Home_Page_Advt
Home_Page_Advt
Home_Page_Advt
Breaking News

ಕಾರ್ಪಾಡಿ ಉಳ್ಳಾಲ್ತಿ, ಉಳ್ಳಾಕುಲು, ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ

  • ದೇವಸ್ಥಾನಗಳಂತೆ ಮನಸ್ಸಿನ ಜೀರ್ಣೋದ್ಧಾರವಾಗಲಿ-ಡಾ|ಪ್ರಭಾಕರ್ ರಾವ್

ಪುತ್ತೂರು: ಧರ್ಮ ಬಿಟ್ಟು ಅಧರ್ಮದ ಹಿಂದೆ ಹೋದರೆ ಅನೇಕತೆಯಲ್ಲಿ ಏಕತೆ ಎಂಬುದು ಮರೀಚಿಕೆಯಾಗುತ್ತದೆ. ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರವಾದಾಗ ಅಲ್ಲಿ ದೇವರು, ದೈವಗಳು ಗಟ್ಟಿಯಾಗಿ ನೆಲೆಯಾಗುತ್ತಾರೆ ಎಂಬುದು ನಿಜ. ಆದರೆ ದೇವಸ್ಥಾನಗಳ, ದೈವಸ್ಥಾನಗಳ ಜೀರ್ಣೋದ್ಧಾರವಾದಂತೆ ಮಾನವನ ಮನಸ್ಸಿನ ಜೀರ್ಣೋದ್ಧಾರವೂ ಆದಾಗ ಎಲ್ಲವೂ ಸುಭೀಕ್ಷೆಯಾಗಬಲ್ಲುದು ಎಂದು ಸ್ಥಳೀಯರೂ ಆಗಿದ್ದು, ಪ್ರಸ್ತುತ ಬೆಂಗಳೂರು ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರಾದ ಡಾ|ಪ್ರಭಾಕರ್ ರಾವ್‌ರವರು ಹೇಳಿದರು.

ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ ಪದ್ಮಭೂಷಣ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಶುಭಾರ್ಷಿವಾದದೊಂದಿಗೆ ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಶ್ರೀ ಉಳ್ಳಾಲ್ತಿ, ಉಳ್ಳಾಕುಲು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಉಳ್ಳಾಲ್ತಿ, ಉಳ್ಳಾಕುಲು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಫೆ.12 ರಿಂದ 14ರ ವರೆಗೆ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ್ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗುತ್ತಿದ್ದು ಫೆ.14 ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಧಾರ್ಮಿಕ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಸನಾತನ ಧರ್ಮಕ್ಕೆ ರೂಪುರೇಷೆ ಕೊಟ್ಟವರು ವೇದವ್ಯಾಸರು. ಧರ್ಮವು ಭಾವುಕತೆಯನ್ನು ಕೊಟ್ಟರೆ, ಆಚರಣೆಗಳು ಮೆರುಗನ್ನು ಹೆಚ್ಚಿಸುತ್ತವೆ. ಯಾವುದೇ ಕಲ್ಮಶವಿಲ್ಲದೆ, ಸತ್-ಚಿಂತನೆಯಿಂದ, ಧನಾತ್ಮಕ ಚಿಂತನೆಯಿಂದ ದೈವ-ದೇವರ ಸಾನಿಧ್ಯವನ್ನು ಅಭಿವೃದ್ಧಿ ಪಡಿಸುವುದು ಧರ್ಮವಾಗಿದೆ. ಧರ್ಮಕ್ಕೆ ಯಾವುದೇ ಬೇಧ-ಭಾವವಿಲ್ಲ, ಮೇಲು-ಕೀಳು ಎಂಬ ಭಾವನೆಯಿಲ್ಲ. ಅಂಧಕಾರದಿಂದ ಬೆಳಕಿನೆಡೆಗೆ ಧೀಶಕ್ತಿ ಕೊಡುವ ಧರ್ಮವೇ ಸನಾತನ ಧರ್ಮವಾಗಿದೆ ಎಂದ ಅವರು ಕಾರ್ಪಾಡಿ ಕ್ಷೇತ್ರದ ಈ ಭಾಗದಲ್ಲಿ ಮೊದಲು ದೈವಗಳಿಗೆ ಬ್ರಹ್ಮಕಲಶೋತ್ಸವ ಮಾಡುವ ಮೂಲಕ ದೈವಗಳು ನೆಲೆಯಾಗುವಂತೆ ಪೂಜೆ-ಪುರಸ್ಕಾರಗಳು ನಡೆದಿವೆ. ಅದರಂತೆ ಇಲ್ಲಿನ ದೈವೀಶಕ್ತಿಗಳು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಳಸ ಅದ್ದೂರಿಯಾಗಿ ನಡೆಯಲು ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಧರ್ಮದ ಬಗ್ಗೆ ಟೀಕೆಗಳನ್ನು ಯಾವುದೇ ಧರ್ಮವು ಒಪ್ಪುವುದಿಲ್ಲ. ಕ್ಷಣಿಕ ಜೀವನದಲ್ಲಿ ಮಾನವ ಸತ್ಯಸಂಧರಾಗಿ, ಪ್ರಾಮಾಣಿಕತೆಯಿಂದ ಮಾಡುವ ಒಳ್ಳೆಯ ಕೆಲಸಗಳು ಶಾಶ್ವತವಾಗಿ ಉಳಿಯುತ್ತದೆ. ಮಾನವ ಸಂಪತ್ತಿನ ಹಿಂದೆ ಹೋಗದೆ ಮನುಷ್ಯತ್ವವನ್ನು ಮೈಗೂಡಿಸಿಕೊಂಡು ಪರಸ್ಪರ ಭ್ರಾತೃತ್ವದ ಮನೋಭಾವನೆಯೊಂದಿಗೆ ಜೀವಿಸುವುದು ಅತ್ಯಾವಶ್ಯಕವಾಗಿದೆ ಎಂದು ಅವರು ಹೇಳಿದರು.

