿದರು.

ಕಾನೂನು ವ್ಯವಸ್ಥೆಯಲ್ಲಿ ವಾಹನ ಅಪರಾಧ ಕಡಿಮೆ ಆಗಿದೆ: ಡಿವೈಎಸ್ಪಿ ದಿನಕರ ಶೆಟ್ಟಿ ಅವರು ಮಾತನಾಡಿ ಅಪಘಾತ ತಡೆಯುವ ಹಾಗೂ ವಾಹನ ಚಾಲಕರಲ್ಲಿ ದಾಖಲೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರ ಸೇರಿದಂತೆ ಅಲ್ಲಲ್ಲಿ ಸಂಚಾರಿ ಪೊಲೀಸರು ವಾಹನಗಳನ್ನು ನಿಲ್ಲಿಸಿ ತನಿಖೆ ನಡೆಸುತ್ತಿದ್ದಾರೆ.ಇದರಿಂದ ಜನತೆಗೆ ಸ್ವಲ್ಪಮಟ್ಟಿನ ತೊಂದರೆಯಾಗಿರಬಹುದು.ಆದರೆ ಇದು ಸ್ವಲ್ಪ ಸಮಯಕ್ಕೆ ಮಾತ್ರ ಸೀಮಿತ ಕಾರ್ಯಾಚರಣೆಯಾಗಿದೆ. 1892 ನೋ ಪಾರ್ಕಿಂಗ್ ಹಾಗೂ 1488 ಒನ್‌ವೇ ಕೇಸು ದಾಖಲಾಗಿದೆ.ಇದರ ಪರಿಣಾಮ ಅಪರಾಧ ಕಡಿಮೆಯಾಗುತ್ತಿದೆ.ಈಗ ಪ್ರಕರಣಗಳೇ ಸಿಗದಂತಾಗಿದೆ ಎಂದರು.ಶಾಸಕರು ಮಾತನಾಡಿ, ಮಂಗಳೂರು ಮಹಾನಗರಪಾಲಿಕೆ ಬಿಟ್ಟರೆ ಪುತ್ತೂರಿನಲ್ಲಿ ಅತ್ಯಂತ ಹೆಚ್ಚು ಪೊಲೀಸ್ ಠಾಣೆಗಳಿವೆ.ಪುತ್ತೂರು ಮತ್ತು ಉಪ್ಪಿನಂಗಡಿ ಭಾಗದಲ್ಲಿ ಸಂಚಾರಕ್ಕೆ ತಡೆಯಾಗದಂತೆ ಶಾಲಾ ಆರಂಭ ಮತ್ತು ಶಾಲೆ ಬಿಡುವ ಒತ್ತಡದ ಸಮಯದಲ್ಲಿ ಇನ್ಸ್‌ಪೆಕ್ಟರ್ ಹಾಗೂ ಎಸೈಗಳು ಗಸ್ತು ತಿರುಗಬೇಕು ಎಂದು ಸೂಚಿಸಿದರು.

ಅಡಿಕೆ ಕೊಳೆರೋಗ ಸಮೀಕ್ಷೆ ತಕ್ಷಣ ಆಗಬೇಕು: ಅವಿಭಜಿತ ಪುತ್ತೂರು ತಾಲೂಕಿನಲ್ಲಿರುವ ೬೮ ಕಂದಾಯ ಗ್ರಾಮಗಳಲ್ಲಿ ಅಡಿಕೆ ಕೊಳೆರೋಗ ಬಾಧಿಸಿರುವ ಕುರಿತು ಕಂದಾಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಜಂಟಿ ಆಶ್ರಯದಲ್ಲಿ ತಕ್ಷಣ ಸರ್ವೆ ಕಾರ್ಯ ನಡೆಸಬೇಕು ಎಂದು ಶಾಸಕರು ಸೂಚನೆ ನೀಡಿದರು.ಕಳೆದ ಬಾರಿ ಕೊಳೆರೋಗದಿಂದ ಅಡಿಕೆ ಬೆಳೆಯುವ ರೈತರಿಗೆ ಸಾಕಷ್ಟು ನಷ್ಟ ಉಂಟಾಗಿದೆ.೮ ಸಾವಿರಕ್ಕೂ ಅಧಿಕ ರೈತರು ಅರ್ಜಿ ಸಲ್ಲಿಸಿದ್ದಾರೆ, ಆದರೆ ಅವರಲ್ಲಿ ಸುಮಾರು ೧೫೦೦ ಮಂದಿ ರೈತರಿಗೆ ಇನ್ನೂ ಕೊಳೆರೋಗ ಪರಿಹಾರ ಸಿಕ್ಕಿಲ್ಲ. ಯಾವುದೇ ನೆಪ ಹೇಳದೆ ಈ ಎಲ್ಲಾ ರೈತರಿಗೂ ಪರಿಹಾರ ಹಣ ಸಿಗಬೇಕು. ರೈತ ಎಂಬುದು ಒಂದೇ ಜಾತಿ. ಯಾವುದೇ ರೈತನಿಗೂ ಅನ್ಯಾಯವಾಗಬಾರದು ಎಂದವರು ಇಲಾಖೆಗಳಿಗೆ ಎಚ್ಚರಿಕೆ ನೀಡಿದರು.

