Home_Page_Advt
Home_Page_Advt
Home_Page_Advt
Breaking News

ಪುತ್ತೂರು ಅಹರ್ನಿಶಿ ಕಂಬಳದ ಉದ್ಘಾಟನೆ

ಚಿತ್ರ: ಜೀತ್ ಪುತ್ತೂರು

  • ವಿ.ವಿಯಲ್ಲಿ ಕಂಬಳದ ಅಧ್ಯಯನ ಪೀಠ ತೆರೆಯಲಿ – ನವೀನ್ ಭಂಡಾರಿ

ವಿಶೇಷತೆಗಳು…
-ಸ್ಕೈ ವೀವ್ ಲೇಸರ್ ಭೀಮ್ ಫಿನಿಶಿಂಗ್ ಮೂಲಕ ಶೀಘ್ರ ತೀರ್ಪು
-ಶಿರಾಡಿ ಪ್ರಾಥಮಿಕ ಆರೋಗ್ಯ ಕೆಂದ್ರದ ವೈದ್ಯಾಧಿಕಾರಿಗಳ ತಂಡ
-ನೆಕ್ಕಿಲಾಡಿ-ಉಪ್ಪಿನಂಗಡಿ ಬಿ.ಎಸ್ ಬ್ಯಾಂಡ್‌ರವರಿಂದ ಬ್ಯಾಂಡ್ ವಾದ್ಯ
-ಕಂಬಳದ ಕರೆಯ ಸುತ್ತಮುತ್ತ ನೂರಕ್ಕೂ ಮಿಕ್ಕಿ ವಿವಿಧ ಸ್ಟಾಲುಗಳು
-ಪುತ್ತೂರು ಪೊಲೀಸ್ ಬಿಗು ಬಂದೋಬಸ್ತ್
-ಕಂಬಳದ ಕೋಣಗಳ ಯಜಮಾನರಿಗೆ ಪ್ರತ್ಯೇಕ ಸ್ಥಳ
-ಮಹಿಳೆಯರಿಗೆ ಪ್ರತ್ಯೇಕ ಗ್ಯಾಲರಿ

ಪುತ್ತೂರು: ಸುಮಾರು 400 ವರ್ಷವುಳ್ಳ ಇತಿಹಾಸವಿರುವ ತುಳುನಾಡಿನ ಶ್ರೀಮಂತಿಕೆಯ ಕಲೆಯಾದ ಈ ಕಂಬಳಕ್ಕೆ ವಿಶೇಷ ಅಧ್ಯಯನದ ಅವಶ್ಯಕತೆಯಿದ್ದು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕಂಬಳದ ಬಗ್ಗೆ ಅಧ್ಯಯನ ಪೀಠ ತೆರೆದು ಕಂಬಳದ ಪರಂಪರೆಯನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್.ರವರು ಹೇಳಿದರು.

ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ ಜ.18ರಂದು ಬೆಳಿಗ್ಗೆ ಜಯಕರ್ನಾಟಕ ಸಂಸ್ಥಾಪಕ ಮುತ್ತಪ್ಪ ರೈಯವರ ಸಾರಥ್ಯದಲ್ಲಿ, ಮಾಜಿ ಸಚಿವ ವಿನಯಕುಮಾರ್ ಸೊರಕೆಯವರ ಗೌರವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ ತುಳುನಾಡ ಪುರಾತನ ಜಾನಪದ ಕ್ರೀಡೆಗಳಲ್ಲೊಂದಾದ ಇತಿಹಾಸ ಪ್ರಸಿದ್ಧ ಪುತ್ತೂರಿನ ಅಹರ್ನಿಶಿ ಕೋಟಿ-ಚೆನ್ನಯ ಜೋಡುಕರೆ ಕಂಬಳದ 27ರ ಸಂಭ್ರಮದ ಕೂಟವನ್ನು ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಜಾನಪದ ಕ್ರೀಡೆಯಲ್ಲೊಂದಾದ ಕಂಬಳಕ್ಕೆ ವಿಶೇಷ ಸ್ಥಾನಮಾನವಿದ್ದು ಕಂಬಳಕ್ಕೆ ಪ್ರತಿಯೋರ್ವರು ಪ್ರೋತ್ಸಾಹ ನೀಡಬೇಕು. ಕಂಬಳ ಕ್ರೀಡೆಯನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ತುಳುನಾಡಿನ ಜನತೆಗೆ ಕಂಬಳ ಕೇವಲ ಕ್ರೀಡೆಯಲ್ಲ, ಅದು ನಮ್ಮ ಉಸಿರಾಗಿದೆ. ಅದನ್ನು ನಿಲ್ಲಿಸಲು ಎಷ್ಟೇ ಪ್ರಯತ್ನಗಳು ಆದರೂ ಕಂಬಳವನ್ನು ನಾವು ಉಳಿಸೇ ಸಿದ್ಧ. ತುಳುನಾಡಿನ ಆರಾಧನಾ ಕಲೆಯಾಗಿ ಮೆರೆಯುತ್ತಿರುವ ಕಂಬಳಕ್ಕೆ ಕಾರಣಿಕದ ಸತ್ಯದ ಶ್ರೀರಕ್ಷೆಯಿದೆ. ಸೂರ್ಯ ಚಂದ್ರನ ವರೆಗೂ ಕಂಬಳ ಅಜರಾಮರವಾಗಿ ಬೆಳೆದು ಉಳಿಯಲಿ, ಇಲ್ಲಿ ಎರಡು ದಿನಗಳ ಕಾಲ ನಡೆಯುವ ಕಂಬಳವು ವಿಜ್ರಂಭಣೆಯಿಂದ ಸಾಗಲಿ ಎಂದು ಹೇಳಿ ಶುಭಹಾರೈಸಿದರು.

