Home_Page_Advt
Home_Page_Advt
Breaking News

ಗುಡ್ಡೆ ಅಗೆದು ಗದ್ದೆ ನಿರ್ಮಿಸಿದ ಸಾರಕರೆ ಸೋಮಪ್ಪ ಪೂಜಾರಿ

  • ಗದ್ದೆ ಇದ್ದು ಹಡೀಲು ಬಿಡುವ ಕೃಷಿಕರಿಗೆ ಪಾಠವಾಯಿತು ಇವರ ಕಾಯಕ

ಸವಣೂರು : ಅನ್ನವೇ ದೇವರು.. ಬಹುಶಃ ಈ ಮಾತು ಇತ್ತೀಚೆಗೆ ಕೇವಲ ಮಾತಿನಲ್ಲಿ, ಅಕ್ಷರದಲ್ಲಿ ಮಾತ್ರ ಉಳಿದಿದೆ. ಹೊಟ್ಟೆ ತುಂಬಿಸುವ ಅನ್ನವ ಬೆಳೆಯುವ ಕೃಷಿಕರು ಕಾಣಸಿಗುವುದೇ ಬಹಳ ವಿರಳವಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಗದ್ದೆಯನ್ನು ಅಗೆದು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿರುವ ಸಂದರ್ಭದಲ್ಲಿ ಹಾಗೂ ಇರುವ ಗದ್ದೆಗಳನ್ನು ಬೇಸಾಯ ಮಾಡದೇ ಹಾಗೇ ಹಡೀಲು ಬಿಡುವವರೇ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.

ಹೆಚ್ಚು ಸಂಪಾದನೆ ಮಾಡುವ ದೃಷ್ಟಿಯಿಂದ ಎಲ್ಲರೂ ವಾಣಿಜ್ಯ ಬೆಳೆಯುವತ್ತ ಮುಖ ಮಾಡುತ್ತಿರುವ ಇಂದಿನ ಕಾಲದಲ್ಲಿ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ಸಾರಕರೆ ನಿವಾಸಿ ಸೋಮಪ್ಪ ಪೂಜಾರಿ ಅವರು ತನ್ನ ಸಮೀಪದಲ್ಲೇ ಗುಡ್ಡ ಅಗೆದು 2 ಗದ್ದೆ ನಿರ್ಮಿಸಿ ಮಾದರಿಯಾಗಿದ್ದಾರೆ.ಸೋಮಪ್ಪ ಪೂಜಾರಿ ಅವರಿಗೆ ಅವರ ಅಕ್ಕ ಕಮಲಾ,ಪತ್ನಿ ವಾರಿಜ,ಮಕ್ಕಳಾದ ಸತೀಶ್,ಹರೀಶ್,ಸಂದ್ಯಾ ಅವರು ಸಾಥ್ ಕೊಡುತ್ತಿದ್ದಾರೆ.

ಈಗ ಎಲ್ಲಿ ನೋಡಿದರೂ ಗದ್ದೆಗಳು ಮಾಯವಾಗಿ ವಾಣಿಜ್ಯ ಬೆಳೆಯ ತೋಟಗಳೇ ಕಾಣಸಿಗುತ್ತದೆ.ಆದರೆ ಆಹಾರ ಬೆಳೆಯಾದ ಭತ್ತ ಬೆಳೆಯುವ ಉತ್ಸಾಹ ಕಡಿಮೆಯಾಗಿದೆ.ಹಲವೆಡೆ ಗದ್ದೆಗಳು ಇದ್ದರೂ ಹಡೀಲು ಬಿಡಲಾಗಿದೆ.

ಇಂತಹ ಖಾಲಿ ಗದ್ದೆಗಳನ್ನು ನೋಡುವಾಗ ಇಷ್ಟು ಜಾಗವಿದ್ದರೂ ಹಾಗೆ ಬಟ್ಟಿದ್ದಾರೆ ಎಂದು ತನ್ನಲ್ಲೇ ಪ್ರಶ್ನಿಸುತ್ತಿದ್ದ ಸೋಮಪ್ಪ ಪೂಜಾರಿ ಸಾರಕರೆ ಅವರಿಗೆ ತಾನೇ ಏಕೆ ಗದ್ದೆ ನಿರ್ಮಿಸಿ ಭತ್ತ ಬೆಳೆಯಬಾರದು ಎಂಬ ಯೋಚನೆಯಲ್ಲಿ ತೊಡಗಿದರು.ಆದರೆ ಇವರಿಗೆ ಭತ್ತ ಬೆಳೆಯಲು ಸೂಕ್ತ ಜಾಗವಿರಲಿಲ್ಲ.ಆದರೂ ಇವರ ಭತ್ತದ ಬೆಳೆಯನ್ನು ಬೆಳೆಯ ಬೇಕೆಂಬ ಉದಾತ್ತ ಆಶಯಕ್ಕೆ ಪೂರಕವಾಗಿ ಕಾಣಿಸಿದ್ದು ತನ್ನ ಮನೆಯ ಮುಂದಿನ ಮರ ,ಗಿಡಗಂಟಿ ಬೆಳೆದ ಗುಡ್ಡ.

