Home_Page_Advt
Home_Page_Advt
Home_Page_Advt
Home_Page_Advt

ಸಂಕಷ್ಟದಲ್ಲಿದ್ದ ಕಾರ್ಮಿಕರಿಗೆ ಶಾಸಕರ ನೇತೃತ್ವದಲ್ಲಿ ಸಹಾಯ ಹಸ್ತ: ‘ಸುದ್ದಿ’ ಪತ್ರಿಕಾ ವರದಿಯ ಫಲಶ್ರುತಿ

Puttur_Advt_NewsUnder_1
Puttur_Advt_NewsUnder_1

ಲಾಕ್‌ಡೌನ್ ಅವಧಿ ಪೂರ್ಣವಾಗುವವರೆಗೆ ಆಹಾರದ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸುವ ಭರವಸೆ

ಉಪ್ಪಿನಂಗಡಿ: ಲಾಕ್‌ಡೌನ್‌ನಿಂದ ಅತಂತ್ರರಾಗಿರುವ ಹೊರ ರಾಜ್ಯದ ಕಾರ್ಮಿಕರ ಸಮಸ್ಯೆಗೆ ಪುತ್ತೂರು ಶಾಸಕ ಸಂಜೀವ ಮಠಂದೂರು ತಕ್ಷಣ ಸ್ಪಂದಿಸಿದ್ದು, ಬುಧವಾರ ಬೆಳಗ್ಗೆ ಕಾರ್ಮಿಕರನ್ನು ಭೇಟಿ ಮಾಡಿ ಅವರ ಸಂಕಷ್ಟವನ್ನು ವಿಚಾರಿಸಿದ ಅವರು ದಾನಿಗಳ ಸಹಕಾರದಲ್ಲಿ ಲಾಕ್‌ಡೌನ್ ಅವಧಿ ಮುಗಿಯುವರೆಗೆ ಕಾರ್ಮಿಕರಿಗೆ ಆಹಾರದ ವ್ಯವಸ್ಥೆ ಕಲ್ಪಿಸಿದ್ದಾರೆ.


