’ ರಬ್ಬರ್ ಕೃಷಿಕರ ಸಮಸ್ಯೆ ಪರಿಹರಿಸಿ ’ – ಬೆಳೆಗಾರರ ಹಿತರಕ್ಷಣಾ ವೇದಿಕೆಯಿಂದ ಸಚಿವರು, ಸಂಸದರು, ಶಾಸಕರಿಗೆ ಮನವಿ

0

ನೆಲ್ಯಾಡಿ: ರಬ್ಬರ್ ಧಾರಣೆ ಏರಿಳಿತ ಸೇರಿದಂತೆ ಪ್ರಸಕ್ತ ಸಂದರ್ಭದಲ್ಲಿ ರಬ್ಬರ್ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆಯಿಂದ ಸಚಿವರು, ಸಂಸದರು, ಶಾಸಕರಿಗೆ ಮನವಿ ಮಾಡಲಾಗಿದೆ.

ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಪ್ರಸಕ್ತ ಸನ್ನಿವೇಶದಲ್ಲಿ ರಬ್ಬರ್ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿದರು. ದೇಶದ ನೈಜ ರಬ್ಬರಿನ ಬೇಡಿಕೆ ಪೂರೈಸಿಕೊಳ್ಳುವ ಸಲುವಾಗಿ ನೈಜ ರಬ್ಬರ್ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಿ ಸಹಾಯಧನ, ಸಾಲಗಳ ಮೂಲಕ ಬೆಳೆಗಾರರನ್ನು ಸರಕಾರಗಳು ಪ್ರೋತ್ಸಾಹಿಸಿದ ಕಾರಣ ಕರ್ನಾಟಕ ರಾಜ್ಯದಲ್ಲಿಯೂ ಬೆಳೆಗಾರರು ರಬ್ಬರ್ ಕೃಷಿಯತ್ತ ಆಕರ್ಷಿತರಾಗಿ ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ರಬ್ಬರ್ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸಕ್ತ ರಾಜ್ಯದಲ್ಲಿ ಸುಮಾರು 60 ಸಾವಿರ ಹೆಕ್ಟೇರ್ ವಿಸ್ತೀರ್ಣದಲ್ಲಿ ರಬ್ಬರು ಕೃಷಿ ಇದ್ದು ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ರಬ್ಬರ್ ಕೃಷಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು ಈ ಕುರಿತು ಅಧ್ಯಯನ ಮಾಡಿ ಪರಿಹಾರೋಪಾಯ ಕಂಡುಕೊಳ್ಳುವರೇ ಹಿರಿಯ ಅರ್ಥಶಾಸ್ತ್ರಜ್ಞ ಡಾ|ವಿಘ್ನೇಶ್ವರ ವರ್ಮುಡಿ ಅವರು ವರದಿ ತಯಾರಿಸಿದ್ದಾರೆ ಎಂಬ ವಿಚಾರವನ್ನು ಪದಾಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ರಬ್ಬರನ್ನು ಕೃಷಿಯೆಂದು ಪರಿಗಣಿಸಿ;
ಕರ್ನಾಟಕ ರಾಜ್ಯದಲ್ಲಿ ರಬ್ಬರು ಕೃಷಿಯು ಇದುವರೆಗೆ ಯಾವುದೇ ಇಲಾಖೆಯ ಅಧೀನದಲ್ಲಿ ಇರುವುದಿಲ್ಲ. ಆದ್ದರಿಂದ ರಬ್ಬರ್ ಬೆಳೆಗಾರರ ಹಿತರಕ್ಷಣೆಗಾಗಿ ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲಿಯೂ ರಬ್ಬರನ್ನು ಕೃಷಿಯೆಂದು ಪರಿಗಣಿಸಿ ಬೆಳೆವಿಮೆ ಇತ್ಯಾದಿ ಸೌಲಭ್ಯಗಳನ್ನು ರಬ್ಬರು ಕೃಷಿಕರಿಗೂ ದೊರಕುವಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವರಿಗೆ ಮನವಿ ಮಾಡಿದ್ದಾರೆ. ಈಗಿನ ಉತ್ಪಾದನೆಯಂತೆ ರಬ್ಬರು ಉತ್ಪಾದನೆಯಿಂದ ಕರ್ನಾಟಕ ರಾಜ್ಯವು 1 ಸಾವಿರ ಕೋಟಿ ರೂ.ಆದಾಯ ಗಳಿಸುತ್ತಿದ್ದು ಸರಕಾರದ ಬೊಕ್ಕಸಕ್ಕೂ ತೆರಿಗೆಯಾಗಿ 50 ಕೋಟಿ ರೂ.ದೊರಕುತ್ತಿದೆ. ಬೆಳೆಗಾರರಿಗೆ ಬೆಂಬಲ ನೀಡಿದಲ್ಲಿ ಉತ್ಪಾದನೆಯಲ್ಲಿ ಹೆಚ್ಚಳವಾಗಿ ತೆರಿಗೆ ಸಂಗ್ರಹದಲ್ಲೂ ಹೆಚ್ಚಳವಾಗುವ ಸಾಧ್ಯತೆ ಇದ್ದು, ಇದರಿಂದ ಬೆಳೆಗಾರರಿಗೆ, ರಾಜ್ಯ ಸರಕಾರಕ್ಕೆ ಹಾಗೂ ಕೇಂದ್ರ ಸರಕಾರಕ್ಕೂ ಆಮದು ಕಡಿಮೆಯಾಗುವ ಮೂಲಕ ಅನುಕೂಲವಾಗಲಿದೆ. ರಬ್ಬರ್ ಬೆಳೆಗಾರರ ಬೇಡಿಕೆಗೆ ಸ್ಪಂದಿಸಿ ರಾಜ್ಯ ಸರಕಾರದಿಂದ ಬೆಳೆಗಾರರಿಗೆ ಅನುಕೂಲ ಮಾಡಿಕೊಡುವಂತೆ ಸಚಿವರಿಗೆ ಮನವಿ ಮಾಡಲಾಗಿದೆ. ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಶ್ರೀಧರ ಜಿ.ಭಿಡೆ ಮುಂಡಾಜೆ, ಉಪಾಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ ಪುತ್ತೂರು ಹಾಗೂ ಪದಾಧಿಕಾರಿಗಳು ಸಚಿವರೊಂದಿಗೆ ಚರ್ಚೆ ನಡೆಸಿದರು.

