ಗಾಂಧಿಕಟ್ಟೆ ಸಮಿತಿ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಗಾಂಧಿ ಜಯಂತಿ ಆಚರಣೆ

0

ಗಾಂಧಿಯವರ ತತ್ವ, ಆದರ್ಶಗಳನ್ನು ಅಳವಡಿಸಿಕೊಂಡು ಕೆಲಸ ಮಾಡಿದಾಗ ಆಚರಣೆಗೆ ಹೆಚ್ಚಿನ ಮಹತ್ವ-ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ

ಪುತ್ತೂರು: ಭಾರತೀಯರಲ್ಲಿ ಸಮಾನತೆ ಸಂದೇಶ ಸಾರಿದ ಗಾಂಧೀಜಿಯವರ ಜಯಂತಿ ಆಚರಿಸಿ, ಮಾಲಾರ್ಪಣೆ ಮಾಡಿ, ಅವರ ಬಗ್ಗೆ ಮಾತನಾಡಿದರೆ ಮಾತ್ರಕ್ಕೆ ಹೆಚ್ಚು ಮಹತ್ವವಲ್ಲ. ಅವರ ಆಚಾರ-ವಿಚಾರ, ತತ್ವ, ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕಾಗಿ, ದೇಶಕ್ಕಾಗಿ ಕೆಲಸ ಮಾಡಿದಾಗ ಆಗ ಅದಕ್ಕೆ ಹೆಚ್ಚು ಮಹತ್ವವಿದೆ ಎಂದು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಹೇಳಿದರು.


ಗಾಂಧಿಕಟ್ಟೆ ಸಮಿತಿ ಹಾಗೂ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಅ.2ರಂದು ಬಸ್ ನಿಲ್ದಾಣದ ಬಳಿಯ ಗಾಂಧಿಕಟ್ಟೆಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆಗೆ ಹಾರಾರ್ಪಣೆ ಮಾಡಿ ಮಾತನಾಡಿದರು. ವಕೀಲರಾಗಿ, ಪ್ರಕೃತಿ ಸಂರಕ್ಷಕರಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ, ರಾಜಕಾರಣಿಯಾಗಿ, ಸಾಮಾಜಿಕ ಸುಧಾರಕರಾಗಿದ್ದು ಮಹಾತ್ಮ ಗಾಂಧೀಜಿಯವರು ಒಂದೇ ವ್ಯಕ್ತಿ ಹಲವು ವ್ಯಕ್ತಿತ್ವಗಳನ್ನು ಹೊಂದಿದ್ದವರು. ಅವರ ತತ್ವ, ಆದರ್ಶಗಳ ಬಗ್ಗೆ ಹೇಳಿ ಮುಗಿಸಲು ಸಾಧ್ಯವಿಲ್ಲ. ಅವರು ಮುಟ್ಟದ ಕ್ಷೇತ್ರಗಳಿಲ್ಲ. ಎಲ್ಲರಲ್ಲಿಯೂ ಸಮಾನತೆಯನ್ನು ಕಂಡಿರುವ ಅವರು ವಿವಿಧ ರಾಜವಂಶಗಳ ಮೂಲಕ ಹಂಚಿ ಹೋಗಿದ್ದ ಭಾರತದಲ್ಲಿ ನಾವು ಭಾರತೀಯರು ಎಂಬ ಭಾವನೆಯನ್ನು ಮೂಡಿಸಿದವರು ಎಂದ ಅವರು ಯಾವುದೇ ಜ್ಞಾನವಿಲ್ಲದೇ ಉತ್ತಮ ವ್ಯಕ್ತಿಗಳಾಗಲು ಸಾಧ್ಯವಿಲ್ಲ. ಹೀಗಾಗಿ ಹಿರಿಯರ ಸಾಧನೆಯ ಪುಸ್ತಕಗಳನ್ನು ಓದಿಕೊಂಡು ನಮ್ಮ ಜ್ಞಾನ ವೃದ್ಧಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಓದಿದಂತೆ ನಮ್ಮಲ್ಲಿ ಆತ್ಮ ವಿಶ್ವಾಸ ಮೂಡುತ್ತದೆ ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮಾತನಾಡಿ, ಬಹುತೇಕ ದೇಶಗಳಲ್ಲಿ ರಕ್ತ ಕ್ರಾಂತಿಯ ಮುಖಾಂತರ ಸ್ವಾತಂತ್ರ್ಯ ಪಡೆದ ಇತಿಹಾಸವಿದೆ. ಭಾರತದಲ್ಲಿ ಮಾತ್ರ ಮಹಾತ್ಮ ಗಾಂಧೀಜಿವರ ನೇತೃತ್ವದಲ್ಲಿ ಅಹಿಂಸಾತ್ಮಕ ರೀತಿಯಲ್ಲಿ ಸ್ವಾತಂತ್ರ್ಯ ಪಡೆಯಲಾಗಿದೆ. ಗಾಂಧೀಜಿಯವರ ಅಹಿಸ್ಮಾತ್ಮಕ ನೀತಿ ವಿಶ್ವದಲ್ಲೇ ಖ್ಯಾತಿ ಪಡೆದಿದೆ. ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶಗಳು ಇಂದಿನ ಪೀಳಿಗೆಗೆ ಆದರ್ಶವಾಗಿದ್ದು ಅವರ ಪುಸ್ತಕಗಳನ್ನು ಓದಿ ಜ್ಞಾನ ವೃದ್ಧಿಸಿಕೊಳ್ಳಬೇಕು. ದೇಶದ ಉದ್ಧಾರಕ್ಕಾಗಿ ಹಲವು ಯೋಜನೆಗಳನ್ನು ತಂದಿದ್ದರು. ಹಳ್ಳಿಗಳ ಉದ್ಧಾರ ಅವರ ಕನಸಾಗಿತ್ತು. ದೇಶವನ್ನು ಬಲೀಷ್ಠಗೊಳಿಸುವಲ್ಲಿ ಎಲ್ಲರ ಸಹಕಾರ ಅಗತ್ಯ ಎಂದರು.