ಗ್ರಾಮಕರಣಿಕರು ನಾಟ್‌ರೀಚೆಬಲ್: ಕಂದಾಯ ಇಲಾಖೆಗೆ ಸಂಬಂಧಿಸಿ ತಹಶೀಲ್ದಾರ್ ಸಹ ಸಿಗುತ್ತಾರೆ.ಆದರೆ ಟವರ್‌ನ ಅಡಿಯಲ್ಲಿದ್ದರೂ ಗ್ರಾಮಮಟ್ಟದ ಅಧಿಕಾರಿಗಳು, ಗ್ರಾಮಕರಣಿಕರು ಯಾವಾಗಲೂ `ನಾಟ್ ರೀಚೆಬಲ್’ ಆಗಿರುತ್ತಾರೆ. ಹೀಗೆ ಮುಂದುವರಿದರೆ ಅವರನ್ನು ಶಾಶ್ವತವಾಗಿ ನಾಟ್‌ರೀಚೆಬಲ್ ಮಾಡಬೇಕಾಗುತ್ತದೆ ಎಂದು ಶಾಸಕರು ಹೇಳಿದರು.ಪುತ್ತೂರು ಮತ್ತು ಕಡಬ ತಹಶೀಲ್ದಾರ್ ಅವರು ನಿಮ್ಮ ಇಲಾಖೆ ಅಧಿಕಾರಿಗಳ ಮೇಲೆ ಗಮನ ಹರಿಸಬೇಕು.ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಗ್ರಾಮಕರಣಿಕರು, ಕಂದಾಯ ನಿರೀಕ್ಷಕರ ಮೇಲೆ ಪೊಲೀಸ್ ಇಲಾಖೆಯ ಸುಮೊಟೊ ತರಹ ನೀವೇ ದೂರು ದಾಖಲಿಸಿ ಶಿಕ್ಷೆ ಕೊಡುವ ಕೆಲಸವಾಗಬೇಕು ಎಂದು ತಹಶೀಲ್ದಾರ್‌ಗಳಿಗೆ ಸೂಚಿಸಿದರು.ಜಿ.ಪಂ ಸದಸ್ಯೆ ಶಯನಾ ಜಯಾನಂದ್ ಅವರು, ಅಡಿಕೆ ಕೊಳೆರೋಗಕ್ಕೆ ಪರಿಹಾರಕ್ಕಾಗಿ ಅರ್ಜಿ ಹಾಕಿದವರಿಗೆ ಕೋಡಿಂಬಾಡಿಯಲ್ಲಿ ಯಾವ ಮಾನದಂಡದಲ್ಲಿ ಪರಿಹಾರ ನೀಡಿದ್ದೀರಿ.ಸಣ್ಣ ಮಟ್ಟದಲ್ಲಿ ಜಾಗ ಇದ್ದರೂ ಅವರಿಗೆ ಅಧಿಕ ಪರಿಹಾರ, ದೊಡ್ಡ ಜಾಗದವರಿಗೆ ಸಣ್ಣ ಮಟ್ಟದ ಪರಿಹಾರ ಬಂದಿದೆ.ಸಮೀಕ್ಷೆ ಇಲ್ಲಿ ಅವೈಜ್ಞಾನಿಕವಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆತ್ತಿಕೊಂಡರು.ಧ್ವನಿಗೂಡಿಸಿದ ಜಿ.ಪಂ ಸದಸ್ಯ ಪಿ.ಪಿ. ವರ್ಗೀಸ್ ಅವರು ಇದು ಒಂದು ಗ್ರಾ.ಪಂ ಮಾತ್ರವಲ್ಲ. ಪ್ರತಿ ಗ್ರಾ.ಪಂ.ನಲ್ಲೂ ಸಮಸ್ಯೆ ಇದೆ. ಉಗ್ರಾಣಿಗಳು ಹೇಳಿದಂತೆ ಅಲ್ಲಿನ ಅಧಿಕಾರಿಗಳು ಕಣ್ಣು ಮುಚ್ಚಿ ತಂಬ್ ಒತ್ತಿದ್ದಾರೆ ಎಂದರು.ಈ ಕುರಿತು ಪರಿಶೀಲನೆ ನಡೆಸುವಂತೆ ತೋಟಗಾರಿಕೆ ಇಲಾಖೆ ಮತ್ತು ತಹಶೀಲ್ದಾರ್‌ಗೆ ಶಾಸಕರು ಸೂಚನೆ ನೀಡಿದರು.

ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆಗೆ 12 ಕೋಟಿ: ಪುತ್ತೂರು-ಉಪ್ಪಿನಂಗಡಿ ಚತುಷ್ಪಥ ರಸ್ತೆಗೆ ಈಗಾಗಲೇ 12 ಕೋಟಿ ಅನುದಾನ ಮಂಜೂರುಗೊಂಡಿದ್ದು, ಕೆಮ್ಮಾಯಿಯಿಂದ ನೆಕ್ಕಿಲಾಡಿ ತನಕ ಸುಮಾರು 7 ಕಿ.ಮೀ ಚತುಷ್ಪಥವಾಗಲಿದೆ.ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಶಾಸಕರ ಪ್ರಶ್ನೆಗೆ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಾಹಿತಿ ನೀಡಿದರು.ಅದಕ್ಕೂ ಮೊದಲು ಮೇಲ್ಪಟ್ಟದ ತುರ್ತು ಡಾಮರೀಕರಣ ದುರಸ್ತಿ ಆಗಬೇಕು.ಚತುಷ್ಪಥ ಕಾಮಗಾರಿಗೆ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿ ಈಗಲೇ ಮರ ತೆರವು ಮಾಡಲು ಅನುಮತಿ ಪತ್ರಕ್ಕೆ ಸಿದ್ಧತೆ ಮಾಡಿಕೊಳ್ಳಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.ಆನೆಮಜಲು ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಆರ್ಥಿಕ ಬಿಡ್ಡು ಸರಕಾರದ ಅನುಮೋದನೆ ಪೆಂಡಿಂಗ್ ಇದೆ ಎಂದು ಲೋಕೊಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದರು.

