Home_Page_Advt
Home_Page_Advt
Home_Page_Advt
Breaking News

ಗೆಜ್ಜೆಗಿರಿ ಕ್ಷೇತ್ರ ಕಾಂಕ್ರೀಟ್ ರಸ್ತೆಗೆ ಶಾಸಕರಿಂದ ಗುದ್ದಲಿಪೂಜೆ

  • ದೇಯಿ ಬೈದೆತಿ, ಕೋಟಿ ಚೆನ್ನಯರು ತುಳುನಾಡಿನ ಮಹಾನ್ ಶಕ್ತಿಗಳು: ಮಠಂದೂರು

ಪುತ್ತೂರು: ಗೆಜ್ಜೆಗಿರಿ ಕ್ಷೇತ್ರವನ್ನು ಸಂಪರ್ಕಿಸುವ ಪ್ರಧಾನ ರಸ್ತೆಯನ್ನು ಕಾಂಕ್ರಿಟೀಕರಣ ಮಾಡುವ ಕಾಮಗಾರಿಗೆ ಶಾಸಕ ಸಂಜೀವ ಮಠಂದೂರು ಜ.14 ರಂದು ಬೆಳಗ್ಗೆ ಬಡಗನ್ನೂರು ಗ್ರಾಮದ ಪಟ್ಟೆಯಲ್ಲಿ ಗುದ್ದಲಿ ಪೂಜೆ ನೆರವೇರಿಸಿದರು.

ಪಟ್ಟೆಯಿಂದ ಪಾಲಡ್ಕ- ಶರವು- ಗೆಜ್ಜೆಗಿರಿ ಮೂಲಕ ಈಶ್ವರಮಂಗಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಇದರ ಕಾಂಕ್ರಿಟೀಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಒಂದು ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದಾರೆ.

ದೀಪ ಪ್ರಜ್ವಲನ ಮಾಡಿ, ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ದೇಯಿ ಬೈದ್ಯೆತಿ ಮತ್ತು ಕೋಟಿ ಚೆನ್ನಯರು ತುಳುನಾಡಿನ ಮಹಾನ್ ಶಕ್ತಿಗಳು. ಜಾತಿ ಮತ ಭೇದವಿಲ್ಲದೆ ಎಲ್ಲ ಭಕ್ತರು ಈ ಶಕ್ತಿಗಳನ್ನು ನಂಬುತ್ತಾರೆ. ಅಂಥ ಶಕ್ತಿಗಳ ಮೂಲಕ್ಷೇತ್ರವಾದ ಗೆಜ್ಜೆಗಿರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಯಾಗುವ ಮೂಲಕ ಭವಿಷ್ಯದಲ್ಲಿ ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗಲಿದೆ ಎಂದರು.

ಈಗಾಗಲೇ ಇದೇ ರಸ್ತೆಯಲ್ಲಿ ಪಾಲಡ್ಕ ಶರವು ಕ್ರಾಸ್‌ನಿಂದ ಗೆಜ್ಜೆಗಿರಿ ಸಂಪರ್ಕಿಸುವ ಪ್ರವೇಶ ರಸ್ತೆಯ ಕಾಂಕ್ರೀಟೀಕರಣಕ್ಕೆ ಶಾಸಕನ ನೆಲೆಯಲ್ಲಿ ೫೦ ಲಕ್ಷ ರೂ. ವಿಶೇಷ ಅನುದಾನ ಮಂಜೂರು ಮಾಡಿದ್ದೇನೆ. ಕಳೆದ ವಾರ ಗುದ್ದಲಿ ಪೂಜೆ ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಇದಲ್ಲದೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಪಟ್ಟೆ- ಗೆಜ್ಜೆಗಿರಿ- ಈಶ್ವರಮಂಗಲ ರಸ್ತೆಗೆ ಈಗಾಗಲೇ ೩೦ ಲಕ್ಷ ರೂ. ಮಂಜೂರು ಮಾಡಲಾಗಿದೆ. ಪ್ರಸ್ತುತ ಉಸ್ತುವಾರಿ ಸಚಿವರು ಇದೇ ರಸ್ತೆಗೆ ಒಂದು ಕೋಟಿ ರೂ.ಅನುದಾನ ಮಂಜೂರು ಮಾಡಿದ್ದಾರೆ. ಒಟ್ಟು ೧.೩೦ ಕೋಟಿ ಅನುದಾನದಲ್ಲಿ ಪಟ್ಟೆ- ಗೆಜ್ಜೆಗಿರಿ- ಈಶ್ವರಮಂಗಲ ರಸ್ತೆ ಅಭಿವೃದ್ಧಿಯಾಗಲಿದೆ. ಈ ಮೂಲಕ ಗೆಜ್ಜೆಗಿರಿ ಸಂಪರ್ಕ ರಸ್ತೆಗೆ ಸರಕಾರದಿಂದ ೧.೮೦ ಕೋಟಿ ರೂ. ಅನುದಾನ ಸಿಕ್ಕಂತಾಗಿದೆ.

