Home_Page_Advt
Home_Page_Advt
Home_Page_Advt
Breaking News

ಪುತ್ತೂರು ನಗರಸಭೆಯ ಪೈಪ್‌ಲೈನ್ ಕಾಮಗಾರಿಗೆ ರೈತರ ತಡೆ ಪಿಡಬ್ಲ್ಯೂಡಿ ಬಾಕಿ ಇರಿಸಿದ ಭೂ ಒತ್ತುವರಿಯ ಪರಿಹಾರ ನೀಡಲು ಆಗ್ರಹ

ಉಪ್ಪಿನಂಗಡಿ: ರಸ್ತೆ ಅಭಿವೃದ್ಧಿಗಾಗಿ ಭೂ ಒತ್ತುವರಿ ಮಾಡಿಕೊಂಡಾಗ ಪರಿಹಾರ ಧನ ನೀಡುವ ಭರವಸೆ ನೀಡಿ ಮತ್ತೆ ಪರಿಹಾರ ಧನ ನೀಡದೇ ವಂಚಿಸಿರುವ ಬಗ್ಗೆ ಆಕ್ರೋಶಗೊಂಡ ರೈತರು ತಾವು ರಸ್ತೆಗಾಗಿ ನೀಡಿರುವ ಜಾಗದಲ್ಲಿ ಅಂದಿನ ಪರಿಹಾರ ಧನ ನೀಡದೇ ಪುತ್ತೂರು ನಗರಸಭೆಗೆ ಪೈಪ್‌ಲೈನ್ ಅಳವಡಿಸಲು ಬಿಡುವುದಿಲ್ಲ ಎಂದು ಕಾಮಗಾರಿಗೆ ತಡೆಯೊಡ್ಡಿದ ಘಟನೆ ಶುಕ್ರವಾರ ಕೋಡಿಂಬಾಡಿಯಲ್ಲಿ ನಡೆದಿದೆ.

34 ನೆಕ್ಕಿಲಾಡಿ ಗ್ರಾ.ಪಂ. ವ್ಯಾಪ್ತಿಯ ಕುಮಾರಧಾರ ನದಿಯಿಂದ ಪುತ್ತೂರು ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ಪೂರೈಕೆಗೆ ಇದೀಗ ಜಲಸಿರಿ ಯೋಜನೆಯಡಿ ನೂತನ ಪೈಪ್‌ಲೈನ್ ಅಳವಡಿಸುವ ಕಾಮಗಾರಿ ನಡೆಯುತ್ತಿದ್ದು, ಕೋಡಿಂಬಾಡಿಯಲ್ಲಿ ಇದರ ಕಾಮಗಾರಿ ನಡೆಸುವುದಕ್ಕೆ ರೈತರು ಅವಕಾಶ ನೀಡದೇ ತಡೆಯೊಡ್ಡಿದರು. ಈ ಸಂದರ್ಭ ಸ್ಥಳಕ್ಕೆ ಬಂದ ಜಲಸಿರಿ ಯೋಜನೆಯ ಕಾರ್ಯಕಾರಿ ಅಭಿಯಂತರ ಅಶೋಕ್ ಅವರಲ್ಲಿ ಮಾತನಾಡಿದ ಕೋಡಿಂಬಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ೨೦೧೬ರಲ್ಲಿ ಕೋಡಿಂಬಾಡಿ ಗ್ರಾ.ಪಂ. ಬಳಿಯಿಂದ ವಿನಾಯಕನಗರದವರೆಗೆ 900 ಮೀ. ರಸ್ತೆ ವಿಸ್ತರಣಾ ಕಾಮಗಾರಿಗೆ ಆಗ ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿಯವರು 2.20 ಕೋ. ರೂ. ಅನುದಾನ ಒದಗಿಸಿದ್ದರು. ಆಗ ರಸ್ತೆ ವಿಸ್ತರಣೆಗೆ ವಾರಿಜ ಮೋನಪ್ಪ ಶೆಟ್ಟಿ, ವೀರಪ್ಪ ನಾಯ್ಕ ಪರಬಪಾಲು, ರಮೇಶ್ ಶಿವನಿಲಯ, ಕುಮಾರನಾಥ ಪಲ್ಲತ್ತಾರು ಸೇರಿದಂತೆ ಇಲ್ಲಿನ ಕೆಲವು ರೈತರು ನಮ್ಮ ಮನವೊಲಿಕೆಗೆ ಮಣಿದು ತಮ್ಮ ವರ್ಗ ಜಮೀನನ್ನು ರಸ್ತೆ ಅಭಿವೃದ್ಧಿಗಾಗಿ ಬಿಟ್ಟು ಕೊಟ್ಟಿದ್ದರು. ಇವರು ನೀಡಿದ ಜಮೀನಿಗೆ ಲೋಕೋಪಯೋಗಿ ಇಲಾಖೆಯು ಪರಿಹಾರ ನೀಡುವುದಾಗಿ ತಿಳಿಸಿತ್ತಲ್ಲದೇ, ಹಣದ ಮಾನದಂಡವನ್ನೂ ನಿಗದಿಗೊಳಿಸಿತ್ತು. ಆದರೆ ಕಾಮಗಾರಿ ನಡೆದು ಮೂರು ವರ್ಷ ಕಳೆದರೂ ಪರಿಹಾರ ನೀಡದೇ ರೈತರನ್ನು ಲೋಕೋಪಯೋಗಿ ಇಲಾಖೆ ವಂಚಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಭೂ ಒತ್ತುವರಿಗೆ ಪರಿಹಾರ ಧನ ನೀಡದ ಹೊರತು ಯಾವುದೇ ಕಾರಣಕ್ಕೂ, ರೈತರಿಂದ ಲೋಕೋಪಯೋಗಿ ಇಲಾಖೆಯವರು ಒತ್ತುವರಿ ಮಾಡಿಕೊಂಡ ಈ ಜಾಗದಲ್ಲಿ ನಗರ ಸಭೆಯ ಪೈಪ್‌ಲೈನ್ ಕಾಮಗಾರಿ ನಡೆಸಲು ಅವಕಾಶ ನೀಡುವುದಿಲ್ಲ ಎಂದರು.

