ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಶಾಲಾ ಬಾವಿಗೆ ವಿಷ ಶಂಕೆ: 7 ಮಕ್ಕಳು ಅಸ್ವಸ್ಥ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಶಾಲಾ ಆವರಣದಲ್ಲಿದ್ದ ತೆರೆದ ಬಾವಿಯ ನೀರು ಕುಡಿದ ೮ ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಸರಕಾರಿ ಉನ್ನತೀಕರಿಸಿದ ಹಿ.ಪ್ರಾ.ಶಾಲೆಯಲ್ಲಿ ದ.೨ರಂದು ಬೆಳಿಗ್ಗೆ ನಡೆದಿದೆ. ಘಟನೆಯಲ್ಲಿ ತೀವ್ರ ಅಸ್ವಸ್ಥಗೊಂಡಿರುವ ನಾಲ್ಕು ವಿದ್ಯಾರ್ಥಿಗಳು ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದ ನಾಲ್ಕು ವಿದ್ಯಾರ್ಥಿಗಳು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾವಿಯ ಪಕ್ಕದಲ್ಲೇ ಆಸಿಡ್ ಕ್ಯಾನ್ ಪತ್ತೆಯಾಗಿದ್ದು ಇದರಲ್ಲಿದ್ದ ಆಸಿಡ್‌ನ್ನು ನೀರಿಗೆ ಬೆರೆಸಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಶಾಲೆಯ ೮ನೇ ತರಗತಿಯ ವಿದ್ಯಾರ್ಥಿಗಳಾದ ಸುದೀಶ್(೧೪ವ.), ಯೋಗೀಶ್(೧೪ವ.), ರಾಜೇಶ್(೧೪ವ.), ರಾಧಾಕೃಷ್ಣ(೧೪ವ.), ೭ನೇ ತರಗತಿಯ ವಿದ್ಯಾರ್ಥಿಗಳಾದ ಚೇತನ್(೧೩ವ.), ಮೋನಿಷ್(೧೩ವ.)ಹಾಗೂ ೬ನೇ ತರಗತಿಯ ವಿದ್ಯಾರ್ಥಿಗಳಾದ ಸುದೀಪ್(೧೨ವ.), ಶ್ರವಣ್(೧೩ವ)ಎಂಬವರು ಬಾವಿಯ ನೀರು ಕುಡಿದು ಅಸ್ವಸ್ಥಗೊಂಡವರಾಗಿದ್ದಾರೆ. ಈ ಪೈಕಿ ತೀವ್ರ ಅಸ್ವಸ್ಥಗೊಂಡಿರುವ ಸುದೀಶ್, ಸುದೀಪ್, ಚೇತನ್‌ಕುಮಾರ್ ಹಾಗೂ ಯೋಗೀಶ್ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಉಳಿದ ನಾಲ್ವರು ವಿದ್ಯಾರ್ಥಿಗಳು ಬೆಳ್ತಂಗಡಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳೆಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಘಟನೆ ವಿವರ:
ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳು ಬೆಳಿಗ್ಗೆ ೯ ಗಂಟೆ ವೇಳೆಗೆ ಶಾಲೆಗೆ ಬಂದಿದ್ದು ಶಾಲೆಯ ಆವರಣದಲ್ಲಿರುವ ತೆರೆದ ಬಾವಿಯ ನೀರನ್ನು ಪಂಪ್‌ನ ಸಹಾಯದಿಂದ ಪೈಪ್ ಮೂಲಕ ಗಾರ್ಡ್‌ನ್‌ನಲ್ಲಿರುವ ಗಿಡಗಳಿಗೆ ಹಾಕಿ, ಶಾಲೆಯ ಕುಡಿಯುವ ನೀರಿನ ಡ್ರಮ್‌ಗೂ ತುಂಬಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ಪೈಪ್‌ನಲ್ಲಿ ಬಂದ ನೀರನ್ನು ಕುಡಿದಿದ್ದಾರೆ. ನೀರು ಕುಡಿದ ಕೆಲ ಹೊತ್ತಿನಲ್ಲೇ ನಾಲ್ವರು ವಿದ್ಯಾರ್ಥಿಗಳಿಗೆ ಹೊಟ್ಟೆನೋವು ಕಾಣಿಸಿಕೊಂಡು ವಾಂತಿ ಮಾಡಲು ಆರಂಭಿಸಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಸುದೀಶ್, ಸುದೀಪ್, ಚೇತನ್‌ಕುಮಾರ್ ಹಾಗೂ ಯೋಗೀಶ್‌ರನ್ನು ಶಾಲೆಯ ಮುಖ್ಯಶಿಕ್ಷಕಿ ಶಾರದಾ ಹಾಗೂ ಇತರೇ ಶಿಕ್ಷಕರು ತಕ್ಷಣ ೧೦೮ ಆಂಬುಲೆನ್ಸ್‌ನಲ್ಲಿ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅಲ್ಲಿನ ವೈದ್ಯರ ಸಲಹೆಯಂತೆ ಆಂಬುಲೆನ್ಸ್‌ನಲ್ಲಿಯೇ ನಾಲ್ವರು ಮಕ್ಕಳನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ವೆನ್‌ಲಾಕ್‌ನಲ್ಲಿ ಬೆಡ್ ಲಭ್ಯವಿಲ್ಲದೇ ಇದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ. ಮುಖ್ಯಶಿಕ್ಷಕಿ ಶಾರದಾರವರು ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗಳ ಜೊತೆಯಲ್ಲಿಯೇ ಇದ್ದು ಆರೋಗ್ಯದ ಮೇಲೆ ನಿಗಾ ಇಟ್ಟಿದ್ದಾರೆ.

ಮತ್ತೆ ನಾಲ್ವರು ಅಸ್ವಸ್ಥ:
ಹೊಟ್ಟೆನೋವು ಹಾಗೂ ವಾಂತಿಯಿಂದ ತೀವ್ರ ಬಳಲಿದ್ದ ನಾಲ್ವರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆ ಶಾಲೆಯಲ್ಲಿ ಮತ್ತೆ ನಾಲ್ವರು ವಿದ್ಯಾರ್ಥಿಗಳಾದ ಶ್ರವಣ್, ರಾಜೇಶ್, ರಾಧಾಕೃಷ್ಣ ಹಾಗೂ ಮೋನಿಸ್‌ರವರ ಆರೋಗ್ಯದಲ್ಲೂ ಏರುಪೇರು ಕಾಣಿಸಿಕೊಂಡು ಹೊಟ್ಟೆನೋವು, ವಾಂತಿ ಮಾಡಲಾರಂಭಿಸಿದ್ದಾರೆ. ಬಳಿಕ ಇವರನ್ನು ಸಹ 108 ಆಂಬುಲೆನ್ಸ್‌ನಲ್ಲಿ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ತಪಾಸಣೆಗೊಳಪಡಿಸಿದ ಬಳಿಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಆಸಿಡ್ ಖ್ಯಾನ್ ಪತ್ತೆ:
ಬಾವಿಯ ನೀರು ಕುಡಿದ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವುದು ಬೆಳಕಿಗೆ ಬರುತ್ತಿದ್ದಂತೆ ಶಾಲೆಯ ಶಿಕ್ಷಕರು ಬಾವಿಯ ನೀರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾವಿಯ ಪಕ್ಕದಲ್ಲಿ ರಬ್ಬರ್ ಶೀಟ್‌ಗೆ ಬಳಸುವ ಆಸಿಡ್‌ನ ಕ್ಯಾನ್ ಪತ್ತೆಯಾಗಿದೆ. ಅಲ್ಲದೇ ಬಾವಿಯ ನೀರು ಒಂದು ರೀತಿಯ ಕೆಟ್ಟ ವಾಸನೆಯಿಂದ ಕೂಡಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಯಾರೋ ಕಿಡಿಗೇಡಿಗಳು ನೀರಿಗೆ ಆಸಿಡ್ ಬೆರೆಸಿರುವ ಸಾಧ್ಯತೆ ಎಂದು ಹೇಳಲಾಗಿದೆ. ಬಾವಿಗೆ ನೆಟ್ ಅಳವಡಿಸಲಾಗಿದೆ. ಆದಿತ್ಯವಾರ ಶಾಲೆಗೆ ರಜೆ ಇದ್ದು ಈ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿರುವ ಸಾಧ್ಯತೆ ಇದೆ. ಆದರೆ ಪೊಲೀಸ್ ತನಿಖೆಯಿಂದಲೇ ಇದು ದೃಢಪಡಬೇಕಾಗಿದೆ.