ಡಾ|ಡಿ.ವೀರೇಂದ್ರ ಹೆಗ್ಗಡೆ, ಸಂಸದರು, ಶಾಸಕರಿಗೂ ಮನವಿ;
ರಬ್ಬರ್ ಬೆಳೆಗಾರರ ಸಮಸ್ಯೆ ಪರಿಹರಿಸುವಂತೆ ಕೋರಿ ರಾಜ್ಯಸಭಾ ಸದಸ್ಯರೂ ಆದ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ, ಸಂಸದರಾದ ಕ್ಯಾ| ಬ್ರಿಜೇಶ್ ಚೌಟ, ಶ್ರೀನಿವಾಸ ಪೂಜಾರಿ, ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ ಸಹಿತ ಹಲವರಿಗೆ ಕರ್ನಾಟಕ ರಾಜ್ಯ ರಬ್ಬರ್ ಬೆಳೆಗಾರರ ಹಿತರಕ್ಷಣಾ ವೇದಿಕೆಯಿಂದ ಮನವಿ ಮಾಡಲಾಗಿದೆ. ಅರ್ಥಶಾಸ್ತ್ರಜ್ಞ ಡಾ.ವಿಘ್ನೇಶ್ವರ ವರ್ಮುಡಿ, ರಬ್ಬರ್ ಮಂಡಳಿ ಸದಸ್ಯರಾದ ಮುಳಿಯ ಕೇಶವ ಭಟ್, ವಸಂತ ಅಣ್ಣಳಿಕೆ, ಕರ್ನಾಟಕ ರಾಜ್ಯ ರಬ್ಬರು ಬೆಳೆಗಾರರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಶ್ರೀಧರ ಜಿ.ಭಿಡೆ, ಉಪಾಧ್ಯಕ್ಷರಾದ ಕಿಶೋರ್‌ಕುಮಾರ್ ಕೊಡ್ಗಿ, ನಿತ್ಯಾನಂದ ಮುಂಡೋಡಿ ಸುಳ್ಯ, ಪ್ರಸಾದ್ ಕೌಶಲ್ ಶೆಟ್ಟಿ, ಗೋಪಾಲಕೃಷ್ಣ ಭಟ್, ಕೃಪಾ, ಕೆ.ಎಸ್.ಶೇಷಾದ್ರಿ ತೀರ್ಥಹಳ್ಳಿ, ಕಾರ್ಯದರ್ಶಿಗಳಾದ ರಾಜು ಶೆಟ್ಟಿ ಉಜಿರೆ,ವಿಜಯಕೃಷ್ಣ ಸುಳ್ಯ, ಸಂಯೋಜಕ ಅನಂತ ಭಟ್ ಎಂ.ಮುಂಡಾಜೆ, ಸದಸ್ಯರಾದ ಅನಂತ ಎನ್.ಸಿ. ಸಂಪಾಜೆ, ನಾಗೇಶ್ ಕುಂಡಲ್ಪಾಡಿ, ಸಂತೋಷ್ ಕುತಮಟ್ಟೆ, ಅಚ್ಯುತ ಮುಡಿತ್ತಾಯ ನನ್ಯ, ಜೋಸ್ ಮೂರ್ಜೆ, ಸೀತಾರಾಮ ಆಚಾರ್, ಅಶೋಕ್‌ಕುಮಾರ್, ಎಸ್.ಎನ್.ಲೋಕೇಶ್ ಗೌಡ, ಡಯಾಸ್ ಚೆರಿಯನ್, ಸಜಿ ಜೋಸ್ ಕುರುವತ್ತಜ ಅವರು ಸಂಸದರು,ಶಾಸಕರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

