





ದೇವರು ನೀಡಿದ ಸುಂದರ ಮತ್ತು ಅಮೂಲ್ಯವಾದ ಕಾಣಿಕೆ-ವಂ|ಲಾರೆನ್ಸ್ ಮಸ್ಕರೇನ್ಹಸ್


ಪುತ್ತೂರು: ಸಂತವಿಕ್ಟರ್ ಬಾಲಿಕಾ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಮಾಯ್ ದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ವಂ|ಲಾರೆನ್ಸ್ ಮಸ್ಕರೇನ್ಹಸ್‌ರವರು ಮಾತನಾಡಿ ಮಕ್ಕಳು, ಹೆತ್ತವರಿಗೆ ದೇವರು ನೀಡಿದ ಸುಂದರ ಮತ್ತು ಅಮೂಲ್ಯವಾದ ಕಾಣಿಕೆ. ಹೆತ್ತವರಿಗೆ ಮಕ್ಕಳೇ ಪ್ರಪಂಚ ಅವರು ಮನೆಯಲ್ಲಿ, ಶಾಲೆಯಲ್ಲಿ ಕೇಂದ್ರ ಬಿಂದುಗಳು. ಮಕ್ಕಳು ಮನೆಯಲ್ಲಿ ಇಲ್ಲದಿದ್ದರೆ ಬೆಳಕಿಲ್ಲದಂತೆ, ಮಕ್ಕಳು ಜೀವನಕ್ಕೆ ಉತ್ಸಾಹವಿದ್ದಂತೆ, ಹೆತ್ತವರು ತಮ್ಮ ಮಕ್ಕಳ ಭವಿಷ್ಯದ ಮೇಲೆ ಕನಸನ್ನು ಇಟ್ಟಿದ್ದಾರೆ. ಈ ಕನಸನ್ನು ನನಸು ಮಾಡುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳುವ ಜವಾಬ್ದಾರಿ ಮಕ್ಕಳ ಮೇಲಿದೆ. ಎಂದು ಶುಭಹಾರೈಸಿದರು.





ಮುಖ್ಯ ಅತಿಥಿ, 7ನೇ ತರಗತಿ ವಿದ್ಯಾರ್ಥಿನಿಯರಾದ ಮಾಯಿದೆದೇವುಸ್ ಹಿರಿಯ ಪ್ರಾಥಮಿಕ ಶಾಲೆಯ ಆಯಿಷತ್‌ಅಲ್‌ಸಾನ, ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ಐಷಾನಿ ಹಾಗೂ ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಗೌತಮಿ ಮಾತನಾಡಿ ವಿದ್ಯಾರ್ಥಿಗಳಾದ ನಾವು ನಮ್ಮ ಜವಾಬ್ದಾರಿಗಳನ್ನು ಅರಿತು ಬಾಳಬೇಕು. ಶಿಕ್ಷಕರು ಹೇಳಿದಂತೆ ನಡೆದು ಶಿಸ್ತು ವಿಧೇಯತೆ ಇತರಿಗೆ ಗೌರವ ಮುಂತಾದ ಮೌಲ್ಯಗಳನ್ನು ಅಳವಡಿಸಿದಾಗ ಚಾಚಾ ನೆಹರೂರವರ ಆಶಯ ಈಡೇರುತ್ತದೆ ಎಂದು ಹೇಳಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ಟ ಮಾತನಾಡಿ ಮಕ್ಕಳು ದೇಶದ ಭವಿಷ್ಯ, ರಾಷ್ಟ್ರದ ನಿಜವಾದ ಶಕ್ತಿ, ಸಮಾಜದ ಅಡಿಪಾಯ. ದೇಶದ ಮಕ್ಕಳಿಗೆ ಅಗತ್ಯವುಳ್ಳ ಶಿಕ್ಷಣ ಪೂರೈಸಬೇಕು ಎಂದು ಹೇಳಿ ಶುಭಹಾರೈಸಿದರು.
ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷೆ ಶ್ವೇತಾ ಕೆ. ಮಾತಾನಾಡಿ ನೆಹರೂರವರು ವಿಶಾಲ ಹೃದಯವಂತ ವ್ಯಕ್ತಿ. ಮಕ್ಕಳಿಂದ ಅವರು ಬಯಸಿದ್ದು ಇಂದಿನ ಮಕ್ಕಳು ನಾಳೆಯ ಸುಂದರ ಭಾರತದ ಭವಿಷ್ಯವನ್ನು ನಿರ್ಮಿಸಬೇಕು ಎಂದು ಮಕ್ಕಳ ದಿನಾಚರಣೆಯ ಹಿನ್ನೆಲೆ ತಿಳಿಸಿದರು.
ಶಾಲಾ ಮಟ್ಟದ ಪ್ರತಿಭಾಕಾರಂಜಿ, ಸಂಸ್ಥಾಪಕರ ದಿನದ ಕ್ರೀಡಾಕೂಟದ ವಿಜೇತರಿಗೆ ಹಾಗೂ ಡ್ರಾಯಿಂಗ್ ಲೋವರ್‌ಗ್ರೇಡ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಬಹುಮಾನ ನೀಡಿ ಅಭಿನಂದಿಸಲಾಯಿತು. ಮುಖ್ಯ ಶಿಕ್ಷಕಿ ರೋಸಲಿನ್ ಲೋಬೊ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ ಶುಭಹಾರೈಸಿದರು. ಶಿಕ್ಷಕಿ ಶ್ವೇತಾ ಡಿಸೋಜರವರು ವಂದಿಸಿದರು. ಶಿಕ್ಷಕಿ ಹರಿಣಾಕ್ಷಿ ಕಾರ್‍ಯಕ್ರಮ ನಿರೂಪಿಸಿದರು. ಶಿಕ್ಷಕ-ಶಿಕ್ಷಕೇತರ ವೃಂದದವರು ಸಾಂಸ್ಕ್ರತಿಕ ಕಾರ್ಯಕ್ರಮ ನಡೆಸಿಕೊಟ್ಟರು. ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಹಾಗೂ ಶಿಕ್ಷಕ-ಶಿಕ್ಷಕೇತರ ವೃಂದದವರ ವತಿಯಿಂದ ಮಕ್ಕಳಿಗೆ ಸಿಹಿ ತಿಂಡಿ ವಿತರಿಸಲಾಯಿತು.