ಉಪ್ಪಿನಂಗಡಿ ಐ.ಬಿ. ಲೋಕೋಪಯೋಗಿ ಇಲಾಖೆಗೆ: 1 ವರ್ಷ 2 ತಿಂಗಳಾದರೂ ತಾ.ಪಂ ಸುಪರ್ದಿಗೆಯಲ್ಲಿರುವ ಉಪ್ಪಿನಂಗಡಿ ಐ.ಬಿ.ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಗೊಂಡಿಲ್ಲ ಯಾಕೆ ಎಂದು ಶಾಸಕರು ಪ್ರಶ್ನಸಿದರು.ಉತ್ತರಿಸಿದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯವಾಹಕ ಇಂಜಿನಿಯರ್ ನಮ್ಮ ಇಲಾಖೆ ತಯಾರಿದೆ.ನಿರ್ಣಯ ಪತ್ರವನ್ನು ತಾ.ಪಂ ಕಳಿಸಿಕೊಟ್ಟಿಲ್ಲ ಎಂದರು.ಶಾಸಕರು ಮಾತನಾಡಿ ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ನಿರ್ಣಯ ಪತ್ರ ಹೋಗಲು ತಡವೇಕೆ ಎಂದು ಪ್ರಶ್ನಿಸಿದರು.ಈ ಕುರಿತು ತಾ.ಪಂ.ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಇಂಜಿನಿಯರ್ ಶಾಸಕರೊಂದಿಗೆ ಮೌಖಿಕವಾಗಿ ಮಾತನಾಡಿದರು.

ರಸ್ತೆ ಬದಿಯ ಅಪಾಯಕಾರಿ ಕೆರೆ, ಗುಂಡಿಗಳಿಗೆ ಮುಕ್ತಿ: ರಸ್ತೆ ಬದಿಯ ಅಪಾಯಕಾರಿ ಕೆರೆ, ಗುಂಡಿಗಳಿದ್ದಲ್ಲಿ ಗುರುತಿಸಿ, ತಕ್ಷಣ ಅದಕ್ಕೆ ಗಾರ್ಡ್ ಹಾಕುವ ಅಥವಾ ಮುಚ್ಚುವ ಕೆಲಸ ಆಗಬೇಕು.ಇತ್ತೀಚೆಗೆ ಪುತ್ತೂರಿನಲ್ಲಿ ಕೆರೆಗೆ ಬಿದ್ದು ನಾಲ್ಕು ಜೀವ ಹೋಗಿದೆ.ಈ ನಿಟ್ಟಿನಲ್ಲಿ ಮುಂದೆ ಇಂತಹ ಅಪಾಯ ಸಂಭವಿಸಬಾರದು ಎಂಬ ನೆಲೆಯಲ್ಲಿ ಎಲ್ಲಾ ಕಡೆ ಅಪಾಯಕಾರಿ ಗುಂಡಿ ಕೆರೆಗಳನ್ನು ಗುರುತಿಸಿ ತಕ್ಷಣ ಕ್ರಮ ಕೈಗೊಳ್ಳಿ.ಕೆಲಸಕ್ಕೆ ಅನುದಾನ ಇಲ್ಲ ಎಂಬ ನೆಪ ಹೇಳಬಾರದು.ನಗರಸಭೆ,ಗ್ರಾಮಾಂತರ ಅಥವಾ ಹೆದ್ದಾರಿಯಾಗಲಿ ನಿರ್ಲಕ್ಷ್ಯ ವಹಿಸಬಾರದು ಎಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಮಾಣಿ-ಸಂಪಾಜೆ ರೂ.೨೬ ಕೋಟಿಯಲ್ಲಿ ಚತುಷ್ಪಥ ರಸ್ತೆ: ಮಾಣಿ ಮೈಸೂರು ರಸ್ತೆ ದುರಸ್ತಿಗೆ ಈಗಾಗಲೇ ರೂ.೨ ಕೋಟಿ ಒಂದು ಲೇಯರ್ ಡಾಮರೀಕರಣಕ್ಕೆ ಹಣ ಇಡಲಾಗಿದೆ.ತಕ್ಷಣ ಅದನ್ನು ಮಾಡಬೇಕು.ಗುಂಡಿ ಮುಚ್ಚುವುದನ್ನು ತಕ್ಷಣ ಮಾಡಬೇಕೆಂದ ಶಾಸಕರು ಎನ್.ಎಚ್ ಕಾಮಗಾರಿ ಕುರಿತು ಇಂಜಿನಿಯರ್‌ಗಳನ್ನು ಪ್ರಶ್ನಿಸಿದರು.ಉತ್ತರಿಸಿದ ಎನ್.ಎಚ್ ಅಧಿಕಾರಿಗಳು ಈಗಾಗಲೇ ಮಾಣಿ-ಮೈಸೂರು ರಸ್ತೆ ಎನ್.ಎಚ್ ಆಗಿದ್ದು ಮಾಣಿಯಿಂದ ಸಂಪಾಜೆ ತನಕ ಸುಮಾರು ೭೧.೬ ಕಿ.ಮೀ. ಗೆ ರೂ.೨೬ ಕೋಟಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಆಗಲಿದೆ.ಈ ಕುರಿತು ಟೆಂಡರ್ ಅಪ್ರೂವಲ್ ಆಗಿಲ್ಲ.ಅದಕ್ಕೆ ಮುಂಚೆ ಒಂದು ಲೇಯರ್ ಡಾಮರ್ ಹಾಕಲಾಗುವುದು ಎಂದು ಮಾಹಿತಿ ನೀಡಿದರು.

