ಕೊಂಬಾರಿನ ಲೋಕೇಶ್‌ರಿಗೆ ಅರಣ್ಯಾಧಿಕಾರಿಗಳಿಂದ ಹಲ್ಲೆ ಆರೋಪ; ಕೆಂಜಾಳದಲ್ಲಿ ನಾಗರಿಕರಿಂದ ಪ್ರತಿಭಟನೆ

Puttur_Advt_NewsUnder_1
Puttur_Advt_NewsUnder_1
  • ಹಲ್ಲೆ ನಡೆಸಿರುವವರನ್ನು ಅಮಾನತು ಮಾಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ
  • 3 ಗಂಟೆ ಕಳೆದರೂ ಬಾರದ ಅಧಿಕಾರಿಗಳು
  • ರಸ್ತೆ ತಡೆ ಎಚ್ಚರಿಕೆ ಬಳಿಕ ಸ್ಥಳಕ್ಕಾಗಮಿಸಿದ ಉಪವಲಯ ಅರಣ್ಯಾಧಿಕಾರಿ


ಕಡಬ: ಕೊಂಬಾರು ಗ್ರಾಮದ ಕಾಪಾರು ನಿವಾಸಿ ಲೋಕೇಶ ಎಂಬವರಿಗೆ ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಮಾನುಷವಾಗಿ, ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿರುವ ಅಲ್ಲಿನ ನಾಗರಿಕರು, ಹಲ್ಲೆ ನಡೆಸಿದ ಇಲಾಖಾ ಸಿಬ್ಬಂದಿಗಳನ್ನು ವಾರದೊಳಗೆ ಅಮಾನತು ಮಾಡದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸೆ.21ರಂದು ಕೆಂಜಾಳ ಅರಣ್ಯ ಇಲಾಖೆಯ ಕಛೇರಿಯ ಎದುರು ಕೆಂಜಾಳದ ನಾಗರಿಕರು ಹಾಗೂ ನೀತಿ ತಂಡದ ಸದಸ್ಯರು ಪ್ರತಿಭಟನೆ ನಡೆಸಿದರು. ಬೆಳಿಗ್ಗೆ 10.30ಕ್ಕೆ ಪ್ರತಿಭಟನೆ ಪ್ರಾರಂಭವಾಗಿತ್ತು. ಮಧ್ಯಾಹ್ನದವರೆಗೆ ಅರಣ್ಯ ಇಲಾಖೆಯ ಯಾವ ಅಧಿಕಾರಿಗಳೂ ಸ್ಥಳಕ್ಕೆ ಬಂದಿರಲಿಲ್ಲ, ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ರಸ್ತೆ ತಡೆಯ ಎಚ್ಚರಿಕೆ ನೀಡಿದ ಬೆನ್ನಲ್ಲೆ ಸುಬ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಅವರು ಆಗಮಿಸಿ ಪ್ರತಿಭಟನೆ ನಿರತರಿಂದ ಮನವಿ ಸ್ವೀಕರಿಸಿದರು.

ಇಲಾಖೆಯವರ ಹಗರಣ ಮುಚ್ಚಿ ಹಾಕಲು ಹುನ್ನಾರ-ಮಿತ್ತಬೈಲ್: ಪ್ರಾಸ್ತಾವಿಕವಾಗಿ ಮಾತನಾಡಿದ ಆನಂದ ಮಿತ್ತಬೈಲ್ ಅವರು, ಕೊಂಬಾರು ಮೀಸಲು ಅರಣ್ಯದಲ್ಲಿ ಮರ ಕಳ್ಳತನ ನಡೆಸಿರುವುದಾಗಿ ಕೊಂಬಾರು ಗ್ರಾಮದ ಕಾಪಾರು ನಿವಾಸಿ ಲೋಕೇಶ್ ಎಂಬವರಿಗೆ ಸುಬ್ರಹ್ಮಣ್ಯ ವಲಯ ಅರಣ್ಯ ಇಲಾಖೆಯ ಅರಣ್ಯ ಪಾಲಕ ಅಶೋಕ್, ಪ್ರಕಾಶ್ ಹಾಗೂ ಸಿಬ್ಬಂದಿ ಶೀನಪ್ಪ ಎಂಬವರು ಅಮಾನುಷವಾಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಇದು