Home_Page_Advt
Home_Page_Advt
Breaking News

ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿ ಕೋಟಿ ಚೆನ್ನಯರ ‘ಕುಲದೈವೋ ನಾಗಬೆರ್ಮೆರ್’ ಕ್ಷೇತ್ರ

ಜ್ಯೋತಿಪ್ರಕಾಶ್ ಪುಣಚ

  • ಅವಳಿ ವೀರರ ಜನ್ಮಭೂಮಿ ಪಡುಮಲೆಯಲ್ಲಿ ಕುಲದೇವರ ಆರಾಧನೆ ಆರಂಭ
  • ಶ್ರೀ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಸಾರಥ್ಯ
ಮಣ್ಣಿನ ಅಡಿಯಲ್ಲಿ ಪತ್ತೆಯಾದ ಕೋಟಿ-ಚೆನ್ನಯರ ಆರಾಧಿಸುತ್ತಿದ್ದ ನಾಗ ಪ್ರತಿಮೆಗಳು

ಪುತ್ತೂರು : ತುಳುನಾಡಿನ ಜನಮನದಲ್ಲಿ ಐತಿಹಾಸಿಕ ವೀರ ಅವಳಿ ಸಹೋದರರೆಂದು ಆರಾಧನೆಯಾಗುತ್ತಿರುವ ದೈವತ್ವ ಶಕ್ತಿಗಳಾದ ಕೋಟಿ ಚೆನ್ನಯರ ಜನ್ಮಸ್ಥಳ ಪಡುಮಲೆ ಕ್ಷೇತ್ರದಲ್ಲಿ, ಅವರು `ಕುಲದೈವೋ ಬ್ರಮ್ಮ’ ಎಂದು ಆರಾಧಿಸಿಕೊಂಡು ಬರುತ್ತಿದ್ದ ಕುಲದೇವರ ಸ್ಥಾನ ಮತ್ತು ನಾಗಸನ್ನಿಧಿಗಳ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಏರಾಜೆ ಎರುಕೊಟ್ಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶಿಲಾಮಯವಾದ `ನಾಗಬೆರ್ಮೆರ್’ ಕ್ಷೇತ್ರ ಬ್ರಹ್ಮಕಲಶೋತ್ಸವದ ಸಿದ್ದತೆಯಲ್ಲಿದೆ.

ದೈವಜ್ಞರಿಂದ ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ತಲೆಯಲ್ಲಿ ನಾಗಾಭರಣದ ಕಿರೀಟವನ್ನು ಧರಿಸಿ ಅಶ್ವಾರೂಢ ಭಂಗಿಯಲ್ಲಿರುವ, ಪ್ರತೀ ಕೋಟಿ ಚೆನ್ನಯ ಗರಡಿಗಳಲ್ಲಿ ಆರಾಧನೆಯಾಗುತ್ತಿರುವ (ಬೆರ್ಮೆರೆ ಗುಂಡ) ಕೋಟಿಚೆನ್ನಯರ ಕುಲದೇವರಾದ `ನಾಗಬೆರ್ಮೆರ್’ರವರ ಶಿಲಾಮಯವಾದ ಮೂಲಸ್ಥಾನ, ಜೊತೆಗೆ ಬಲಬದಿಯಲ್ಲಿ ಚಿತ್ರಕೂಟ ಸಂಕಲ್ಪದಲ್ಲಿ ನಾಗಬ್ರಹ್ಮ,ನಾಗಕನ್ನಿಕೆ,ನಾಗರಾಜ ಹಾಗೂ ನಾಗ ಸನ್ನಿಧಿ ಮತ್ತು ಎಡಬದಿಯಲ್ಲಿ ರಕ್ತೇಶ್ವರೀ ದೈವದ ಸ್ಥಾನ ನಿರ್ಮಾಣವಾಗಿದೆ. ಮುಂಭಾಗದಲ್ಲಿ ಅರಮನೆ ವತಿಯಿಂದ ಅಂತ್ಯ ಸಂಸ್ಕಾರಗೊಂಡ ದೇಯಿಬೈದ್ಯೇತಿಯ ಸಮಾಧಿ ಸ್ಥಳ ಮತ್ತು ನಾಗಗಳು ನೀರು ಕುಡಿಯುವ ಪವಿತ್ರ ತೀರ್ಥ ಸ್ಥಳ ನವೀಕರಣಗೊಂಡಿದೆ.