ಬೇರೆಡೆಯ ಗದ್ದೆಯನ್ನು ನೋಡುವ ಬದಲು ತನ್ನ ಮನೆಯ ಅಂಗಳವನ್ನೇ ಗದ್ದೆ ಮಾಡಬೇಕೆಂದು ಅಣಿಯಾದರು.ಯಂತ್ರದ ಮೂಲಕ ಗುಡ್ಡೆಯನ್ನು ಅಗೆದು ಮಣ್ಣನ್ನು ಹದಮಾಡಿ ನೀರು ನಿಲ್ಲಿಸಿ ಗದ್ದೆ ನಿರ್ಮಾಣ ಮಾಡಿದ್ದಾರೆ.ಈಗ ಗದ್ದೆಯಲ್ಲಿ ನೀರು ನಿಲ್ಲಿಸಿ ಭತ್ತದ ಬೀಜ ಬಿತ್ತನೆಗೆ ಸಿದ್ಧತೆ ನಡೆಸಿದ್ದಾರೆ.

ಭತ್ತದ ಕೃಷಿಗೆ ಗದ್ದೆಯಿದ್ದರೂ ಮನಸ್ಸು ಮಾಡದಿರುವ ಪ್ರಸ್ತುತ ಕಾಲಮಾನದಲ್ಲಿ ಗುಡ್ಡೆ ಅಗೆದು ಭತ್ತ ಕೃಷಿ ಮಾಡಲು ಮುಂದಾಗಿರುವ ಸೋಮಪ್ಪ ಪೂಜಾರಿ ಅವರ ಈ ಕಾರ್ಯ ಎಲ್ಲರಿಗೂ ಪ್ರೇರಣೆ ಆಗಿದೆ.ಇಂತಹ ಚಟುವಟಿಕೆ ಎಲ್ಲೆಡೆ ನಡೆಯುವಂತಾಗಬೇಕು.

ಇತ್ತೀಚೆಗಿನ ವರ್ಷಗಳಲ್ಲಿ ಭತ್ತ ಕೃಷಿ ಮರೆಯಾಗುತ್ತಿರುವ ಸಂದರ್ಭದಲ್ಲಿ ಸೋಮಪ್ಪ ಪೂಜಾರಿಯವರು ಹೊಸತಾಗಿ ಗದ್ದೆ ನಿರ್ಮಿಸಿ ಭತ್ತ ಬೇಸಾಯ ಮಾಡುತ್ತಿರುವುದು ಶ್ಲಾಘನೀಯ. ನಾವೆಲ್ಲರೂ ಇವರ ಆದರ್ಶವನ್ನು ಅನುಸರಿಸಬೇಕಾಗಿದೆ.ಇಂತಹವರಿಗೆ ಸರಕಾರ ,ಕೃಷಿ ಇಲಾಖೆ ನೆರವು ನೀಡಬೇಕಿದೆ ಗಿರಿಶಂಕರ ಸುಲಾಯ,ಸದಸ್ಯರು ಸವಣೂರು ಗ್ರಾ.ಪಂ

ಮುಂದಿನ ದಿನಗಳಲ್ಲಿ ಅನ್ನಕ್ಕಾಗಿ ನಾವು ಭತ್ತದ ಕೃಷಿ ಮಾಡುವುದು ಅನಿವಾರ್ಯವಾಗಲಿದೆ.ವಾಣಿಜ್ಯ ಬೆಳೆಗಳಿಂದ ಆದಾಯಗಳಿಸಬಹುದು. ಆದರೆ ಉಣ್ಣಲು ಭತ್ತದ ಕೃಷಿಯೇ ಮೂಲ. ಈ ನಿಟ್ಟಿನಲ್ಲಿ ನಾನು ಗದ್ದೆ ನಿರ್ಮಿಸುವ ಕೆಲಸಕ್ಕೆ ಮುಂದಾಗಿದ್ದೇನೆ. ಗದ್ದೆ ನಿರ್ಮಾಣವಾಗಿದೆ ಕೆಲದಿನಗಳಲ್ಲೇ ಬಿತ್ತನೆ ಕಾರ್ಯ ಮಾಡಲಾಗುವುದು ಸೋಮಪ್ಪ ಪೂಜಾರಿ ಸಾರಕರೆ,ಪುಣ್ಚಪ್ಪಾಡಿ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.