‘ಬಲಾತ್ಕಾರದ ಬಂದ್ ನಡೆಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ’ ಜನರ ಮನಸ್ಸು ಪರಿವರ್ತಿಸುವ ಮೂಲಕ ಸಮಸ್ಯೆಗೆ ಪರಿಹಾರ ಹುಡುಕಬೇಕು : ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀವಿದ್ಯಾ ಹೇಳಿಕೆ

band1ಪುತ್ತೂರು: ಬಲಾತ್ಕಾರದ ಬಂದ್ ನಡೆಸಬಾರದು ಎಂದು ಸುಪ್ರೀಂಕೋರ್ಟ್ ಹೇಳಿದೆ, ಆದರೂ ಪದೇ ಪದೇ ಬಂದ್‌ನಂತಹ ಕಾನೂನು ಬಾಹಿರ ಕೃತ್ಯಗಳು ನಡೆಯುತ್ತಲೇ ಇದೆ, ಜನರ ಮನಸ್ಸನ್ನು ಪರಿವರ್ತಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಹುಡುಕುವ ಅಗತ್ಯ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾರವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಲಾತ್ಕಾರದ ಬಂದ್ ವಿರುದ್ಧ ಹೋರಾಟ ನಡೆಸುತ್ತಿರುವ ಹಾಗೂ ಬಂದ್ ಕರೆ ಕೊಟ್ಟವರೇ ಕಷ್ಟ ನಷ್ಟಗಳಿಗೆ ಪರಿಹಾರ ನೀಡುವಂತಾಗಬೇಕು ಮತ್ತು ಜನತೆಗೆ ಸೂಕ್ತ ರಕ್ಷಣೆ ನೀಡುವಂತಾಗಬೇಕು ಎಂದು “ಸುದ್ದಿ ವೇದಿಕೆ” ನಡೆಸುತ್ತಿರುವ ಆಂದೋಲನದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿರುವ ತಮ್ಮ ಕಛೇರಿಯಲ್ಲಿ “ಸುದ್ದಿ”ಯೊಂದಿಗೆ ಮಾತನಾಡಿದ ಐಎಎಸ್ ಅಧಿಕಾರಿಣಿ ಶ್ರೀವಿದ್ಯಾರವರು, ಬಂದ್ ನಡೆಸುವುದು, ಒಬ್ಬನನ್ನು ತಡೆದು ನಿಲ್ಲಿಸುವುದು, ಒಬ್ಬನ ಹಕ್ಕನ್ನು ಕಸಿದು ಕೊಳ್ಳುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ, ಆದರೂ ಇಲ್ಲಿ ಪದೇ ಪದೇ ಬಂದ್‌ನಂತಹ ಘಟನೆಗಳು ಮರುಕಳಿಸುತ್ತಲೇ ಇದೆ, ಇಂತಹ ಕಾನೂನು ವಿರೋಧಿ ಕೃತ್ಯಗಳಿಂದ ಅಭಿವೃದ್ಧಿಗೆ ಬಹಳಷ್ಟು ತೊಂದರೆಯಾಗುತ್ತದೆ ಎಂದು ಹೇಳಿದರು. ಬಂದ್ ಮುಂತಾದ ಆತಂಕಕಾರಿ ಬೆಳವಣಿಗೆಗಳ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯ ಆಗಬೇಕಿದೆ, ಜನರ ಮನಸ್ಸನ್ನು ಪರಿವರ್ತಿಸುವ ಕೆಲಸ ನಡೆಯಬೇಕಿದೆ, ಶಾಲಾ-ಕಾಲೇಜುಗಳಲ್ಲಿ ಸಂವಾದ ನಡೆಸಿ ವಿದ್ಯಾರ್ಥಿಗಳನ್ನು ಎಚ್ಚರಿಸುವ ಮೂಲಕ ಇಂತಹ ಜನವಿರೋಧಿ ಕೃತ್ಯಗಳ ಬಗ್ಗೆ ಮನವರಿಕೆ ಮಾಡಬೇಕಿದೆ, ಈ ಕೆಲಸವನ್ನು “ಸುದ್ದಿ”ಯ ನೇತೃತ್ವದಲ್ಲಿ ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಶ್ರೀವಿದ್ಯಾರವರು ಬಲಾತ್ಕಾರದ ಬಂದ್‌ಗಳನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ಬಂದ್ ಮುಕ್ತ ಜಿಲ್ಲೆಯನ್ನಾಗಿಸುವ ಉದ್ದೇಶದಿಂದ ಜಿಲ್ಲಾಧಿಕಾರಿಯವರು ಸಭೆ ಕರೆದಿದ್ದಾರೆ ಎಂದು ತಿಳಿಸಿದರು. ಉತ್ತರ ಪ್ರದೇಶ ರಾಜ್ಯದ ಮುಜಾಫರ್ ನಗರದಲ್ಲಿ ತಾನು ತರಬೇತಿಯ ಅವಧಿಯಲ್ಲಿ ಪಡೆದ ಅನುಭವಗಳನ್ನು “ಸುದ್ದಿ” ಜತೆ ಹಂಚಿಕೊಂಡ ಶ್ರೀವಿದ್ಯಾರವರು ಅಭಿವೃದ್ಧಿ ಹೊಂದಿದ ಸಮಾಜದಲ್ಲಿ ಇಂತಹ ಸಂಘರ್ಷ-ಗಲಭೆ ನಡೆಯುವುದು ಸರಿಯಲ್ಲ, ಕೆಲವೊಂದು ಸಣ್ಣಪುಟ್ಟ ವಿಷಯಕ್ಕೂ ಸಂಘರ್ಷ ನಡೆಯುತ್ತಿರುವುದು ವಿಷಾದನೀಯ ಎಂದರು. ಕೆಲವರು ಸಮಾಜವನ್ನು ಕೆಣಕುವ ಉದ್ದೇಶದಿಂದಲೇ ಹೇಳಿಕೆಗಳನ್ನು ನೀಡುತ್ತಾರೆ, ಇದನ್ನು ಪತ್ರಿಕಾ ಮಾಧ್ಯಮಗಳು ವೈಭವೀಕರಿಸಬಾರದು, ಅವರಿಗೆ ಪ್ರಚಾರ ದೊರೆತಷ್ಟು ಮತ್ತಷ್ಟು ದುಷ್ಕೃತ್ಯಗಳಿಗೆ ದುಷ್ಪ್ರೇರಣೆ ನೀದಂತಾಗುತ್ತದೆ ಎಂದು ಹೇಳಿದ ಅವರು, ಬಂದ್ ಮುಕ್ತ ಜಿಲ್ಲೆಯಾಗಲು ತಮ್ಮ ಪ್ರಯತ್ನ ಶ್ಲಾಘನೀಯವಾದುದು ಎಂದರು.

