ಆವರ್ತಕ ಕೋಷ್ಟಕದ 150ನೇ ವರ್ಷಾಚರಣೆ ಪ್ರಯುಕ್ತ ಫಿಲೋಮಿನಾ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ `ಸೊಕ್ಯೂಟ್’

Puttur_Advt_NewsUnder_1
Puttur_Advt_NewsUnder_1
  • ಆವರ್ತಕ ಕೋಷ್ಟಕದ ಉಗಮ ರಸಾಯನಶಾಸ್ತ್ರದ ಚರಿತ್ರೆಯಲ್ಲಿ ಮೈಲಿಗಲ್ಲು-ಡಾ|ಕೃಷ್ಣಕುಮಾರ್

ಪುತ್ತೂರು: ಆವರ್ತಕ ಕೋಷ್ಟಕವು ರಸಾಯನಶಾಸ್ರ್ರ ಆಭ್ಯಾಸಿಗಳಿಗೆ ನಕ್ಷೆಯಿದ್ದಂತೆ. ಈ ಕೋಷ್ಟಕದ ಮುಖಾಂತರ ಒಬ್ಬ ಸಾಮಾನ್ಯ ಮನುಷ್ಯನೂ ಸಹ ಪ್ರಕೃತಿಯಲ್ಲಿರುವ ಧಾತುಗಳ ಗುಣ ಸ್ವಭಾವಗಳನ್ನು ಸರಳವಾಗಿ ಅಭ್ಯಾಸ ಮಾಡುವುದಕ್ಕೆ ಸಾಧ್ಯವಿದೆ. ಆದುದರಿಂದ ಆವರ್ತಕ ಕೋಷ್ಟಕದ ಉಗಮ ರಸಾಯನಶಾಸ್ತ್ರದ ಚರಿತ್ರೆಯಲ್ಲಿ ಒಂದು ಮೈಲಿಗಲ್ಲಾಗಿದೆ ಎಂದು ಮುಖ್ಯ ಅತಿಥಿ, ಸಂತ ಫಿಲೋಮಿನಾ ಕಾಲೇಜಿನ ರಸಾಯನಶಾಸ್ರ್ರ ವಿಭಾಗದ ಮುಖ್ಯಸ್ಥ ಡಾ|ಪ್ರೊ|ಕೃಷ್ಣಕುಮಾರ್ ಪಿ.ಎಸ್‌ರವರು ಹೇಳಿದರು.

