





ಎಸ್.ಸಿ, ಎಸ್.ಟಿಯವರ ಕಮರ್ಶಿಯಲ್ ಕಟ್ಟಡ ಕನ್ವರ್ಷನ್ ಆಗುವಂತೆ ಕ್ರಮಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲು ನಿರ್ಧಾರ


ನಿಡ್ಪಳ್ಳಿ: ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷೆ ವಿದ್ಯಾಶ್ರೀ ಸರಳಿಕಾನ ಇವರ ಅಧ್ಯಕ್ಷತೆಯಲ್ಲಿ ನ.10 ರಂದು ನಡೆಯಿತು.





ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಮನೆಗಳ ಕನ್ವರ್ಷನ್ ಆಗುತ್ತಿದೆ. ಆದರೆ ಅವರ ಕಮರ್ಷಿಯಲ್ ಕಟ್ಟಡಗಳ ಕನ್ವರ್ಷನ್ ಆಗುತ್ತಿಲ್ಲ. ಇದಕ್ಕೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸದಸ್ಯ ಪ್ರಕಾಶ್ ರೈ ಪ್ರಸ್ತಾಪಿಸಿದರು. ಆಗ ಈ ಬಗ್ಗೆ ಇತರ ಸದಸ್ಯರು ಧ್ವನಿಗೂಡಿಸಿ ಚರ್ಚಿಸಲಾಯಿತು. ಅವರ ಜಾಗ ಮತ್ತು ಮನೆಗಳು ಮಾತ್ರ ಕನ್ವರ್ಷನ್ ಆಗುತ್ತಿದೆ. ಆದರೆ ಕಮರ್ಷಿಯಲ್ ಕಟ್ಟಡಗಳು ಕನ್ವರ್ಷನ್ ಆಗದೆ ಅವರಿಗೆ ಕೋಳಿ ಸಾಕಾಣಿಕೆ, ಇತರ ವ್ಯಾಪಾರ ವಹಿವಾಟುಗಳಿಗೆ ಡೋರ್ ನಂಬರ್, ವಿದ್ಯುತ್ ಸಂಪರ್ಕ ಸಿಗದೆ ಬಹಳ ಕಷ್ಟ ಪಡುತ್ತಿದ್ದಾರೆ ಎಂದು ಹೇಳಿದ ಪ್ರಕಾಶ್ ರೈ ಮತ್ತೀತರರು ಈ ಬಗ್ಗೆ ಸರಕಾರ ಸೂಕ್ತ ಕ್ರಮ ಕೈಗೊಳ್ಳ ಬೇಕಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಲಾಯಿತು.ಈ ಬಗ್ಗೆ ತಕ್ಷಣ ಸೂಕ್ತವಾದ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮತ್ತು ಶಾಸಕರಿಗೆ ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಮ್ಮಟೆಗದ್ದೆ ಸಾಹೇಬರ ಅಂಗಡಿ ಬಳಿಯ ಎಸ್.ಸಿ ಕಾಲನಿ ಬಳಿ ಇರುವ ಕುಡಿಯುವ ನೀರಿನ ಘಟಕ ಸದ್ಯ ಒಳಮೊಗ್ರು ಪಂಚಾಯತ್ ಅದೀನದಲ್ಲಿದೆ. ಅದು ಬೆಟ್ಟಂಪಾಡಿ ಗ್ರಾಮ ಪಂಚಾಯತ್ ಸುಪರ್ದಿಗೆ ತೆಗೆದುಕೊಳ್ಳಲು ಅಲ್ಲಿಯ ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ. ಆದುದರಿಂದ ಆ ಘಟಕವನ್ನು ಪಂಚಾಯತ್ ಗೆ ಹಸ್ತಾಂತರ ಮಾಡುವಂತೆ ಕೋರಿ ಒಳಮೊಗ್ರು ಗ್ರಾಮ ಪಂಚಾಯತ್ ಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಸದಸ್ಯ ಮೊಯಿದುಕುಂಞ ವಿಷಯ ಪ್ರಸ್ತಾಪಿಸಿ ಹೆಚ್ಚಿನ ಅಂಗನವಾಡಿ, ಶಾಲೆ, ಕಾಲೇಜುಗಳ ಜಾಗವು ಪ್ಲೊಟಿಂಗ್ ಆಗದ ಕಾರಣ ಅರ್.ಟಿ.ಸಿಯಲ್ಲಿ ಕಲಂ 11 ರಲ್ಲಿ ದಾಖಲಾಗಿದೆ. ಇದರಿಂದ ಎಲ್ಲಿಯವರೆಗೆ ಎಷ್ಟು ಜಾಗ ಆ ಸಂಸ್ಥೆಗೆ ಒಳಪಟ್ಟಿದೆ ಎಂಬ ಖಾತ್ರಿ ಇರುವುದಿಲ್ಲ. ಸಂಸ್ಥೆ ಒಂದು ಕಡೆ ಜಾಗ ಇನ್ನೊಂದು ಕಡೆ ಇದ್ದ ಹಾಗೆ ಇದ್ದರೆ ಜಾಗದ ಬಗ್ಗೆ ಗೊಂದಲ ಇರುತ್ತದೆ. ಆ ಜಾಗ ಪ್ಲೊಟಿಂಗ್ ಮಾಡಿದರೆ ಇರುವ ಜಾಗಕ್ಕೆ ಬೇಲಿ ಅಥವಾ ಕಾಂಪೌಂಡ್ ರಚಿಸಿದರೆ ಯಾರಿಗೂ ಯಾವ ಗೊಂದಲ ಮತ್ತು ಸಮಸ್ಯೆ ಇರುವುದಿಲ್ಲ. ಅಲ್ಲದೆ ಅಲ್ಲಿ ಉತ್ತಮ ಅಭಿವೃದ್ಧಿ ಕೆಲಸ ಮಾಡಬಹುದು. ಆದುದರಿಂದ ಎಲ್ಲಾ ಶಾಲೆ ಕಾಲೇಜುಗಳ ಜಾಗವನ್ನು ಪ್ಲೊಟಿಂಗ್ ಮಾಡಿಸಿ ಕಲಂ 11 ರಿಂದ ತೆಗೆದು ಕಲಂ 9 ರಲ್ಲಿ ದಾಖಲಿಸಲುಬೇಕಾದ ಎಲ್ಲಾ ಕ್ರಮಕೈಗೊಳ್ಳುವಂತೆ ಜಿಲ್ಲಾದಿಕಾರಿ ಮತ್ತು ಶಾಸಕರಿಗೆ ಬರೆಯಲು ಪ್ರಸ್ತಾಪಿಸಿದಾಗ ಹಾಗೆಯೇ ನಿರ್ಣಯಿಸಲಾಯಿತು.
