Home_Page_Advt
Home_Page_Advt

ಕಲ್ಲಂದಡ್ಕ ಶೂಟೌಟ್ ಪ್ರಕರಣ: ಕಸ್ಟಡಿಯಲ್ಲಿದ್ದ ಪ್ರಮುಖ ಆರೋಪಿ ಸಾದಿಕ್ ವಿಚಾರಣೆ 

Puttur_Advt_NewsUnder_1
Puttur_Advt_NewsUnder_1

ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ವಶ-ಸಂಚು ರೂಪಿಸಿದ ವೇಳೆ ಜೊತೆಗಿದ್ದ ಆರೋಪಿ ಗುರುಪ್ರಸನ್ನ ರಾವ್ ಬಂಧನ

ಪುತ್ತೂರು: ಕೊಡಿಪಾಡಿ ಗ್ರಾಮದ ಕಲ್ಲಂದಡ್ಕದಲ್ಲಿ ನ.26ರಂದು ಮುಸ್ಸಂಜೆ ವೇಳೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿರುವ ಪ್ರಮುಖ ಆರೋಪಿ ಸಾದಿಕ್ ಅಲಿಯಾಸ್ ಬ್ಲೇಡ್ ಸಾಧಿಕ್ ಅಲಿಯಾಸ್ ಹಸನ್ ಸಾದಿಕ್ ವಿಚಾರಣೆ ವೇಳೆ ನೀಡಿದ ಮಹತ್ವದ ಸುಳಿವಿನಂತೆ ಕೃತ್ಯಕ್ಕೆ ನಡೆಸುವ ಮುನ್ನ ಆತನ ಜೊತೆಯಲ್ಲಿ ಹೊಟೇಲ್‌ನಲ್ಲಿ ಸಂಚು ರೂಪಿಸುವ ಸಂದರ್ಭ ಇದ್ದ ಆರೋಪಿಯೊಬ್ಬನನ್ನು ಪೊಲೀಸರು ಡಿ.1ರಂದು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಪಿಸ್ತೂಲ್‌ನ್ನು ವಶಕ್ಕೆ ಪಡೆದು ಕೊಂಡಿದ್ದಾರೆ.

ಬಂಟ್ವಾಳ ತಾಲೂಕು ಕೋಳ್ನಾಡು ಗ್ರಾಮದ ಸಾಲೆತ್ತೂರು ಗುರುಮುಕುಂಡ ದಿ. ಈಶ್ವರಚಂದ್ರ ರಾವ್ ಅವರ ಪುತ್ರ ಗುರುಪ್ರಸನ್ನ ರಾವ್(೨೮ವ) ಬಂಧಿತ ಆರೋಪಿ. ನ.೨೬ರಂದು ಮುಸ್ಸಂಜೆ ವೇಳೆ ಕೊಡಿಪಾಡಿ ಗ್ರಾಮದ ಕಲ್ಲಂದಡ್ಕ ನಿವಾಸಿ ಅಹಮ್ಮದ್ ಕುಂಞಿಯವರ ಪುತ್ರ ಕೆ.ಅಬ್ದುಲ್ ಖಾದರ್ (೩೬ ವ.)ರವರ ಮೇಲೆ ಅವರ ಮನೆ ಸಮೀಪವೇ ತಂಡದೊಂದಿಗೆ ಕಾರಿನಲ್ಲಿ ಬಂದ ಬ್ಲೇಡ್ ಸಾದಿಕ್ ಎರಡು ಸುತ್ತು ಗುಂಡುಹಾರಿಸಿ ಪರಾರಿಯಾಗಿದ್ದ ಘಟನೆಗೆ ಸಂಬಂಧಿಸಿ ಪ್ರಮುಖ ಆರೋಪಿ ಸಾದಿಕ್ ಯಾನೆ ಬ್ಲೇಡ್ ಸಾದಿಕ್ ಯಾನೆ ಹಸನ್‌ಸಾದಿಕ್‌ನನ್ನು ಡಿಸಿಐಬಿ ಮತ್ತು ಪುತ್ತೂರು ಡಿವೈಎಸ್ಪಿ ಅವರ ನೇತೃತ್ವದ ತಂಡ ನ.೨೯ರಂದು ಮಡಿಕೇರಿಯ ಗಾಳಿಬೀಡುವಿನಲ್ಲಿ ಬಂಧಿಸಿದ್ದು, ಬಂಧಿತ ಆರೋಪಿಯನ್ನು ನ.೩೦ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅರೋಪಿಯಿಂದ ಕೃತ್ಯಕ್ಕೆ ಬಳಸಿದ ರಿವಾಲ್ವರ್ ವಶಪಡಿಸಿ ಕೊಳ್ಳಬೇಕಾಗಿರುವುದರಿಂದ ಮತ್ತು ಹೆಚ್ಚಿನ ತನಿಖೆ ನಡೆಸಬೇಕಾಗಿದೆ ಎಂದು ಆರೋಪಿಯನ್ನು ಪೊಲೀಸ್ ಕಸ್ಟಡಿಗೆ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಲಯ ಆರೋಪಿಗೆ ೨ ದಿನದ ಪೊಲೀಸ್ ಕಸ್ಟಡಿಯನ್ನು ನೀಡಿತ್ತು.