ಜಲಸಿರಿ ಯೋಜನೆಯ ಕಾರ್ಯಕಾರಿ ಅಭಿಯಂತರ ಅಶೋಕ್ ಮಾತನಾಡಿ, ಲೋಕೋಪಯೋಗಿ ಇಲಾಖೆಯವರು ತೋರಿಸಿದ ಜಾಗದಲ್ಲಿ ನಾವು ಕಾಮಗಾರಿಗೆ ಮುಂದಾಗಿವೆ. ಪರಿಹಾರ ಧನ ನೀಡುವುದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದರು. ಆಗ ಪಟ್ಟು ಬಿಡದ ರೈತರು ಈ ಜಾಗ ಈಗ ನಮ್ಮ ಹೆಸರಲ್ಲಿಯೇ ಇದೆ. ಆದ್ದರಿಂದ ಭೂ ಒತ್ತುವರಿಗೆ ಪರಿಹಾರ ಧನ ನೀಡಿದ ಬಳಿಕವೇ ನಾವು ಕಾಮಗಾರಿಗೆ ಅವಕಾಶ ನೀಡುತ್ತೇವೆ ಎಂದು ಪಟ್ಟು ಹಿಡಿದರು.
ರೈತರು ಅಧಿಕಾರಿಗಳ ಮಾತಿಗೆ ಮಣಿಯದಿದ್ದಾಗ ಕೊನೆಗೂ ಕಾಮಗಾರಿಯನ್ನು ಸ್ಥಗಿತಗೊಳಿಸಿದರಲ್ಲದೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಬಂದು ಮಾತುಕತೆ ನಡೆಸುವ ಭರವಸೆ ನೀಡಿ ಅಲ್ಲಿಂದ ತೆರಳಿದರು.

ಈ ಸಂದರ್ಭ ಅಧಿಕಾರಿಗಳಾದ ಜಲಸಿರಿ ಯೋಜನೆಯ ಕನ್ಸಲ್ಟೆಂಟ್ ಪ್ರಕಾಶ್ ಬಿ., ಸಹಾಯಕ ಅಭಿಯಂತರ ವಿಜಯಾನಂದ, ನಗರಸಭೆ ಸಹಾಯಕ ಎಂಜಿನಿಯರ್ ವಸಂತ ಬಿ., ಕೋಡಿಂಬಾಡಿ ಗ್ರಾಮಕರಣಿಕ ಚಂದ್ರನಾಯ್ಕ್ ಸ್ಥಳಕ್ಕಾಗಮಿಸಿದ್ದರು. ಪ್ರತಿಭಟನೆಯಲ್ಲಿ ಗ್ರಾ.ಪಂ. ಸದಸ್ಯ ಜಗನ್ನಾಥ ಶೆಟ್ಟಿ ನಡುಮನೆ, ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರೂಪೇಶ್ ರೈ ಅಲಿಮಾರ್, ಉಲ್ಲಾಸ್ ಕೋಟ್ಯಾನ್ ಪಲ್ಲತ್ತಾರು, ಜಯಪ್ರಕಾಶ್ ಬದಿನಾರು, ಸೀತಾರಾಮ ಶೆಟ್ಟಿ ಹೆಗ್ಡೆ ಹಿತ್ಲು, ವಿಕ್ರಮ್ ಶೆಟ್ಟಿ ಅಂತರ, ಯೋಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕುಮಾರನಾಥ ಎಸ್. ಪಲ್ಲತ್ತಾರು, ಯತೀಶ್ ಶೆಟ್ಟಿ ಬರಮೇಲು, ವೀರಪ್ಪ ನಾಯ್ಕ ಪರಬಪಾಲು, ಮುಹಮ್ಮದ್ ಕೋಡಿಂಬಾಡಿ, ಅದ್ರಾಮ ಕೋಡಿಂಬಾಡಿ ಮತ್ತಿತರರು ಉಪಸ್ಥಿತರಿದ್ದರು.

ಪರಿಹಾರ ಕೊಡಲು ನಾವು ರೆಡಿ: ಜಮೀನಿಗೆ ಪರಿಹಾರ ನೀಡುವ ಕಡತ ಇನ್ನೂ ಕಂದಾಯ ಇಲಾಖೆಯಲ್ಲಿದೆ. ಜಮೀನಿಗೆ ಸಂಬಂಧಿಸಿದ ಸಮರ್ಪಕ ದಾಖಲೆಗಳನ್ನು ಜಮೀನುದಾರರು ನೀಡಿದ ಬಳಿಕ ಜಿಲ್ಲಾಧಿಕಾರಿಗಳು ಪರಿಹಾರ ದರ ನಿಗದಿಪಡಿಸಿದ ಬಳಿಕ ಪರಿಹಾರ ಕೊಡಲು ನಾವು ಸಿದ್ಧರಿzವೆ ಎಂದು ಪಿಡಬ್ಲ್ಯೂಡಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.