ಭಾರತ ದೇಶದ ಪವಿತ್ರ ಮಣ್ಣನ್ನು ಗೌರವಿಸಿ…
ಸೂರ್ಯನ ಪ್ರಖರ ಬೆಳಕು, ಪ್ರಭೆ, ಶಕ್ತಿಯನ್ನು ರಾತ್ರಿ ಹೊತ್ತು ಹಣತೆ ಕೊಡಬಲ್ಲುದು. ಹೇಗೆ ನರೇಂದ್ರ ಹೆಸರಿನಲ್ಲಿ ಚಿಕಾಗೋ ಸಮ್ಮೇಳನದಲ್ಲಿ ಭಾಗವಹಿಸಿ ಅಲ್ಲಿಯ ಜನಸಮೂಹಕ್ಕೆ `ಸೋದರರೇ, ಸೋದರಿಯರೇ’ ಎನ್ನುವ ಮೂಲಕ ಅಲ್ಲಿನ ಜನರ ಪ್ರೀತಿ ಸಂಪಾದಿಸಿ ಸ್ವಾಮಿ ವಿವೇಕಾನಂದರು ಆದರೋ, ಹಾಗೆಯೇ ಮನುಷ್ಯ ಕೂಡ ತನ್ನ ಸಾರ್ವಜನಿಕ ಜೀವನದಲ್ಲಿ ಒಳ್ಳೆಯದನ್ನು ಮಾಡುವ ಮೂಲಕ ಮತ್ತೊಬ್ಬರಿಗೆ ಬೆಳಕಾಗಬೇಕು. ಭೂಮಿ ತಾಯಿ ಸಮಾನ, ಈ ಪವಿತ್ರ ಮಣ್ಣನ್ನು ಎಲ್ಲರೂ ಗೌರವಿಸಬೇಕು. ದೈವ-ದೇವರುಗಳ ಪರಂಪರೆಯನ್ನು ಮುಂದಿನ ಪೀಳಿಗೆಗೆ ನೆನಪು ಮಾಡಿಸಿ ಧರ್ಮಾಧರಿತವಾಗಿ ಬಾಳಬೇಕು ಎನ್ನುವುದು ಧಾರ್ಮಿಕ ಸಭೆಗಳು ತಿಳಿಸುತ್ತವೆ. ಪ್ರಸ್ತುತ ಇಲ್ಲಿನ ದೇವಸ್ಥಾನದ ವರೆಗೆ ಡಾಮಾರೀಕರಣವಾಗಿದ್ದು ಮುಂದಿನ ದಿನಗಳಲ್ಲಿ ಶಾಸಕರ ನಿಧಿಯಿಂದ ಅಥವಾ ಧಾರ್ಮಿಕ ಧತ್ತಿ ಇಲಾಖೆಯ ನಿಧಿಯಿಂದ ಉಳಿದ ಭಾಗವನ್ನು ಕಾಂಕ್ರೀಟೀಕರಣಗೊಳಿಸುತ್ತೇವೆ ಸಂಜೀವ ಮಠಂದೂರು, ಶಾಸಕರು

ದೇವಸ್ಥಾನ/ದೈವಸ್ಥಾನಗಳ ಜೀರ್ಣೋದ್ಧಾರವಾದರೆ ಗ್ರಾಮ ಸುಭೀಕ್ಷೆ-ಮೀನಾಕ್ಷಿ ಶಾಂತಿಗೋಡು:
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡುರವರು ಮಾತನಾಡಿ, ಯಾವುದೇ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ಧಾರವಾದರೆ ಆ ಗ್ರಾಮವು ಸುಭೀಕ್ಷೆಯತ್ತ ಸಾಗುತ್ತದೆ. ಪರಶುರಾಮನ ಸೃಷ್ಟಿಯಾಗಿರುವ ಮತ್ತು ಋಷಿಮುನಿಗಳು ಜೀವಿಸಿದ್ದ ಈ ನಾಡಿನಲ್ಲಿ ನಾವು ನೆಲೆಗೊಂಡಿದ್ದೇವೆ ಎಂಬುದು ನಮಗೆ ಹೆಮ್ಮೆಯಾಗಿದೆ. ಕೇವಲ ಬ್ರಹ್ಮಕಲಶದ ಸಂದರ್ಭಗಳಲ್ಲಿ ಮಾತ್ರ ದೇವಸ್ಥಾನಗಳಲ್ಲಿ ಭಾಗವಹಿಸುವುದು ಅಲ್ಲ, ದಿನನಿತ್ಯ ದೇವಸ್ಥಾನಗಳಿಗೆ ಭೇಟಿ ಕೊಟ್ಟು ದೇವರಲ್ಲಿ ಪ್ರಾರ್ಥಿಸುವುದು ನಿತ್ಯ ರೂಢಿಯಾಗಬೇಕು ಎಂದರು.

ಆರ್ಯಾಪು ಎಂಬುದು ದೇವರ ಗ್ರಾಮವಾಗಿದೆ-ಬೋರ್ಕರ್:
ತಾಲೂಕು ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ರವರು ಮಾತನಾಡಿ, ೧೮ ವರುಷದ ಹಿಂದೆ ಕಾರ್ಪಾಡಿ ಕ್ಷೇತ್ರವನ್ನು ಪುತ್ತೂರಾಯ ಕುಟುಂಬ ಸ್ಥಾಪನೆ ಮಾಡಿದ್ದಾಗಿದೆ. ಪ್ರಸ್ತುತ ಅಜೀರ್ಣವಸ್ಥೆಯಲ್ಲಿದ್ದ ಇಲ್ಲಿನ ಸುಬ್ರಹ್ಮಣ್ಯ ದೇವಸ್ಥಾನದ ಉಳ್ಳಾಲ್ತಿ, ಉಳ್ಳಾಕುಲು, ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವಾಗುತ್ತಿರುವ ಹಿಂದೆ ಯುವಸಮೂಹದ ಕೈಂಕರ್ಯವನ್ನು ಮೆಚ್ಚಬೇಕಾಗಿದೆ. ಇದನ್ನು ಮುಂದಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಇಲ್ಲಿನ ಪ್ರತಿಯೋರ್ವ ಗ್ರಾಮಸ್ಥರ ಮೇಲಿದೆ ಎಂದ ಅವರು ದೇವಸ್ಥಾನ, ದೈವಸ್ಥಾನ, ಮಂದಿರ, ಶಾಲೆಗಳ ಜೀರ್ಣೋದ್ಧಾರವಾದಾಗ ದೇವರ ಆಶೀರ್ವಾದ ಖಂಡಿತಾ ಒಲಿಯುತ್ತದೆ. ಆರ್ಯಾಪು ಎಂಬುದು ದೇವರ ಗ್ರಾಮ. ಮುಂದಿನ ದಿನಗಳಲ್ಲಿ ಇಲ್ಲಿನ ಸುಬ್ರಹಣ್ಯ ದೇವಸ್ಥಾನವೂ ಜೀರ್ಣೋದ್ಧಾರ ಹೊಂದಲಿ ಎನ್ನುವುದೇ ನಮ್ಮ ಹಾರೈಕೆಯಾಗಿದೆ ಎಂದು ಅವರು ಹೇಳಿದರು.

