ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಮಹೋತ್ಸವ-ಬ್ರಹ್ಮರಥೋತ್ಸವ: ನೂತನ ಬ್ರಹ್ಮರಥ ಸಮರ್ಪಣೆ-ಹರಿದು ಬಂದ ಭಕ್ತಸಾಗರ

Puttur_Advt_NewsUnder_1
Puttur_Advt_NewsUnder_1
  • ನೂತನ ಬ್ರಹ್ಮರಥ ಸಮರ್ಪಣೆ-ಅಪೂರ್ಣ ಕ್ಷಣವನ್ನು ಕಣ್ತುಂಬಿಕೊಂಡ ಸಾವಿರಾರು ಭಕ್ತರು

ಕಡಬ: ನಾಡಿನ ಪ್ರಸಿದ್ದ ಪುಣ್ಯ ಕ್ಷೇತ್ರವಾಗಿರುವ ಕಡಬ ತಾಲೂಕಿನ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಪ್ರಧಾನ ದಿನವಾದ ಕಾರ್ತಿಕ ಶುದ್ಧ ಷಷ್ಠಿಯ ದಿನವಾದ ಸೋಮವಾರ ಮುಂಜಾನೆ ದೇಶದ ನಾನಾ ಭಾಗಗಳಿಂದ ಆಗಮಿಸಿದ ಭಕ್ತಜನ ಸಾಗರದ ಸಮ್ಮುಖದಲ್ಲಿ ನೂತನ ಬ್ರಹ್ಮರಥದಲ್ಲಿ ಭಕ್ತಿ ಸಂಭ್ರಮದ ಚಂಪಾಷಷ್ಠಿ ಮಹಾರಥೋತ್ಸವ ನಡೆಯಿತು. ಬೆಳಗ್ಗೆ ೮.೧೪ರ ಧನುರ್ ಲಗ್ನ ಸುಮುಹೂರ್ತದಲ್ಲಿ ಶ್ರೀ ಕುಕ್ಕೆಸುಬ್ರಹ್ಮಣ್ಯ ದೇವರು ಬ್ರಹ್ಮರಥಾರೂಢರಾದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಉತ್ಸವದ ವಿವಿಧ ವೈಧಿಕ ವಿದಿ ವಿಧಾನ ನೆರವೇರಿಸಿದರು. ಶ್ರದ್ದಾ ಭಕ್ತಿಯಿಂದ ಭಕ್ತರು ಶ್ರೀ ದೇವರ ಮಹಾರಥವನ್ನು ಎಳೆದರು.

ಸಹಸ್ರಾರು ಭಕ್ತಾಧಿಗಳ ಪರಾಕುಗಳ ನಡುವೆ ನೂತನ ಬ್ರಹ್ಮರಥವು ರಾಜಗಾಂಭೀರ್ಯದಿಂದ ರಥಬೀದಿಯಲ್ಲಿ ಮುನ್ನಡೆಯಿತು. ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಬ್ರಹ್ಮರಥೋತ್ಸವ ಸೇವೆಯನ್ನು ಈ ಬಾರಿ ಸುಮಾರು ೯೯ ಭಕ್ತರು ಸಲ್ಲಿಸಿದ್ದರು. ಬ್ರಹ್ಮರಥೋತ್ಸವ ಸೇವೆ ಸಲ್ಲಿಸಿದ ಭಕ್ತರಿಗೆ ರಥ ಎಳೆಯಲು ಅನುಕೂಲವಾಗುವಂತೆ ವಿಶೇಷ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ರಥೋತ್ಸವದ ವೇಳೆ ಸಹಸ್ರಾರು ಭಕ್ತರು ಶ್ರೀ ದೇವರ ವೈಭವದ ರಥೋತ್ಸವ ವೀಕ್ಷಿಸಿ ಕೃತಾರ್ಥರಾದರು. ಅಲ್ಲದೆ ಕಾಣಿಕೆ, ಕಾಳುಮೆಣಸು, ಏಲಕ್ಕಿ, ಸಾಸಿವೆ ಮೊದಲಾದ ಧಾನ್ಯಗಳನ್ನು ರಥಕ್ಕೆ ಎಸೆದರು.