ರಕ್ತೇಶ್ವರಿ ದೈವಸ್ಥಾನ

ಮಾರ್ಚ್ ೭ ಮತ್ತು ೮ರಂದು ಕೋಟಿ ಚೆನ್ನಯರ ಜನ್ಮಭೂಮಿ ಪಡುಮಲೆಯಲ್ಲಿನ ಏರಾಜೆಯಲ್ಲಿ ಸುಮಾರು ೧ ಕೋಟಿ ರೂ. ವೆಚ್ಚದಲ್ಲಿ ಕ್ಷೇತ್ರ ಶಿಲ್ಪಿ ಪ್ರಸನ್ನ ಮುನಿಯಾಲ ಅವರ ಮಾರ್ಗದರ್ಶನದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಆಶಯದಂತೆ, ಶಿಲಾಮಯವಾಗಿ ನಿರ್ಮಾಣವಾಗಿರುವ ‘ನಾಗಬೆರ್ಮೆರ್’ ಮತ್ತು ಪರಿವಾರ ದೈವೀ ಕ್ಷೇತ್ರಗಳು ತಂತ್ರಿಗಳಾದ ಕುಂಟಾರು ರವೀಶ ತಂತ್ರಿಯವರಿಂದ ಪ್ರತಿಷ್ಠಾಪನೆಯಾಗಿ ಬ್ರಹ್ಮಕಲಶೋತ್ಸವ ನಡೆಯಲಿದೆ. ಸಮಾಜಲ್ಲಿ ತುಂಬಿದ್ದ ವರ್ಗಭೇದ, ವರ್ಣಭೇದ ಮೊದಲಾದ ಸಾಮಾಜಿಕ ಅನಿಷ್ಠಗಳ ವಿರುದ್ಧ ಹೋರಾಡಿ ದೈವತ್ವಕ್ಕೇರಿ ಆರಾಧನೆಯಾಗುತ್ತಿರುವ ಕೋಟಿಚೆನ್ನಯರ ಅಮರ ನುಡಿಯಂತೆಯೇ ಜಾತಿ-ಮತ, ಕುಲ-ಧರ್ಮದ ಭೇದವಿಲ್ಲದೆ ಆರಾಧನೆ ಮಾಡಲು ಸರ್ವಭಕ್ತರ ಶ್ರದ್ಧಾಕೇಂದ್ರವಾಗಿ ಈ ಕ್ಷೇತ್ರ ದೇಶಕ್ಕೆ ಸಮರ್ಪಣೆಯಾಗಲಿದೆ ಎಂದು ಶ್ರೀ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಧಾರ್ಮಿಕ ಮುಖಂಡ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.