ದೈವಸ್ಥಾನಗಳ ಜೀರ್ಣೋದ್ಧಾರವು ಪುಣ್ಯದ ಕೆಲಸ-ಸಾಜ ರಾಧಾಕೃಷ್ಣ ಆಳ್ವ:
ತಾಲೂಕು ಪಂಚಾಯತ್ ಸದಸ್ಯ ಹಾಗೂ ಪುತ್ತೂರು ನಗರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಮಾತನಾಡಿ, ದೇವರ ನಾಡು ಕೇರಳ, ದಕ್ಷಿಣ ಕನ್ನಡ ಜಿಲ್ಲೆ ಎಂದು ಕರೆಯುತ್ತಿದ್ದರೂ, ಆರ್ಯಾಪು ಎಂಬುದು ದೇವರ ಗ್ರಾಮವಾಗಿದೆ. ಈ ಆರ್ಯಾಪು ಗ್ರಾಮದಲ್ಲಿ ಅನೇಕ ದೇವಸ್ಥಾನ, ದೈವಸ್ಥಾನಗಳು ನೆಲೆ ನಿಂತಿವೆ ಮಾತ್ರವಲ್ಲದೆ ಏಳು ದೇವಸ್ಥಾನಗಳು ಈಗಾಗಲೇ ಜೀರ್ಣೋದ್ಧಾರಗೊಂಡಿವೆ. ಈ ಭಾಗದಲ್ಲಿ ಭಗವದ್ಭಕ್ತರ ಸಹಕಾರದೊಂದಿಗೆ ದೈವಸ್ಥಾನ ಜೀರ್ಣೋದ್ಧಾರಗೊಳ್ಳುತ್ತಿದೆ. ದೈವಸ್ಥಾನಗಳ ಜೀರ್ಣೋದ್ಧಾರವು ಪುಣ್ಯದ ಕೆಲಸವಾಗಿದೆ. ಈ ಭಾಗದ ದೇವಸ್ಥಾನದ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಆಶಯದಂತೆ ಬ್ರಹ್ಮಕಲಶ ಮುಂಚೆಯೇ ಡಾಮಾರೀಕರಣ, ನೀರಿನ ಟಾಂಕಿಯ ವ್ಯವಸ್ಥೆ ಮಾಡಿದ್ದೇವೆ ಎಂದರು.

 

ಜೀವನದಲ್ಲಿ ಮಾಡುವ ಸತ್ಕಾರ್ಯ, ಸಮಾಜಸೇವೆಯೇ ನಮ್ಮ ಪಾಲು-ಡಾ|ಪುತ್ತೂರಾಯ:
ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಡಾ|ಕೆ.ಪಿ ಪುತ್ತೂರಾಯರವರು ಮಾತನಾಡಿ, ಕಣ್ಣಿಗೆ ಕಾಣುವ ಮರ, ಕಾಣದ ಬೇರಿನ ಬಲದಿಂದ ನಿಂತಿದೆ. ಕಣ್ಣಿಗೆ ಕಾಣುವ ಜೀವನ, ಕಣ್ಣಿಗೆ ಕಾಣದ ಭಗವಂತನ ಕೃಪೆಯಿಂದಾಗಿದೆ. ಐದು ದಿನ ಆಹಾರ, ನೀರು, ಗಾಳಿಯಿಲ್ಲದೆ ಬದುಕಬಹುದು, ಒಂದು ನಿಮಿಷ ಭಗವಂತನ ಕೃಪೆ ಇಲ್ಲದೆ ಬದುಕಲು ಸಾಧ್ಯವಾಗದು. ದೇವರು ಸೌಮ್ಯ ಸ್ವರೂಪಿಯಾಗಿದ್ದು, ದೈವ ಉಗ್ರ ಸ್ವರೂಪವಾಗಿದೆ. ಆದರೆ ಇವೆರಡರ ಉದ್ದೇಶ ಒಂದೇ. ಅದು ಶಿಷ್ಟರ ರಕ್ಷಣೆ, ದುಷ್ಟರ ದಮನವಾಗಿದೆ. ದೇವಸ್ಥಾನಗಳಿಗೆ ಭಕ್ತಿಯಿಂದ ಬರಬೇಕೇ ಹೊರತು ಭಯದಿಂದಲ್ಲ ಎಂದ ಅವರು ನಾವೇ ಸೃಷ್ಟಿಸಿದ ದೇವರು ಹಲವು, ಆದರೆ ನಮ್ಮನ್ನು ಸೃಷ್ಟಿಸಿದ ದೇವರು ಒಬ್ಬನೇ. ಪುಸ್ತಕಗಳಲ್ಲಿ ನಮ್ಮ ಹೆಸರಿಲ್ಲ ಎಂಬ ಚಿಂತೆ ಬೇಡ, ದೇವರ ಪುಸ್ತಕದಲ್ಲಿ ಎಲ್ಲರ ಹೆಸರೂ ಇದೆ. ಜೀವನದಲ್ಲಿ ಮಾಡುವ ಸತ್ಕಾರ್ಯ, ಸಮಾಜಸೇವೆಯೇ ನಮ್ಮ ಪಾಲು ಎಂದು ನಾವು ಅರಿಯಬೇಕು ಎಂದು ಅವರು ಹೇಳಿದರು.