ಮೊದಲು ದೇವಳದ ಹೊರಾಂಗಣದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಉಮಾಮಹೇಶ್ವರ ದೇವರ ಪಾಲಕಿ ಉತ್ಸವ ನೆರವೇರಿತು. ಆನಂತರ ರಾಜಬೀದಿಯಲ್ಲಿ ನಾಗಸ್ವರ, ಪಂಚವಾದ್ಯ, ಬ್ಯಾಂಡ್, ಜಾಗಟೆ, ಶಂಖ ವಾದ್ಯ ಮತ್ತು ಚೆಂಡೆ ವಾದನಗಳ ಹಿಮ್ಮೇಳದಲ್ಲಿ ಸಾಲಾಂಕೃತ ಆನೆ, ಬಿರುದಾವಳಿ, ಭಕ್ತಜನರ ಜಯಘೋಷದ ನಡುವೆ ಬೆಳಗ್ಗೆ ೮.೧೪ರ ಧನುರ್ ಲಗ್ನ ಸುಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯು ಬ್ರಹ್ಮರಥಾರೂಢರಾದರು. ಪಂಚಮಿ ರಥದಲ್ಲಿ ಉಮಾಮಹೇಶ್ವರ ದೇವರು ಆಸೀನರಾದರು.

ತದನಂತರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾ ಮಂಗಳಾರತಿ ನೆರವೇರಿತು. ನಂತರ ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಶ್ರೀದೇವರಿಗೆ ಸುವರ್ಣವೃಷ್ಠಿಗೈದರು. ಬಳಿಕ ಭಕ್ತಾದಿಗಳಿಗೆ ಧನ, ಕನಕ, ಹೂವು, ಫಲವಸ್ತು ಪ್ರಸಾದಗಳನ್ನು ರಥದಿಂದ ಭಕ್ತರತ್ತ ಎಸೆದರು. ಭಕ್ತಾಧಿಗಳು ನಾಣ್ಯ, ಕಾಳುಮೆಣಸು, ಸಾಸಿವೆಗಳನ್ನು ರಥಕ್ಕೆ ಎಸೆದರು. ಬಳಿಕ ಪ್ರಥಮವಾಗಿ ಪಂಚಮಿ ರಥೋತ್ಸವ ನೆರವೇರಿತು. ನಂತರ ಭಕ್ತ ಜನರ ಜಯಘೋಷದೊಂದಿಗೆ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ಮಹಾರಥೋತ್ಸವ ನಡೆಯಿತು. ವರ್ಷದಲ್ಲಿ ಒಂದು ಬಾರಿ ಮಾತ್ರ ಎಳೆಯುವ ಮಹಾರಥೋತ್ಸವವನ್ನು ಮತ್ತು ಬ್ರಹ್ಮರಥಾರೂಢರಾದ ಶ್ರೀ ದೇವರ ದರುಶನವನ್ನು ಸಹಸ್ರಾರು ಭಕ್ತಾದಿಗಳು ಪಡೆದರು. ಭಕ್ತಿ ಮತ್ತು ಸಡಗರದ ಸಮ್ಮಿಲನದಲ್ಲಿ ರಥಬೀದಿಯಲ್ಲಿ ಸಾಗಿ ಬಂದ ರಾಜಗಂಭೀರ್‍ಯದ ಬ್ರಹ್ಮರಥವು ಭಕ್ತರ ಭಯಭಕ್ತಿಯ ಸಮ್ಮಿಶ್ರದ ನಡುವೆ ಸುಸಂಪನ್ನವಾಯಿತು. ಗೋಪುರದಿಂದ ರಾಜಬೀದಿಯ ಕೊನೆಯ ತನಕ ಮಹಾರಥವು ನಿರಂತರವಾಗಿ ಸಾಗಿ ಬಂತು. ಅಲ್ಲದೆ ರಾಜಬೀದಿಯಿಂದ ಶ್ರೀ ದೇವಳದತ್ತ ಆಗಮಿಸುವಾಗ ಕೂಡಾ ಯಾವುದೇ ತಡೆಯಿಲ್ಲದೆ ಸರಾಗವಾಗಿ ಚಲಿಸಿ ರಥವು ಸ್ವಸ್ಥಾನವನ್ನು ತಲುಪಿತು. ಈ ಸಂದರ್ಭದಲ್ಲಿ ದೇವಳದ ಆನೆ ಯಶಸ್ವಿ ರಥ ಬೀದಿಯಲ್ಲಿ ನಡೆದಾಡಿ ಬಳಿಕ ರಥಕ್ಕೆ ಪ್ರದಕ್ಷಿಣೆ ಬಂದಿತು, ಬ್ರಹ್ಮರಥವನ್ನು ಎಳೆಯುವ ಸಂದರ್ಭದಲ್ಲಿ ಹಿಂದಿನಿಂದ ರಥವನ್ನು ದೂಡುವ ಮೂಲಕ ರಥೋತ್ಸವಕ್ಕೆ ಸಹಕಾರ ನೀಡಿತು.