ಅಡ್ಡಹೊಳೆ, ನೆಲ್ಯಾಡಿ ತುರ್ತು ಪ್ಯಾಚ್‌ವರ್ಕ್ ಮಾಡಿಸಿ: ಅಡ್ಡಹೊಳೆ, ನೆಲ್ಯಾಡಿ ರಸ್ತೆ ಪೂರ್ಣ ಹಾಳಾಗಿದೆ.ತಕ್ಷಣ ಪ್ಯಾಚ್‌ವರ್ಕ್ ಮಾಡಿಸಬೇಕಾಗಿದೆ ಎಂದು ಜಿ.ಪಂ ಸದಸ್ಯರಾದ ಪಿ.ಪಿ.ವರ್ಗೀಸ್ ಮತ್ತು ಸರ್ವೋತ್ತಮ ಗೌಡ ಅವರು ಪ್ರಸ್ತಾಪಿಸಿದರು.ಎನ್.ಎಚ್.ಕಾಮಗಾರಿ ನಡೆಸುವ ಎಲ್ ಆಂಡ್ ಟಿ ಕಂಪೆನಿಯವರನ್ನು ಈ ಕುರಿತು ಶಾಸಕರು ಪ್ರಶ್ನಿಸಿದಾಗ ವಾರದೊಳಗೆ ಕಾಮಗಾರಿ ನಡೆಸುತ್ತೇವೆ ಎಂದು ಎಲ್ ಆಂಡ್ ಟಿ ಕಂಪೆನಿಯ ಇಂಜಿನಿಯರ್ ಉತ್ತರಿಸಿದರು.

ಕೆ.ಆರ್.ಡಿ.ಎಲ್. ಇಲಾಖೆ ಅಗತ್ಯವಿಲ್ಲ: ಕೆ.ಆರ್.ಡಿ.ಎಲ್. ಇಲಾಖೆಯಿಂದ ನಡೆಯುವ ಕಾಮಗಾರಿ ಯಾವುದೂ ಕೂಡಾ ಪೂರ್ಣಗೊಳ್ಳುವುದಿಲ್ಲ.ಪುತ್ತೂರಿನ ಉಪ್ಪಿನಂಗಡಿ, ಬೆಟ್ಟಂಪಾಡಿ, ಕುಂಬ್ರ ಗ್ರಾ.ಪಂ ವ್ಯಾಪ್ತಿಯ ಕಟ್ಟಡಗಳು ಸ್ಕೆಲಿಟನ್ ಮಾದರಿಯಲ್ಲಿದೆ.ಜನರು, ಜನಪ್ರತಿನಿಧಿಗಳಲ್ಲಿ ನಿಮ್ಮ ಇಲಾಖೆ ಬೇಡ ಎಂಬ ಭಾವನೆ ಇದೆ. ನಿಮ್ಮ ಕಾಮಗಾರಿಗಳು ಕಾಲ ಮಿತಿಯಲ್ಲಿ ಆಗುತ್ತಿಲ್ಲ. ಕಾಮಗಾರಿಗಳು ಆಗದಿರುವುದನ್ನು ನಿಮ್ಮ ಮೇಲಾಧಿಕಾರಿಗಳಿಗೂ ನೀವು ತಿಳಿಸುವುದಿಲ್ಲ.ಪಂಚಾಯತ್‌ನವರು ಪೂರ್ತಿ ಹಣ ಕೊಟ್ಟರೂ ನಿಮ್ಮ ಕೆಲಸ ಆಗವುದಿಲ್ಲ ಎಂದು ಶಾಸಕರು ಕೆ.ಆರ್.ಡಿ.ಎಲ್. ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ನ್ನು ತರಾಟೆಗೆತ್ತಿಕೊಂಡರಲ್ಲದೆ ಈ ಬಾರಿಯಿಂದ ಪುತ್ತೂರಿನಿಂದ ಒಂದೇ ಒಂದು ವರ್ಕ್ ನಿಮಗೆ ಕೊಡುವುದಿಲ್ಲ.ಕೊಟ್ಟ ವರ್ಕ್ ಮಾಡದಿದ್ದರೆ ನೀವೇ ಜವಾಬ್ದಾರರು ಎಂದು ಗರಂ ಆಗಿ ಹೇಳಿದರು.ಉತ್ತರಿಸಿದ ಇಂಜಿನಿಯರ್ ಕಾಮಗಾರಿಗಳನ್ನು ಮಾಡಿಸುವುದಾಗಿ ತಿಳಿಸಿದರು.ಕರಾವಳಿ ಪ್ರಾಧಿಕಾರ ಯೋಜನೆಯಲ್ಲಿ ಕಿರು ಸೇತುವೆ ಹೊಸ್ಮಠ ಮಾಣಿಯಡ್ಕ ಹೊಳೆ ಮತ್ತು ಕೊಣಾಲಿನಲ್ಲಿ ಅಕ್ಟೋಬರ್ ಕೊನೆಗೆ ಮುಗಿಯಲಿದೆ ಎಂದು ಅವರು ಹೇಳಿದರು.
ಆಯುಷ್, ಆರೋಗ್ಯ ಕರ್ನಾಟಕ ಕ್ಲಬ್‌ನಿಂದ ತೊಂದರೆ: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಇದೀಗ ಎಕ್ಸ್‌ರೇ, ಸ್ಕ್ಯಾನಿಂಗ್ ವ್ಯವಸ್ಥೆ ಬಂದಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾಜ್ಯೋತಿ ಪುತ್ತೂರಾಯ ಮಾಹಿತಿ ನೀಡಿದರು.ಶಾಸಕರು ಮಾತನಾಡಿ ಸಮಸ್ಯೆಯ ಕುರಿತು ಪ್ರಶ್ನಿಸಿದರು.ಉತ್ತರಿಸಿದ ವೈದ್ಯರು ಆಯುಷ್ಮಾನ್ ಮತ್ತು ಆರೋಗ್ಯ ಕರ್ನಾಟಕ ಯೋಜನೆ ಕ್ಲಬ್ ಆಗಿದ್ದರಿಂದ ಆಸ್ಪತ್ರೆಗೆ ಬಂದ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಾವು ವೆನ್‌ಲಾಕ್‌ಗೆ ಕಳುಹಿಸಬೇಕಾಗುತ್ತದೆ.ಆದರೆ ರೋಗಿಗಳು ಈ ಕುರಿತು ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲು ಕೇಳಿ ಕೊಂಡರೂ ಹಾಗೆ ನಮಗೆ ಕಳುಹಿಸಲು ಆಗುವುದಿಲ್ಲ ಎಂದು ಮಾಹಿತಿ ನೀಡಿದರು.