ಹಿಂದುತ್ವಕ್ಕೆ ಧಕ್ಕೆಯಾದಾಗ ಒಗ್ಗಟ್ಟಿನಲ್ಲಿ ಹೋರಾಡಿ-ರವೀಂದ್ರ ಶೆಟ್ಟಿ:
ಸಂಪ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನುಳಿಯಾಲು ರವೀಂದ್ರ ಶೆಟ್ಟಿ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನವು ಬಹಳ ವೇಗವಾಗಿ ಮುಂದುವರೆದಂತೆ ನಾವೂ ಕೂಡ ಮುಂದುವರೆಯಬೇಕಾಗಿದೆ. ಹಿಂದೂ ದೇಶದಲ್ಲಿ ವಾಸಿಸುವ ನಮಗೆ ಹಿಂದುತ್ವದ ವಿಷಯವಾಗಿ ತೊಂದರೆ ಉಂಟಾದರೆ ಎಲ್ಲರೂ ಒಗ್ಗೂಡಿ ಹೋರಾಡಬೇಕಾಗಿದೆ ಜೊತೆಗೆ ನಮ್ಮ ಮಕ್ಕಳಿಗೆ ಧಾರ್ಮಿಕ ಚಿಂತನೆಗಳನ್ನು ಮೂಡಿಸುವಲ್ಲಿ ಕಾರ್ಯೋನ್ಮುಖರಾಗಬೇಕಾಗಿದೆ. ಪ್ರಸ್ತುತ ಈ ಭಾಗದಲ್ಲಿ ದೈವಗಳಿಗೆ ಬ್ರಹ್ಮಕಲಶೋತ್ಸವ ಆದಂತೆ ಇಲ್ಲಿನ ಸುಬ್ರಹ್ಮಣ್ಯ ದೇವಸ್ಥಾನವೂ ಬ್ರಹ್ಮಕಲಶೋತ್ಸವ ನಡೆದು ಜೀವಕಳೆಯನ್ನು ತುಂಬುವಂತಾಗಬೇಕು ಎಂದರು.