ಪೊಲೀಸರಿಂದ ತನಿಖೆ:
ಘಟನೆ ಕುರಿತಂತೆ ಶಾಲಾ ಶಿಕ್ಷಕರು ನೀಡಿದ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆ ಉಪ ನಿರೀಕ್ಷಕ ಓಡಿಯಪ್ಪ ಗೌಡರವರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ. ಬಾವಿಯ ನೀರನ್ನು ಆರು ಬಾಟಲಿಗಳಲ್ಲಿ ತುಂಬಿಸಿ ಹಾಗೂ ಬಾವಿ ಪಕ್ಕದ ಬಿದ್ದಿದ್ದ ಖಾಲಿ ಕ್ಯಾನನ್ನೂ ಪರೀಕ್ಷೆಗಾಗಿ ಕಳಿಸಲಾಗುವುದು. ಇದರ ಪರೀಕ್ಷೆಯ ರಿಸಲ್ಟ್ ಬಂದ ಬಳಿಕವೇ ಬಾವಿಯ ನೀರು ಉಪಯೋಗಿಸುವಂತೆ ಪೊಲೀಸರು ಶಾಲಾ ಶಿಕ್ಷಕರುಗಳಿಗೆ ಸೂಚಿಸಿದರು.

ಕ್ರಮಕ್ಕೆ ಪೋಷಕರ ಆಗ್ರಹ:
ಶಾಲೆಯ ಬಾವಿಯ ನೀರು ಕುಡಿದು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವುದು ಸುದ್ದಿಯಾಗುತ್ತಿದ್ದಂತೆ ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ಶಾಲೆಗೆ ಆಗಮಿಸಿ ಬಾವಿಯ ನೀರು ಪರಿಶೀಲನೆ ನಡೆಸಿದರು. ಘಟನೆ ಹಿನ್ನೆಲೆಯಲ್ಲಿ ಎಸ್‌ಡಿಎಂಸಿ, ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಜೊತೆ ಪೊಲೀಸರು ಶಾಲೆಯಲ್ಲಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಮಕ್ಕಳು ಕುಡಿಯಲು ಉಪಯೋಗಿಸುವ ಬಾವಿಯ ನೀರಿಗೆ ವಿಷ ಬೆರೆಸಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ. ಈ ವೇಳೆ ಗ್ರಾಮಸ್ಥರನ್ನು ಸಮಾಧಾನಪಡಿಸಿದ ಧರ್ಮಸ್ಥಳ ಠಾಣೆ ಉಪನಿರೀಕ್ಷಕ ಓಡಿಯಪ್ಪ ಗೌಡರವರು, ದುಷ್ಕರ್ಮಿಗಳ ಪತ್ತೆಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಶಾಲೆಯಲ್ಲಿ ಈ ಹಿಂದೆ ಕುಡಿಯುವ ನೀರಿನ ಪೈಪ್‌ಗಳನ್ನು ಅನೇಕ ಬಾರಿ ಒಡೆದು ಹಾಕಿರುವ ಪ್ರಕರಣ ನಡೆದಿದ್ದು ಇಲಾಖೆಗೆ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಪ್ರಕರಣದ ಕೂಲಂಕುಷ ತನಿಖೆ ನಡೆಸಿ ಅಪರಾಧಿಗಳನ್ನು ಪತ್ತೆ ಮಾಡಲಾಗಿದೆ. ಗ್ರಾಮಸ್ಥರು ತಮಲ್ಲಿ ಲಭ್ಯವಿರುವ ಮಾಹಿತಿಗಳನ್ನೂ ಪೊಲೀಸರಿಗೆ ನೀಡಿದಲ್ಲಿ ಅಪರಾಧಿಗಳ ಪತ್ತೆಗೆ ಸಹಕಾರಿಯಾಗಲಿದೆ. ಶಾಲೆಯ ಆವರಣದಲ್ಲಿ ಇಂತಹ ಕೃತ್ಯಗಳು ನಡೆಯುತ್ತಲೇ ಇರುವುದರಿಂದ ಶಾಲಾ ಆವರಣಕ್ಕೆ ಸಿಸಿ ಕ್ಯಾಮೆರಾವನ್ನೂ ಅಳವಡಿಸಲು ಎಸ್‌ಡಿಎಂಸಿಯವರು ಮುಂದಾಗಬೇಕೆಂದು ಉಪನಿರೀಕ್ಷಕ ಓಡಿಯಪ್ಪ ಗೌಡರವರು ಸಲಹೆ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ವೆಂಕಪ್ಪ ಗೌಡ, ಶಿಬಾಜೆ ಗ್ರಾ.