ಬಾಲಸ್ನೇಹಿ ಅಂಗನವಾಡಿಗೆ ಸಿದ್ದತೆ ಮಾಡಿಕೊಳ್ಳಿ: ತಾಲೂಕಿನ ಎಲ್ಲಾ ಅಂಗನವಾಡಿಗಳಿಗೂ ಪಕ್ಕಾ ಬಿಲ್ಡಿಂಗ್ ಆಗಿರಬೇಕು. ಶಾಲಾ ವಠಾರದಲ್ಲಿ ಇರುವ ಅಂಗನವಾಡಿಗೆ ತಕ್ಷಣ ಅಡಿ ಸ್ಥಳದ ವ್ಯವಸ್ಥೆ ಮಾಡಿಸಿಕೊಳ್ಳಿ ಎಂದು ಶಾಸಕರು ಸಿಡಿಪಿಒ ಅವರಿಗೆ ತಿಳಿಸಿದರಲ್ಲದೆ ಅಂಗನವಾಡಿಯ ಕಾರ್ಯಚಟುವಟಿಕೆ ಕುರಿತು ಪ್ರಶ್ನಿಸಿದರು.ಉತ್ತರಿಸಿದ ಸಿಡಿಪಿಒ ಅವರು ಈಗಾಗಲೇ ಕೆಲವೊಂದು ಶಾಲೆಯ ಎಸ್‌ಡಿಎಮ್‌ಸಿಯ ಮೂಲಕ ಅಲ್ಲಿ ಎಲ್.ಕೆ.ಜಿ ಮತ್ತು ಯು.ಕೆ.ಜಿ ಮಾಡಿದ್ದರಿಂದ ಅಂಗನವಾಡಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಆಗಿದೆ ಎಂದರು.ಮುಂದೆ ಬಾಲಸ್ನೇಹಿ ಅಂಗನವಾಡಿ ಆಗಲಿದೆ ಈ ಕುರಿತು ಈಗಲೇ ಸಿದ್ದತೆ ನಡೆಸಿಕೊಳ್ಳಿ ಎಂದು ಶಾಸಕರು ಹೇಳಿದರು.

ಹಾಸ್ಟೆಲ್‌ಗೆ ಮಹಿಳಾ ವಾರ್ಡನ್: ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವ ಬಾಲಕಿಯರ ಹಾಸ್ಟೇಲ್‌ಗೆ ಮಹಿಳಾ ವಾರ್ಡನ್ ಇರಬೇಕು ಎಂದು ಜಿ.ಪಂ ಸದಸ್ಯೆ ಶಯನಾ ಜಯಾನಂದ್ ಸಭೆಯಲ್ಲಿ ಪ್ರಸ್ತಾಪಿಸಿದರು. ಉತ್ತರಿಸಿದ ಸಮಾಜಕ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ ವಿಸ್ತರಣಾಧಿಕಾರಿಯವರು ನಮ್ಮೆಲ್ಲಾ ಹಾಸ್ಟೇಲ್‌ಗಳಲ್ಲಿ ಮಹಿಳಾ ವಾರ್ಡನ್ ಇದ್ದಾರೆ ಎಂದರು.