ಆರ್ಯಾಪು ಗ್ರಾಮದಲ್ಲಿ ಏಳು ದೇವಸ್ಥಾನಗಳಿದ್ದು ಜನರು ದೇವರಿಗೆ ಹತ್ತಿರವಾಗಿದ್ದಾರೆ-ಹೇಮನಾಥ ಶೆಟ್ಟಿ:
ಬ್ರಹ್ಮಕಲಶೋತ್ಸವ ಸಮಿತಿಯ ಮತ್ತೋರ್ವ ಗೌರವಾಧ್ಯಕ್ಷರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ತಾಲೂಕಿನ ಕೆಲವು ಗ್ರಾಮಗಳಳ್ಲಿ ಒಂದೇ ಒಂದು ದೇವಸ್ಥಾನವಿಲ್ಲ ಆದರೆ ಆರ್ಯಾಪು ಗ್ರಾಮದಲ್ಲಿ ಏಳು ದೇವಸ್ಥಾನಗಳಿದ್ದು ಇಲ್ಲಿನ ಜನರು ದೇವರಿಗೆ ಬಹಳ ಹತ್ತಿರವಾಗಿದ್ದಾರೆ. ಕಳೆದ ೧೫ ದಿನಗಳಲ್ಲಿ ಈ ಭಾಗದಲ್ಲಿ ಸುಸಜ್ಜಿತವಾದ ದೈವಗಳ ಗುಡಿಗೋಪುರಗಳು ನಿರ್ಮಾಣಗೊಂಡಿದರ ಹಿಂದೆ ಇಲ್ಲಿನ ಪರಮಭಕ್ತರ ಸಕ್ರಿಯ ಭಾಗವಹಿಸುವಿಕೆ ಮುಖ್ಯವಾಗಿದೆ ಮಾತ್ರವಲ್ಲದೆ ಭಕ್ತರ ಭಕ್ತಿ, ಶ್ರಮ, ಶ್ರದ್ಧೆ, ನಂಬಿಕೆ ಇಲ್ಲಿ ಬಹಳಷ್ಟು ಕೆಲಸ ಮಾಡಿದೆ. ಇಲ್ಲಿನ ಕಾರ್ಯಕ್ರಮಗಳು ದೈವಗಳಿಗೆ ಮಾತ್ರವಲ್ಲ ಗ್ರಾಮಸ್ಥರನ್ನು ಕೂಡ ಬೆರಗುಗೊಳಿಸಿದೆ ಎಂದರೆ ತಪ್ಪಾಗೋದಿಲ್ಲ ಎಂದರು.

ತಾಲೂಕಿನಲ್ಲಿ ದೈವಗಳಿಗೆ ಬ್ರಹ್ಮಕಲಶವಾಗುವುದು ಪ್ರಥಮವೇ-ಸಂಜೀವ ಪೂಜಾರಿ ಕೂರೇಲು:
ಬ್ರಹ್ಮಕಲಶೋತ್ಸವ ಸಮಿತಿಯ ಮತ್ತೋರ್ವ ಗೌರವಾಧ್ಯಕ್ಷರಾದ ಸಂಜೀವ ಪೂಜಾರಿ ಕೂರೇಲು ಮಾತನಾಡಿ, ಪುತ್ತೂರು ತಾಲೂಕಿನಲ್ಲಿ ದೈವಗಳಿಗೆ ಬ್ರಹ್ಮಕಲಶವಾಗುವುದು ಪ್ರಥಮವೇ ಆಗಿದೆ ಎನ್ನಬಹುದು. ಇಲ್ಲಿನ ದೇವಸ್ಥಾನದ ಅಧ್ಯಕ್ಷರ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರ ನೇತೃತ್ವದಲ್ಲಿ ಯುವಸಮೂಹದ ಪಾಲ್ಗೊಳ್ಳುವಿಕೆಯಿಂದ ವಿಜ್ರಂಭಣೆಯಲ್ಲಿ ಈ ಭಾಗದಲ್ಲಿ ಬ್ರಹ್ಮಕಲಶ ಆಚರಣೆಯು ನಡೆದಿರುವುದು ಮತ್ತು ಕಾರ್ಯಕ್ರಮದ ಅಂದ-ಚಂದವನ್ನು ಹೆಚ್ಚಿಸಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.

ಯಶಸ್ಸಿಗೆ ಭಕ್ತವೃಂದದ ನಿಷ್ಕಲ್ಮಶ ಭಕ್ತಿಯೇ ಕಾರಣ-ಅರ್ಜುನ್ ಬೆಳ್ಮಾರು:
ಉದ್ಯಮಿ, ಬೆಂಗಳೂರು ಬೆಳ್ಮಾರು ಎಸ್ಟೇಟ್‌ನ ಅರ್ಜುನ್ ಬೆಳ್ಮಾರು ಮಾತನಾಡಿ, ಇಲ್ಲಿನ ದೈವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ರೈಯವರು ಕಳೆದ ೨೫ ವರುಷಗಳಿಂದ ನನಗೆ ಅಣ್ಣ-ತಮ್ಮನಾಗಿ, ನನ್ನ ಪ್ರಾಣಸ್ನೇಹಿತನಾಗಿ ನನಗೆ ಮಾರ್ಗ ತೋರಿಸಿಕೊಟ್ಟವರು. ಬೆಂಗಳೂರಿನಿಂದ ಇಲ್ಲಿಗಾಗಮಿಸಿ ಇಲ್ಲಿನ ಅದ್ದೂರಿ ಕಾರ್ಯಕ್ರಮವನ್ನು ನೋಡಿ ನನಗೆ ಬಹಳ ಖುಶಿಯಾಗಿದೆ ಮಾತ್ರವಲ್ಲದೆ ಇಷ್ಟೊಂದು ಅದ್ದೂರಿಯಾಗಿ ನಡೆಯಲು ಇಲ್ಲಿನ ಭಕ್ತವೃಂದದ ನಿಷ್ಕಲ್ಮಶ ಭಕ್ತಿಯೇ ಕಾರಣವಾಗಿದೆ ಎಂದರು.