ಎಲ್ಲರನ್ನು ಒಟ್ಟುಗೂಡಿಸುವ ಕ್ರೀಡೆ ಕಂಬಳವಾಗಿದೆ-ರೆ|ಹಾರ್ವಿನ್:
ನೆಹರುನಗರ ಸುದಾನ ವಿದ್ಯಾಸಂಸ್ಥೆಗಳ ಸಂಚಾಲಕ ರೆ|ವಿಜಯ ಹಾರ್ವಿನ್‌ರವರು ಮಾತನಾಡಿ, ಪುತ್ತೂರು ಕಂಬಳದಲ್ಲಿ ಯಾವುದೇ ಜಾತಿ-ಮತ-ಭೇದವಿಲ್ಲದೆ ಭಾಗವಹಿಸುತ್ತಿರುವುದು ವಿಶೇಷತೆಯಲ್ಲೊಂದಾಗಿದೆ. ವೀರ ಕಲೆಯಾಗಿರುವ ಕಂಬಳವು ಕ್ರೀಡೆ ಮಾತ್ರವಲ್ಲ, ಕಂಬಳವು ನಮ್ಮಲ್ಲಿ ಉತ್ತಮ ಸಂಸ್ಕೃತಿಯನ್ನು ಬಿಂಬಿಸುತ್ತಿರುವ ಅವಿಭಾಜ್ಯ ಅಂಗವಾಗಿದೆ. ಕಂಬಳದಲ್ಲಿ ಭಾಗವಹಿಸುವ ಕೋಣಗಳನ್ನು ಕೆಲವರು ಪ್ರಾಣಿ ಹಿಂಸೆಯ ಆಧಾರದಲ್ಲಿ ನೋಡ್ತಾರೆ. ಆದರೆ ಈ ಕೋಣಗಳ ಯಜಮಾನರು ಕೋಣಗಳಲ್ಲಿ ಸುಪ್ತತೆಯುಳ್ಳ ಮನಸ್ಸನ್ನು ಕೇಂದ್ರೀಕರಿಸಿ, ಉತ್ತಮ ಆಹಾರ ನೀಡಿ ಬಹಳ ಆತ್ಮೀಯತೆ, ಪ್ರೀತಿಯಿಂದ ನೋಡುತ್ತಿರುವುದು ಹಿಂಸೆ ಎನಿಸದು ಎಂದ ಅವರು ಎಲ್ಲರನ್ನೂ ಒಟ್ಟುಗೂಡಿಸುವ ಕೃಷಿಕ ಜನಾಂಗದ ಕ್ರೀಡೆಯಾಗಿದ್ದು ಮಾತ್ರವಲ್ಲದೆ ಸೌಹಾರ್ದತೆಯನ್ನು ಮೆರೆಯುತ್ತಿರುವ ಈ ಕಂಬಳದ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಸಮಾಜಕ್ಕೆ ನೀಡುವಂತಾಗಬೇಕು ಎಂದು ಅವರು ಹೇಳಿದರು.

