Home_Page_Advt
Home_Page_Advt
Home_Page_Advt
Breaking News

ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಎಸ್.ಕೆ. ಆನಂದ್, ಜಗದೀಶ್ ಆಚಾರ್ಯ, ಸುರೇಶ್ ರೈ ಸೂಡಿಮುಳ್ಳು ಆಯ್ಕೆ

ಇಂದು (ಜ.26) ಮಂಗಳೂರು ನೆಹರೂ ಮೈದಾನದಲ್ಲಿ ಪ್ರಶಸ್ತಿ ಪ್ರದಾನ

ಪುತ್ತೂರು: ೨೦೧೯-೨೦ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ಮಾಸ್ಟರ್ ಪ್ಲಾನರಿಯ ಮಾಲಕ ಎಸ್.ಕೆ. ಆನಂದ ಕುಮಾರ್, ಯುವ ಹಾಡುಗಾರ ಜಗದೀಶ್ ಆಚಾರ್ಯ ಮತ್ತು ಸಂಘಟಕ ಸುರೇಶ್ ರೈ ಸೂಡಿಮುಳ್ಳುರವರು ಆಯ್ಕೆಯಾಗಿದ್ದಾರೆ.


ದ.ಕ. ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್‌ರವರು ೨೦೧೯-೨೦ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆಗೊಳಿಸಿದ್ದು ಈ ಪಟ್ಟಿಯಲ್ಲಿರುವ ವಿವಿಧ ಕ್ಷೇತ್ರಗಳ ಸಾಧಕರ ಪೈಕಿ ಪುತ್ತೂರು ತಾಲೂಕಿನ ಮಂಜಲ್ಪಡ್ಪುವಿನ ಎಸ್.ಕೆ. ಆನಂದ್ ಕುಮಾರ್, ನೆಹರೂನಗರದ ಜಗದೀಶ್ ಆಚಾರ್ಯ ಮತ್ತು ಕಡಬ ತಾಲೂಕು ಸವಣೂರಿನ ಸುರೇಶ್ ರೈ ಸೂಡಿಮುಳ್ಳುರವರು ಸೇರಿದ್ದಾರೆ.
ಜ.26ರಂದು ಪೂರ್ವಾಹ್ನ ೯ ಗಂಟೆಗೆ ಮಂಗಳೂರು ನೆಹರೂ ಮೈದಾನದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮ ನಡೆದ ನಂತರ ಜರಗಲಿರುವ ೨೦೧೯-೨೦ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯೋತ್ಸವ ಆಚರಣೆ ಪ್ರಯುಕ್ತ ನೀಡುವ ಜಿಲ್ಲಾ ಪ್ರಶಸ್ತಿ ವಿತರಣೆ ಸಂದರ್ಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
ಎಸ್.ಕೆ. ಆನಂದ್‌ರವರ ಪರಿಚಯ: ಪುತ್ತೂರು ತಾಲೂಕಿನ ಮಂಜಲ್ಪಡ್ಪು ನಿವಾಸಿಯಾಗಿದ್ದು ಮಾಸ್ಟರ್ ಪ್ಲಾನರಿಯ ಮಾಲಕರಾಗಿರುವ ಎಸ್.ಕೆ.