ಪ್ರತಿಯೋರ್ವರ ಒಗ್ಗೂಡುವಿಕೆ ಯಶಸ್ಸಿಗೆ ಕಾರಣವಾಗಿದೆ-ಸದಾನಂದ ಶೆಟ್ಟಿ ಕೂರೇಲು:
ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು ಮಾತನಾಡಿ, ಕಾರ್ಪಾಡಿ ದೇವಸ್ಥಾನದ ಭಕ್ತರ ಮನವಿಯಂತೆ ಶಾಸಕರಾದ ಸಂಜೀವ ಮಠಂದೂರು ಹಾಗೂ ಪುತ್ತೂರು ನಗರಸಭಾ ಸ್ಥಾಯಿ ಸಮಿತಿಯ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವರವರು ಜೊತೆಗೂಡಿ ಈ ಭಾಗದ ರಸ್ತೆಗೆ ಡಾಮಾರೀಕರಣ ಹಾಗೂ ನೀರಿನ ಟಾಂಕಿಯ ವ್ಯವಸ್ಥೆಯನ್ನು ಮಾಡಿದ್ದಾರೆ. ಬ್ರಹ್ಮಕಲಶದ ಸಂದರ್ಭದಲ್ಲಿ ಇಲ್ಲಿನ ಗ್ರಾಮಸ್ಥರು ಊಟ-ತಿಂಡಿಯನ್ನು ನೀಡುವ ಮೂಲಕ ಹಾಗೂ ಯುವಸಮೂಹ, ಮಹಿಳಾ ವೃಂದ, ಹಿರಿಯರು ಹೀಗೆ ಎಲ್ಲರೂ ಕೈಜೋಡಿಸುವ ಮುಖೇನ ಉದಾರತೆ ಮೆರೆದಿದ್ದಾರೆ. ದೇವಸ್ಥಾನಗಳಲ್ಲಿ ವ್ಯಕ್ತಿ ರಾಜಕೀಯ ಮಾಡಿದ್ರೆ ದೇವಸ್ಥಾನಗಳು ಅಭಿವೃದ್ಧಿ ಹೊಂದಲಾರವು. ಕಳೆದ ೯ ವರ್ಷಗಳಿಂದ ಈ ದೇವಸ್ಥಾನದ ಸದಸ್ಯನಾಗಿ, ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ ಆತ್ಮತೃಪ್ತಿ ನನಗಿದೆ ಎಂದು ಹೇಳಿ ಕಾರ್ಯಕ್ರಮವು ಯಶಸ್ವಿಯಾಗಿಸಲು ನೆರವಿತ್ತ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಆರ್ಯಾಪು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಮರಿಕೆ, ಕಾರ್ಪಾಡಿ ದೇವಸ್ಥಾನದ ಉಳ್ಳಾಲ್ತಿ, ಉಳ್ಳಾಕುಲು, ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಧಾನ ಕಾರ್ಯದರ್ಶಿ ದಿನೇಶ್ ರೈ ಮೊಡಪ್ಪಾಡಿಮೂಲೆ, ಸ್ವಾಗತ ಸಮಿತಿಯ ಸಂಚಾಲಕ ರವಿಚಂದ್ರ ಆಚಾರ್ಯರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ರೈ ಮಿಶನ್‌ಮೂಲೆ ಸ್ವಾಗತಿಸಿ, ನೇಮಾಕ್ಷ ಸುವರ್ಣ ವಂದಿಸಿದರು. ತ್ರಿಶಾ ಮತ್ತು ಬಳಗ ಪ್ರಾರ್ಥಿಸಿದರು. ಸುಂದರ ನಾಕ್ ಕಬ್ಬಿನಹಿತ್ಲು, ಕೀರ್ತನ್ ಶೆಟ್ಟಿ, ಸುಮಾ ಎಸ್.