ಕಂಬಳದ ಮೂಲಕ ಸೌಹಾರ್ದತೆ-ಎಲ್.ಟಿ ಅಬ್ದುಲ್ ರಝಾಕ್:
ಪುತ್ತೂರು ಜುಮಾ ಮಸೀದಿಯ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ಮಾತನಾಡಿ, ಐತಿಹಾಸಿಕ ಕ್ರೀಡೆಯಾಗಿರುವ ಕಂಬಳವನ್ನು ಪುತ್ತೂರು ಜೋಡುಕರೆ ಕಂಬಳ ಸಮಿತಿಯವರು ಕಳೆದ 26 ವರ್ಷಗಳಿಂದ ಎಲ್ಲಾ ಜಾತಿ-ಧರ್ಮದವರನ್ನು ಒಟ್ಟು ಸೇರಿಸಿಕೊಂಡು ನಿರಂತರ ಆಚರಿಸಿಕೊಂಡು ಬರುವ ಮೂಲಕ ಸೌಹಾರ್ದತೆಯನ್ನು ಮೆರೆದಿರುವುದು ಶ್ಲಾಘನೀಯ. ನಾಡಿನ ಜನತೆಯನ್ನು ಒಗ್ಗೂಡಿಸಲು ಯಾವುದೇ ಸಂದರ್ಭ ಸಿಗೋದಿಲ್ಲ, ಆದರೆ ಮುತ್ತಪ್ಪ ರೈಯವರ ಸಾರಥ್ಯದಿಂದ ದೊಡ್ಡ ಜಾತ್ರೆ ಎಂಬಂತೆ ಮೂಡಿ ಬರುತ್ತಿರುವ ಈ ಕಂಬಳದಲ್ಲಿ ಪುತ್ತೂರಿನ ಜನತೆಯನ್ನು ಒಗ್ಗೂಡಿಸಲು ಸಾಧ್ಯವಾಗಿದೆ ಎಂದರು.

ಮಕ್ಕಳಲ್ಲೂ ಕಂಬಳದ ಬಗ್ಗೆ ಅರಿವು ಮೂಡಿಸುವಂತಾಗಬೇಕು-ನಿರ್ಮಲ್ ಕುಮಾರ್ ಜೈನ್:
ಪುತ್ತೂರು ಜೈನ ವಿದ್ಯಾವರ್ಧಕ ಸಂಘದ ಅಧ್ಯಕ್ಷ ನಿರ್ಮಲ್ ಕುಮಾರ್ ಜೈನ್‌ರವರು ಮಾತನಾಡಿ, ಧಾರ್‍ಮಿಕ, ಸಾಂಸ್ಕೃತಿಕ ಹಿನ್ನೆಲೆಯಿರುವ ಕಂಬಳವನ್ನು ಅಧ್ಯಯನ ಪೀಠಕ್ಕೆ ಸೇರಿಸಲು ಮಂಗಳೂರು ವಿವಿ ಸೆನೆಟ್ ಸದಸ್ಯನಾದ ನಾನೂ ಕೂಡ ಕಂಬಳದ ಬಗ್ಗೆ ವಿಷಯ ಮಂಡಿಸಲಿದ್ದೇನೆ. ಕಂಬಳವನ್ನು ಎಲ್ಲರೂ ಕ್ರೀಡಾ ಮನೋಭಾವದಿಂದ ನೋಡಬೇಕೇ ಹೊರತು ಬೇರೆ ದೃಷ್ಟಿಯಿಂದಲ್ಲ. ಮುಂದಿನ ದಿನಗಳಲ್ಲಿ ಶಾಲೆಯ ಮಕ್ಕಳನ್ನು ಕಂಬಳದಲ್ಲಿ ತೊಡಗಿಸಿಕೊಂಡು ಮಕ್ಕಳಲ್ಲಿ ಕಂಬಳದ ಬಗ್ಗೆ ಅರಿವು ಮೂಡಿಸಿದ್ದಲ್ಲಿ ಕಂಬಳವು ನಶಿಸಿ ಹೋಗದಂತೆ ಮಾಡಬಹುದಾಗಿದೆ ಎಂದರು.

