ಎಸ್.ಸಿ., ಎಸ್.ಟಿ. ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಶಾಸಕ ಅಂಗಾರ ನೇಮಕ

Puttur_Advt_NewsUnder_1
Puttur_Advt_NewsUnder_1
  • ಇದೊಂದು ವಿಧಾನ ಮಂಡಲ ಸಮಿತಿ, ಜವಾಬ್ದಾರಿ ಒಪ್ಪಿಕೊಳ್ಳುವೆ: ಅಂಗಾರ

 

 

ಪುತ್ತೂರು: ರಾಜ್ಯ ವಿಧಾನಸಭೆಯ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಗೆ ಸುಳ್ಯ ಕ್ಷೇತ್ರದ ಶಾಸಕ ಎಸ್.ಅಂಗಾರರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿದುಬಂದಿದೆ. ಶಾಸಕ ಅಂಗಾರರ ಸಹಿತ ೬ ಮಂದಿ ಶಾಸಕರನ್ನು ವಿವಿಧ ಸಮಿತಿಗಳ ಅಧ್ಯಕ್ಷರನ್ನಾಗಿ ವಿಧಾನಸಭೆಯ ಸ್ಪೀಕರ್ ನೇಮಿಸಿದ್ದಾರೆ. ಈ ನೇಮಕದ ಕುರಿತಂತೆ ಸೆ.೨೧ರಂದು ಬೆಳಿಗ್ಗಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ಸುಳ್ಯದ ಬಿಜೆಪಿ ಮೀಡಿಯಾ ಗ್ರೂಪ್‌ನಲ್ಲೂ ಈ ಮಾಹಿತಿ ಹಾಕಲಾಗಿದೆ. ಇದನ್ನು ಹಲವು ಬಿಜೆಪಿ ಮುಖಂಡರು ಸ್ಟೇಟಸ್ ಕೂಡಾ ಹಾಕಿಕೊಂಡಿದ್ದಾರೆ.

ಸ್ಪೀಕರ್ ನೇಮಿಸುವ ವಿಧಾನಸಭೆಯ ಸಾಂವಿಧಾನಿಕ ಹುದ್ದೆ ಇದಾಗಿದ್ದು, ಇದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಒಪ್ಪಿಕೊಳ್ಳದಿದ್ದರೆ ಈ ಕುರಿತು ಸ್ಪೀಕರ್‌ಗೆ ಪತ್ರ ನೀಡಬೇಕಾಗುತ್ತದೆ ಎಂಬ ಮಾಹಿತಿ ಲಭಿಸಿದೆ. ಸತತ ಆರು ಬಾರಿ ಸುಳ್ಯ ಕ್ಷೇತ್ರದ ಶಾಸಕರಾಗಿ ಚುನಾಯಿತರಾಗಿರುವ ಎಸ್.ಅಂಗಾರ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ನೀಡದೇ ಇರುವ ಕುರಿತು ವ್ಯಾಪಕ ಅಸಮಾಧಾನ, ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಅವರನ್ನು ಎಸ್‌ಸಿ, ಎಸ್‌ಟಿ ಸಮಿತಿ ಅಧ್ಯಕ್ಷರಾಗಿ ನೇಮಕಗೊಳಿಸಲಾಗಿದೆ.

ತಾನು ನೇಮಕಗೊಂಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕಲ್ಯಾಣ ಸಮಿತಿಯು ಒಂದು ವಿಧಾನಮಂಡಲ ಸಮಿತಿಯಾಗಿದ್ದು, ಇದನ್ನು ಒಪ್ಪಿಕೊಂಡು ಮುಂದುವರಿಯುತ್ತೇನೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಪ್ರತಿಕ್ರಿಯಿಸಿದ್ದಾರೆ. ಎಸ್‌ಸಿ ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷರಾಗಿ ಅಂಗಾರರ ನೇಮಕ ಹಾಗೂ ಈ ಹುದ್ದೆಯನ್ನು ಒಪ್ಪಿಕೊಳ್ಳುವ ಕುರಿತಂತೆ ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿರುವ ಹಿನ್ನಲೆಯಲ್ಲಿ `ಸುದ್ದಿ’ ಯೊಂದಿಗೆ ಪ್ರತಿಕ್ರಿಯಿಸಿದ ಅಂಗಾರರು, ಹಿಂದೆ ಬಿಜೆಪಿ ಸರಕಾರ ಇರುವಾಗಲೂ ನಾನು ಹಿಂದುಳಿದ ವರ್ಗಗಳ ಸಮಿತಿಯ ಅಧ್ಯಕ್ಷನಾಗಿದ್ದೆ. ಈಗ ಮತ್ತೆ ಬಿಜೆಪಿ ಸರಕಾರ ಇರುವುದರಿಂದ ಈ ಸಮಿತಿಯ ಅಧ್ಯಕ್ಷನಾಗಿದ್ದೇನೆ. ಸರಕಾರಕ್ಕೆ ಈ ಕ್ಷೇತ್ರದ ಯೋಜನೆಗಳನ್ನು, ಕಾಲಮಿತಿಯನ್ನು ಶಿಫಾರಸ್ಸು ಮಾಡುವಂತಹ ಮಹತ್ವದ ಕೆಲಸಗಳು ಇದರಲ್ಲಿ ಅಡಕವಾಗಿದೆ. ಸಂಬಂಧಪಟ್ಟ ಸಚಿವರನ್ನಾಗಲಿ, ಸೆಕ್ರೆಟರಿಗಳನ್ನಾಗಲಿ ನಮ್ಮ ಸಭೆಗಳಿಗೆ ಕರೆಸಿಕೊಂಡು ಸೂಚನೆ ನೀಡುವ ಅಧಿಕಾರವೂ ಸಮಿತಿಗಿದೆ ಎಂದರು. ಎಸ್‌ಸಿ ಎಸ್‌ಟಿ ಕಲ್ಯಾಣ ಸಮಿತಿ ಅಧ್ಯಕ್ಷನಾಗಿ ನ್ಯಾಯೋಚಿತವಾಗಿ ಕರ್ತವ್ಯ ನಿಭಾಯಿಸುತ್ತೇನೆ. ಇದು ಸ್ಪೀಕರ್ ನೇಮಿಸುವ ಸಮಿತಿಯಾಗಿದ್ದು, ಈ ಕುರಿತಂತೆ ನನಗೆ ಮಾಹಿತಿ ಬರಬೇಕಷ್ಟೇ ಎಂದ ಅವರು, ಜನರು ಏನು ಮಾತನಾಡಿಕೊಳ್ಳುತ್ತಾರೋ ನನಗೆ ಗೊತ್ತಿಲ್ಲ. ಆದರೆ ಇದು ಸರಕಾರದ ಹುದ್ದೆಯಲ್ಲ ಎಂದು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.