ಅವರು ನ.೭ ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕಾಲೇಜಿನ ರಜತ ಮಹೋತ್ಸವದ ಸಭಾಭವನದಲ್ಲಿ ಆವರ್ತಕ ಕೋಷ್ಟಕ ಅಂಶಗಳ ೧೫೦ನೇ ವರ್ಷಾಚರಣೆಯ ಸಂಭ್ರಮಕ್ಕೆ ಹಮ್ಮಿಕೊಂಡ ಜಿಲ್ಲಾ ಮಟ್ಟದ ಒಂದು ದಿನದ ಸಾಂಸ್ಕೃತಿಕ ಸ್ಪರ್ಧೆ `ಸೊಕ್ಯೂಟ್'( Sulphus-Oxygen-Copper-Tellureum) ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಅಂತರ್ರಾಷ್ಟ್ರೀಯ ಆವರ್ತಕ ಕೋಷ್ಕಕದ ವರ್ಷದಾಚರಣೆಯ ಸಂದರ್ಭದಲ್ಲಿ ಕೋಷ್ಟಕದ ನಿರ್ಮಾತೃ ಡಿಮಿಟ್ರಿ ಮೆಂಡಲಿಯವರನ್ನು ಸ್ಮರಿಸುವುದು ಹೆಚ್ಚು ಪ್ರಸ್ತುತ ಮತ್ತು ಅವರ ಜೀವನ ಚರಿತ್ರೆಯು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಬಲ್ಲುದು. ಕಡು ಬಡತನ ಮತ್ತು ಅನಾರೋಗ್ಯ ಹೊಂದಿದ್ದರೂ ಮೆಂಡಲಿಯವರು ಕಠಿಣ ಇಚ್ಚಾಶಕ್ತಿಯಿಂದ ಧಾತುಗಳ ಲೋಕದಲ್ಲಿ ಸಂಶೋಧನೆ ಕೈಗೊಂಡು ಆವರ್ತಕ ಕೋಷ್ಟಕ ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಯಿತು. ಅವರ ಆವರ್ತಕ ಕೋಷ್ಟಕದಲ್ಲಿ ಬರಿಯ ೬೩ ಧಾತುಗಳಿದ್ದರೂ ಸಂಶೋಧಿಸುವ ಧಾತುಗಳಿಗಾಗಿ ಮಧ್ಯೆ ಖಾಲಿ ಜಾಗಗಳನ್ನು ಉಳಿಸಿಕೊಂಡಿದ್ದರು ಎಂದ ಅವರು ಮೆಂಡಲಿಯವರ ಗೌರವಾರ್ಥ ಪರಮಾಣು ಸಂಖ್ಯೆ ೧೦೧ ನ್ನು ಹೊಂದಿರುವ ಧಾತುವನ್ನು ಆವಿಷ್ಜಾರ ಮಾಡಿದಾಗ ಅವನ್ನು ಮೆಂಡಲೀವಿಯಂ ಎಂದು ಹೆಸರಿಸಲಾಯಿತು. ಆವರ್ತಕ ಕೋಷ್ಟಕವನ್ನು ಪ್ರಮುಖವಾಗಿ ಮೆಂಡಲೀಯವರು ರಚಿಸಿದರೂ ಹಲವು ರಸಾಯನಶಾಸ್ತ್ರಜ್ಞರು ಈ ದಿಸೆಯಲ್ಲಿ ಪ್ರಯತ್ನಿಸಿದ್ದರು. ಅವರಲ್ಲಿ ಡೊಬೈನರ್, ನ್ಯೂಲೆಂಡ್, ಅಲೆಕ್ಸಾಂಡ್ರೆ, ಲೂಥರ್ ಮೇಯರ್ ಪ್ರಮುಖರು. ಇಂದಿನ ವಿಸ್ತೃತ ಆವರ್ತಕ ಕೋಷ್ಟಕವನ್ನು ಮೋಸ್ಲೆ ಎಂಬ ವಿಜ್ಞಾನಿ ೧೯೧೩ ರಲ್ಲಿ ರಚಿಸಿದ್ದರು. ಆ ಆವರ್ತಕ ಕೋಷ್ಟಕದ ಧಾತುವಿನ ಪರಮಾಣು ಸಂಖ್ಯೆಯನ್ನು ಆಧರಿಸಿ ರಚಿಸಿದ್ದಾಗಿದೆ ಎಂದು ಅವರು ಹೇಳಿದರು.