ಆನಂದ ಕುಮಾರ್‌ರವರು ಹಳೆನೇರೆಂಕಿಯ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಹಾಗೂ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಆಡಳಿತ ಮೊಕ್ತೇಸರರಾಗಿದ್ದಾರೆ. ತನ್ನ ಪುತ್ರ ಅರ್ಜುನ್‌ರವರ ವಿವಾಹ ಮಹೋತ್ಸವವನ್ನು ಸೊರಕೆಯಲ್ಲಿರುವ ಪ್ರಕೃತಿ ಬೀಡು `ನನ್ನ ವನ’ದಲ್ಲಿ ನಡೆಸಿ ಸಹಸ್ರಾರು ಜನರ ಮನಸೊರೆಗೊಳ್ಳುವಂತೆ ಪ್ರಕೃತಿ ಪ್ರೇಮ ಮೆರೆದಿದ್ದ ಎಸ್.ಕೆ. ಆನಂದರವರ ಸಂಶೋಧನೆಯ ಫಲವೇ `ಕಾಂಕ್‌ವುಡ್’ ಸಿಮೆಂಟ್ ಪೀಠೋಪಕರಣಗಳಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಇವುಗಳ ಉಪಯೋಗ ಅಪಾರವಾಗಿದೆ. ರಾಜ್ಯ-ಹೊರ ರಾಜ್ಯಗಳಲ್ಲಿಯೂ ಈ ಪೀಠೋಪಕರಣಗಳು ಅಪಾರ ಜನಪ್ರಿಯತೆ ಹೊಂದಿವೆ. ಇವರ ಉದ್ಯಮದ ಘಟಕಗಳು ಹಳೆನೇರೆಂಕಿ, ಅಳಕೆ ಮಜಲು, ಪುತ್ತೂರು, ಕೆಮ್ಮಾಯಿ, ಶಿಶಿಲ, ಮಾಡಾವು ಮುಂತಾದ ಕಡೆಗಳಲ್ಲಿವೆ. ಇವುಗಳಲ್ಲಿ ಸುಮಾರು ಸಾವಿರಕ್ಕಿಂತ ಮೇಲ್ಪಟ್ಟು ಉದ್ಯೋಗಸ್ಥರಿದ್ದಾರೆ. ಇವರ ಕಂಪೆನಿಯಿಂದ ಸಾಕಷ್ಟು ಬೃಹತ್ ಕಟ್ಟಡಗಳ ನಿರ್ಮಾಣವೂ ಆಗಿದೆ.ಸುಳ್ಯದಲ್ಲಿ ಸ್ನೇಹಿತರ ಜೊತೆ ಆದರ್ಶ ಕನ್ನಡ ಶಾಲೆ ನಡೆಸುತ್ತಿರುವ ಆನಂದರವರು ಈಶ್ವರ ಭಟ್ (ಎಸ್.ಕೆ.ಮಾಸ್ಟರ್) ಸರಸ್ವತಿ ದಂಪತಿಯ ಪುತ್ರನಾಗಿದ್ದು ಎಂ.ಟೆಕ್ ಪದವೀಧರರಾಗಿದ್ದಾರೆ. ಸುರತ್ಕಲ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿ ಅಲ್ಲೇ ೨ ವರ್ಷ ಉಪನ್ಯಾಸಕರಾಗಿದ್ದರು. ತಂದೆಯವರು ಆರಂಭಿಸಿದ್ದ ಸಣ್ಣ ಉದ್ಯಮವನ್ನು ದೊಡ್ಡ ಪ್ರಮಾಣದಲ್ಲಿ ನಡೆಸುವ ಉzಶದಿಂದ ಉದ್ಯೋಗ ಬಿಟ್ಟು ಮಾಸ್ಟರ್ ಪ್ಲಾನರಿ ಸಂಸ್ಥೆಯನ್ನು ಪುತ್ತೂರಲ್ಲಿ ಹುಟ್ಟು ಹಾಕಿದರು. ತಮ್ಮ ಮಕ್ಕಳಾದ ಅಕ್ಷಯ್ ಎಸ್.ಕೆ., ಅರ್ಜುನ್ ಎಸ್.ಕೆ., ಆಕಾಶ ಎಸ್.ಕೆ., ಕೀರ್ತಿ ಎಸ್.ಕೆ.ರವರನ್ನು ಸಿವಿಲ್ ಎಂಜಿನಿಯರ್‌ಗಳನ್ನಾಗಿ ವಿದೇಶದಲ್ಲಿ ಶಿಕ್ಷಣ ಕೊಡಿಸಿ ತಮ್ಮ ಉದ್ಯಮದಲ್ಲೇ ತೊಡಗಿಸಿಕೊಂಡು ಮಾದರಿಯಾಗಿದ್ದಾರೆ. ಸೊಸೆಯಂದಿರು ಮತ್ತು ಪತ್ನಿ ರೇಖಾ ಆನಂದ್‌ರವರು ಕೇವಲ ಗೃಹಿಣಿಯಾಗಿ ಮಾತ್ರವಲ್ಲ ಎಲ್ಲರನ್ನೂ ಒಂದಾಗಿ ಬೆಸೆದುಕೊಂಡು ಮಮತಾಮಯಿ, ತ್ಯಾಗಮಯಿಗಳಾಗಿ ಉದ್ಯಮದಲ್ಲಿ ಸಾಥ್ ನೀಡಿ ಕಂಪೆನಿಯ ಯಶಸ್ವಿನ ಪಾಲುದಾರರೂ ಆಗಿದ್ದಾರೆ. ಸ್ನೇಹ ಸೌಹಾರ್ದ ಸಹಕಾರಿ ಸಂಘದ ಮೂಲಕ ಆನಂದರವರು ಸಹಕಾರಿ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಹಲವು ಕವನ ಸಂಕಲನ ಕೃತಿಗಳನ್ನು ರಚಿಸಿರುವ ಇವರು ರೋಟರಿ ಉದ್ಯೋಗ ಪ್ರಶಸ್ತಿ, ದಾವಣಗೆರೆಯಲ್ಲಿ ಪರಿಸರ ಪ್ರೇಮಿ ಪ್ರಶಸ್ತಿ, ಎಂಜಿನಿಯರ್ ಆಫ್‌ದ ಇಯರ್ ೨೦೦೩ ಸುಳ್ಯ, ವಿಶ್ವೇಶ್ವರಯ್ಯ ಪ್ರಶಸ್ತಿ ಮುಂತಾದ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಹಳೆನೇರೆಂಕಿ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಹಾಗೂ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ೪೦ ವರ್ಷಗಳಿಂದ ಸ್ಥಗಿತಗೊಂಡಿದ್ದ ಆರಾಧನೆಯನ್ನು ಪುನರಾರಂಭಿಸಿ ದಶ ವರ್ಷಗಳು ಸಂದಿರುವ ಪುಣ್ಯ ಕಾಲದಲ್ಲಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಎಸ್.ಕೆ.ಆನಂದ್ ಮತ್ತು ರೇಖಾ ಆನಂದ್‌ರವರಿಗೆ ಇದೇ ಜನವರಿ ೧೦ರಂದು ಹಳೆನೇರೆಂಕಿಯಲ್ಲಿ ನಡೆದ ಧರ್ಮಜಾಗೃತಿ ಸಭೆಯಲ್ಲಿ ಊರ ಭಕ್ತರಿಂದ ಸಾರ್ವಜನಿಕ ಸನ್ಮಾನ ನಡೆದಿತ್ತು.
ಜಗದೀಶ್ ಆಚಾರ್ಯ: ನೆಹರೂ ನಗರದ ಗೋಪಾಲಕೃಷ್ಣ ಆಚಾರ್ಯ ಮತ್ತು ವಾರಿಜಾ ಆಚಾರ್ಯ ದಂಪತಿಯ ಪುತ್ರರಾದ ಜಗದೀಶ ಆಚಾರ್ಯರವರು ಕರಾವಳಿ ಕರ್ನಾಟಕದ ಸಂಗೀತ ಲೋಕದ ಸ್ವರ ಮಾಂತ್ರಿಕ ಎಂದೇ ಕರೆಸಿಕೊಳ್ಳುತ್ತಿದ್ದು, ಕಳೆದ ೧೬ ವರ್ಷದಿಂದ ದೇಶ ವಿದೇಶಗಳಲ್ಲಿ ಸಾವಿರಾರು ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ.ಹಲವಾರು ಧ್ವನಿ ಸುರುಳಿಗಳಿಗೆ ಸಂಗೀತ ಸಯೋಜನೆ ಮಾಡಿರುವ ಇವರು ಭಕ್ತಿಗೀತೆ, ಭಾವಗೀತೆ, ಜಾನಪದ, ಸಿನೆಮಾ ಹಾಡುಗಳನ್ನು ಹಾಡಿದ್ದಾರೆ. ಜೂನಿಯರ್ ಜೇಸುದಾಸ್ ಎಂದೇ ಕರೆಯಲ್ಪಡುವ ಜಗದೀಶ್ ಆಚಾರ್ಯರವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ೩ ಬಾರಿ ಚಿನ್ನದ ಪದಕ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಂಗೀತ ರತ್ನ ಪ್ರಶಸ್ತಿಗೆ ಭಾಜನರಾಗಿದ್ದ ಇವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ೫ ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ ಅವರ ಸಮ್ಮುಖದಲ್ಲಿ ಸಂಗೀತ ಕಾರ್ಯಕ್ರಮ ನೀಡಿ ಗಮನ ಸೆಳೆದಿದ್ದರು. ವಂದೇ ಮಾತರಂ ಆಲ್ಬಾಮ್ ಸ್ಪರ್ಧೆಯಲ್ಲಿ ದೇಶದ ಮೂಲೆ ಮೂಲೆಗಳಿಂದ ಸ್ಪರ್ಧಿಸಿದ್ದ ೧೮೨ ಜನ ಸ್ಪರ್ಧಿಗಳ ಪೈಕಿ ಮೊದಲ ಸ್ಥಾನ ಹಾಗು ೨ ಲಕ್ಷ ರೂಪಾಯಿ ನಗದು ಬಹುಮಾನ ಗಳಿಸಿದ್ದ ಇವರು ಸ್ವರ ಲಾಲಿತ್ಯ ಪ್ರವೀಣ ಬಿರುದು ಮತ್ತು ಚಿನ್ನದ ಪದಕ, ಸ್ವಂತ ಸಂಗೀತ ನಿರ್ದೇಶನ ಮತ್ತು ಗಾಯನದಲ್ಲಿ ಹಲವಾರು ಧ್ವನಿಸುರುಳಿಗಳ ಬಿಡುಗಡೆ, ಕುವೈಟ್‌ನಲ್ಲಿ ೨ ಬಾರಿ, ಕತಾರ್ ಹಾಗೂ ಬೆಹರೈನ್ ದೇಶಗಳಲ್ಲಿ ಸಂಗೀತ ಕಾರ್ಯಕ್ರಮ, ಸ್ವತಃ ಸಾಹಿತ್ಯ ಬರೆದು (ಭಕ್ತಿಗೀತೆ) ಸಂಗೀತ ನಿರ್ದೇಶನ ಮತ್ತು ಹಾಡುಗಾರಿಕೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯ ಥೀಮ್ ಸಾಂಗ್‌ನ ಸಂಗೀತ ನಿರ್ದೇಶನ ಮಾಡಿದ್ದರು. ಸಂಗೀತ ಕ್ಷೇತ್ರದ ಸಾಧನೆಗಾಗಿ ಜಗದೀಶ್‌ರವರು ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಸುರೇಶ್ ರೈ ಸೂಡಿಮುಳ್ಳು ಪರಿಚಯ: ಸುರೇಶ್ ರೈ ಸೂಡಿಮುಳ್ಳು ರವರು ೨೦೦೪-೦೫ನೇ ಸಾಲಿನಲ್ಲಿ ಸವಣೂರು ಯುವಕ ಮಂಡಲದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ೫೨೭ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿ ರಾಜ್ಯದ ಗಮನ ಸೆಳೆದಿದ್ದರು. ಈ ಅವಧಿಯಲ್ಲಿ ಸವಣೂರು ಯುವಕ ಮಂಡಲಕ್ಕೆ ಜಿಲ್ಲಾ ಅತ್ಯುತ್ತಮ ಸಾಂಕ ಪ್ರಶಸ್ತಿ ಹಾಗೂ ಸುರೇಶ್ ರೈ ಅವರಿಗೆ ವೈಯಕ್ತಿಕ ಜಿಲ್ಲಾ ಯುವ ಪ್ರಶಸ್ತಿ ಮತ್ತು ಯುವಕ ಮಂಡಲಕ್ಕೆ ಕರ್ನಾಟಕ ಸರಕಾರದ ರಾಜ್ಯ ಅತ್ಯುತ್ತಮ ಸಾಂಕ ಪ್ರಶಸ್ತಿ, ಸುರೇಶ್ ರೈರವರಿಗೆ ರಾಜ್ಯ ಯುವ ಪ್ರಶಸ್ತಿ ದೊರಕಿತ್ತು.