ಕೊಳವೆ ಬಾವಿ ಸೌಲಭ್ಯ ಹೆಚ್ಚಿಸಿ: ಹಿಂದುಳಿದ ವರ್ಗ ನಿಗಮದ ದೇವರಾಜು ಅರಸು ಮತ್ತು ಅಂಬೇಡ್ಕರ್ ನಿಗಮದಿಂದ ಮಂಜೂರುಗೊಳ್ಳುವ ಕೊಳವೆ ಬಾವಿಗಳ ಸಂಖ್ಯೆ ಏರಿಸಬೇಕು.ನಿಗಮದಿಂದ ಲಭ್ಯ ಇರುವ ೨೦ ಕೊಳವೆ ಬಾವಿಗೆ ನೂರಾರು ಮಂದಿ ಫಲಾನುಭವಿಗಳು ಅರ್ಜಿ ಸಲ್ಲಿಸಿದಾಗ ಯಾರಿಗೆ ಕೊಡುವುದು, ಯಾರಿಗೆ ಬಿಡುವುದು ಎಂಬ ಪ್ರಶ್ನೆ ಕಾಣುತ್ತದೆ.ಈ ನಿಟ್ಟಿನಲ್ಲಿ ಕೊಳವೆ ಬಾವಿಗಳ ಸೌಲಭ್ಯ ಹೆಚ್ಚಿಸುವಂತೆ ಶಾಸಕರು ನಿಗಮದ ಅಧಿಕಾರಿಗಳಿಗೆ ತಿಳಿಸಿದರು.ತಾ.ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ ಧ್ವನಿಗೂಡಿಸಿದರು.

ತಳ್ಳಿ ಅರ್ಜಿ ಮೇಲೆ ತನಿಖೆಗೆ ಹೋಗಬೇಡಿ: ಸಹಕಾರ ಇಲಾಖೆಯ ಮೇಲೆ ತುಂಬಾ ದೂರುಗಳು ಬಂದಿವೆ. ಯಾವುದೆ ಸಹಿ ಇಲ್ಲದ ತಳ್ಳಿ ಅರ್ಜಿಗಳಿಗೆ ಸಂಬಂಧಿಸಿ ಸಹಕಾರ ಸಂಘಕ್ಕೆ ಹೋಗಿ ತನಿಖೆ ನಡೆಸುವುದು ಸರಿಯಲ್ಲ.ದ.ಕ.ಜಿಲ್ಲೆಯಲ್ಲಿ ಸಹಕಾರ ಸಂಘಗಳು ಬಹಳ ಚೆನ್ನಾಗಿ ನಡೆಯುತ್ತಿವೆ.ಇದು ರಾಜ್ಯಕ್ಕೆ ಮಾದರಿ.ಯಾರದ್ದೋ ಒತ್ತಡಕ್ಕೆ ಎಡ್ಜೆಸ್ಟ್‌ಮೆಂಟ್‌ಗೆ ತನಿಖೆ ನಡೆಸುವುದನ್ನು ನಾನು ಸಹಿಸಲಾರೆ.ಯಾವುದೇ ಸಹಕಾರಿ ಸಂಘಕ್ಕೆ ತಳ್ಳಿ ಅರ್ಜಿ ಪಡೆದು ತನಿಖೆಗೆ ಹೋಗಬಾರದು ಎಂದು ಶಾಸಕರು ಸಹಕಾರ ಸಂಘಗಳ ಪರವಾಗಿ ಸಭೆಗೆ ಆಗಮಿಸಿದ ಫೀಲ್ಡ್ ಆಫೀಸರ್‌ಗೆ ತಿಳಿಸಿದರು.

ಕೋವಿ ಲೈಸನ್ಸ್‌ಗೆ ಸತಾಯಿಸಬೇಡಿ: ಪಟ್ಟಣದೊಳಗೆ ಇರುವ ಮಂದಿಗೆ ಕೋವಿ ಲೈಸನ್ಸ್ ಬೇಡ. ಅವರು ಗನ್ ಲೈಸನ್ಸ್ ಮಾಡಿಕೊಳ್ಳುತ್ತಾರೆ. ಕೋವಿ ಲೈಸನ್ಸ್ ಬೇಕಾಗಿರುವುದು ಕಾಡಿನ ಮಧ್ಯೆ ಮನೆ ಮಾಡಿದವರಿಗೆ.ಕಾಡು ಪ್ರಾಣಿಗಳಿಂದ ಅವರ ಸುರಕ್ಷತೆ ಮತ್ತು ಅವರು ಬೆಳೆದ ಕೃಷಿಯ ಸುರಕ್ಷತೆಗಾಗಿ ಕೋವಿ ಅಗತ್ಯ. ಆದರೆ ಆ ಕೃಷಿಕನಿಗೆ ಕೋವಿ ಪಡೆಯುವುದು ಬಿಡಿ.ಆತನ ತಂದೆಯಿಂದ ಮಗನಿಗೆ ವರ್ಗಾವಣೆ ಮಾಡುವಲ್ಲೂ ಅರಣ್ಯ ಮತ್ತು ಕಂದಾಯ ಇಲಾಖೆ ತೊಂದರೆ ಕೊಡುತ್ತಿದೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು. ಉತ್ತರಿಸಿದ ತಹಶೀಲ್ದಾರ್ ಮತ್ತು ಅರಣ್ಯ ಇಲಾಖೆಯವರು ವರ್ಗಾವಣೆಯಲ್ಲಿ ಸಮಸ್ಯೆ ಇಲ್ಲ.ಆದರೆ ಅದರ ರೂಲ್ಸ್ ಫೋಲೋ ಅಪ್ ಮಾಡಬೇಕಾಗುತ್ತದೆ ಎಂದರು. ಹೊಸ ಕೋವಿ ಪಡೆಯುವುದಕ್ಕಿಂತಲೂ ಅದರ ಲೈಸನ್ಸ್ ಪಡೆಯಲು ಹೆಚ್ಚು ಹಣ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಶಾಸಕರು ಹೇಳಿದರು.ಜಿ.ಪಂ ಸದಸ್ಯರಾದ ಸರ್ವೋತ್ತಮ ಗೌಡ ಮತ್ತು ಪಿ.ಪಿ.ವರ್ಗಿಸ್ ಅವರು ಧ್ವನಿಗೂಡಿಸಿದರು.