ಪಾಣಾಜೆಯಿಂದ ಸಂಟ್ಯಾರ್ ವರೆಗಿನ ಲೋಕೋಪಯೋಗಿ ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ವಾಹನ ಚಲಾಯಿಸಲು ಬಹಳ ಕಷ್ಟವಾಗಿದೆ ಎಂದು ಸದಸ್ಯ ಪ್ರಕಾಶ್ ರೈ ಪ್ರಸ್ತಾಪಿಸಿದರು. ಆದುದರಿಂದ ತಕ್ಷಣ ಇದರ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಶಾಸಕರಿಗೆ ಬರೆಯುವುದು ಒಳ್ಳೆಯದು ಎಂದು ಹೇಳಿದರು. ಆಗ ಸದಸ್ಯರಾದ ಮೊಯಿದುಕುಂಞ ಮತ್ತು ಮಹಾಲಿಂಗ ನಾಯ್ಕ ಮಾತನಾಡಿ ಇನ್ನು ಮೂರು ದಿನದಲ್ಲಿ ದುರಸ್ತಿ ಕಾರ್ಯ ನಡೆಯಲಿದೆ ಎಂದು ಶಾಸಕರು ತಿಳಿಸಿದ್ದಾರೆ ಎಂದು ಉತ್ತರಿಸಿದರು.
ಚೆಲ್ಯಡ್ಕ ಸೇತುವೆ ಪೂರ್ತಿಯಾಗಿ ಕೆಲವು ಸಮಯ ಕಳೆದರೂ ಸಂಪರ್ಕ ಕಾಮಗಾರಿ ಇನ್ನೂ ಆರಂಭಿಸಿಲ್ಲ ಎಂದು ಪ್ರಸ್ತಾಪ ಮಾಡಲಾಯಿತು. ಸಂಪರ್ಕವಾಗದೆ ಇರುವುದರಿಂದ ಆ ಭಾಗದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಹಳ ಸಮಸ್ಯೆಯಾಗಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು. ಸಂಬಂಧ ಪಟ್ಟವರು ತಕ್ಷಣ ಇದರ ಸಂಪರ್ಕ ಕಾಮಗಾರಿ ನಡೆಸಿ ಸಂಚಾರ ಮುಕ್ತಗೊಳಿಸುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.
ಇಲಾಖೆಯಿಂದ ಬಂದ ಸುತ್ತೋಲೆಗಳ ಬಗ್ಗೆ ಚರ್ಚಿಸಲಾಯಿತು. ಸಾರ್ವಜನಿಕ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು.
ಚರ್ಚಿಸಿದ ಇತರ ವಿಷಯಗಳು
2025-26ನೇ ಸಾಲಿನ 15ನೇ ಹಣಕಾಸು ಯೋಜನೆ ಅನುದಾನ ಬಾರದಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಪಂಚಾಯತ್ ವ್ಯಾಪ್ತಿಯ ಮನೆ ತೆರಿಗೆ, ವಾಣಿಜ್ಯ ಕಟ್ಟಡಗಳ ಈಗೀನ ತೆರಿಗೆ ಕಡಿಮೆಯಾದ ಕಾರಣ 2% ತೆರಿಗೆ ಜಾಸ್ತಿ ಮಾಡಲು ಬಂದ ಸರಕಾರದ ಅದೇಶದ ಬಗ್ಗೆ ಚರ್ಚಿಸಿದ ಸಭೆ ಸದ್ಯಕ್ಕೆ ಯಾವುದೇ ನಿರ್ಣಯ ಕೈಗೊಳ್ಳಲಿಲ್ಲ.
ಉಪಾಧ್ಯಕ್ಷ ಮಹೇಶ್ ಕೆ, ಸದಸ್ಯರಾದ ಪ್ರಕಾಶ್ ರೈ, ಉಮಾವತಿ.ಜಿ, ಪಾರ್ವತಿ.ಎಂ, ಲಲಿತಾ ಚಿದಾನಂದ, ಲಲಿತಾ, ವಿನೋದ್ ಕುಮಾರ್ ರೈ, ಸುಮಲತಾ, ಮೊಯಿದುಕುಂಞ, ಮಹಾಲಿಂಗ ನಾಯ್ಕ, ಗಂಗಾಧರ ಗೌಡ, ಚಂದ್ರಶೇಖರ ರೈ, ನವೀನ್ ಕುಮಾರ್ ರೈ, ಬೇಬಿ. ಪಿ ಹಾಗೂ ಪಿಡಿಒ ಸೌಮ್ಯ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ಸಂದೀಪ್. ಟಿ, ಸವಿತಾ, ಚಂದ್ರಾವತಿ ಸಹಕರಿಸಿದರು.









