ಉಪ್ಪಿನಂಗಡಿ: ಉದ್ಬವ ಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಅಘೋರ ಸಂಘಟನೆಯಿಂದ ಶಾಸಕ ಅಶೋಕ್ ರೈಗೆ ಮನವಿ

0

ಪುತ್ತೂರು: ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿರುವ ಪುರಾಣ ಪ್ರಸಿದ್ದ ಉದ್ಭವ ಲಿಂಗಕ್ಕೆ ವರ್ಷಾವಧಿ ಪೂಜೆ ಸಲ್ಲಿಸುವಂತಾಗಲು ಬಿಳಿಯೂರು ಅಣೆಕಟ್ಟಿನಲ್ಲಿ 2026ರ ಮಾರ್ಚ್ 12 ರವರೆಗೆ ಕಡಿಮೆ ಎತ್ತರದಲ್ಲಿ ನೀರು ಸಂಗ್ರಹಿಸಿ ಬಳಿಕದ ದಿನಗಳಲ್ಲಿ 4 ಮೀಟರ್ ನೀರು ಸಂಗ್ರಹಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಉಪ್ಪಿನಂಗಡಿಯ ಅಘೋರ ಸಂಘಟನೆಯ ವತಿಯಿಂದ ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಯಲ್ಲಿ ಏನಿದೆ?
ದ.ಕ ಜಿಲ್ಲೆಯ ಪುರಾಣ ಪ್ರಸಿದ್ದ ಪುಣ್ಯ ಕ್ಷೇತ್ರವಾಗಿರುವ ನೇತ್ರಾವತಿ ಹಾಗೂ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿರುವ ಉದ್ಭವಲಿಂಗಕ್ಕೆ ಬೇಸಗೆ ಕಾಲದಲ್ಲಿ ಅದರಲ್ಲೂ ಮುಖ್ಯವಾಗಿ ಶಿವರಾತ್ರಿ ಸಹಿತ ಮೂರು ಮಖೆ ಜಾತ್ರೆಗಳಲ್ಲಿ ವಿಶೇಷ ಪೂಜೆ ನಡೆಯುವುದು ಸಹಸ್ರಾರು ವರ್ಷಗಳಿಂದ ನಡೆದುಕೊಂಡು ಬಂದ ಧಾರ್ಮಿಕ ವಿಧಿ ವಿಧಾನ. ಆದರೆ ಕಳೆದ ಮೂರು ವರ್ಷಗಳ ಹಿಂದೆ ನೇತ್ರಾವತಿ ನದಿಗೆ ಬಿಳಿಯೂರು ಎಂಬಲ್ಲಿ ಅಣೆಕಟ್ಟು ಕಟ್ಟಿ 4 ಮೀಟರ್ ಎತ್ತರದಲ್ಲಿ ನೀರು ಸಂಗ್ರಹಿಸಿದ್ದರಿಂದ ಅಣಿಕಟ್ಟಿನ ಹಿನ್ನೀರು ಉಪ್ಪಿನಂಗಡಿಯ ಕೂಟೇಲು ತನಕ ಸಂಗ್ರಹಗೊಳ್ಳುವಂತಾಗಿದೆ ಪರಿಣಾಮ ನದಿಯಲ್ಲಿನ ಉದ್ಭವ ಲಿಂಗವೂ ಜಲಾವೃತಗೊಂಡು ವರ್ಷಾವಧಿ ನಡೆಸಲಾಗುತ್ತಿದ್ದ ಪೂಜೆ ಪುನಸ್ಕಾರಗಳಿಂದ ವಿಮುಖವಾದಂತಾಗಿದೆ. ಇದರಿಂದಾಗಿ ಕೆಲವೊಂದು ಕೃಷಿಕರಿಗೆ ಅನುಕೂಲವಾಗಿದೆಯಾದರೂ ಶ್ರದ್ದಾಳು ಜನತೆಗೆ ಅತೀವ ನಿರಾಶೆ ಮೂಡಿದೆ.
ಈ ಕಾರಣಕ್ಕಾಗಿ ಅಣಿಕಟ್ಟು ಕಟ್ಟಿದ ಸದುದ್ದೇಶದ ಪಾಲನೆಯ ಜೊತೆಗೆ ಉಪ್ಪಿನಂಗಡಿ ಮತ್ತದರ ಸುತ್ತಮುತ್ತಲ ಜನರ ಧಾರ್ಮಿಕ ನಂಬಿಕೆಯನ್ನು ಉಳಿಸುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗೋಪಾಯವನ್ನು ಅನುಷ್ಠಾನಿಸಬೇಕೆಂದು ಸಾರ್ವಜನಿಕರಿಂದ ಆಗ್ರಹಗಳು ಕೇಳಿ ಬಂದಿದೆ. ಅದರಂತೆ ಪ್ರತಿವರ್ಷದಂತೆ ಬಿಳಿಯೂರು ಅಣಿಕಟ್ಟಿನಲ್ಲಿ ಗೇಟು ಅಳವಡಿಸುವ ಸಮಯದಲ್ಲಿ ಸಾಮಾನ್ಯವಾಗಿ ಬಳಸುವ 4 ಮೀಟರ್ ಎತ್ತರದ ಗೇಟಿನ ಬದಲು ನದಿಯ ಹಿನ್ನೀರು ನೆಕ್ಕಿಲಾಡಿವರೆಗೆ ಮಾತ್ರ ಸಂಗ್ರಹಗೊಳ್ಳುವಷ್ಟು ಎರಡು ಯಾ ಮೂರು ಮೀಟರ್ ಎತ್ತರದ ಗೇಟನ್ನು ಅಳವಡಿಸಬೇಕು. ಮೂರು ಮಖೆ ಜಾತ್ರೆಗಳು ಕೊನೆಗೊಳ್ಳುವ ಮಾರ್ಚ್ 12 ರ ಬಳಿಕ ಗೇಟನ್ನು ನಾಲ್ಕು ಮೀಟರ್ ಗೆ ಎತ್ತರಿಸಿ ಬಳಿಕ ಪರಿಪೂರ್ಣ ಪ್ರಮಾಣದಲ್ಲಿ ಮಾಡುವುದರಿಂದ ಅನಾದಿ ಕಾಲದಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದ್ದ ಧಾರ್ಮಿಕ ಕಾರ್ಯಗಳನ್ನು ಮಾಡುವಂತೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ‌ಮನವಿಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here