ಭಾಗವಹಿಸಿದ ಗಣ್ಯರು:
ಪುತ್ತೂರು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ಕ್ವಾಲಿಟಿ ಫಾರ್ಮ್ಸ್ ಮತ್ತು ಫೀಡ್ಸ್‌ನ ಮಾಲಕ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಕುಂಟ್ಯಾನ ಶ್ರೀ ಸದಾಶಿವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಧರ್ಣಪ್ಪ ಮೂಲ್ಯ ಕಜೆ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕರಿ ಲೋಕೇಶ್ ಸಿ, ಬಲ್ನಾಡು ಶ್ರೀ ಉಳ್ಳಾಲ್ತಿ ದಂಡನಾಯಕ ದೈವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ತಿಮ್ಮಪ್ಪ ಗೌಡ, ಪುತ್ತೂರು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಧರ್ಮಪಾಲ ಗೌಡ, ಕೆಯ್ಯೂರು ಶ್ರೀ ಮಹಿಷಮರ್ದಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಚೆನ್ನಪ್ಪ ರೈ ದೇರ್ಲ, ಕಲ್ಲೇಗ ಶ್ರೀ ಕಲ್ಕುಡ ದೈವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಅಜಿತ್ ಕುಮಾರ್ ಜೈನ್, ಪರ್ಪುಂಜ ರಾಮಜಾಲು ಬ್ರಹ್ಮ ಬೈದೆರ್ಕಳ ಗರಡಿಯ ಆಡಳಿತ ಮೊಕ್ತೇರ ಸಂಜೀವ ಪೂಜಾರಿ ಕೂರೇಲು, ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಮಹಾಲಿಂಗ ನಾಕ್ ಪಾಲ್ತಾಡು, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ-ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಕ್, ಜಯಕರ್ನಾಟಕ ತಾಲೂಕು ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ಕಂಬಳದ ಪ್ರಧಾನ ತೀರ್ಪುಗಾರ ಕೆ.ಗುಣಪಾಲ ಕಡಂಬ ಮೂಡಬಿದ್ರೆ, ಉಪ್ಪಿನಂಗಡಿ ಶ್ರೀ ರಾಘವೇಂದ್ರ ಮಠದ ಮಾಜಿ ಮೊಕ್ತೇಸರ ಉದಯಕುಮಾರ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮಹೇಶ್ಚಂದ್ರ ಸಾಲಿಯಾನ್, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಮಂಗಳೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ, ಪುತ್ತೂರು ಕಂಬಳ ಸಮಿತಿಯ ಸಂಚಾಲಕ ಎನ್.ಸುಧಾಕರ್ ಶೆಟ್ಟಿ, ಕಾರ್ಯದರ್ಶಿ ದಿನೇಶ್ ಪಿ.ವಿ, ಕೋಶಾಧಿಕಾರಿ ಪ್ರಸನ್ನ ಕುಮಾರ್ ಶೆಟ್ಟಿ ಸಹಿತ ಕಂಬಳ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪುತ್ತೂರು ಕಂಬಳ ಸಮಿತಿಯ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಸ್ವಾಗತಿಸಿ, ಬಾಯಂಬಾಡಿ ಶ್ರೀ ಷಣ್ಮುಖದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಜೆ.ಕೆ ವಸಂತ್ ಕುಮಾರ್ ರೈ ದುಗ್ಗಳರವರು ವಂದಿಸಿದರು. ಉಪಾಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು.