ಪಂ.ಅಧ್ಯಕ್ಷೆ ಸುಶೀಲ, ಗ್ರಾ.ಪಂ.ಸದಸ್ಯರುಗಳಾದ ರಮೇಶ್ ಗೌಡ ಕುರುಂಜ, ಪೈಲಿ, ಊರ ಪ್ರಮುಖರಾದ ಕೃಷ್ಣಪ್ಪ ಗೌಡ ಬೇಂಗಳ, ಪುರಂದರ ರಾವ್ ಊರ್ತಾಜೆ, ಪ್ರೇಮಚಂದ್ರ ರಾವ್, ರತೀಶ್ ಗೌಡ ಶಿಬಾಜೆ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ಜನಪ್ರತಿನಿಧಿ/ಅಧಿಕಾರಿಗಳ ಭೇಟಿ:
ನೆಲ್ಯಾಡಿ ಕ್ಷೇತ್ರದ ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ಕಡಬ ಕ್ಷೇತ್ರದ ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ಬೆಳ್ತಂಗಡಿ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಅಕ್ಷರ ದಾಸೋಹದ ಸುರೇಶ್, ಶಿಕ್ಷಣ ಸಂಯೋಜಕ ಜಾಧವ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಭುವನೇಶ್ ಸೇರಿದಂತೆ ಹಲವು ಮಂದಿ ಘಟನೆ ಹಿನ್ನೆಲೆಯಲ್ಲಿ ಶಾಲೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಬೆಳಿಗ್ಗೆ ಗಾರ್ಡನ್‌ಗೆ ಪೈಪ್‌ನಲ್ಲಿ ನೀರು ಹಾಕುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪೈಪ್‌ನಲ್ಲಿ ಬಂದ ನೀರು ಕುಡಿದಿದ್ದಾರೆ. ನೀರು ಕುಡಿದು ತೀವ್ರ ಅಸ್ವಸ್ಥಗೊಂಡಿರುವ ನಾಲ್ವರು ವಿದ್ಯಾರ್ಥಿಗಳನ್ನು ತಕ್ಷಣ ಆಂಬುಲೆನ್ಸ್‌ನಲ್ಲಿ ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ದಾಖಲಿಸಿದ್ದೇವೆ. ಮತ್ತೆ ಅಸ್ವಸ್ಥಗೊಂಡ ನಾಲ್ವರು ವಿದ್ಯಾರ್ಥಿಗಳನ್ನು ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶಾಲೆಯ ಬಾವಿಯ ಪಕ್ಕ ಹಳದಿ ಬಣ್ಣದ ರಬ್ಬರ್ ಶೀಟ್‌ಗೆ ಬಳಕೆ ಮಾಡುವ ಆಸಿಡ್‌ನ ಕ್ಯಾನ್ ಪತ್ತೆಯಾಗಿದೆ. ಘಟನೆಗೆ ನಿಖರ ಕಾರಣ ಪೊಲೀಸ್ ತನಿಖೆಯಿಂದಲೇ ತಿಳಿಯಬೇಕಾಗಿದೆ –  ಶಾರದಾ ಮುಖ್ಯಶಿಕ್ಷಕರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.