ಪುತ್ತೂರು ಜೋಸ್ ಆಲುಕ್ಕಾಸ್ ಚಿನ್ನಾಭರಣ ಮಳಿಗೆಯಲ್ಲಿ ಸಿ.ಎಸ್.ಆರ್. ಫಂಡ್ ನ ಚೆಕ್ ಹಸ್ತಾಂತರ

0

ಸಂಸ್ಥೆಯ ಕೆಲಸ ಇತರರಿಗೆ ಮಾದರಿ: ಡಾ. ಶ್ರೀಪತಿ ರಾವ್

ಸರಕಾರಿ ಶಾಲೆಗಳಿಗೆ ಸಂಸ್ಥೆ ಸಹಕಾರ ನೀಡುತ್ತಿರುವುದು ಅಭಿನಂದನಾರ್ಹ: ವಿಶ್ವನಾಥ ರೈ

ಪುತ್ತೂರು: ಸಂಸ್ಥೆಗಳು ಬಂದಂತೆ ಊರು ಬೆಳೆಯಲು ಸಾಧ್ಯ. ಸಿ.ಎಸ್. ಆರ್ ಫಂಡ್ ನ ಮೂಲಕ ಸರಕಾರಿ ಶಾಲೆಗಳಿಗೆ ಸಹಕಾರ ನೀಡುತ್ತಿರುವ ಸಂಸ್ಥೆಯ ಆಶಯ
ಇತರರಿಗೆ ಮಾದರಿ. ಉದ್ಯಮಗಳು ಬೆಳೆಯುತ್ತಿದ್ದರು ಕೊಡುಗೆ ನೀಡುವ ಮನಸ್ಸು ಎಲ್ಲರಲ್ಲೂ ಇರುವುದಿಲ್ಲ. ಚ್ಯಾರಿಟಿ ಮೂಲಕ‌ ಸರಕಾರಿ ಶಾಲೆಗಳಿಗೆ ಸಹಕಾರ ನೀಡಲು ಸಂಸ್ಥೆ ಮುಂದಾಗಿರುವುದು ಸಂತಸದ ವಿಚಾರ. ಮಕ್ಕಳಲ್ಲಿ ಸೇವಾ ಮನೋಭಾವ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮ ಸಹಕಾರಿ ಎಂದು ಐ.ಎಂ.ಎ.ಯ ನೂತನ‌ ಅಧ್ಯಕ್ಷರು, ಹಿರಿಯ ವೈದ್ಯರೂ, ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೆಶಕರಾದ ಡಾ. ಶ್ರೀಪತಿರಾವ್ ರವರು ಹೇಳಿದರು.

ಚಿತ್ರ: ಲಕ್ಷ್ಮೀ ಸ್ಟುಡಿಯೋ ಕಂಬಳಬೆಟ್ಟು

ಅವರು ಡಿ.2ರಂದು ಪುತ್ತೂರಿನ ಕೆ.ಎಸ್.ಆರ್.ಟಿ.ಸಿ ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹಾರ ನಡೆಸುತ್ತಿರುವ ಅಂತರಾಷ್ಟ್ರೀಯ ಖ್ಯಾತಿಯ ಚಿನ್ನಾಭರಣ ಮಳಿಗೆ ಜೋಸ್ ಆಲುಕ್ಕಾಸ್ ನಲ್ಲಿ ಸಿ.ಎಸ್.ಆರ್. ನಿಧಿಯಿಂದ ಸರಕಾರಿ ಶಾಲೆಗಳಿಗೆ ಅಗತ್ಯ ಸಾಮಾಗ್ರಿ ಖರೀದಿಗಾಗಿ ನೀಡಲಾಗುವ ಚೆಕ್ ಹಸ್ತಾಂತರ ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ, ಚೆಕ್ ಹಸ್ತಾಂತರ ಮಾಡಿ ಮಾತನಾಡಿದರು.

ಅತೀ ಕಡಿಮೆ‌ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡಿ ಅದರಲ್ಲಿ ಬಂದ ಲಾಭದಲ್ಲಿ ಒಂದಂಶವನ್ನು ಸಮಾಜದ ಏಳಿಗೆಗೆ ವ್ಯಯಿಸುತ್ತಿರುವುದು ಸಂಸ್ಥೆ ಬೆಳವಣಿಗೆಗೆ ಪೂರಕ. ಅತೀ ಕಡಿಮೆ ಅವಧಿಯಲ್ಲಿ ಬಹಳಷ್ಟು ಬೆಳೆದು ನಿಂತ ಸಂಸ್ಥೆ ಇದಾಗಿದೆ ಎನ್ನಲು ಸಂತಸವಗುತ್ತಿದೆ. ಶಾಲೆಗಳ ಅಭಿವೃದ್ದಿ ಸಮಾಜದ ಏಳಿಗೆಗೆ ಪೂರಕ. ಇಂತಹ ಕಾರ್ಯಕ್ರಮಗಳು ನಿತ್ಯ ನಿರಂತರವಾಗಿ ನಡೆಯಲಿ. ದೇಶದ ಬೆಳವಣಿಗೆಯಲ್ಲಿ ನಾವೆಲ್ಲರೂ ಭಾಗಿಗಳಾಗೋಣ. ಸಂಸ್ಥೆ ಇನ್ನಷ್ಟು ಬೆಳಗಲಿ ಎಂದರು.

