ಸಾರ್ವಜನಿಕ ಹಿತಾಸಕ್ತಿಯಲ್ಲಿಯೇ ಸೇವೆ ಮಾಡಿ : ಪಂಚಾಯತಿ ಸದಸ್ಯರ ಜವಾಬ್ದಾರಿ, ಕರ್ತವ್ಯ ಬೋಧಿಸಿದ ನೂತನ ಕಾಯ್ದೆ

ಪಂಚಾಯತ್ ಸದಸ್ಯರ ಹೊಣೆಗಾರಿಕೆ ಹೆಚ್ಚಿಸಿದ ಕಾಯ್ದೆ:

ಈಗ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸದಸ್ಯರಾದರೆ ಮೊದಲಿನಂತೆ ಹಲ್ಲಿಲ್ಲದ ಹಾವಿನಂತಲ್ಲ… ಗ್ರಾಮ ಸ್ವರಾಜ್ ಹಾಗೂ ಕರ್ನಾಟಕ ಪಂಚಾಯತ್ ತಿದ್ದುಪಡಿ ಕಾಯ್ದೆಯು ಪಂಚಾಯಿತಿ ಸದಸ್ಯರಿಗೆ ಶಾಸನಾತ್ಮಕ, ಆಡಳಿತಾತ್ಮಕ ನ್ಯಾಯಾಂಗ ವಿಚಾರಣೆಯ ಅಧಿಕಾರವನ್ನು ನೀಡಿದೆ. ಇದರಿಂದ ಸದಸ್ಯರ ಜವಾಬ್ದಾರಿ ಹಾಗೂ ಗೌರವ ಎರಡೂ ಹೆಚ್ಚಿದೆ.

ಗ್ರಾಮೀಣ ಆಡಳಿತವನ್ನು ಸ್ಪಂದನ ಶೀಲ ಪ್ರತಿಕ್ರಿಯಾತ್ಮಕ ಹಾಗೂ ಪಾರದರ್ಶಕವನ್ನಾಗಿ ರೂಪಿಸುವ ನೂತನ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ತಿದ್ದುಪಡಿ ಕಾಯ್ದೆಯು ರಾಷ್ಟ್ರದಲ್ಲಿ ವಿಶೇಷವಾಗಿದೆ. ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ ಕಲ್ಪನೆಯು ಅರ್ಥಪೂರ್ಣವಾಗಿ ಅನುಷ್ಠಾನಗೊಳ್ಳಬೇಕಾದರೆ ಸ್ಥಳೀಯ ಸರಕಾರ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಭಾಗವಹಿಸುವಿಕೆ ಅಗತ್ಯ  ಎಂಬ ತತ್ವವನ್ನು ಕಾಯ್ದೆಯಲ್ಲಿ ಅಡಕಗೊಳಿಸಲಾಗಿದೆ.

ಎ). ಪಂಚಾಯಿತಿಯ ಪ್ರತಿಯೊಂದು ವರ್ಗ ಮತ್ತು ಸ್ಥಳೀಯ ಮತದಾನ ಕ್ಷೇತ್ರಗಳ ಹಿತಾಸಕ್ತಿಗಳನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸುವುದು;

ಬಿ). ಪಂಚಾಯಿತಿಯ ನಿವಾಸಿಯು ಮಾಡಿದ ವಿಚಾರಣೆಗಳಿಗೆ ಮತ್ತು ಮನವಿಗಳಿಗೆ ನ್ಯಾಯಯುತವಾಗಿ ಮತ್ತು ನಿಷ್ಪಕ್ಷಪಾತವಾಗಿ ಪ್ರತಿಕ್ರಿಯಿಸುವುದು;

ಸಿ). ಸಮುದಾಯದ ಅಭಿಪ್ರಾಯಗಳನ್ನು ಪ್ರತಿನಿಧಿಸುವ ಮೂಲಕ ಸಮುದಾಯ ಮುಂದಾಳತ್ವವನ್ನು ಕಲ್ಪಿಸುವುದು;

ಡಿ). ನಡತೆ ಮತ್ತು ನೈತಿಕತೆಯ ಗರಿಷ್ಠ ಗುಣಮಟ್ಟವನ್ನು ನಿರ್ವಹಿಸುವುದು;

ಇ). ಸಾರ್ವಜನಿಕ ಹಿತಾಸಕ್ತಿಯಲ್ಲಿ ಮಾತ್ರವೇ ಸೇವೆ ಮಾಡುವುದು ಮತ್ತು ಯಾವುದೇ ವ್ಯಕ್ತಿಯ ಅನುಕೂಲ ಅಥವಾ ಅನಾನುಕೂಲವನ್ನು ಪ್ರದಾನ ಮಾಡುವಲ್ಲಿ ಭೇದ ಭಾವ ತೋರಿಸಬಾರದು