ಸಾರ್ವಜನಿಕ ಉದ್ದೇಶಕ್ಕಾಗಿ ಸರಕಾರಿ ಜಾಗ ಗುರುತು ಮಾಡಿ: ಕೌಕ್ರಾಡಿಯಲ್ಲಿ ಗ್ರಾ.ಪಂ ಮೂಲ ಸೌಕರ್ಯ ಮತ್ತು ಸಾರ್ವಜನಿಕ ಉದ್ದೇಶಕ್ಕಾಗಿ ಜಾಗ ಗುರುತಿಸಲಾಗಿತ್ತು. ಈ ಕುರಿತು ಆದೇಶ ಪತ್ರದ ಕಾಲಂ ನಂ.9ರಲ್ಲಿ ಸರಕಾರಿ, ಕಾಲಂ ನಂ.11ರಲ್ಲಿ ಅರಣ್ಯ ಎಂದು ನಮೂದಿಸಿದ್ದರಿಂದ ನಮಗೆ ಜಾಗದ ಸಮಸ್ಯೆ ಉಂಟಾಗಿದೆ.ಅರಣ್ಯ ಇಲಾಖೆಯವರು ಜಾಗ ಕೊಡುತ್ತಿಲ್ಲ ಎಂದು ಜಿ.ಪಂ ಸದಸ್ಯ ಸರ್ವೋತ್ತಮ ಗೌಡ ಪ್ರಸ್ತಾಪಿಸಿದರು. ಉತ್ತರಿಸಿದ ಪಂಜ ವಲಯ ಅರಣ್ಯ ಅಧಿಕಾರಿ ಜಾಗ ಅರಣ್ಯ ಇಲಾಖೆಯ ಸ್ವಾಧೀನದಲ್ಲಿದೆ.ಅದನ್ನು ಜಂಟಿ ಸರ್ವೆ ಮಾಡಬೇಕೆಂದರು. ಸರ್ವೋತ್ತಮ ಗೌಡರು ಆಕ್ಷೇಪಿಸಿ ಜಂಟಿ ಸರ್ವೆ ಮಾಡಬೇಕಾಗಿಲ್ಲ. ಕಾಲಂ ನಂ.9ನಲ್ಲಿ ಸರಕಾರಿ ಎಂದು ಇದೆ ಎಂದರು.ಹಿಂದೆ ರಮಾನಾಥ ರೈ ಅರಣ್ಯ ಸಚಿವರಾಗಿದ್ದ ವೇಳೆ ಸುಮಾರು 9 ಲಕ್ಷ ಎಕ್ರೆ ಅರಣ್ಯ ಜಾಗದಲ್ಲಿ 2 ಲಕ್ಷ ಎಕ್ರೆ ಸರಕಾರಕ್ಕೆ ಬಿಟ್ಟು ಕೊಡಲಾಗಿದೆ.ಎಲ್ಲೆಲ್ಲಾ ಸರಕಾರಿ ಜಾಗ ಇದೆ ಎಂದು ತಕ್ಷಣ ಗುರುತಿಸಿ ಪಂಚಾಯತ್‌ಗೆ ರಿಸರ್ವ್ ಮಾಡಿಕೊಳ್ಳಬೇಕೆಂದು ಶಾಸಕರು ಸೂಚಿಸಿದರು.