ನಗರ ಠಾಣೆಯ ನಿರೀಕ್ಷಕ ಜಾನ್ಸನ್ ಡಿ’ ಸೋಜ ಮಾತನಾಡಿ, ಮಹಾತ್ಮ ಗಾಂಧೀಜಿಯವರ ತತ್ವ, ನೀತಿ, ಆದರ್ಶಗಳು, ಅವರ ಜೀವನ ವಿಧಾನವನ್ನು ಯುವ ಜನತೆ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಿ ಬದುಕಬೇಕು ಎಂದರು.


ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ, ಕಾಂಗ್ರೆಸ್ ರಾಜ್ಯ ವಕ್ತಾರ ಅಮಳ ರಾಮಚಂದ್ರ ಸಂದರ್ಭೋಚಿತವಾಗಿ ಮಾತನಾಡಿದರು.


ಗ್ಯಾರಂಟಿ ಯೋಜನೆ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಂ ಡಿ’ ಸೋಜ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಅಕ್ರಮ-ಸಕ್ರಮ ಸಮಿತಿ ಸದಸ್ಯೆ ರೂಪರೇಖಾ ಆಳ್ವ, ರಾಮಣ್ಣ ಪಿಳಿಂಜ, ವೇದನಾಥ ಸುವರ್ಣ, ಸೀತಾರಾಮ ಶೆಟ್ಟಿ ಬನ್ನೂರು, ಮಹೇಶ್‌ಚಂದ್ರ ಸಾಲ್ಯಾನ್, ಸಯ್ಯದ್ ಕಮಲ್, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಶರೂನ್ ಸಿಕ್ಚೇರಾ, ವಿಶ್ವಜಿತ್ ಅಮ್ಮಂಜ, ರವಿಪ್ರಸಾದ್ ಶೆಟ್ಟಿ, ಲ್ಯಾನ್ಸಿ ಮಸ್ಕರೇನಸ್, ಮೌರೀಸ್ ಮಸ್ಕರೇನಸ್, ವಿಜಯಲಕ್ಷ್ಮಿ, ಅಶ್ಮಾಗಟ್ಟಮನೆ ಸೇರಿದಂತೆ ಹಲವು ಮಂದಿ ಪ್ರಮುಖರು ಹಾಗೂ ಇಲಾಖಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಗಾಂಧಿಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್ ಆಳ್ವ ಸ್ವಾಗತಿಸಿ, ವಂದಿಸಿದರು. ಚಂದ್ರಪ್ರಭಾ ಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಸರ್ವಧರ್ಮ ದೀಪ ಬೆಳಗಿಸಿ, ರಾಮಕೃಷ್ಣ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಗಾಂಧಿ ಭಜನೆ, ಸರ್ವಧರ್ಮ ಪ್ರಾರ್ಥನೆ ನೆರವೇರಿತು.

LEAVE A REPLY

Please enter your comment!
Please enter your name here