ಎಫ್). ಯಾವುದೇ ವ್ಯಕ್ತಿಯ ವಿರುದ್ದ ಭೇದ ಭಾವ  ತೋರದೇ ಸಮಾನತೆಯನ್ನು ಪ್ರೋತ್ಸಾಹಿಸುವುದು ಮತ್ತು ಅವರ ಮತ, ವಯಸ್ಸು, ಧರ್ಮ, ಲಿಂಗ ಅಥವಾ ಅಸಮರ್ಥತೆಯನ್ನು ಪರಿಗಣಿಸದೆ (Regardless) ಅವರನ್ನು ಗೌರವದಿಂದ ಕಾಣುವುದು

ಜಿ). ಜನರಿಗೆ ಅವರು ಅರ್ಹನಾಗಿರುವ ಮಾಹಿತಿಯನ್ನು ಪಡೆಯುವುದಕ್ಕೆ ಅವಕಾಶವನ್ನು ಕಲ್ಪಿಸುವುದು;

ಎಚ್). ಯಾವುದೇ ವಿಷಯದಲ್ಲಿ ಆತನು ಹಣಕಾಸಿನ(Pecuniary) ಆಸಕ್ತಿಯನ್ನು ಹೊಂದಿರುವಾಗ ಆತನನ್ನು  ಯಾವುದೇ ಚರ್ಚೆ ಅಥವಾ ಮತದಾನದಲ್ಲಿ ಭಾಗವಹಿಸುವುದರಿಂದ ಅಂಥ ವಿಷಯದ ಪರಿಗಣನೆಯಲ್ಲಿ ಸಭೆಯಿಂದ ಹಿಂತೆಗೆದುಕೊಳ್ಳುವಲ್ಲಿ ಸ್ವಯಂ ನಿಯಂತ್ರಣ ಹೊಂದುವುದು;

ಐ). ಆದ್ಯತೆಗಳು ಮತ್ತು ಗುರಿಗಳನ್ನು ಸಾಧಿಸುವಲ್ಲಿ ಪಂಚಾಯತ್‌ನ ಕಾರ್ಯ ನಿರ್ವಹಣೆಯನ್ನು ಪರಿಶೀಲಿಸುವುದು;

ಜೆ).ಸರ್ಕಾರವು ಮಾಡಿದ ಆದ್ಯತೆಗಳನ್ನು ನಿರ್ವಹಿಸುವುದು ಮತ್ತು ಸ್ಥಳೀಯ ಸಂದರ್ಭದಲ್ಲಿ ಆ  ಆದ್ಯತೆಗಳನ್ನು ಎಷ್ಟು ಅತ್ಯುತ್ತಮವಾಗಿ ನೀಡಬಹುದು ಎಂಬುದನ್ನು ತೀರ್ಮಾನಿಸುವುದು;

ಕೆ). ಪ್ರದೇಶದ ಉತ್ತಮ ಆಡಳಿತದಲ್ಲಿ ಭಾಗವಹಿಸುವುದು ಮತ್ತು ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಪಂಚಾಯಿತಿ ನಿವಾಸಿಗಳ ಪಾಲ್ಗೊಳ್ಳುವಿಕೆಯನ್ನು ಸಕ್ರಿಯವಾಗಿ ಪ್ರೊತ್ಸಾಹಿಸುವುದು”.

ಪಾರದರ್ಶಕತೆ ಆಯಾಮಗಳು:

ಗ್ರಾಮೀಣ ಕುಂದುಕೊರತೆ ನಿವಾರಣೆಗೆ ಸ್ಪಂದನಶೀಲ ಕಾರ್ಯವಿಧಾನ ಕಲ್ಪಿಸುವ ವ್ಯವಸ್ಥೆ ರೂಪಿಸಿ ಅನುಷ್ಠಾನಗೊಳಿಸಲಾಗಿದೆ. ಕುಂದುಕೊರತೆ ನಿವಾರಣೆಗೆ ಅರ್ಜಿಯೊಂದು ಸಲ್ಲಿಕೆಯಾದಾಗ ಆ ಅರ್ಜಿಯ ಮೇಲೆ ಕುಂದುಕೊರತೆ ನಿವಾರಣಾ ಪ್ರಾಧಿಕಾರವು ಅನುಪಾಲನಾ ಕ್ರಮಗಳ ವರದಿಯನ್ನು ನೀಡುವುದನ್ನು ಕಡ್ಡಾಯಗೊಳಿಸುವ ಮೂಲಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಲಾಗಿದೆ.

