ಪುತ್ತೂರು: ಇಲ್ಲಿನ ಕೋರ್ಟು ರಸ್ತೆಯ ಶ್ರೀ ಸತ್ಯಸಾಯಿ ಮಂದಿರದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿ ಪುತ್ತೂರು, ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್ ಪುತ್ತೂರು ಮತ್ತು ಸುಳ್ಯ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಸಹಯೋಗದಲ್ಲಿ ನಡೆಯುವ ಉಚಿತ ದಂತ ಚಿಕಿತ್ಸಾ ಶಿಬಿರದ ೨೧ನೇ ಕ್ಯಾಂಪ್ ದ.1ರಂದು ನಡೆಯಿತು.
ಶ್ರೀ ಸತ್ಯಸಾಯಿ ಸಂಸ್ಥೆಗಳ ಜಿಲ್ಲಾಧ್ಯಕ್ಷ, ಶ್ರೀರಾಮ ಕನ್ಸ್ಟ್ರಕ್ಷನ್ಸ್ ಮ್ಹಾಲಕ ಇಂಜಿನಿಯರ್ ಪ್ರಸನ್ನ ಎನ್. ಭಟ್ ಪಂಚವಟಿ ಅವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿದ್ದ ಕೆ.ವಿ.ಜಿ. ದಂತ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಶಿವಾನಂದರವರು ಮಾತನಾಡಿ, ಇದು ಪುತ್ತೂರು ಸತ್ಯಸಾಯಿ ಮಂದಿರದಲ್ಲಿ ನಡೆಯುತ್ತಿರುವ ನಮ್ಮ ಕಾಲೇಜಿನ ೨೧ನೇ ಕ್ಯಾಂಪ್. ಇಲ್ಲಿ ಉತ್ತಮ ರೀತಿಯಲ್ಲಿ ಶಿಬಿರ ನಡೆಯುತ್ತದೆ. ಇಲ್ಲಿ ನಡೆದ ಕ್ಯಾಂಪ್ನ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದರು. ಶಿಬಿರದ ಮೂಲಕ ಹೆಚ್ಚಿನ ಚಿಕಿತ್ಸೆಗೆ ಸುಳ್ಯಕ್ಕೆ ಬಂದವರಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಇತರರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದು ಹೇಳಿದ ಅವರು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ವೇದಿಕೆಯಲ್ಲಿ ಬೈಂದೂರು ಪ್ರಭಾಕರ ರಾವ್ ಮೆಮೋರಿಯಲ್ ಟ್ರಸ್ಟ್ನ ಅಧ್ಯಕ್ಷ ಡಾ. ಸತ್ಯಸುಂದರ ರಾವ್ ಉಪಸ್ಥಿತರಿದ್ದರು. ಪದ್ಮನಾಭ ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಘುನಾಥ ರೈ ವಂದಿಸಿದರು.