ಈ ಅನುದಾನದಲ್ಲಿ ಪಟ್ಟೆಯ ಪ್ರವೇಶ ಭಾಗದಲ್ಲಿ ಅಗಲೀಕರಣ ನಡೆಯಲಿದೆ. ಗೆಜ್ಜೆಗಿರಿಯವರೆಗೆ ೩.೪೫ ಮೀ. ಅಗಲದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ. ಎರಡೂ ಭಾಗದಲ್ಲಿ ಮಣ್ಣಿನ ಪಥ, ನೀರಿನ ಚರಂಡಿ ರಚನೆಯಾಗಲಿದೆ. ಇಡೀ ರಸ್ತೆ ಒಟ್ಟಾರೆಯಾಗಿ ೨೪ ಅಡಿ ಅಗಲವಿರಲಿದೆ. ಗೆಜ್ಜೆಗಿರಿ ಬ್ರಹ್ಮಕಲಶೋತ್ಸವಕ್ಕೆ ಮುನ್ನ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದರು.

ತಾಪಂ ಅಧ್ಯಕ್ಷರಾದ ರಾಧಾಕೃಷ್ಣ ಬೋರ್ಕರ್, ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸಾಜಾ ರಾಧಾಕೃಷ್ಣ ಆಳ್ವಾ, ಬಡಗನ್ನೂರು ಗ್ರಾಪಂ ಅಧ್ಯಕ್ಷರಾದ ಕೇಶವ ಗೌಡ ಕನ್ನಯ, ಪಟ್ಟೆ ಶ್ರೀಕೃಷ್ಣ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ವೇಣುಗೋಪಾಲ್ ಭಟ್, ನಿರ್ದೇಶಕರಾದ ಶಿವಪ್ರಸಾದ್ ಭಟ್, ಶಿರಿಷ್ ಭಟ್, ಗ್ರಾಪಂ ಸದಸ್ಯರಾದ ಉದಯ ಕುಮಾರ್, ಹೇಮಲತಾ, ಬಿಜೆಪಿ ಗ್ರಾಪಂ ಸಮಿತಿ ಕಾರ್ಯದರ್ಶಿ ಸಂತೋಷ್ ಆಳ್ವಾ, ಬೂತ್ ಸಮಿತಿ ಅಧ್ಯಕ್ಷರಾದ ಬಾಲಕೃಷ್ಣ ಮುಂಡೋಲೆ, ಸ್ಥಳೀಯ ಮುಖಂಡರಾದ ಪ್ರಭಾಕರ್, ಕಾಮಗಾರಿಯ ಗುತ್ತಿಗೆದಾರರಾದ ಧೀರಜ್ ಹೆಜಮಾಡಿ ಉಪಸ್ಥಿತರಿದ್ದರು. ಗೆಜ್ಜೆಗಿರಿ ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಜಯಂತ ನಡುಬೈಲ್, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೇರಾಜೆ, ಕಾರ್ಯಾಧ್ಯಕ್ಷರಾದ ನಾರಾಯಣ ಪೂಜಾರಿ ಮಡ್ಯಂಗಳ, ಕ್ಷೇತ್ರ ಸಮಿತಿ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿಗಳಾದ ಸುಧಾಕರ ಸುವರ್ಣ, ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕಾರ್ಯಕಾರಿ ಸದಸ್ಯರಾದ ದಿನೇಶ್ ಅಮೀನ್, ನವೀನ್ ಸುವರ್ಣ ಸಜಿಪ, ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ರವಿ ಕಕ್ಕೆಪದವು, ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಕಾರ್ಯನಿರ್ವಹಣಾ ಅಧಿಕಾರಿ ಆರ್.ಸಿ. ನಾರಾಯಣ್, ಬ್ರಹ್ಮಕಲಶೋತ್ಸವ ಸಮಿತಿಯ ಜತೆ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ಮತ್ತಿತರರು ಹಾಜರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.