ಕಾಯಿದೆಯ 296ಐ ಕಲಂನ್ನು ಸೇರಿಸಿ 296ಐ(3) ಪ್ರಕಾರ ಈ ಕೆಳಕಂಡಂತೆ ವರದಿ ಸಲ್ಲಿಸಲು ಅಂತಹ ವರದಿಯನ್ನು ಆಯಾ ಪಂಚಾಯಿತಿಯ ಅಂತರ್ಜಾಲದಲ್ಲಿ ಪ್ರಕಟಿಸಲು ಕ್ರಮ ಕೈಗೊಂಡು ಪಾರದರ್ಶಕತೆಯನ್ನು ಜಾರಿಗೆ ತರಲಾಗಿದೆ.

ಪ್ರತಿಯೊಂದು ಕುಂದುಕೊರತೆ ನಿವಾರಣಾ ಪ್ರಾಧಿಕಾರವು ತನ್ನ ಜಾಲತಾಣದಲ್ಲಿ ಪ್ರತಿ ತಿಂಗಳ 15ನೇ ದಿನದೊಳಗಾಗಿ ಅಥವಾ ನಿಯಮಿಸಬಹುದಾದ ಅಂಥ ಅಂತರಗಳಲ್ಲಿ, ಅದರಲ್ಲಿ ಹೇಳಲಾದ ವರದಿಯಲ್ಲಿ;

ಎ) ಸ್ವೀಕರಿಸಲಾದ ದೂರುಗಳ ಸಂಖ್ಯೆಯನ್ನು

ಬಿ) ಬಾಕಿ ಇರುವ ದೂರುಗಳ ಸಂಖ್ಯೆಯನ್ನು

ಸಿ) ವಿಲೆಯಾದ ದೂರುಗಳ ಸಂಖ್ಯೆಯನ್ನು

ಡಿ) ನಿಯಮಿಸಬಹುದಾದ ಅಂಥ ಇತರ ವಿವರಗಳನ್ನು ಪ್ರಕಟಿಸತಕ್ಕದ್ದು.

ಪಂಚಾಯಿತಿ ಸದಸ್ಯರು ತಮ್ಮ  ಆಸ್ತಿ ಮತ್ತು ಹೊಣೆಗಾರಿಕೆಯನ್ನು ಘೋಷಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

* ಹೀಗೆ ಘೋಷಿಸಲ್ಪಡುವ ಆಸ್ತಿ ಮತ್ತು ಹೊಣೆಗಾರಿಕೆಗಳ ಪಟ್ಟಿಯು ಜನಪ್ರತಿನಿಧಿಯು ತನ್ನ ಮತ್ತು ತನ್ನ ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರ ಚುನಾಯಿತನಾದ 3 ತಿಂಗಳ ಒಳಗೆ ಘೋಷಣೆ ಮಾಡಬೇಕೆಂಬುದನ್ನು ನಿರ್ದಿಷ್ಟ ಪಡಿಸಲಾಗಿದೆ. ಅದಲ್ಲದೇ, ಅಧಿಕಾರಾವಧಿ ಮುಕ್ತಾಯಗೊಳ್ಳುವ ತನಕ ಆರ್ಥಿಕ ವರ್ಷ ಮುಕ್ತಾಯವಾದ 1 ತಿಂಗಳ ಒಳಗೆ ಪ್ರತಿ ವರ್ಷ ಘೋಷಿಸಬೇಕೆಂದು ಶಾಸನಾತ್ಮಕ ಅವಕಾಶ ಕಲ್ಪಿಸಲಾಗಿದೆ.

*ಹೀಗೆ ಘೋಷಿಸಲು ವಿಫಲವಾಗುವ ಮತ್ತು ಸುಳ್ಳು ಘೋಷಣೆಯನ್ನು ದಾಖಲು ಮಾಡಿದರೆ ಅಂಥವರನ್ನು ಸದಸ್ಯತ್ವದಿಂದ ಅನರ್ಹಗೊಳಿಸುವ ಅವಕಾಶವನ್ನು ರಾಜ್ಯ ಚುನಾವಣಾ ಆಯುಕ್ತರಿಗೆ ನೀಡಲಾಗಿದೆ.

* ಸಮುದಾಯ ಸ್ವತ್ತು ನಿರ್ವಹಣೆಯಂತಹ ಪ್ರಮುಖ ವಿಷಯಗಳನ್ನು ಅನುಸೂಚಿ 1 ಮತ್ತು 2ಕ್ಕೆ ಸೇರಿಸಲಾಗಿದೆ.