ಬೆಳ್ತಂಗಡಿ‌ ತಾಲೂಕಿನ ಕೊಕ್ಕಡ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಶ್ವನಾಥ ರೈರವರು ಮಾತನಾಡಿ ನಾನು ನಾಲ್ಕೈದು ವರುಷದಿಂದ ಈ ಸಂಸ್ಥೆಯ ಗ್ರಾಹಕನಾಗಿದ್ದೇನೆ. ಆದರೆ ನಾನಿಲ್ಲಿಗೆ ಬಂದ ಬಳಿಕ ಬೇರೆ ಸಂಸ್ಥೆಗೆ ಹೋಗಬೇಕು ಎಂದು ನನಗೆ ಅನಿಸಲೇ ಇಲ್ಲ. ಗ್ರಾಹಕರೊಂದಿಗೆ ಸಂಸ್ಥೆಯ ಸಿಬ್ಬಂದಿಗಳು ನಡೆಸುಕೊಳ್ಳುವ ರೀತಿ ಬಹಳ‌ ಚಿನ್ನಾಗಿದೆ. ಸರಕಾರಿ ಶಾಲೆಗಳು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇಂತಹ ಕಾಲಘಟ್ಟದಲ್ಲಿ ಜೋಸ್ ಆಲುಕ್ಕಾಸ್ ಸಹಕಾರ ನೀಡುತ್ತಿರುವುದು ಅಭಿನಂದನಾರ್ಹ ಎಂದರು.

ಇರ್ದೆ ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಲಿಂಗಮ್ಮ, ನರಿಮೊಗರು ಶಾಲೆಯ ಶಿಕ್ಷಕಿ ಶ್ರೀಲತಾ, ಕೊಂಡಾಡಿ ಕೊಪ್ಪ ಶಾಲಾ ಮುಖ್ಯಶಿಕ್ಷಕ ಜಯಂತ್ ವೈ ಮೊದಲಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಇದೇ ಸಂದರ್ಭ ನೂತನವಾಗಿ ಐ.ಎಂ.ಎ.ಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ವೈದ್ಯರೂ, ಬೊಳುವಾರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ಆಡಳಿತ ನಿರ್ದೆಶಕರಾದ ಡಾ. ಶ್ರೀಪತಿರಾವ್ ರವರನ್ನು ಸನ್ಮಾನಿಸಲಾಯಿತು.

ಶಾಖಾ ವ್ಯವಸ್ಥಾಪಕರಾದ ಹರಿ ಮಾರಾರ್, ಸಹಾಯಕ ವ್ಯವಸ್ಥಾಪಕ ಪ್ರಜೀಶ್ ಪ್ರಕಾಶ್, ಅಕೌಂಟೆಂಟ್ ಇನೋಶ್ ಸನ್ನಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿಗಳಾದ ವಸಂತಿ, ಸಿಂಚನ ಪ್ರಾರ್ಥಿಸಿದರು. ಸಿಬ್ಬಂದಿ ಅಶ್ವಿನಿ ವಂದಿಸಿದರು. ಸಿಬ್ಬಂದಿ ಉದಯ ಕುಲಾಲ್ ಕಾರ್ಯಕ್ರಮ ನಿರೂಪಿಸಿ‌ ಸ್ವಾಗತಿಸಿದರು.

ರೂ. 4,24 ಲಕ್ಷದ ಚೆಕ್ ಹಸ್ತಾಂತರ
ಕಡಬ ತಾಲೂಕು ಅಲಂಕಾರು ಕೊಂಡಾಡಿ ಕೊಪ್ಪ ಹಿ.ಪ್ರಾ ಶಾಲೆಗೆ ಶಾಲಾ ಸಭಾಂಗಣಕ್ಕೆ ಟೈಲ್ಸ್ ಅಳವಡಿಕೆಗೆ ರೂ. 75000, ಪುತ್ತೂರು ತಾಲೂಕು ಇರ್ದೆ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಗೆ ಬೆಂಚ್ , ಡೆಸ್ಕ ಸಹಿತ ಶಾಲೆಗೆ ಅಗತ್ಯವಿರುವ ಪೀಟೋಪಕರಣ ಖರೀದಿಗೆ ರೂ. 70800, ಬೆಳ್ಳಿಪ್ಪಾಡಿ ಸರಕಾರಿ ಹಿ.ಪ್ರಾ ಶಾಲೆಗೆ ಕೊಠಡಿ ದುರಸ್ತಿಗಾಗಿ ರೂ. 69500, ನರಿಮೊಗರು ಹಿ.ಪ್ರಾ. ಶಾಲೆಗೆ ಎಲ್.ಇ.ಡಿ. ಟಿವಿ ಖರೀದಿಗೆ ರೂ. 50730, ಕುರಿಯ ಹಿ.ಪ್ರಾ. ಶಾಲೆಗೆ ಪ್ರಿಂಟರ್ ಖರೀದಿಗೆ ರೂ. 47300, ಬೆಳ್ತಂಗಡಿ‌ ತಾಲೂಕಿನ ಕೊಕ್ಕಡ ಪದವಿಪೂರ್ವ ಕಾಲೇಜಿಗೆ ವಾಟರ್ ಕೂಲರ್ ಖರೀದಿಗೆ ರೂ. 61360 ಮೊತ್ತದ ಚೆಕ್ ಅನ್ನು ಹಸ್ತಾಂತರ ಮಾಡಲಾಯಿತು.

LEAVE A REPLY

Please enter your comment!
Please enter your name here