ಎಲಿಮೆಂಟ್ರಿ ಶಾಲಾ ಪಠ್ಯಪುಸ್ತಕದಲ್ಲೂ ಮುದ್ರಿಸಲಿ…
ಹಿಂದೆ ಗದ್ದೆ ಬೇಸಾಯಕ್ಕೆ ಕೋಣಗಳನ್ನು ಉಪಯೋಗಿಸುತ್ತಿದ್ದು, ಕ್ರಮೇಣ ಇದನ್ನು ನಿಲ್ಲಿಸುವ ಪರಿಸ್ಥಿತಿ ಬಂದಾಗ ಹಿರಿಯರು ಕಂಬಳದ ರೂಪದಲ್ಲಿ ಸ್ಪರ್ಧೆಯ ರೂಪ ಕೊಟ್ಟು ಜನರಿಗೆ ಮನರಂಜನೆಯನ್ನು ಒದಗಿಸುತ್ತಿದೆ. ಕೋಣಗಳ ಯಜಮಾನರು ತಮ್ಮ ಕೋಣಗಳನ್ನು ಮಕ್ಕಳ ಹಾಗೆ ಬಹಳ ಪ್ರೀತಿಯಿಂದ ನೋಡುತ್ತಿದ್ದರೂ, ಕೋಣಗಳಿಗೆ ಒಂದೆರೆಡು ಪೆಟ್ಟು ಹೊಡೆದ ಕೂಡಲೇ ಕೆಲವರು ಇದಕ್ಕೆ ಹಿಂಸೆಯ ರೂಪವನ್ನು ನೀಡಿ ಪತ್ರಿಕೆಯಲ್ಲಿ ಪ್ರಕಟಿಸುತ್ತಿರುವುದು ಮತ್ತು ಕೋರ್ಟಿಗೆ ದಾವೆ ಹೂಡುವುದು ಬೇಸರದ ವಿಷಯವಾಗಿದೆ. ಇದು ಸರಿಯಾದ ಕ್ರಮವಲ್ಲ. ಕಂಬಳಕ್ಕೆ ಪ್ರತಿಯೋರ್ವರು ತುಂಬು ಹೃದಯದ ಪ್ರೋತ್ಸಾಹವನ್ನು ನೀಡಬೇಕು ಮತ್ತು ಕಂಬಳವನ್ನು ಆಚರಿಸಿಕೊಂಡು ಬರುತ್ತಿರುವ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರ ತಂಡಕ್ಕೆ ಕಂಬಳ ಕೂಟವು ಯಶಸ್ವಿಯಾಗಲೆಂದು ಹಾರೈಸಬೇಕಾಗಿದೆ. ಈ ನಿಟ್ಟಿನಲ್ಲಿ ಕಂಬಳದ ವಿಶೇಷತೆ ಬಗ್ಗೆ ಎಲಿಮೆಂಟ್ರಿ ಶಾಲೆಯ ಪಠ್ಯಪುಸ್ತಕದಲ್ಲಿ ಮುದ್ರಿಸಬೇಕು ಸೀತಾರಾಮ್ ರೈ, ಸಂಚಾಲಕರು, ಸವಣೂರು ವಿದ್ಯಾರಶ್ಮಿ ಶಿಕ್ಷಣ ಸಂಸ್ಥೆಗಳು

ಕಂಬಳದ ದಿನ ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ದೇವರಿಂದ ಅನುಮತಿಯನ್ನು ಪಡೆದುಕೊಂಡು, ಬಳಿಕ ದೇವಸ್ಥಾನದ ಎದುರಿನಿಂದಲೇ ಕೋಣಗಳನ್ನು ಮೆರವಣಿಗೆಯಲ್ಲಿ ಕರೆಯ ಸಮೀಪಕ್ಕೆ ತರಲಾಯಿತು. ಇದೇ ಸಂದರ್ಭದಲ್ಲಿ ದೇವರ ಗದ್ದೆಯಲ್ಲಿರುವ ಮೂಲ ನಾಗನಿಗೆ ವಿಶೇಷ ತಂಬಿಲ ಸೇವೆಯೂ ನಡೆಯಿತು. ನಾಗದೇವರು, ಮಹಾಲಿಂಗೇಶ್ವರ ದೇವರು, ಬಲ್ನಾಡು ದಂಡನಾಯಕ ಉಳ್ಳಾಲ್ತಿ, ಕಾನತ್ತೂರು ನಾಲ್ವರ್ ದೈವಗಳ ಕ್ಷೇತ್ರದ ಪ್ರಸಾದವನ್ನು ಕಂಬಳ ಕರೆಗೆ ಸಮರ್ಪಿಸಿ ವಿಶೇಷ ಪ್ರಾರ್ಥನೆ ಮಾಡಲಾಯಿತು. ಜನಪದ ಕ್ರೀಡೆಯಾಗಿ ಕಂಬಳ ಕಂಗೊಳಿಸಿದರೂ ದೇವರ ಸೇವೆ ಎಂಬ ಮಾದರಿಯಲ್ಲಿ ಈ ಧಾರ್ಮಿಕ ಕಾರ್ಯವನ್ನು ನಡೆಸಲಾಗುತ್ತದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.