* ಸುರಕ್ಷಿತ, ಶಾಂತಿಯುತ ಸಹನ ಶೀಲ, ಕೋಮು ಸೌಹಾರ್ದವನ್ನು ಘೋಷಿಸುವ ಹೆಮ್ಮೆಯ ಸ್ವಾವಲಂಬಿ ಪರಸ್ಪರ ಗೌರವ ಸೂಚಕವಾದ ಸಮಾಜದ ನಿರ್ಮಾಣ ಮಾಡಲು ಗ್ರಾಮೀಣ ಸ್ಥಳಿಯ ಸಂಸ್ಥೆಗಳಿಗೆ ಅಧಿಕಾರ ಪ್ರಾಪ್ತವಾಗಿದೆ.

* ಹಳ್ಳಿಗಳಲ್ಲಿ ಮಾನವ ಘನತೆಗೆ ಕಳಂಕ ತರುವ ಪಾರಂಪರಿಕ, ಸಾಮಾಜಿಕ ಮತ್ತು ಧಾರ್ಮಿಕ ಪದ್ಧತಿಗಳನ್ನು  ಪ್ರತಿಬಂದಿಸುವುದು ಗ್ರಾಮ ಪಂಚಾಯಿತಿಯ ಕರ್ತವ್ಯವೆಂದು ಪರಿಗಣಿಸಲಾಗಿದೆ.

* ಮಹಿಳೆಯರಿಗೆ ಲೈಂಗಿಕ ಕಿರುಕುಳ ತಡೆಗಟ್ಟುವುದು ಗ್ರಾಮ ಪಂಚಾಯಿತಿಯ ಕರ್ತವ್ಯವೆಂದು ಪಟ್ಟಿ ಮಾಡಲಾಗಿದೆ.

* ಅಪಾಯಕಾರಿ ಕಲ್ಲು ಗಣಿಗಾರಿಕೆ, ತೆರೆದ ಕೊಳವೆ ಬಾವಿಗಳನ್ನು ತೋಡುವುದು ಮತ್ತು ಹೊಂಡಗಳನ್ನು ನಿರ್ಮಿಸುವ ಮೂಲಕ ಸಾರ್ವಜನಿಕ ವಿತ್ತ ಜೀವಿತಗಳಿಗೆ ಅಪಾಯವುಂಟಾಗುವುದನ್ನು ತಡೆಯುವುದು ಗ್ರಾಮ ಪಂಚಾಯಿತಿಯ ಕರ್ತವ್ಯವಾಗಿದೆ.

* ಗ್ರಾಮೀಣ ಪ್ರದೇಶದಲ್ಲಿ ಯೋಜಿತ ಅಭಿವೃದ್ಧಿಯನ್ನು ನಿಶ್ಚಿತಗೊಳಿಸುವ ಸಲುವಾಗಿ ಕರ್ನಾಟಕ ನಗರ ಮತ್ತು ದೇಶೀಯ ಯೋಜನಾ ಕಾಯಿದೆಯನ್ನು ಮೊಟ್ಟ ಮೊದಲ ಬಾರಿಗೆ ಗ್ರಾಮೀಣ ಪ್ರದೇಶಕ್ಕೆ ಅಳವಡಿಸಲಾಗಿದೆ.

* ಗ್ರಾಮೀಣ ಭಾಗದಲ್ಲಿ ಯಾವುದಾದರು ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಕೆಯಾದಾಗ ನಿಗದಿತ ಕಾಲಮಿತಿಯಲ್ಲಿ ಅಂತಹ ಅರ್ಜಿಯನ್ನು ವಿಲೇವಾರಿ ಮಾಡಬೇಕು ಇಲ್ಲದಿದ್ದಾರೆ ಅಂತಹ ಅರ್ಜಿ ಮಂಜೂರಾಗಿದೆ ಎಂದು ಭಾವಿಸಿ ಮಂಜೂರಿ ನೀಡಲಾಗುವುದು ಎಂಬ ಶಾಸನಾತ್ಮಕ ನಿಯಮಕ್ಕೆ ಮತ್ತಷ್ಟು ಅಂಶಗಳನ್ನು ಸೇರಿಸಿ ಈ ಕಲಂ ಅನ್ನು ಶಕ್ತಿಶಾಲಿಯಾಗಿಸಲಾಗಿದೆ

* ಈ ಕಲಂನ ಅಡಿಯಲ್ಲಿ ಭಾವಿತ ಮಂಜೂರಿಗೆ ಕಾರಣರಾಗುವ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಶಿಸ್ತು ಕ್ರಮವನ್ನು ನಿರ್ದಿಷ್ಟಗೊಳಿಸಲಾಗಿದೆ.