೨೦೦೭ರಲ್ಲಿ ಬೆಂಗಳೂರಿನ ಕುಂಬಳಗೋಡಿನಲ್ಲಿ ನಡೆದ ರಾಜ್ಯಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಮಾತೃಭೂಮಿ ಸಂಸ್ಥೆಯಿಂದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ದೊರಕಿತ್ತು.
ನೆಲ್ಯಾಡಿ ಅಮ್ಮುಂಜೆ ನಾರಾಯಣ ರೈ ಮತ್ತು ರಾಮಕ್ಕೆ ದಂಪತಿಯ ಪುತ್ರನಾಗಿ ೧-೭-೧೯೭೧ರಾಗಿ ಜನಿಸಿದ ಇವರು ಪುಣ್ಚಪ್ಪಾಡಿ, ಸವಣೂರು ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸವಣೂರು ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು. ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಕ್ಕೆ ಸೇರಿ ನಂತರ, ಜೀಪು ಚಾಲಕನಾಗಿ ಸವಣೂರಿನಲ್ಲಿ ವೃತ್ತಿ ಜೀವನ ಆರಂಭಿಸಿದ್ದರು.
೨೦೦೮ರಲ್ಲಿ ನರಿಮೊಗರು ಜೆಸಿಐನ ಅಧ್ಯಕ್ಷರಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ಸುರೇಶ್ ರೈಯವರು ವಲಯ ಜೂನಿಯರ್ ಜೇಸಿ ಸಮ್ಮೇಳನ ಜೇನುಗೂಡು ಕಾರ್ಯಕ್ರಮ ನಡೆಸಿ ಪ್ರಶಂಸೆಗೆ ಪಾತ್ರರಾಗಿದ್ದರು. ಈ ಅವಧಿಯಲ್ಲಿ ನರಿಮೊಗರು ಜೆಸಿಐಗೆ ಅತ್ಯುತ್ತಮ ಘಟಕ ಪ್ರಶಸ್ತಿ, ಜೆಜೆಸಿ ಸಮ್ಮೇಳನದಲ್ಲಿ ಉತ್ತಮ ಘಟಕ ಪ್ರಶಸ್ತಿ, ಜೆಸಿರೇಟ್ ಸಮ್ಮೇಳನದಲ್ಲೂ ಉತ್ತಮ ಜೇಸಿರೇಟ್ ಘಟಕ, ವ್ಯವಹಾರ ವಿಭಾಗದಲ್ಲಿ ೪ನೇ ಸ್ಥಾನ, ವಲಯ ಸಮ್ಮೇಳನದಲ್ಲಿ ಅಂಕಗಳ ಆಧಾರದಲ್ಲಿ ರಾಷ್ಟ್ರೀಯ ಪ್ರಶಸ್ತಿ, ಸಮುದಾಯ ಅಭಿವೃದ್ಧಿ ಅತ್ಯುತ್ತಮ ಘಟಕ ಸೇರಿದಂತೆ ೨೦ಕ್ಕೂ ಅಧಿಕ ಪ್ರಶಸ್ತಿಗಳು ದೊರಕಿತ್ತು.
ಯುವಕ ಮಂಡಲದ ಕಾರ್ಯ ಚಟುವಟಿಕೆಗಳ ಮೂಲಕ ಸಂಘಟನಾತ್ಮಕವಾಗಿ ತೊಡಗಿಸಿಕೊಂಡ ಇವರು ಪುತ್ತೂರು ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷರಾಗಿ ತಾಲೂಕು ಯುವಜನ ಮೇಳಗಳಲ್ಲಿ ಯುವ ಪ್ರಶಸ್ತಿಗಳನ್ನು ಒಕ್ಕೂಟದ ವತಿಯಿಂದ ನೀಡಿ ಹಲವು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದರು.ಅಲ್ಲದೇ ತಾಲೂಕು ಯುವಜನ ಮೇಳಗಳಲ್ಲಿ ಭಾಗವಹಿಸಿದವರಿಗೆ ನಗದು ಪ್ರೋತ್ಸಾಹಧನ ನೀಡುವ ಮೂಲಕ ರಾಜ್ಯದಲ್ಲಿಯೇ ದಾಖಲೆಯ ಸ್ಪರ್ಧಿಗಳು ತಾಲೂಕು ಯುವಜನ ಮೇಳದಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು.