ಮಳೆಗಾಲದಲ್ಲಿ ಪುತ್ತೂರು ಮೆಸ್ಕಾಂಗೆ ರೂ.1 ಕೋಟಿ ನಷ್ಟ : ಮಳೆಗಾಲದ 2 ತಿಂಗಳಲ್ಲಿ 634 ವಿದ್ಯುತ್ ಕಂಬಗಳು ತುಂಡಾಗಿದ್ದು, 89 ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋಗಿದ್ದು, ಸುಮಾರು 1 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಇಂಜಿನಿಯರ್ ರಾಮಚಂದ್ರ ಶಾಸಕರ ಪ್ರಶ್ನೆಗೆ ಉತ್ತರಿಸಿದರು.ಕಡಬದಲ್ಲಿ 548 ವಿದ್ಯುತ್ ಕಂಬಗಳು ತುಂಡಾಗಿದ್ದು, 48 ಟಿ.ಸಿ ಕೆಟ್ಟು ಹೋಗಿದೆ ಎಂದು ಕಡಬ ಮೆಸ್ಕಾಂ ಇಂಜಿನಿಯರ್ ಮಾಹಿತಿ ನೀಡಿದರು. ಜಿ.ಪಂ ಸದಸ್ಯೆ ಶಯನಾ ಜಯಾನಂದ್ ಅವರು ಮಾತನಾಡಿ ಕೋಡಿಂಬಾಡಿಯಲ್ಲಿ ಅಡಿಕೆ ಸಸಿ ಬೆಳೆದು ವಿದ್ಯುತ್ ತಂತಿಗೆ ತಾಗಿ ಆಗಾಗ ವಿದ್ಯುತ್ ಫ್ಯೂಸ್ ಹೋಗುತ್ತಿದೆ ಎಂದರು.ಶಾಸಕರು ಮಾತನಾಡಿ ಎಲ್ಲೆಲ್ಲಾ ಮರಗಳು, ಅಡಿಕೆ ಗಿಡಗಳು, ಮನೆ ಮೇಲೆ ವಿದ್ಯುತ್ ತಂತಿ ಹಾದು ಹೋಗಿದ ಅದನ್ನು ತಕ್ಷಣ ಬದಲಾವಣೆ ಮಾಡುವಂತೆ ಮೆಸ್ಕಾಂ ಇಂಜಿನಿಯರ್‌ಗೆ ಸೂಚಿಸಿದರು.

ಬಾರ್‌ಗಳಲ್ಲಿ ಎಮ್.ಆರ್.ಪಿ ಬೋರ್ಡ್: ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯಗಳನ್ನು ಎಮ್.ಆರ್.ಪಿ. ದರಕ್ಕಿಂತ ಹೆಚ್ಚು ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪ ಇದೆ. ಈ ನಿಟ್ಟಿನಲ್ಲಿ ಎಲ್ಲಾ ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಮದ್ಯಗಳ ಎಮ್.ಆರ್.ಪಿ. ದರವನ್ನು ಅಳವಡಿಸಬೇಕೆಂದು ಶಾಸಕರು ಸದಸ್ಯರ ಪ್ರಶ್ನೆಗೆ ಸಂಬಂಧಿಸಿ ಅಬಕಾರಿ ಉಪ ನಿರೀಕ್ಷಕರಿಗೆ ತಿಳಿಸಿದರು.

ಕೆ.ಎಸ್.ಆರ್.ಟಿ.ಸಿಯಲ್ಲೇ ದೊಡ್ಡ ಸಮಸ್ಯೆ: ಸಮಯಕ್ಕೆ ಸರಿಯಾಗಿ ಬಸ್ ಹೋಗುತ್ತಿಲ್ಲ. ಹಳೆ ಬಸ್ ದಾರಿ ಮಧ್ಯೆ ನಿಲ್ಲುತ್ತದೆ. ಹೊಸ ಬಸ್ ಬರುತ್ತಿಲ್ಲ. ಟ್ರಿಪ್ ಕಟ್ ಆಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ವಿರುದ್ಧ ಹಲವು ದೂರುಗಳು ಬರುತ್ತಿವೆ.ಕಡಬದಲ್ಲಿ ಬಸ್ ನಿಲ್ದಾಣಕ್ಕೆ ಜಾಗ ಕೊಟ್ಟರೂ ಇನ್ನೂ ಕಟ್ಟಡ ಆಗಿಲ್ಲ.ಈ ಕುರಿತು ಕೆಎಸ್‌ಆರ್‌ಟಿಸಿ ಡಿ.ಸಿ ಮತ್ತು ಇತರ ಅಧಿಕಾರಿಗಳೊಂದಿಗೆ ಇನ್ನೊಮ್ಮೆ ಸಭೆ ನಡೆಸಬೇಕು. ಆಗ ನಿಮ್ಮ ವಿಚಾರ ಮಾತನಾಡುವ ಎಂದು ಶಾಸಕರು ಹೇಳಿದರು.ಪಿ.ಪಿ ವರ್ಗಿಸ್ ಅವರು ಧ್ವನಿಗೂಡಿಸಿದರು.

ವೇದಿಕೆಯಲ್ಲಿ ತಾಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಉಪಾಧ್ಯಕ್ಷೆ ಲಲಿತಾ ಈಶ್ವರ್, ಸ್ಥಾಯಿಸಮಿತಿ ಅಧ್ಯಕ್ಷ ಹರೀಶ್ ಬಿಜತ್ರೆ, ತಾಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಭಂಡಾರಿ, ಪುತ್ತೂರು ತಹಶೀಲ್ದಾರ್ ಅನಂತಶಂಕರ,ಕಡಬ ತಹಶೀಲ್ದಾರ್ ಜಾನ್ ಪ್ರಕಾಶ್ ಹಾಜರಿದ್ದರು. ಸಭೆಯಲ್ಲಿ ಜಿಪಂ ಸದಸ್ಯರಾದ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್, ಶಯನಾ ಜಯಾನಂದ, ನಾಮನಿರ್ದೇಶಿತ ಸದಸ್ಯ ಕೃಷ್ಣಕುಮಾರ್ ರೈ ಗುತ್ತು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.