ಈ ಭಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗೆಂದು ಬಿಹಾರ ಹಾಗೂ ರಾಜಸ್ಥಾನದಿಂದ ಬಂದ ಒಟ್ಟು ೨೬೩ ಕಾರ್ಮಿಕರು ೩೪ ನೆಕ್ಕಿಲಾಡಿ ಹಾಗೂ ಉಪ್ಪಿನಂಗಡಿಯಲ್ಲಿ ಬಾಕಿಯಾಗಿದ್ದು, ಲಾಕ್‌ಡೌನ್‌ನಿಂದಾಗಿ ಅನ್ನ ಆಹಾರವಿಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದರು. ಕಾರ್ಮಿಕರ ಅತಂತ್ರ ಸ್ಥಿತಿ ಬಗ್ಗೆ ‘ಸುದ್ದಿ’ ಪತ್ರಿಕೆಯು ಎ.8ರ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡಿತ್ತು. ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕ ಸಂಜೀವ ಮಠಂದೂರು ಬುಧವಾರ ಬೆಳಗ್ಗೆಯೇ ಉಪ್ಪಿನಂಗಡಿಯ ಲೀನಾ ಲೋಬೋ ಕಾಂಪೌಂಡ್‌ನಲ್ಲಿರುವ ಬಿಹಾರ ರಾಜ್ಯದ ಕಾರ್ಮಿಕರನ್ನು ಭೇಟಿ ಮಾಡಿ ವಿಚಾರಿಸಿದರಲ್ಲದೆ, ಈ ಭಾಗದಲ್ಲಿರುವ ಎಲ್ಲಾ ಅನ್ಯರಾಜ್ಯದ ಅತಂತ್ರ ಕಾರ್ಮಿಕರಿಗೆ ಆಹಾರಕ್ಕೆ ತೊಂದರೆಯಾಗದಂತೆ ತಕ್ಷಣದಿಂದಲೇ ನೆರವು ನೀಡುವುದಾಗಿ ಪರಿಶೀಲನೆ ನಡೆಸಿದರು.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು ಉಪ್ಪಿನಂಗಡಿಯಲ್ಲಿ ಒಟ್ಟು 191 ಬಿಹಾರ ರಾಜ್ಯದ ಕಟ್ಟಡ ಕಾರ್ಮಿಕರು ಹಾಗೂ ೩೪ ನೆಕ್ಕಿಲಾಡಿಯಲ್ಲಿ ೭೨ ಮಂದಿ ರಾಜಸ್ಥಾನದ ಗ್ರಾನೈಟ್ ಕಾರ್ಮಿಕರು ಲಾಕ್‌ಡೌನ್‌ನಿಂದಾಗಿ ಅವರು ವಾಸ್ತವ್ಯವಿರುವಲ್ಲಿಂದ ಹೊರಬರಲಾಗದ ಸ್ಥಿತಿಯಲ್ಲಿದ್ದಾರೆ. ಇವರನ್ನು ಈ ಮೊದಲೇ ಗುರುತಿಸಿ ಜಿಲ್ಲಾಡಳಿತದ ವತಿಯಿಂದ ಎಲ್ಲರಿಗೂ ಒಟ್ಟು ೫ ಕ್ವಿಂಟಾಲ್ ಗೋಧಿ ಹುಡಿಯನ್ನು ವಿತರಿಸಲಾಗಿದೆ. ಸರಕಾರದಿಂದ ಬರುವ ಹಾಲನ್ನು ಗ್ರಾ.ಪಂ. ಮೂಲಕ ದಿನಾ ಇವರಿಗೆ ವಿತರಿಸಲಾಗುತ್ತಿದೆ. ಕೆಲವು ಕಡೆಗಳಲ್ಲಿ ದಾನಿಗಳು ತಮ್ಮ ಕೈಯಿಂದಾದಷ್ಟು ನೆರವಾಗಿದ್ದಾರೆ. ಆ ಆಹಾರ ಸಾಮಗ್ರಿಗಳೆಲ್ಲಾ ಈಗ ಮುಗಿದು ಹೋಗಿದ್ದು, ಅವರು ಆಹಾರವಿಲ್ಲದೆ ತೀವ್ರ ಸಂಕಷ್ಟದಿಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂತು. ಆದ್ದರಿಂದ ಅವರಿಗೆ ಸೂಕ್ತ ನೆರವು ನೀಡಲು ಮುಂದಾಗಿದ್ದು, ಯಾವುದೇ ಕಾರಣಕ್ಕೂ ಅವರು ಭಯಪಡಬೇಕಾದ ಅಗತ್ಯವಿಲ್ಲ. ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾ ಸಂಸ್ಥೆಯ ಸಂಚಾಲಕ ಯು.ಎಸ್.ಎ. ನಾಯಕ್ ಅವರು ಈಗಾಗಲೇ ನನ್ನನ್ನು ಸಂಪರ್ಕಿಸಿದ್ದು, ಅವರಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಒದಗಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಚಂದಪ್ಪ ಮೂಲ್ಯ ಅವರು ಕೂಡಾ ಅವರಿಗೆ ಬೇಕಾದ ಅಡುಗೆ ಅನಿಲವನ್ನು ಸರಬರಾಜು ಮಾಡುವುದಾಗಿ ತಿಳಿಸಿದ್ದಾರೆ. ಲಾಕ್‌ಡೌನ್ ಅವಧಿ ಮುಗಿಯುವವರೆಗೆ ಅವರಿಗೆ ಯಾವುದೇ ಆಹಾರದ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗುವುದು. ಅವರ ಆರೋಗ್ಯದ ದೃಷ್ಟಿಯಿಂದಲೂ ಗಮನ ಹರಿಸಲಾಗುವುದು. ಇವರಿಗೆ ಆಹಾರದ ಸಮಸ್ಯೆಯಾಗದಂತೆ ದಾನಿಗಳ, ಗ್ರಾ.ಪಂ. ಹಾಗೂ ಜಿಲ್ಲಾಡಳಿತ ಸಹಕಾರವನ್ನು ಕೂಡಾ ಬಳಸಿಕೊಳ್ಳಲಾಗುವುದು. ಲಾಕ್‌ಡೌನ್ ಅವಧಿ ಮುಗಿದ ಬಳಿಕ ಅವರು ಊರಿಗೆ ತೆರಳುವುದಾಗಿ ತಿಳಿಸಿದ್ದು, ಅಂತವರನ್ನು ಮತ್ತೆ ಅವರ ಊರಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ. ಮಾತನಾಡಿ, ಲಾಕ್‌ಡೌನ್ ಆರಂಭವಾದ ಸಂದರ್ಭದಲ್ಲಿ ಹೊರ ರಾಜ್ಯ, ಜಿಲ್ಲೆಯ ಕಾರ್ಮಿಕರು ಸೇರಿದಂತೆ ಉಪ್ಪಿನಂಗಡಿಯಲ್ಲೇ ಒಟ್ಟು 240 ಜನ ಕಾರ್ಮಿಕರಿದ್ದರು. ಅವರಲ್ಲಿ ಕರ್ನಾಟಕದ ೪೦ರಿಂದ ೫೦ರಷ್ಟು ಕಾರ್ಮಿಕರನ್ನು ಈಗಾಗಲೇ ಅವರ ಊರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಈಗ ಇಲ್ಲಿ ಉಳಿದಿರುವ ಕಾರ್ಮಿಕರ ಪಟ್ಟಿಯನ್ನು ಪುತ್ತೂರು ಉಪವಿಭಾಗಾಧಿಕಾರಿಯವರಿಗೆ ನೀಡಲಾಗಿತ್ತು. ಜಿಲ್ಲಾಡಳಿತದಿಂದ ಅವರಿಗೆ ಬಿಡುಗಡೆಯಾದ ಗೋಧಿ ಹುಡಿಯನ್ನು ಎಲ್ಲರಿಗೂ ಹಂಚಲಾಗಿದೆ. ಅಲ್ಲದೆ ಕೆಲವು ದಾನಿಗಳು ಕೂಡಾ ಇವರಿಗೆ ಆಹಾರ ಸಾಮಗ್ರಿ ಒದಗಿಸಿದ್ದಾರೆ ಅದನ್ನೂ ವಿತರಿಸಲಾಗಿದೆ. ಸರಕಾರದಿಂದ ನೀಡುವ ಹಾಲನ್ನು ಇವರಿಗೂ ನೀಡಲಾಗುತ್ತಿದೆ ಎಂದರು.

ಇಂದ್ರಪ್ರಸ್ಥ ವಿದ್ಯಾ ಸಂಸ್ಥೆಯ ಸಂಚಾಲಕ ಯು.ಎಸ್.ಎ. ನಾಯಕ್ ಮಾತನಾಡಿ, ಅನ್ಯ ರಾಜ್ಯದ ಕಾರ್ಮಿಕರು ಆಹಾರವಿಲ್ಲದೆ ಸಂಕಷ್ಟರಾಗಿದ್ದಾರೆ ಎಂಬ ವರದಿಯನ್ನು ಪತ್ರಿಕೆಯಲ್ಲಿ ನೋಡಿ ತುಂಬಾ ಬೇಜಾರಾಯಿತು. ಕೂಡಲೇ ನಾನು ಶಾಸಕರು ಹಾಗೂ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷರಿಗೆ ಅವರಿಗೆ ಆಹಾರ ಸಾಮಗ್ರಿ ನೀಡುವ ನಿರ್ಧಾರವನ್ನು ತಿಳಿಸಿದ್ದೇನೆ. ಒಟ್ಟು 263  ಕಾರ್ಮಿಕರಿಗೆ ಬೇಕಾದ ಅಗತ್ಯ ಸಾಮಗ್ರಿಗಳ ಪಟ್ಟಿ ಮಾಡಿ ಕಂದಾಯ ನಿರೀಕ್ಷಕರಲ್ಲಿ ಕಳುಹಿಸುತ್ತೇನೆ ಎಂದು ಶಾಸಕರು ತಿಳಿಸಿದ್ದು, ಬಳಿಕ ಅಲ್ಲಿಗೆ ಬೇಕಾದ ಆಹಾರ ಸಾಮಗ್ರಿಗಳ ವ್ಯವಸ್ಥೆ ಮಾಡಲಿದ್ದೇನೆ.

ಈ ಸಂದರ್ಭ ತಾ.ಪಂ. ಸದಸ್ಯೆ ಸುಜಾತಕೃಷ್ಣ ಆಚಾರ್ಯ, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ಸದಸ್ಯರಾದ ಸುನೀಲ್ ಕುಮಾರ್ ದಡ್ಡು, ಸುರೇಶ್ ಅತ್ರಮಜಲು, ಗೋಪಾಲ ಹೆಗ್ಡೆ, ಚಂದ್ರಶೇಖರ ಮಡಿವಾಳ, 34 ನೆಕ್ಕಿಲಾಡಿ ಗ್ರಾ.ಪಂ. ಸದಸ್ಯ ಪ್ರಶಾಂತ್, ತಾ.ಪಂ. ಮಾಜಿ ಸ್ಥದಸ್ಯ ಉಮೇಶ್ ಶೆಣೈ, ಪ್ರಮುಖರಾದ ಜಯಂತ ಪೊರೋಳಿ, ಉಷಾ ಚಂದ್ರ ಮುಳಿಯ, ಸದಾನಂದ ನೆಕ್ಕಿಲಾಡಿ, ಕಟ್ಟಡದ ಮಾಲಕಿ ಲೀನಾ ಲೋಬೋ, ಉಪ್ಪಿನಂಗಡಿ ಹೋಬಳಿ ಕಂದಾಯ ನಿರೀಕ್ಷಕ ವಿಜಯವಿಕ್ರಮ್, ಉಪ್ಪಿನಂಗಡಿ ಗ್ರಾಮ ಕರಣಿಕ ಸುನೀಲ್ ಮತ್ತಿತರರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.