ದೇಯಿ ಬೈದೇತಿಯವರ ಸಮಾಧಿ ಸ್ಥಳ

ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಪತ್ತೆಯಾದ ಕೋಟಿ ಚೆನ್ನಯರು ಆರಾಧಿಸುತ್ತಿದ್ದ ನಾಗಪ್ರತಿಮೆಗಳು: ಪಡುಮಲೆಯ ಬಲ್ಲಾಳರ ನ್ಯಾಯ ಚಾವಡಿಯ ಮುಂಭಾಗದಿಂದ ಕೂಗಳತೆಯ ದೂರದಲ್ಲಿ ಅಪೂರ್ವವಾದ ನಾಗಸನ್ನಿಧಿ ಜೀರ್ಣಾವಸ್ಥೆಯಲ್ಲಿತ್ತು. ಕೋಟಿ ಚೆನ್ನಯರು ಆರಾಧಿಸುತ್ತಿದ್ದ ನಾಗ ಬೆರ್ಮೆರ್ ನೆಲೆ ಮತ್ತು ನಾಗಸನ್ನಿಧಿ ಅವರ ತಂದೆ ಕರ್ಗಲ್ಲತೋಟ ಕಾಂತಣ್ಣ ಬೈದ್ಯರ ಮನೆಯ ಮುಂಭಾಗವೂ ಆಗುತ್ತದೆ. ಹಿಂದೆ ಇಲ್ಲಿ ಒಂದು ಬನವಿತ್ತು. ಸರಿ ಸುಮಾರು ೧೨ ವರ್ಷಗಳ ಹಿಂದೆ ಪಡುಮಲೆಯ ಕೂವೆಶಾಸ್ತರ ಶ್ರೀ ವಿಷ್ಣುಮೂರ್ತಿ ದೇಗುಲದಲ್ಲಿ ಅಷ್ಟಮಂಗಲ ಪ್ರಶ್ನೆಯಲ್ಲಿನ ದೈವಜ್ಞರ ಚಿಂತನೆಯಲ್ಲಿ ಪಡುಮಲೆಯಲ್ಲಿ ಹುಟ್ಟಿಬೆಳೆದ ದೈವೀ ಪುರುಷರಾದ ಕೋಟಿ ಚೆನ್ನಯರು ಮತ್ತು ಅವರ ತಾಯಿ ದೇಯಿ ಬೈದ್ಯೆತಿ ಆರಾಧಿಸುತ್ತಿದ್ದ ನಾಗ ಕ್ಷೇತ್ರ ಪುನರ್ ನಿರ್ಮಾಣವಾಗಬೇಕು. ಇಡೀ ಪಡುಮಲೆ ಕ್ಷೇತ್ರದ ಜನರ ಇಷ್ಟಾರ್ಥಗಳು ಸಿದ್ಧಿಯಾಗಿ ಪ್ರದೇಶದಲ್ಲಿ ಶಾಂತಿ ನೆಮ್ಮದಿ ದೊರೆಯಬೇಕಾದರೆ, ಯಾವುದೇ ದೈವೀ ಕಾರ್ಯಗಳಿಗೆ ಮೊದಲಾಗಿ ನಾಗನ ನೆಲೆ ಜೀರ್ಣೋದ್ಧಾರ ಕಾರ್ಯ ನಡೆಯಲು ಸಂಕಲ್ಪವನ್ನು ಮಾಡಬೇಕೆಂದರು. ಪ್ರಶ್ನೆಯಲ್ಲಿ ಕಂಡು ಬಂದಂತೆ ಏರಾಜೆ ಸಮೀಪದ ಎರುಕೊಟ್ಯ ಎಂಬಲ್ಲಿರುವ ಬನದತ್ತ ಬಂದು ಹುಡುಕಾಡಿದಾಗ ಅಲ್ಲಿ ಕೋಟಿ ಚೆನ್ನಯರು ಆರಾಧಿಸಿಕೊಂಡು ಬರುತ್ತಿದ್ದ ನಾಗಬ್ರಹ್ಮ , ನಾಗರಾಜ, ನಾಗಯಕ್ಷಿಣಿ ಮತ್ತು ನಾಗ ಕೆತ್ತನೆಗಳಿರುವ ಅದ್ಭುತವಾದ ನಾಗಪ್ರತಿಮೆಗಳು ಪತ್ತೆಯಾದವು. ಮಾತ್ರವಲ್ಲದೆ ಆ ಸಂದರ್ಭಕ್ಕೆ ಅಲ್ಲಿ ಸಾಕ್ಷಾತ್ ನಾಗರ ಹಾವೇ ಗೋಚರಿಸಿ ಭಕ್ತರಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಪ್ರೇರೇಪಿಸಿತು. ಹಿಂದೆ ಇಲ್ಲಿ ಸಣ್ಣದಾದ ಒಂದು ನೀರಿನ ತೊಟ್ಟಿಯಿತ್ತು. ಯಾವ ಬೇಸಿಗೆ ಕಾಲಕ್ಕೂ ಈ ಚಿಲುಮೆಯಲ್ಲಿ ನೀರು ಬರಿದಾಗುತ್ತಿರಲಿಲ್ಲ. ಆದುದರಿಂದಲೇ ಇಲ್ಲಿನ ಸುತ್ತು ಮುತ್ತಲಿನ ನಿವಾಸಿಗಳು ಇದೇ ನೀರನ್ನು ಉಪಯೋಗಿಸುತ್ತಿದ್ದರು. ಅದರೆ ಪ್ರಶ್ನಾ ಚಿಂತನೆಯಲ್ಲಿ ಆ ನೀರಿನ ಚಿಲುಮೆ ಪವಿತ್ರವಾಗಿದ್ದು, ಅದು ನಾಗ ನೀರು ಕುಡಿಯುವ ಸ್ಥಳವಾಗಿದ್ದು, ಮುಂದಕ್ಕೆ ಯಾರು ಕೂಡಾ ಅಲ್ಲಿಂದ ನೀರು ತೆಗೆಯಬಾರದು ಮಾತ್ರವಲ್ಲದೆ ಆ ಚಿಲುಮೆಯನ್ನು ನವೀಕರಿಸಿ ಅದಕ್ಕೆ ಬಿಟ್ಟು ಕೊಡಬೇಕು, ಬನವಿದ್ದ ಪ್ರದೇಶದಲ್ಲಿ ನಾಗಬ್ರಹ್ಮಾದಿ ನಾಲ್ಕು ನಾಗಗಳ ಪ್ರತಿಷ್ಠಾಪನೆಯಾಗಬೇಕು ಎಂದು ಕಂಡು ಬಂತು. ಕ್ಷೇತ್ರದ ತಂತ್ರಿಗಳವರಾದ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳವರ ಪ್ರಕಾರ. ಸಂಪೂರ್ಣವಾಗಿ ಮಣ್ಣು ಪಾಲಾಗಿದ್ದ ಅಪೂರ್ವವಾದ ನಾಗನ ಪ್ರತಿಮೆಗಳು ಕುಂಬ್ಳೆ ಸೀಮೆಯಲ್ಲಿಯೇ ಬೇರೆ ಎಲ್ಲಿಯೂ ಕಂಡುಬರುತ್ತಿಲ್ಲವಾದುದರಿಂದ ಇದು ಸೀಮೆಗೇ ಮೂಲನಾಗಸ್ಥಾನವಾಗಿದೆ.ಸುಮಾರು ೪೦ ವರ್ಷಗಳ ಹಿಂದೆ ಮಂಗಳೂರಿನ ಹಂಪನಕಟ್ಟೆ ಉದ್ಯಮಿ ಜೆ.ವಿ ಸೀತಾರಾಮ್ ಅವರು ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ನಾಗನ ನೆಲೆಯನ್ನು ಅಭಿವೃದ್ಧಿಪಡಿಸಲು ಮುಂದಾದರು. ಆದರೆ ಸುತ್ತು ಮುತ್ತಲಿನಲ್ಲಿ ನಾಗರ ಹಾವುಗಳ ಬರುವಿಕೆ ಮತ್ತು ಇರುವಿಕೆಯಿಂದ ಕೆಲಸಗಾರರು ಬೆದರಿ ಕ್ಷೇತ್ರ ನಿರ್ಮಾಣ ಸ್ಥಗಿತಗೊಂಡಿತು ಎಂದು ಸ್ಥಳೀಯರು ಹೇಳುತ್ತಾರೆ.