ಬೆಂಬಲ ಬೆಲೆ ಘೋಷಣೆಗೆ ಒತ್ತಾಯ;
ಕೇರಳ ಸರಕಾರವು 2015-16ನೇ ಸಾಲಿನಿಂದ ರಬ್ಬರು ಬೆಳೆಗಾರರ ರಕ್ಷಣೆಗೋಸ್ಕರ ’ರಬ್ಬರು ಉತ್ಪಾದನಾ ಪ್ರೋತ್ಸಾಹಧನ ಯೋಜನೆ’ ಎಂಬ ಶಿರೋನಾಮೆಯಲ್ಲಿ ಯೋಜನೆಯೊಂದನ್ನು ರೂಪಿಸಿದ್ದು ಸದ್ರಿ ಯೋಜನೆ ಮುಂದುವರಿಕೆಯಾಗಿ 2025-26ನೇ ಸಾಲಿನಲ್ಲಿಯೂ ಕಿಲೋ ಒಂದರ ರೂ.200ರಂತೆ ಧಾರಣೆ ನಿಗದಿಪಡಿಸಿ ಸಣ್ಣ ರೈತರಿಗೆ ಬೆಂಬಲ ಬೆಲೆ ಘೋಷಿಸುತ್ತಿದ್ದು ನ.1,2025ರಿಂದ ಈ ಯೋಜನೆಯಂತೆ ರಬ್ಬರು ಖರೀದಿ ಪ್ರಾರಂಭಿಸಲು ಆದೇಶ ನೀಡಿದೆ. ಇದೇ ರೀತಿ ಕರ್ನಾಟಕ ಸರಕಾರವೂ ಯೋಜನೆ ಹಾಕಿಕೊಂಡು ಬೆಂಬಲ ಬೆಲೆ ಘೋಷಿಸಿ ಬೆಳೆಗಾರರನ್ನು ರಕ್ಷಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಒತ್ತಾಯಿಸಿದ್ದೇವೆ.
-ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಅಧ್ಯಕ್ಷರು
ಪುತ್ತೂರು ತಾ|ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘ

LEAVE A REPLY

Please enter your comment!
Please enter your name here