ರಥೋತ್ಸವದ ಬಳಿಕ ಉಮಾಮಹೇಶ್ವರ ಹಾಗೂ ಸುಬ್ರಹ್ಮಣ್ಯ ದೇವರಿಗೆ ಷಷ್ಠಿ ಕಟ್ಟೆಯಲ್ಲಿ ವಿಶೇಷ ಪೂಜೆ ನೆರವೇರಿತು. ಆ ನಂತರ ಬ್ರಹ್ಮರಥೋತ್ಸವ ನೆರವೇರಿಸಿ ಬಂದ ಸ್ವಾಮಿಯ ಪಲ್ಲಕಿಗೆ ಗೋಪುರದ ದ್ವಾರದ ಬಳಿ ಶಾಲು ಕಟ್ಟುವ ಮೂಲಕ ನಿವಾಳಿ ಸಮರ್ಪಿಸಲಾಯಿತು. ಅಲ್ಲದೆ ಶ್ರೀ ದೇವಳದ ಆಡಳಿತಾಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಮತ್ತು ಕಾರ್ಯನಿರ್ವಹಣಾಧಿಕಾರಿಯಾಗಿರುವ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ| ಯತೀಶ್ ಉಳ್ಳಾಲ್ ಅವರಿಗೆ ಪ್ರಧಾನ ಅರ್ಚಕರು ಹೂವಿನ ಪ್ರಸಾದವನ್ನು ನೀಡಿದರು.

ಬಳಿಕ ದೇವಳದ ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಮಯೂರ ವಾಹನದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಮತ್ತು ಉಮಾಮಹೇಶ್ವರ ದೇವರಿಗೆ ಪೂಜೆ ನಡೆಯಿತು. ಶ್ರೀ ದೇವರು ಗರ್ಭಗುಡಿಗೆ ಪ್ರವೇಶಿಸಿದ ನಂತರ ಪ್ರಧಾನ ಅರ್ಚಕ ಸೀತಾರಾಮ ಎಡಪಡಿತ್ತಾಯರು ಮೂಲಪ್ರಸಾದ ವಿತರಿಸಿದರು. ಬ್ರಹ್ಮರಥ ಹರಕೆ ಸೇವೆ ಸಲ್ಲಿಸಿದವರಿಗೆ ಪ್ರಧಾನ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು. ಇತರ ಭಕ್ತರಿಗೆ ಶ್ರೀ ದೇವಳದ ಅರ್ಚಕರಾದ ರಾಮಕೃಷ್ಣ ನೂರಿತ್ತಾಯ, ರಾಜೇಶ್ ನಡ್ಯಂತಿಲ್ಲಾಯ ಮತ್ತು ಸತ್ಯನಾರಾಯಣ ನೂರಿತ್ತಾಯ ಪ್ರಸಾದ ವಿತರಿಸಿದರು.

