





ಪುತ್ತೂರು: ವಿದ್ಯಾರ್ಥಿಗಳಲ್ಲಿ ನಾಯಕತ್ವ, ತಾಳ್ಮೆ, ಒಗ್ಗಟ್ಟು, ತಂಡದ ಸಾಂಘಿಕ ಪ್ರಯತ್ನ, ಸಾಮಾಜಿಕ ಕೌಶಲ್ಯ, ಆತ್ಮವಿಶ್ವಾಸ ಮೊದಲಾದ ಗುಣಗಳನ್ನು ಬೆಳೆಸುವ ನಿಟ್ಟಿನಲ್ಲಿ ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಅ.31ರಂದು ವಾರ್ಷಿಕ ಕ್ರೀಡಾಕೂಟವನ್ನು ವಿವೇಕಾನಂದ ಪದವಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಯಿತು.



ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪುತ್ತೂರಿನ ಎನ್. ಟಿ. ಡಿ. ಯೂಥ್ ಸರ್ವಿಸ್ ಮತ್ತು ಸ್ಪೋರ್ಟ್ಸ್ ಆಫೀಸರ್ ಹಾಗೂ ಎನ್.ಐ.ಎಸ್ ಕಬಡ್ಡಿ ತರಬೇತುದಾರರಾದ ಮಾಧವ ಬಿ.ಕೆ ಅವರು ಆಗಮಿಸಿ, ಕ್ರೀಡೆಯಿಂದ ಆಗುವ ಶಾರೀರಿಕ ಪ್ರಯೋಜನಗಳನ್ನು ವಿವರಿಸುತ್ತಾ, ” ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ, ಭಾಗವಹಿಸುವಿಕೆಯೇ ಅತೀ ಮುಖ್ಯ” ಎಂದು ಮಕ್ಕಳನ್ನು ಉದ್ದೇಶಿಸಿ ಪ್ರೋತ್ಸಾಹಕ ನುಡಿಗಳನ್ನಾಡಿದರು.





ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ನಿರೀಕ್ಷಿತ್ ರೈ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಮಕ್ಕಳಿಗೆಲ್ಲರಿಗೂ ಶುಭ ಹಾರೈಸಿದರು. ಶೈಕ್ಷಣಿಕ ಸಲಹೆಗಾರರಾದ ಅನುರಾಧ ಶಿವರಾಂ ಮಕ್ಕಳಿಗೆ ಕ್ರೀಡಾ ಸ್ಫೂರ್ತಿಯನ್ನು ಬೆಳೆಸಿಕೊಳ್ಳಿ ಎಂಬುದಾಗಿ ಹಿತನುಡಿಗಳನ್ನಾಡಿದರು.
ರಾಷ್ಟ್ರಮಟ್ಟದ ಕ್ರೀಡಾಪಟುಗಳಾದ ಸಿಯಾ ಭವಿನ್ ಸವಜಾನಿ, ಲಾಸ್ಯ ಕಿಶನ್, ಶ್ರೀರಾಮ್ ಮತ್ತು ಸಾನಿಧ್ಯಾ ಇವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು. ತಂಡದ ನಾಯಕರು ಹಾಗೂ ವಿದ್ಯಾರ್ಥಿಗಳಿಗೆ ಶಾಲಾ ಕ್ರೀಡಾಮಂತ್ರಿ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.
10ನೇ ತರಗತಿಯ ವಿದ್ಯಾರ್ಥಿನಿಯರಾದ ಸಾನ್ವಿ ಮತ್ತು ಕೃತಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಪ್ರಾಂಶುಪಾಲೆ ಸಿಂಧು ವಿ.ಜಿ ಸ್ವಾಗತಿಸಿ, ದೈಹಿಕ ಶಿಕ್ಷಕಿ ಶ್ಯಾಮಲಾ ಧನ್ಯವಾದವಿತ್ತರು. ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿಗಳ ಸಹಕಾರದೊಂದಿಗೆ ದಿನಪೂರ್ತಿ ನಡೆದ ವಿವಿಧ ಕ್ರೀಡೆಗಳಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳೂ ಉತ್ಸಾಹದಿಂದ ಪಾಲ್ಗೊಂಡರು. ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಕ್ರೀಡಾಕೂಟವು ಸಂಪನ್ನಗೊಂಡಿತು.