ಭಟ್, ನಾಗೇಶ್ ಸಂಪ್ಯ, ಸಂದೀಪ್ ಆರ್ಯಾಪು, ವಿಠಲ ರೈ ಮೇರ್ಲ, ರವೀಂದ್ರ ಶೆಟ್ಟಿ ಕಂಬಳದ್ದಡ್ಡ, ಜಯಂತ್ ಶೆಟ್ಟಿ ಕಂಬಲತ್ತಡ್ಡ, ಚಂದ್ರಕಲಾ, ಸುಜಿತ್ ಬಂಗೇರ, ಹರೀಶ್ ಕಾರ್ಪಾಡಿ, ಧನುಷ್ ಹೊಸಮನೆ, ಪ್ರತೀನ್ ನಾಕ್ ಕಬ್ಬಿನಹಿತ್ಲು, ಸಂತೋಷ್ ಸುವರ್ಣ ಮೇರ್ಲ, ಸಾಂತಪ್ಪ ಪೂಜಾರಿರವರು ಅತಿಥಿಗಳಿಗೆ ಶಾಲು ಹೊದಿಸಿ, ಹೂ ನೀಡಿ ಸ್ವಾಗತಿಸಿದರು. ಲಿಟ್ಲ್ ಫ್ಲವರ್ ಶಾಲೆಯ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಕಳೆದ ಕೇವಲ 40 ದಿನಗಳಲ್ಲಿಯೇ ಊರ ಜನರ ಸಹಕಾರದಿಂದ ಶ್ರೀ ಕ್ಷೇತ್ರದಲ್ಲಿ ದೈವದೇವರುಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನೆರವೇರಲು ಕಾರಣಕರ್ತರಾದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸದಾನಂದ ಶೆಟ್ಟಿ ಕೂರೇಲು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಸತೀಶ್ ರೈ ಮಿಶನ್‌ಮೂಲೆ, ಪ್ರಧಾನ ಕಾರ್ಯದರ್ಶಿ ದಿನೇಶ್ ರೈ ಮೊಡಪ್ಪಾಡಿಮೂಲೆ, ಸ್ವಾಗತ ಸಮಿತಿಯ ಸಂಚಾಲಕ ರವಿಚಂದ್ರ ಆಚಾರ್ಯರವರಿಗೆ ಎಲ್ಲಾ ಭಕ್ತರ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಮನಸೂರೈದ ನೃತ್ಯ-ಗಾನ-ವೈಭವ..
ನಮ್ಮ ಟಿವಿಯ ಶಿರ್ತಾಡಿ ಸೋಮಶೇಖರ್ ಭಟ್‌ರವರ ನಿರ್ದೇಶನದಲ್ಲಿ ಪ್ರಕಾಶ್ ಮಹಾದೇವನ್, ರೂಪ ಪ್ರಕಾಶ್ ಮಹಾದೇವನ್ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ನೃತ್ಯ-ಗಾನ-ವೈಭವ ಜರಗಿತು. ಅದ್ದೂರಿ ಕೇರಳ ಶೈಲಿಯ ಚೆಂಡೆಯ ವಾದನ, ಪ್ರಕಾಶ್ ಮಹಾದೇವನ್, ರೂಪಪ್ರಕಾಶ್‌ರವರಿಂದ ಸಂಗೀತ ರಸಸಂಜೆ, ಸಿಟಿಗೈಸ್ ಕುಡ್ಲ ಕ್ವೀನ್ ಇವರಿಂದ ನೃತ್ಯ ವೈಭವ, ೧ ಗಿನ್ನೀಸ್ ಹಾಗೂ ೩ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿರುವ ತನುಶ್ರೀರವರಿಂದ ವಿಶೇಷ ನೃತ್ಯ ಪ್ರದರ್ಶನ, ನಮ್ಮ ಟಿವಿ ಬಲೆ ತೆಲಿಪಾಲೆ ಖ್ಯಾತಿಯ ಮಸ್ಕಿರಿ ಕುಡ್ಲ ತಂಡದಿಂದ ಹಾಸ್ಯ ಪ್ರದರ್ಶನ, ನಿರೂಪಕಿ ಸೌಜನ್ಯ ಹೆಗ್ಡೆರವರಿಂದ ಅದ್ಭುತ ನಿರೂಪಣೆಯು ಪ್ರೇಕ್ಷಕರ ಮನಸೂರೈಗೈದಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.