ಅಕ್ಷಮ್ಯ ಅಪರಾಧ, ಲೋಕೇಶ್ ಅವರು ಕಾರ್‍ಯಕ್ರಮಕ್ಕೆ ತನ್ನ ಕುಟುಂಬದವರೊಂದಿಗೆ ತೆರಳುತ್ತಿದ್ದ ವೇಳೆ ಏಕಾಏಕಿ ಆಗಮಿಸಿದ ಅರಣ್ಯಾಧಿಕಾರಿಗಳು ರಸ್ತೆಯಲ್ಲಿ ವಶಕ್ಕೆ ತೆಗೆದುಕೊಂಡು ಕೊಲ್ಲಮೊಗ್ರು ಅರಣ್ಯ ಇಲಾಖೆಯ ಕಛೇರಿಯಲ್ಲಿ ಕೂಡಿ ಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ, ಇಲ್ಲಿ ಇಲಾಖೆಯ ಅಧಿಕಾರಿಗಳು ಅಮಾಯಕ ನಿರಪರಾಧಿಯೋರ್ವನಿಗೆ ಹಲ್ಲೆ ನಡೆಸಿರುವುದು ಸ್ಪಷ್ಟವಾಗುತ್ತಿದೆ ಎಂದರು. ನಿಜವಾಗಿಯೂ ಆ ಮರ ಕಳ್ಳತನ ನಡೆಸದ ಲೋಕೇಶ್ ಅವರನ್ನು ಅನಾವಶ್ಯಕವಾಗಿ ಪ್ರಕರಣದಲ್ಲಿ ಸಿಲುಕಿಸಿ ಕೇಸು ದಾಖಲಿಸಿ ದಂಡ ಪಡೆದುಕೊಳ್ಳಲಾಗಿದೆ, ಅರಣ್ಯ ಇಲಾಖೆಯವರು ತಾವು ನಡೆಸಿದ ಹಗರಣವನ್ನು ಮುಚ್ಚಿ ಹಾಕಲು ಈ ಷಡ್ಯಂತ್ರ ರೂಪಿಸಿ ಲೋಕೇಶ್ ಅವರಿಗೆ ಬೆದರಿಕೆ ಒಡ್ಡಿ, ಅವರು ಕಳ್ಳತನ ಮಾಡದೇ ಇದ್ದರೂ ಮರ ಕಳ್ಳತನ ನಡೆಸಿzನೆ ಎಂದು ಒಪ್ಪಿಗೆ ಪಡೆದುಕೊಂಡಿದ್ದಾರೆ. ಲೋಕೇಶ್ ಅವರಿಗೆ ಹೊಟ್ಟೆ ಭಾಗ ಹಾಗೂ ಕಾಲಿಗೆ ಬಲವಾದ ಏಟುಗಳನ್ನು ನೀಡಲಾಗಿದೆ, ಇದರಿಂದ ಲೋಕೇಶ್ ಅವರಿಗೆ ದೈಹಿಕವಾಗಿ ತೊಂದರೆಯಾಗಿದೆ ಎಂದ ಅವರು, ಪ್ರಕರಣವನ್ನು ಸರಿಯಾಗಿ ತನಿಖೆ ಮಾಡದೆ ಈ ರೀತಿ ಅರಣ್ಯ ಅಧಿಕಾರಿಗಳು ವರ್ತಿಸಿರುವುದು ಅಕ್ಷಮ್ಯ ಅಪರಾಧವಾಗಿದೆ, ಈ ಸಿಬ್ಬಂದಿಗಳನ್ನು ಅಮಾನತು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಗೂಂಡಗಳಂತೆ ವರ್ತಿಸಿರುವ ಅರಣ್ಯ ಅಧಿಕಾರಿಗಳು-ಜಯನ್: ನೀತಿ ಟ್ರಸ್ಟ್‌ನ ಜಯನ್ ಅವರು ಮಾತನಾಡಿ, ಲೋಕೇಶ್ ಅವರು ತಪ್ಪು ಮಾಡಲಿಲ್ಲ, ಒಂದು ವೇಳೆ ತಪ್ಪು ಮಾಡಿದ್ದರೆ ಆರೋಪಿಯನ್ನು ಕಾನೂನಿನ ಪ್ರಕಾರವೇ ಬಂಧಿಸಿ, ಕೇಸು ಮಾಡಬಹುದಾಗಿದೆ, ಆದರೆ ಇಲ್ಲಿ ಅರಣ್ಯಾಧಿಕಾರಿ ಗೂಂಡಗಳಂತೆ ವರ್ತಿಸಿ ತನ್ನ ಹೇಯ ಕೃತ್ಯವನ್ನು ಪ್ರದರ್ಶಿಸಿದ್ದಾರೆ. ಅರಣ್ಯ ಇಲಾಖೆಯನ್ನು ಲೂಟಿ ಮಾಡುವ ಅರಣ್ಯ ಇಲಾಖೆಯವರು ತಮ್ಮ ತಪ್ಪನ್ನು ಅಡಗಿಸಲು ಈ ಬಡಪಾಯಿ ನಿರಪರಾಧಿ ಲೋಕೇಶ್ ಅವರಿಗೆ ಹಲ್ಲೆ ನಡೆಸಿ ಕೇಸು ದಾಖಲಿಸಿದ್ದಾರೆ. ಜನರಿಗೆ ರಕ್ಷಣೆ ನೀಡಿ ಅರಣ್ಯ ರಕ್ಷಿಸಬೇಕಾದ ಇಲಾಖೆಯ ಅಧಿಕಾರಿಗಳು ಈ ಕೃತ್ಯ ಎಸಗಿ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ನಮ್ಮ ತೆರಿಗೆ ಹಣದಿಂದ ಸಂಬಳ ಪಡೆಯುವ ಇವರು ಜನತೆಗೆ ಅನ್ಯಾಯ ಎಸಗುತ್ತಿದ್ದಾರೆ, ಈ ಬಗ್ಗೆ ಈಗಾಗಲೇ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲಾಗಿದೆ. ಎಲ್ಲ ವಿಷಯಗಳನ್ನು ಬಯಲಿಗೆಳೆದು ಹಲ್ಲೆ ನಡೆಸಿದ ಮೂವರನ್ನು ಕೂಡಲೇ ಅಮಾನತು ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಅವರು ಎಚ್ಚರಿಸಿದರು.

ಕೊಂಬಾರು ಗ್ರಾಮ ಅರಣ್ಯ ಸಮಿತಿಯ ಅಧ್ಯಕ್ಷ ಶಶಿಧರ ಬೊಟ್ಟಡ್ಕ ಮಾತನಾಡಿ, ಅರಣ್ಯ ಅಧಿಕಾರಿಗಳು ಯಾವ ಆಧಾರದಲ್ಲಿ ಲೋಕೇಶ್ ಅವರನ್ನು ಬಂಧಿಸಿದ್ದಾರೆ, ಅವರನ್ನು ಮರ ಸಮೇತ ಬಂಧಿಸಿದ್ದಾರೆಯ? ಅಥವಾ ಅವರು ಮರ ಸಾಗಾಟ ಮಾಡುವುದನ್ನು ನೋಡಿದ್ದಾರೆಯೇ, ವಿನಾ ಕಾರಣ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಅರಣ್ಯ ಅಧಿಕಾರಿಗಳು ಅಮಾಯಕನ ಮೇಲೆ ಈ ಹೇಯ ಕೃತ್ಯ ಎಸಗಿದ್ದಾರೆ ಇದು ಖಂಡನೀಯ, ಈ ಮರ ಕಳ್ಳತನ ಪ್ರಕರಣದಲ್ಲಿ ಇಲಾಖೆಯೇ ಸಿಬ್ಬಂದಿಗಳೇ ಶಾಮೀಲು ಆಗಿರುವುದು ಇಡೀ ಊರಿಗೆ ಗೊತ್ತಿದೆ, ಅದನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದು ಹಲ್ಲೆ ನಡೆಸಿದ ಸಿಬ್ಬಂದಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ತಾ.ಪಂ. ಸದಸ್ಯ ಗಣೇಶ್ ಕೈಕುರೆ ಮಾತನಾಡಿ ಅಧಿಕಾರಿಗಳು ಹಿಟ್ಲರ್ ಸಂಸ್ಕೃತಿಯಂತೆ ವರ್ತಿಸುತ್ತಿರುವುದು ಖಂಡನೀಯ, ತಪ್ಪು ಮಾಡಿದವರಿಗೆ ಶಿಕ್ಷೆ ನೀಡಲಿ ಅಮಾಯಕರಿಗೆ ಶಿಕ್ಷೆ ನೀಡುವುದು ಸರಿಯಲ್ಲ ಎಂದು ಹೇಳಿದರು. ಗ್ರಾಮಾಭಿವೃದ್ದಿ ಯೋಜನೆಯ ಸೇವಾ ಪ್ರತಿನಿಧಿ ಪರಮೇಶ್ವರ ಗೌಡ ಉರುಂಬಿ ಮಾತನಾಡಿ, ಲೋಕೇಶ್ ನಮ್ಮ ಗ್ರಾಮಾಭಿವೃಧ್ದಿ ಯೋಜನೆಯ ಸದಸ್ಯರಾಗಿದ್ದು ಅವರು ಕಳ್ಳತನ ಮಾಡುವ ಸಂಸ್ಕೃತಿಯವರು ಅಲ್ಲ ಎಂದು ಹೇಳಿದರು. ಪ್ರತಿಭಟನೆಯಲ್ಲಿ ಕಾರ್ತಿಕ್ ಕೊಂಬಾರು,ವಿನೋದ್ ಹೊಳ್ಳಾರು, ಗೋಪಾಲಕೃಷ್ಣ ಮರುವಂಜಿ, ಚಂದ್ರಶೇಖರ ಕೊಡೆಂಕಿರಿ, ಹರೀಶ್ ಗುಡ್ಡೆಕೇರಿ, ವಿಶ್ವನಾಥ ಕಾಪಾರು, ಕೊರಗ್ಗು ಕೊಲ್ಕಜೆ, ಮೋನಪ್ಪ ಸರಪಾಡಿ, ಜನಾರ್ದನ ಕೊಡೆಂಕಿರಿ, ಕಿರಣ ಕೊಡೆಂಕಿರಿ, ವಿಶ್ವನಾಥ ಪೆರುಂದೊಡಿ, ಪ್ರಶಾಂತ್ ಹೊಳ್ಳಾರು, ದಯಾನಂದ ಮಿತ್ತಬೈಲ್, ಪ್ರವೀಣ್ ಹೊಳ್ಳಾರು ಹರೀಶ್ ಭಾಗ್ಯ, ದಿವಾಕರ ಕೊಡೆಂಕಿರಿ ಮೊದಲಾದವರು ಭಾಗವಹಿಸಿದ್ದರು. ರಾಮಕೃಷ್ಣ ಹೊಳ್ಳಾರು ಕಾರ್‍ಯಕ್ರಮ ನಿರೂಪಿಸಿದರು.

3 ಗಂಟೆ ಬಳಿಕ ಆಗಮಿಸಿದ ಅಧಿಕಾರಿಗಳು: ಸುಮಾರು ಮೂರು ಗಂಟೆಗಳ ಕಾಲ ಪ್ರತಿಭಟನೆ ನಡೆದರೂ ಸ್ಥಳಕ್ಕೆ ಅರಣ್ಯ ಇಲಾಖೆಯ ಯಾವ ಅಧಿಕಾರಿಯೂ ಬಾರದ ಹಿನ್ನಲೆಯಲ್ಲಿ ಅಸಮಾಧಾನಗೊಂಡ ಪ್ರತಿಭಟನಾಕಾರು ಗುಂಡ್ಯ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ತಡೆ ನಡೆಸುವುದಾಗಿ ಪೋಲಿಸರಲ್ಲಿ ತಿಳಿಸಿದರು, ಇದಕ್ಕೆ ಪೋಲಿಸರು ಒಪ್ಪದಿದ್ದರೂ ರಸ್ತೆ ತಡೆ ಮಾಡುವುದಾಗಿ ಘೋಷಿಸಿದರು, ಇದಾಗ ಬಳಿಕ ಸ್ವಲ್ಪ ಹೊತ್ತಿನಲ್ಲಿ ಸುಬ್ರಹ್ಮಣ್ಯ ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಅವರು ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಬಳಿಕ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.

ಅಮಾನತು ಮಾಡದಿದ್ದರೆ ಮುಂದೆ ಮತ್ತೆ ಪ್ರತಿಭಟನೆ?: ಹಲ್ಲೆ ನಡೆಸಿದ ಇಲಾಖೆಯ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಯವರ ಕಛೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಲಾಯಿತು.  ರಕ್ಷಣೆ ಕೋರಿ ಅರಣ್ಯ ವೀಕ್ಷಕ-ರಕ್ಷಕ ಸಂಘದಿಂದ ಕಡಬ ಪೋಲಿಸರಿಗೆ ಮನವಿ: ಈ ಮಧ್ಯೆ ಅರಣ್ಯ ವೀಕ್ಷಕರು-ರಕ್ಷಕರ ಸಂಘದ ವತಿಯಿಂದ ಸುಮಾರು 35 ಸಿಬಂದಿಗಳು, ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸದಂತೆ ನಮಗೆ ರಕ್ಷಣೆ ನೀಡಬೇಕೆಂಬ ಮನವಿಯನ್ನು ಕಡಬ ಪೋಲಿಸ್ ಠಾಣೆಗೆ ಸಂಘದ ಜಿಲ್ಲಾಧ್ಯಕ್ಷ ಜಗದೀಶ್ ಎನ್. ಅವರ ನೇತೃತ್ವದಲ್ಲಿ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.