ಜಿಲ್ಲಾ ಯುವಜನ ಒಕ್ಕೂಟದ ಕಾರ್ಯದರ್ಶಿಯಾದ ಬಳಿಕ ಜಿಲ್ಲಾದ್ಯಂತ ಯುವಕ ಮಂಡಲಗಳ ನೊಂದಾವಣೆ ಮಾಡಿಸಿದ್ದರು. ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷರಾದ ಬಳಿಕ ಪುತ್ತೂರಿನ ಸುದಾನ ಶಾಲೆಯಲ್ಲಿ ರಾಜ್ಯಮಟ್ಟದ ಯುವಜನ ಮೇಳ ಆಯೋಜಿಸಿ ರಾಜ್ಯದ ೩೦ ಜಿಲ್ಲೆಗಳಿಂದ ಸುಮಾರು ೬೦ ಸಾವಿರ ಕಲಾವಿದರನ್ನು ಸೇರಿಸಿರುವುದು ದಾಖಲೆಯಾಗಿತ್ತು. ಅಲ್ಲದೆ ೨೦೧೯-೨೦ನೇ ಸಾಲಿನ ರಾಷ್ಟ್ರೀಯ ಯುವ ಸಮ್ಮಾನ್ ಪ್ರಶಸ್ತಿಗೂ ಭಾಜನರಾಗಿದ್ದರು.
೨೦೧೯ ಜನವರಿಯಲ್ಲಿ ರಾಜ್ಯ ಯುವ ಸಂಘಗಳ ಒಕ್ಕೂಟದ ಕಾರ್ಯದರ್ಶಿಯಾಗಿ ಆಯ್ಕೆಯಾದ ಬಳಿಕ ಸವಣೂರಿನ ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆಯ ಅಂಗವಾಗಿ ರಾಜ್ಯ ಯುವ ಸಮ್ಮೇಳನ ರಾಜ್ಯ ಯುವ ಮತ್ತು ಸಾಂಕ ಪ್ರಶಸ್ತಿ ಪ್ರದಾನ, ತರಬೇತಿ ಕಾರ್ಯಕ್ರಮಗಳನ್ನು ನಡೆಸಿದ್ದರು.
ಅಲ್ಲದೆ ಸವಣೂರಿನಲ್ಲಿ ಹಲವು ತಾಲೂಕು, ಜಿಲ್ಲಾ ಮಟ್ಟದ ಯುವಜನ ಮೇಳ ನಡೆಸುವಲ್ಲಿಯೂ ಇವರ ಪಾತ್ರ ಮಹತ್ವದ್ದಾಗಿತ್ತು.
ಸವಣೂರು ಎಸ್.ಜೆ.ಸಿ.ಯ ಅಧ್ಯಕ್ಷರಾಗಿ, ಸವಣೂರು ವಲಯ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿ, ಸವಣೂರು ಹಿಂದೂಜಾಗರಣ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಪ್ರಸ್ತುತ ಸವಣೂರು ವರ್ತಕರ ಸಂಘದ ಕಾರ್ಯದರ್ಶಿಯಾಗಿ, ಪುತ್ತೂರು ತಾಲೂಕು ಧ್ವನಿ, ಬೆಳಕು ಮತ್ತು ಶಾಮಿಯಾನ ಒಕ್ಕೂಟದ ಅಧ್ಯಕ್ಷರಾಗಿ, ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷರಾಗಿ, ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಗೌರವ ಸಲಹೆಗಾರರಾಗಿ, ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವರ್ಷಂಪ್ರತಿ ನವೆಂಬರ್ ೧ರಂದು ನಡೆಯುವ ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವ ಪರಿಪಾಠ ಇದ್ದರೂ ಈ ಬಾರಿ ರಾಜ್ಯೋತ್ಸವದ ಸಂದರ್ಭದಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಹಿನ್ನೆಲೆಯಲ್ಲಿ ಇದೀಗ ಪ್ರಶಸ್ತಿ ಪ್ರಕಟವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.