ಲೋಚನೆಗಳನ್ನು ಕೃತಿ ರೂಪಕ್ಕೆ ತಂದಾಗ ವಿಜ್ಞಾನದ ಪ್ರಗತಿ-ಪ್ರೊ|ಲಿಯೋ:
ಗೌರವ ಅತಿಥಿ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ|ಲಿಯೋ ನೊರೋನ್ಹಾರವರು ಮಾತನಾಡಿ, ಕಾಲೇಜಿನ ಕೆಮಿಸ್ಟ್ರಿ ವಿಭಾಗವು ಒಂದು ಉತ್ತಮ ಕಾರ್ಯವನ್ನೇ ಆಯೋಜಿಸಿದೆ. ಕೆಮಿಸ್ಟ್ರಿ ಎಂಬ ಪದವು ಅನೇಕ ಸಂದರ್ಭಗಳಲ್ಲಿ ನಾವು ನಮ್ಮ ಜೀವನದಲ್ಲಿ ಬಳಸುವುದುಂಟು. ಪಿಜಿ ಕೆಮಿಸ್ಟ್ರೀ ವಿದ್ಯಾರ್ಥಿಗಳು ತಮ್ಮ ಆತ್ಮೀಯರಿಗೆ ಕಾಗದ ಬರೆಯುವಾಗ ಕೊನೆಗೆ ಕೆಮಿಕಲ್ ಯುವರ್ಸ್, ಗಂಡ-ಹೆಂಡತಿ ಅನ್ನ್ಯೋನ್ಯವಾಗಿರುವಾಗ, ಅವರ ನಡುವಿನ ಕೆಮಿಸ್ಟ್ರೀ ಚೆನ್ನಾಗಿದೆ ಎಂಬುದಾಗಿ ಉಲ್ಲೇಖಿಸುವುದು ಮಾಮೂಲಿಯಾಗಿದೆ. ವಿಜ್ಞಾನ ಎಂಬುದು ಸತ್ಯ, ದೇವರು, ಎಲ್ಲರೂ ಒಂದೇ ಎಂಬುದಾಗಿ ವ್ಯಾಖ್ಯಾನಿಸಲ್ಪಡುತ್ತದೆ. ವಿಜ್ಞಾನ ಇತಿಹಾಸದಲ್ಲೇ ಎಂದಿಗೂ ಸೋಲಲಿಲ್ಲ. ಆಧುನಿಕ ಯುಗದಲ್ಲಿ ವಿಜ್ಞಾನ ಉತ್ತಮವಾಗಿ ಪ್ರಗತಿ ಹೊಂದಿದೆ ಎಂತಲೂ ಹೇಳಬಹುದು. ವಿಜ್ಞಾನ ಮೂಲಕ ಆದಂತಹ ಹಲವಾರು ಆವಿಷ್ಕಾರಗಳು ಸಮಾಜಕ್ಕೆ ಬಹಳಷ್ಟು ಕೊಡುಗೆಯನ್ನಾಗಿ ನೀಡಿದೆ ಎಂದರೆ ತಪ್ಪಾಗಲಾರದು. ನಾವೂ ಅಷ್ಟೆ, ನಮ್ಮೊಳಗೆ ಅಡಕವಾಗಿರುವ ಸುಂದರ ಅಲೋಚನೆಗಳನ್ನು ಧನಾತ್ಮಕವಾಗಿ ಅದನ್ನು ಕೃತಿ ರೂಪಕ್ಕೆ ತಂದಾಗ ವಿಜ್ಞಾನದ ಪ್ರಗತಿಯಾಗುತ್ತದೆ ಎಂದರು.

ನವ ತನ್ನ ಅಂತರ್ಯದಲ್ಲೂ ಸೋ-ಕ್ಯೂಟ್ ಎನಿಸಿಕೊಳ್ಳಬೇಕು-ವಂ|ಆಲ್ಫ್ರೆಡ್:
ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ವಂ|ಆಲ್ಫ್ರೆಡ್ ಜಾನ್ ಪಿಂಟೋರವರು ಮಾತನಾಡಿ, ಮನುಷ್ಯನ ಚಿಂತನೆಗಳು ಒಂದೇ ಪ್ರಕಾರದಲ್ಲಿ ಇರುವುದಿಲ್ಲ. ನೈಸರ್ಗಿಕ ಪ್ರಪಂಚದಲ್ಲಿ ಮಾನವನ ಚಿಂತನೆಗಳಲ್ಲಿ ಬಹಳ ವ್ಯತ್ಯಾಸಗಳಿರುತ್ತವೆ. ವೈಜ್ಞಾನಿಕ ಯುಗದಲ್ಲಿ ಮಾನವ ತನ್ನ ಜೀವನದಲ್ಲಿ ಮೂಲಭೂತ ಗುಣಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಮಾನವ ಶಾರೀರಿಕವಾಗಿ, ಸಾಮಾಜಿಕವಾಗಿ, ಭಾವನಾತ್ಮಕವಾಗಿ, ನೀತಿಯುವಾಗಿ ಅಭಿವೃದ್ಧಿ ಹೊಂದಬೇಕಾಗುತ್ತದೆ ಜೊತೆಗೆ ಮಾನವ ತನ್ನ ಅಂತರ್ಯದಲ್ಲೂ ಸೋ-ಕ್ಯೂಟ್ ಎನಿಸಿಕೊಳ್ಳುವತ್ತ ಸಾಗಬೇಕು ಎಂದರು.