ಕೃತ್ಯಕ್ಕೆ ಸಂಚು ರೂಪಿಸಿದ ವೇಳೆ ಜೊತೆಗಿದ್ದ ಆರೋಪಿ ಬಂಧನ: ಕಲ್ಲಂದಡ್ಕದ ಅಬ್ದುಲ್ ಖಾದರ್ ಅವರ ಮೇಲೆ ಗುಂಡು ಹಾರಾಟ ಮಾಡುವ ಕುರಿತು ಆರೋಪಿ ಬ್ಲೇಡ್ ಸಾದಿಕ್, ಕುಕ್ಕಿಬೆಟ್ಟು ನೀರ್ಕಜೆ ನಿವಾಸಿ ಹನೀಫ್ ಅಲಿಯಾಸ್ ಜೋಗಿ ಹನೀಫ್ ತನ್ನ ಸಹಚರರ ಜೊತೆ ವಿಟ್ಲದ ಹೊಟೇಲೊಂದರಲ್ಲಿ ಪ್ಲಾನ್ ಮಾಡಿರುವುದಾಗಿ ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಬ್ಲೇಡ್ ಸಾದಿಕ್ ತಿಳಿಸಿದ ಮಾಹಿತಿ ಮೇರೆಗೆ ನ.೩೦ರಂದು ಪೊಲೀಸರು ಬೆಳಿಗ್ಗೆ ಆರೋಪಿಯನ್ನು ವಿಟ್ಲದ ಹೊಟೇಲ್ ಸಮೀಪ ಕರೆದುಕೊಂಡು ಹೋಗಿ ಇನ್ನಷ್ಟು ವಿಚಾರಣೆ ನಡೆಸಿದ್ದಾರೆ. ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ವೇಳೆ ಗುರುಪ್ರಸನ್ನ ರಾವ್ ತನ್ನ ಜೊತೆಗಿದ್ದರು ಎಂದು ಆರೋಪಿ ಬ್ಲೇಡ್ ಸಾದಿಕ್ ಮಾಹಿತಿ ನೀಡಿದಂತೆ ಪೊಲೀಸರು ಗುರುಪ್ರಸನ್ನ ರಾವ್ ಅವರನ್ನು ಡಿ.೧ರಂದು ಇಡ್ಕಿದು ಸಮೀಪ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗೆ ಡಿ.೧೧ರ ತನಕ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಕೃತ್ಯಕ್ಕೆ ಬಳಸಿದ ಪಿಸ್ತೂಲ್ ವಶಕ್ಕೆ: ಕಲ್ಲಂದಡ್ಕದ ಅಬ್ದುಲ್ ಖಾದರ್ ಅವರ ಮೇಲೆ ಗುಂಡು ಹಾರಾಟಕ್ಕೆ ಬಳಸಿದ್ದ ಪಿಸ್ತೂಲ್‌ನ್ನು ಡಿ.೧ರಂದು ವಶಕ್ಕೆ ಪಡೆದುಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರು ಟಯರ್ ಪಂಕ್ಚರ್ ಆದ ಸ್ಥಳಕ್ಕೆ ಹೋಗಿ ಅಲ್ಲಿಂದ ಆರೋಪಿ ಸೂಚಿಸಿದಂತೆ ನೆಕ್ಕಿಲಾಡಿ ಗ್ರಾಮದ ಆನೆಬೈಲ್ ಕುಡ್ತಪಳ್ಕೆ ಎಂಬಲ್ಲಿ ಗುಡ್ಡದ ಬದಿಯ ತೋಡಿನಲ್ಲಿರುವ ಮರದ ಬೇರುಗಳ ಪೊದೆಯಲ್ಲಿ ಅಡಗಿಸಿ ಇಡಲಾಗಿದ್ದ ಪಿಸ್ತೂಲ್‌ನ್ನು ಆರೋಪಿ ಬ್ಲೇಡ್ ಸಾದಿಕ್ ಉಪಸ್ಥಿತಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಾರಿದ್ದು ಒಂದೇ ಗುಂಡು: ಗಾಯಾಳು ಕಲ್ಲಂದಡ್ಕದ ಅಬ್ದುಲ್ ಖಾದರ್ ಅವರ ಹೇಳಿಕೆಯಂತೆ ಎರಡು ಗುಂಡು ಹಾರಾಟ ನಡೆದಿದ್ದು, ಒಂದು ನನ್ನ ಎದೆಗೆ ಮತ್ತೊಂದು ಗುಂಡು ಹಣೆಯ ಬದಿಯಿಂದ ಸವರಿಕೊಂಡು ಹೋಗಿದೆ ಎಂದು ಹೇಳಲಾಗಿತ್ತು. ಆದರೆ ಪಿಸ್ತೂಲ್‌ನ್ನು ಪರಿಶೀಲಿಸಿದಾಗ ಒಂದೇ ಗುಂಡು ಹಾರಿಸಲಾಗಿದ್ದು, ಅದರ ಎಮ್ಟಿ ಕೇಸ್ ಪಿಸ್ತೂಲ್‌ನಲ್ಲೇ ಬಾಕಿಯಾಗಿ ಜಾಮ್ ಆಗಿತ್ತು. ಒಂದು ಜೀವಂತ ಬುಲ್ಲೆಟ್ ಪಿಸ್ತೂಲ್‌ನಲ್ಲೇ ಉಳಿದಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್ ನೇತೃತ್ವದಲ್ಲಿ ತನಿಖೆ ಕಾರ್ಯ ಮುಂದುವರಿದಿದ್ದು, ಇನ್ನುಳಿದ ಆರೋಪಿಗಳಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಬ್ಲೇಡ್ ಸಾಧಿಕ್‌ನನ್ನು ಪೊಲೀಸರು ಡಿ.೨ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.