





ಬಹುವರ್ಷದ ಬೇಡಿಕೆ ಈಡೇರಿದೆ – ಶಾಸಕ ಅಶೋಕ್ ರೈ


ಪುತ್ತೂರು: ಪಾಣಾಜೆ ನೀರಮೂಲೆ ಗ್ರಾಮಸ್ಥರ ಬಹುಕಾಲದ ಬೇಡಿಕೆಯನ್ನು ಈಡೇರಿಸಲಾಗಿದೆ. ಇನ್ನು ಇಲ್ಲಿನ ಕೃಷಿಕರು ನಿಶ್ಚಿಂತೆಯಿಂದ ಇರಬಹುದು ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ಪಾಣಾಜೆ ಗ್ರಾಮದ ನೀರಮೂಲೆಯಲ್ಲಿ ತ್ರಿಫೇಸ್ ವಿದ್ಯುತ್ ಸಂಪರ್ಕವನ್ನು ಲೋಕಾರ್ಪಣೆಗೈದು ಮಾತನಾಡಿದರು.





ಪಾಣಾಜೆ ಗ್ರಾಮಕ್ಕೆ ಈಗಾಗಲೆ 6 ಕೋಟಿ ಅನುದಾನವನ್ನು ನೀಡಲಾಗಿದೆ. ಇಲ್ಲಿನ ರಸ್ತೆಗೆ ಹೆಚ್ಚುವರಿಯಾಗಿ 3 ಕೋಟಿ ಬಿಡುಗಡೆ ಮಾಡಿದ್ದೇನೆ. ಪಾಣಾಜೆ ಗ್ರಾಮಕ್ಕೆ ಇನ್ನೂ ಹೆಚ್ಚಿನ ಅನುದಾನವನ್ನು ನೀಡಲಿದ್ದೇನೆ . ಪಾಣಾಜೆ ಗ್ರಾಮವನ್ನು ನಾನು ಪ್ರೀತಿಸಿದ ಹಾಗೆ ಇಲ್ಲಿನ ಜನರೂ ನನ್ನನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ ಪಿ ಆಳ್ವ ರವರು ಮಾತನಾಡಿ, ಪಾಣಾಜೆಗೆ ಶಾಸಕರು ಹೆಚ್ಚು ಅನುದಾನವನ್ನು ನೀಡಿರುವುದು ಸಂತೋಷದ ವಿಚಾರವಾಗಿದೆ. ಇದುವರೆಗೆ ಯಾವ ಶಾಸಕರೂ ಮಾಡದ ಕೆಲಸವನ್ನು ಅಶೋಕ್ ರೈ ಮಾಡಿದ್ದಾರೆ. ಮುಂಬರುವ ಗ್ರಾಪಂ, ತಾಪಂ, ಜಿಪಂ ಚುನಾವಣೆಯಲ್ಲಿ ಬೆಂಬಲ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಮೈಮುನಾ, ಸದಸ್ಯರಾದ ವಿಮಲಾ, ನಾರಾಯಣ ನಾಯ್ಕ, ಕೃಷ್ಣಪ್ಪ ಪೂಜಾರಿ, ಹಿರಿಯರಾದ ಗೋಪಾಲ ನಾಯ್ಕ ನೀರಮೂಲೆ, ಅಬೂಬಕ್ಕರ್ ಆರ್ಲಪದವು, ವಲಯ ಅಧ್ಯಕ್ಷ ಸದಾನಂದ ಭರಣ್ಯ, ಶಿಕ್ಷಕಿ ಸರಸ್ವತಿ, ಮೆಸ್ಕಾಂ ಜೆ ಇ ಪುತ್ತುಜೆ ಮತ್ತಿತರರು ಉಪಸ್ಥಿತರಿದ್ದರು. ಮೆಸ್ಕಾಂ ಸಲಹಾ ಸಮಿತಿ ಸದಸ್ಯರಾದ ಬಾಬು ರೈ ಕೋಟೆ ಸ್ವಾಗತಿಸಿ ವಂದಿಸಿದರು.