ಹೊಸತನದ ಆವಿಷ್ಕಾರ ಸಮಾಜಕ್ಕೆ ಸಿಗುವಂತಾಗಲಿ-ವಂ|ವಿಜಯ್:
ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ| ವಿಜಯ್ ಲೋಬೋರವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನಿ ಡಿಮಿಟ್ರಿ ಮೆಂಡಲಿವ್‌ರವರ ಆವರ್ತಕ ಕೋಷ್ಟಕ ಅಂಶಗಳ ಆವಿಷ್ಕಾರವನ್ನು ಇಂದು ನಮ್ಮ ಕಾಲೇಜಿನ ಕೆಮಿಸ್ಟ್ರೀ ವಿಭಾಗವು ಬಹಳ ಉತ್ತಮ ರೀತಿಯಲ್ಲಿ ಆಯೋಜಿಸಿದೆ. ಈ ಕಾರ್ಯಕ್ರಮದ ಹೆಸರೇ ಸೂಚಿಸುವಂತೆ ನಮ್ಮ ವಿದ್ಯಾರ್ಥಿಗಳೂ ಕೂಡ ‘ ಸೋಕ್ಯೂಟ್’ ಎನಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ತಾವು ಆರಿಸಿಕೊಂಡ ವಿಷಯಗಳ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡು ತಮ್ಮಿಂದ ಹೊಸತನದ ಆವಿಷ್ಕಾರ ಸಮಾಜಕ್ಕೆ ಸಿಗುವಂತಾಗಲಿ ಎಂದರು.

ಆಯಾ ಕ್ಷೇತ್ರಗಳಲ್ಲಿನ ವಿವಿಧ ಪ್ರಕಾರಗಳು ಜೀವನದ ಯಶಸ್ವಿಗೆ ಅನ್ವಯ-ವಂ|ಡಾ|ಆಂಟನಿ:
ಗೌರವ ಅತಿಥಿ, ಕಾಲೇಜಿನ ಕ್ಯಾಂಪಸ್ ಇನ್-ಚಾರ್ಜ್ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿರುವ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಮಾತನಾಡಿ, ವಿಜ್ಞಾನಿ ಡಿಮಿಟ್ರಿರವರು ೧೮೬೯ ರಲ್ಲಿ ಪ್ರತಿಪಾದಿಸಿದ ಕೇವಲ ೬೯ ಆವರ್ತ ಕೋಷ್ಟಕಗಳು ಇಂದು ೧೧೮ ಕ್ಕೆ ತಲುಪಿದೆ. ಅಷ್ಟರಮಟ್ಟಿಗೆ ವಿಜ್ಞಾನ ಅಭಿವೃದ್ಧಿಯಾಗಿದೆ. ವಿಜ್ಞಾನ ಕ್ಷೇತ್ರವು ಹಿಂದಿನ ಕಾಲದಿಂದ ಇಂದಿನ ಕಾಲದವರೆಗೆ ಅನೇಕ ಆಶ್ಚರ್ಯ ಸೃಷ್ಟಿಸಿದೆ ಎನ್ನುವುದು ಸಾರ್ವಕಾಲಿಕ ಸತ್ಯ. ನಾವು ನಮ್ಮಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಂಡು ಆವಿಷ್ಕಾರಗಳನ್ನು ಮಾಡಲು ಮುಂದಡಿಯಿಡಬೇಕಾಗಿದೆ. ವಿಜ್ಞಾನ ಅಥವಾ ಇತರ ಯಾವುದೇ ಕ್ಷೇತ್ರವಿರಲಿ, ಆಯಾ ಕ್ಷೇತ್ರಗಳಲ್ಲಿನ ವಿವಿಧ ಪ್ರಕಾರಗಳು ನಮ್ಮ ಜೀವನದ ಯಶಸ್ವಿಗೆ ಅನ್ವಯವಾಗುತ್ತೆ ಎಂದರು.