ಈ ಸಂದರ್ಭದಲ್ಲಿ ಹೈಕೋರ್ಟ್ ನ್ಯಾಯಾಧೀಶ ಸತ್ಯನಾರಾಯಣ, ಪುತ್ತೂರು ಶಾಸಕ ಸಂಜೀವ ಮಠಂದೂರು, ಕುಕ್ಕೆ ದೇವಳದ ಆಡಳಿತಾಧಿಕಾರಿ ಎಂ.ಜೆ.ರೂಪಾ, ಕಾರ್ಯನಿರ್ವಹಣಾಧಿಕಾರಿ ಡಾ| ಯತೀಶ್ ಉಳ್ಳಾಲ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಬ್ರಹ್ಮರಥದ ದಾನಿಗಳಲ್ಲಿ ಓರ್ವರಾದ ಅಜಿತ್ ಶೆಟ್ಟಿ ಕಡಬ, ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ, ಸಹೋದರರಾದ ದಿವಾಕರ ರೈ ದೇರ್ಲ, ಕರುಣಾಕರ ರೈ ದೇರ್ಲ, ಕೆಯ್ಯೂರು ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಡಾ.ಸ್ವಪ್ನಾ ಅಜಿತ್ ಶೆಟ್ಟಿ, ಚಂದ್ರಹಾಸ ಶೆಟ್ಟಿ, ಸಂಜೀವ ಶೆಟ್ಟಿ, ಲೀಲಾ.ಎಸ್.ಶೆಟ್ಟಿ, ಅಮಿತಾ ಚಂದ್ರಹಾಸ ಶೆಟ್ಟಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ರಥ ಎಳೆಯಲಾದ ಬೆತ್ತ ದೇವಳಕ್ಕೆ ವಾಪಾಸು: ಈ ಹಿಂದೆ ಬ್ರಹ್ಮರಥ ಎಳೆದ ಬೆತ್ತವನ್ನು ರಥ ಎಳೆದ ಭಕ್ತರಿಗೆ ನೀಡಲಾಗುತ್ತಿತ್ತು. ಇದರಿಂದಾಗಿ ರಥ ಎಳೆದ ತಕ್ಷಣ ಬೆತ್ತಕ್ಕಾಗಿ ಭಕ್ತರು ನೂಕು ನುಗ್ಗಲು ಮಾಡುತ್ತಿದ್ದರು. ಇದನ್ನು ತಪ್ಪಿಸಲು ಮತ್ತು ಶ್ರೀ ದೇವಳಕ್ಕೆ ಸಾಕಷ್ಟು ಬೆತ್ತವು ಮಹಾಪ್ರಸಾದದಲ್ಲಿ ನೀಡಲು ಅವಶ್ಯಕವಿದ್ದುದರಿಂದ ರಥ ಎಳೆಯಲು ಉಪಯೋಗಿಸಿದ ಎಲ್ಲಾ ಬೆತ್ತವನ್ನು ಶ್ರೀ ದೇವಳಕ್ಕೆ ಕೊಂಡೊಯ್ಯಲಾಯಿತು. ಇದರಿಂದಾಗಿ ಅನಾವಶ್ಯಕ ಗೊಂದಲಕ್ಕೆ ಕಡಿವಾಣ ಬಿತ್ತು. ಬ್ರಹ್ಮರಥ ಎಳೆದ ಬೆತ್ತವು ಅಪೂರ್ವವಾದ ಸ್ಥಾನವನ್ನು ಪಡೆದಿದೆ. ಈ ಬೆತ್ತವನ್ನು ಭಕ್ತರು ತುಂಡು ಮಾಡಿ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿದ್ದರು. ದೇವಳದಲ್ಲಿ ನಡೆಯುವ ಸೇವೆಗಳಿಗೆ ಕೊಡುವ ಮಹಾಪ್ರಸಾದದಲ್ಲಿ ಬೆತ್ತದ ತುಂಡನ್ನು ನೀಡಲಾಗುತ್ತಿದೆ. ಇದೀಗ ಕ್ಷೇತ್ರದಲ್ಲಿ ದಾಖಲೆಯ ಸೇವೆಗಳು ನೆರವೇರುವುದರಿಂದ ಪ್ರಸಾದದಲ್ಲಿ ಉಪಯೋಗಿಸಲು ಬೆತ್ತ ಕಡಿಮೆಯಾಗಬಾರದು ಎಂಬ ಕಾರಣದಿಂದ ಹಾಗೂ ಭಕ್ತರಲ್ಲಿ ಬೆತ್ತಕ್ಕಾಗಿ ಪೈಪೋಟಿ ನಡೆಯಬಾರದು ಎಂದು ಈ ಬಾರಿ ರಥ ಎಳೆದ ಎಲ್ಲಾ ಬೆತ್ತವನ್ನು ಶ್ರೀ ದೇವಳವೇ ಪಡೆಯಿತು.

ಮಳೆಯ ಸಿಂಚನ: ರಥೋತ್ಸವದ ಮೊದಲು ಕುಕ್ಕೆ ಕ್ಷೇತ್ರದಲ್ಲಿ ಹನಿ ಮಳೆಯ ಸಿಂಚನವಾಗಿತ್ತು. ರಥೋತ್ಸವದ ಬಳಿಕ ಹೊರಾಂಗಣದಲ್ಲಿನ ಷಷ್ಠಿ ಕಟ್ಟೆಯಲ್ಲಿ ಶ್ರೀ ದೇವರು ಪೂಜೆ ಸ್ವೀಕರಿಸಿ ಒಳಾಂಗಣ ಪ್ರವೇಶಿಸಿದ ನಂತರ ಮಳೆಯ ಆಗಮನವಾಯಿತು. ಮಧ್ಯಾಹ್ನ ನಂತರ ಶ್ರೀ ಕ್ಷೇತ್ರದಲ್ಲಿ ನಿರಂತರವಾಗಿ ಸಾಧಾರಣ ಮಳೆ ಸುರಿಯಿತು. ಪಂಚಮಿ ದಿನ ರಾತ್ರಿ ಕೂಡಾ ಮಳೆಯಾಗಿತ್ತು. ಆದರೆ ರಾತ್ರಿ ಶ್ರೀ ದೇವರ ಉತ್ಸವ ಮತ್ತು ರಥೋತ್ಸವದ ಸಂದರ್ಭದಲ್ಲಿ ಮಳೆ ಬಂದಿರಲಿಲ್ಲ. ಇದು ಶ್ರೀ ದೇವರ ಸಂಪ್ರೀತತೆಯ ಸಂಕೇತ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಸುದ್ದಿ ಯೂಟ್ಯೂಬ್ ಚಾನೆಲ್‌ನಲ್ಲಿ ಕಾರ್‍ಯಕ್ರಮದ ನೇರಪ್ರಸಾರ ವ್ಯವಸ್ಥೆ ಮಾಡಲಾಗಿತ್ತು.


ಮುತ್ತಪ್ಪ ರೈ ದೇರ್ಲ, ಅಜಿತ್ ಶೆಟ್ಟಿ ಕಡಬ ಕೊಡುಗೆಯ ನೂತನ ಬ್ರಹ್ಮರಥ ಸಮರ್ಪಣೆ
ಉದ್ಯಮಿ ಎನ್.ಮುತ್ತಪ್ಪ ರೈ ದೇರ್ಲ ಮತ್ತು ಯುವ ಉದ್ಯಮಿ ಅಜಿತ್ ಶೆಟ್ಟಿ ಕಡಬ ಅವರು ಸುಮಾರು ರೂ.೨.೫೦ ಕೋಟಿ ವೆಚ್ಚದಲ್ಲಿ ದಾನವಾಗಿ ನೀಡಿದ ನೂತನ ಬ್ರಹ್ಮರಥವನ್ನು ಭಕ್ತ ಜನಸಾಗರದ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ಅರ್ಪಿಸಲಾಯಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಶ್ರೀ ದೇವರ ಮುಂಭಾಗದಲ್ಲಿ, ಭಕ್ತಿ ಪೂರ್ವಕವಾಗಿ ಕಾಣಿಕೆಯಾಗಿ ನೀಡುವ ಬ್ರಹ್ಮರಥವನ್ನು ಸ್ವೀಕರಿಸಬೇಕೆಂದು ದೇವರಲ್ಲಿ ಪ್ರಾರ್ಥಿಸಿದರು. ಬಳಿಕ ಬ್ರಹ್ಮರಥದ ದಾನಿಗಳಾದ ಉದ್ಯಮಿ ಎನ್.ಮುತ್ತಪ್ಪ ರೈ ದೇರ್ಲ ಅವರ ಪುತ್ರ ರಿಕ್ಕಿ ರೈ ಮತ್ತು ಯುವ ಉದ್ಯಮಿ ಅಜಿತ್ ಶೆಟ್ಟಿ ಕಡಬ ಬ್ರಹ್ಮಾರ್ಪಣೆ ಬಿಡುವ ಮೂಲಕ ನೂತನ ಬ್ರಹ್ಮರಥವನ್ನು ಶ್ರೀ ದೇವಳಕ್ಕೆ ಅರ್ಪಿಸಿದರು. ನೂತನ ಬ್ರಹ್ಮರಥಕ್ಕೆ ಈ ಬಾರಿ ಪ್ರಥಮ ಜಾತ್ರೆಯಾಗಿದ್ದು ಇದು ಕುಕ್ಕೆ ಕ್ಷೇತ್ರದಲ್ಲಿ ನವ ಇತಿಹಾಸ ನಿರ್ಮಿಸಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.