ನಾಗ ಬೆರ್ಮೆರ್ ಸ್ಥಾನ

ಈಗ ಪಡುಮಲೆಯಲ್ಲಿ ಕ್ಷೇತ್ರ ನಿರ್ಮಾಣಗಳದ್ದೇ ಪರ್ವ : ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಪಡುಮಲೆಯಲ್ಲಿ ಪ್ರಥಮವಾಗಿ ನಾಗನ ಕ್ಷೇತ್ರ ಅಭಿವೃದ್ಧಿಗೆ ಭಕ್ತರು ಸಂಕಲ್ಪ ಮಾಡಿ ಜೀರ್ಣೋದ್ಧಾರ ಕಾರ್ಯಗಳು ಆರಂಭವಾಗುತ್ತಿರುವಂತೆಯೇ ೨೦೧೨ರಲ್ಲಿ ಕೋಟಿ ಚೆನ್ನಯ ಐತಿಹಾಸಿಕ ಕ್ಷೇತ್ರ ಸಂವರ್ಧನ ಪ್ರತಿಷ್ಠಾನ ಪಡುಮಲೆಯಲ್ಲಿ ಐತಿಹ್ಯ ಸಂರಕ್ಷಣೆಯ ಜೊತೆಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿತು. ೨೦೧೩ರಲ್ಲಿ ಸರಕಾರದಿಂದ ಕೋಟಿ ಚೆನ್ನಯ ಜನ್ಮಭೂಮಿಯ ಅಭಿವೃದ್ಧಿಗಾಗಿ ೫ ಕೋಟಿ ಬಿಡುಗಡೆಯಾಯಿತು. ಆ ಸಂದರ್ಭಕ್ಕೆ ‘ಸುದ್ದಿ ಬಿಡುಗಡೆ ಪತ್ರಿಕೆ’ಯು ಐತಿಹ್ಯಗಳ ಬಗ್ಗೆ ಸ್ಥಳ ಅಧ್ಯಯನ ಮಾಡಿ ೨೩ ಸ್ಥಳ ಐತಿಹ್ಯಗಳ ಸಮಗ್ರ ಮಾಹಿತಿಯನ್ನೊಳಗೊಂಡ `ಶ್ರೀ ಕ್ಷೇತ್ರ ಪಡುಮಲೆ- ಕೋಟಿ ಚೆನ್ನಯರ ಐತಿಹಾಸಿಕ ಕ್ಷೇತ್ರ’ ಸಂಚಿಕೆಯನ್ನು ಹೊರತಂದಿತ್ತು. ಕೋಟಿಚೆನ್ನಯರ ಐತಿಹ್ಯಗಳು ಭಕ್ತರನ್ನು ತನ್ನೆಡೆಗೆ ಕರೆದು ಸಮಗ್ರ ಅಭಿವೃದ್ಧಿಗಾಗಿ ಅನುಗ್ರಹವನ್ನು ನೀಡಿತು. ಈಗ ಪಡುಮಲೆಯಲ್ಲಿ ಕ್ಷೇತ್ರ ನಿರ್ಮಾಣಗಳದ್ದೇ ಪರ್ವ. ಸಾಯನಬೈದ್ಯನ ಗೆಜ್ಜೆಗಿರಿ ನಂದನ ಹಿತ್ತಿಲಿನಲ್ಲಿ ಆದಿಮಾಯೆ ಶ್ರೀ ಧೂಮಾವತಿಗೆ ದೈವಸ್ಥಾನ, ಸಾಯನ ಬೈದ್ಯರಿಗೆ ಗುರುಪೀಠ, ದೇಯಿಬೈದ್ಯೆತಿ ಮತ್ತು ಕೋಟಿಚೆನ್ನಯರ ಆರಾಧನಾ ಸ್ಥಾನಗಳು ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿದೆ. ಅದರಂತೆಯೇ ದೇಯಿ ಬೈದ್ಯೆತಿ ಜನಿಸಿದ ಕೂವೆತೋಟ ಮನೆ ಮತ್ತು ಕೋಟಿ ಚೆನ್ನಯರು ಜನಿಸಿದ ಪಡುಮಲೆ ಬಳ್ಳಾಲರ ಅರಮನೆಯಲ್ಲಿಯೂ ಪ್ರಶ್ನಾ ಚಿಂತನೆಗಳು ನಡೆದು ದೇಯಿ ಬೈದ್ಯೇತಿ ಜನ್ಮಸ್ಥಳ ಕೂವೆ ತೋಟದಲ್ಲಿ ಶ್ರೀ ದೇಯಿಬೈದ್ಯೇತಿಗೆ ದೇಗುಲ, ಧೂಮಾವತಿ ದೈವಸ್ಥಾನ, ಧನ್ವಂತರೀ ದೇವಸ್ಥಾನ, ಜಲದುರ್ಗೆ ದೇವಸ್ಥಾನ, ವ್ಯಾಘ್ರ ಚಾಮುಂಡಿ ಮತ್ತು ನಾಗ ಸಾನಿಧ್ಯಗಳ ಜೀರ್ಣೋದ್ಧಾರ ನಡೆಸುವ ಸಂಕಲ್ಪ ಮಾಡಲಾಗಿದೆ. ಪಡುಮಲೆ ಅರಸರ ಅರಮನೆಯಿದ್ದ ನೆಲ್ಲಿಕಳ ಗುತ್ತುವಿನಲ್ಲಿ ನಡೆದ ಚಿಂತನೆಯಲ್ಲಿ ವೈಭವಯುತವಾದ ಅರಮನೆ, ಅಲ್ಲಿಯೇ ಕೋಟಿಚೆನ್ನಯರಿಗೆ ಜನ್ಮಸ್ಥಳದಲ್ಲಿ ಗರಡಿ ಕಟ್ಟಿ ಆರಾಧನೆ, ದುರ್ಗಾದೇವಿ, ಕಿನ್ನಿಮಾಣಿ ಪೂಮಾಣಿ ದೈವಗಳಿಗೆ ಸ್ಥಾನ, ಹುಲಿಭೂತದ ಮೂಲಸ್ಥಾನ ಜೀರ್ಣೋದ್ಧಾರ ಕಾರ್ಯಗಳು ಆರಂಭವಾಗಿದೆ.