ತನ್ವಿ ಮತ್ತು ಬಳಗ ಪ್ರಾರ್ಥಿಸಿದರು. ರಸಾಯನಶಾಸ್ತ್ರ(ಕೆಮಿಸ್ಟ್ರೀ) ವಿಭಾಗದ ಉಪನ್ಯಾಸಕರಾದ ಪ್ರಶಾಂತ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಸಹ-ಸಂಯೋಜಕಿ ದಿವ್ಯ ಸ್ವಾಗತಿಸಿ, ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ಮತ್ತೋರ್ವೆ ಸಹ-ಸಂಯೋಜಕಿ ಜಯಲಕ್ಷ್ಮೀ ಕಾರ್ಯಕ್ರಮದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ಕ್ಯಾಲಿನ್ ಡಿ’ಸೋಜ, ವಿದ್ಯಾರ್ಥಿಗಳಾದ ಸುಧನ್ವ ಶ್ಯಾಂ, ಮಹಮ್ಮದ್ ಸುಲ್ತಾನ್, ರಿಯೋನ್ನಾ ಡಿ’ಸೋಜ ಅತಿಥಿಗಳಿಗೆ ಹೂಗುಚ್ಚ ನೀಡಿ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕಿ ಹಾಗೂ ಉಪನ್ಯಾಸಕಿ ಅಶ್ವಿನಿ ಕೆ ವಂದಿಸಿ, ಉಪನ್ಯಾಸಕ ಸಂತೋಷ್ ಕ್ಲ್ಯಾರೆನ್ಸ್ ಡಿ’ಸೋಜ ಕಾರ್ಯಕ್ರಮ ನಿರೂಪಿಸಿದರು.

೮ ಸ್ಪರ್ಧೆಗಳು, ೮೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು…
ವಿದ್ಯಾರ್ಥಿಗಳ ಜ್ಞಾನ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಕಾರ್ಯಕ್ರಮದಲ್ಲಿ ಕೆಮ್ ನಾಚ್, ಕೆಮ್ ಕೊಲಾಮ್, ಟೆಂಪ್ಲೇಟ್ಸ್, ಮೊಕ್ ಪ್ರೆಸ್, ಇಂಟರ್‍ಯಾಕ್ಟಿವ್ ಕೆಮಿಸ್ಟ್ರೀ, ಮೆಮೋರಿ ಟೆಸ್ಟ್, ಸ್ಪಾಟ್ ಫೊಟೋಗ್ರಾಫಿ, ಫೇಸ್ ಪೈಂಟಿಂಗ್ ಹೀಗೆ ಎಂಟು ಸ್ಪರ್ಧೆಗಳನ್ನು ಸಂಘಟಕರು ಆಯೋಜಿಸಿದ್ದರು. ಬೆಟ್ಟಂಪಾಡಿ ಸರಕಾರಿ ಪಿಯು ಕಾಲೇಜು, ಕೆನರಾ ಪಿಯು ಕಾಲೇಜು ಮಂಗಳೂರು, ಶಾರದಾ ಪಿಯು ಕಾಲೇಜು, ಇಂದ್ರಪ್ರಸ್ಥ ಉಪ್ಪಿನಂಗಡಿ, ವಿವೇಕಾನಂದ ಪುತ್ತೂರು, ಅಂಬಿಕಾ ನೆಲ್ಲಿಕಟ್ಟೆ, ಕುಂಬ್ರ ಸರಕಾರಿ ಪಿಯು ಕಾಲೇಜು, ಬಂಟ್ವಾಳ ಎಸ್.ವಿ.ಎಸ್ ಪಿಯು ಕಾಲೇಜು, ನೆಹರು ಮೆಮೋರಿಯಲ್ ಪಿಯು ಕಾಲೇಜು ಸುಳ್ಯ ಹೀಗೆ ೮ ಕಾಲೇಜುಗಳಿಂದ ಸುಮಾರು ೮೦ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜ್ಞಾನಿ ಡಿಮಿಟ್ರಿ ಮೆಂಡೆಲಿವ್ ಆವಿಷ್ಕರಿಸಿದ ಆವರ್ತಕ ಕೋಷ್ಟಕಗಳ ಮೂಲಭೂತ ಅಂಶಗಳ ೧೧೮ ಮೂಲ ಧಾತುಗಳ ಪೂರ್ಣ ಸಂಗ್ರಹವನ್ನು ಅಣು ಸಂಖ್ಯೆಗಳ ಮೂಲಕ ವಿದ್ಯಾರ್ಥಿಗಳು ಕೆಮಿಸ್ಟ್ರೀ ವಿಭಾಗ ಉಪನ್ಯಾಸಕರ ಮಾರ್ಗದರ್ಶನದೊಂದಿಗೆ ಪ್ರದರ್ಶನ ಮಾಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.