ಬಲಾತ್ಕಾರದ ಬಂದ್’ ವಿರುದ್ಧದ ಆಂದೋಲನ 

‘ಸುದ್ದಿ ವೇದಿಕೆ’ಯ ಪತ್ರ ಎಲ್ಲರಿಗೂ ರವಾನೆ-ಸಿ.ಇ.ಓ

band 2ಬಲತ್ಕಾರದ ಬಂದ್ ವಿರುದ್ಧ ಹಾಗೂ ಬಂದ್ ಕರೆ ಕೊಟ್ಟವರೇ ಕಷ್ಟ ನಷ್ಟಗಳಿಗೆ ಪರಿಹಾರ ನೀಡುವಂತಾಗಬೇಕು ಮತ್ತು ಜನತೆಗೆ ಸೂಕ್ತ ರಕ್ಷಣೆ ದೊರಕುವಂತಾಗಬೇಕೆಂದು ಒತ್ತಾಯಿಸಿ “ಸುದ್ದಿ ವೇದಿಕೆ” ವತಿಯಿಂದ ನಡೆಯುತ್ತಿರುವ ಆಂದೋಲನದ ಕುರಿತ ಮನವಿ ಪತ್ರವನ್ನು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಿಗೆ ಮತ್ತು ಎಲ್ಲಾ ತಾಲೂಕು ಪಂಚಾಯತ್‌ಗಳಿಗೆ ರವಾನಿಸಲಾಗುವುದು ಎಂದು ಜಿ.ಪಂ. ಸಿ.ಇ.ಓ ಶ್ರೀವಿದ್ಯಾರವರು ಈ ಸಂದರ್ಭದಲ್ಲಿ ತಿಳಿಸಿದರು. ಸಮಾಜಮುಖಿ ಚಿಂತನೆಯೊಂದಿಗೆ ನಡೆಸುತ್ತಿರುವ ಈ ಆಂದೋಲನದ ಕುರಿತು ಜಿಲ್ಲೆಯ ಎಲ್ಲಾ ತಾಲೂಕಿನ ತಾಲೂಕು ಪಂಚಾಯತ್‌ಗಳ ಕಾರ್ಯ ನಿರ್ವಹಣಾಧಿಕಾರಿಗಳಿಗೆ, ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳಿಗೆ ತಿಳಿಸಲಾಗುವುದು, ಜನಪ್ರತಿನಿಧಿಗಳನ್ನು ಒಳಗೊಂಡ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಹೇಳಲಾಗುವುದು ಎಂದು ತಿಳಿಸಿದ ಶ್ರೀವಿದ್ಯಾರವರು, ಜಿ.ಪಂ. ಮತ್ತು ತಾ.ಪಂ. ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಮುನ್ನ ಎಲ್ಲರಿಗೂ ಮನವಿ ಪತ್ರ ರವಾನೆ ಮಾಡಲಾಗುವುದು ಎಂದು ಹೇಳಿದರು. ಬಲಾತ್ಕಾರದ ಬಂದ್ ವಿರುದ್ಧ ಪುತ್ತೂರು ತಾಲೂಕಿನ 3 ಗ್ರಾಮ ಪಂಚಾಯತ್‌ಗಳು ಈಗಾಗಲೇ ನಿರ್ಣಯ ಅಂಗೀಕರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.