ನಾಗ ನೀರು ಕುಡಿಯುವ ಪವಿತ್ರ ತೀರ್ಥದ ಕೆರೆ

ಬಹುಭಾಷಾ ಚಲನಚಿತ್ರ ನಟ ಹಾಗೂ ಶ್ರೀ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್‌ನ ಆಡಳಿತ ಮೊಕ್ತೇಸರರಾದ ವಿನೋದ್ ಆಳ್ವ ಅವರ ಮಾಲಕತ್ವದಲ್ಲಿರುವ ಜಮೀನಿನಲ್ಲಿ ಸುಮಾರು ೫ ಎಕ್ರೆ ಪ್ರದೇಶದಲ್ಲಿ ಪಡುಮಲೆ ಬಳ್ಳಾಲರ ಅರಮನೆ, ಕೋಟಿಚೆನ್ನಯರ ಜನ್ಮಸ್ಥಾನ, ಬಳ್ಳಾಲರ ನ್ಯಾಯ ಚಾವಡಿ, ಎರುಕೊಟ್ಯದಲ್ಲಿದ್ದ ಮೇಘನಾಥ ರೈ ಕುಟುಂಬಸ್ಥರ ಜಾಗದಲ್ಲಿ ನಾಗಬೆರ್ಮೆರ್ ಸನ್ನಿಧಿ (ಈಗ ಜಾಗವನ್ನು ಸದ್ರಿ ಕುಟುಂಬಸ್ಥರು ಟ್ರಸ್ಟ್‌ಗೆ ಬಿಟ್ಟು ಕೊಟ್ಟಿದ್ದಾರೆ.) ಕೂವೆ ತೋಟದಲ್ಲಿ ಟ್ರಸ್ಟಿ ಕೇಶವ ಭಟ್ ಮತ್ತು ಕುಟುಂಬಸ್ಥರರಲ್ಲಿರುವ ದೇಯಿ ಬೈದ್ಯೆತಿ ಜನ್ಮ ಸ್ಥಾನದ ಜಾಗ ಎಲ್ಲವೂ ಮುಂದೆ ಜೀರ್ಣೋದ್ಧಾರವಾಗಲು ಸಿದ್ಧತೆಯಲ್ಲಿದೆ. ತಮ್ಮ ಆರಾಧನೆಗೆ ಮುಂಚಿತವಾಗಿ ಕುಲದೇವರಾದ ನಾಗಬೆರ್ಮೆರ್ ಮತ್ತು ನಾಗಕ್ಷೇತ್ರ ನಿರ್ಮಾಣವಾಗಿ ಆರಾಧನೆಯಾಗಬೇಕು ಎಂದು ಕಾಯ ಬಿಟ್ಟು ಮಾಯ ಸೇರಿ ಭಕ್ತರನ್ನು ಪರಿಪಾಲಿಸುತ್ತಿರುವ ಅಮರ ಅವಳಿ ಶಕ್ತಿಗಳ ಆಶಯವಾಗಿರುವುದಾಗಿ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿರುವ ಹಿನ್ನೆಲೆಯಲ್ಲಿ ಪ್ರಥಮವಾಗಿ ನಾಗಕ್ಷೇತ್ರದ ಜೀರ್ಣೋದ್ಧಾರ ಕಾರ್ಯಗಳು ನಡೆಯುತ್ತಿರುವುದಾಗಿ ಸಂಚಲನ ಸೇವಾ ಟ್ರಸ್ಟ್ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.