ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆ : ’ಸುದ್ದಿ ಆಂದೋಲನ’ಕ್ಕೆ ಬೆಂಬಲ-ಬಲಾತ್ಕಾರದ ಬಂದ್ ವಿರೋಧಿಸಿ ನಿರ್ಣಯ 

Puttur_Advt_NewsUnder_1
Puttur_Advt_NewsUnder_1

ariyadka 1

ariyadka 2ಚಿತ್ರ: ಯೂಸುಫ್ ರೆಂಜಲಾಡಿ

g ಪರವಾನಿಗೆ ಪಡೆಯದೇ ಕಟ್ಟಡ ನಿರ್ಮಾಣಕ್ರಮಕ್ಕೆ ಆಗ್ರಹ

g ಅರ್ಜಿಗಳನ್ನು ಕಥೆ ಓದಿದ ಹಾಗೆ ಓದಿದರೆ  ಪ್ರಯೋಜನವಿಲ್ಲ

*ನೀರಿನ ಮೀಟರ್ ಅಳವಡಿಸದವರಿಗೆ ದುಪ್ಪಟ್ಟು ಚಾರ್ಜ್

*ಮಾಡ್ನೂರಿನಲ್ಲಿ ನೀರಿನ ಬಿಲ್ ಪಾವತಿ ಕಡಿಮೆ ಇದೆ

*ಮೇಕೆಗಳನ್ನು ರಸ್ತೆಗಳಿಗೆ ಬಿಡಬಾರದು

*ಕರೆಂಟ್ ಹೋದರೆ ಬಿಎಸ್‌ಎನ್‌ಎಲ್ ಟವರ್ ಸ್ತಬ್ದ

*ಸದಸ್ಯೆ, ಉಪಾಧ್ಯಕ್ಷ ಮಧ್ಯೆ ಮಾತಿನ ಚಕಮಕಿ

ಪುತ್ತೂರು: ಬಲಾತ್ಕಾರದ ಬಂದ್ ವಿರುದ್ದದ ‘ಸುದ್ದಿ’ ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಿ ಹಾಗೂ  ಗಲಭೆ ಅಥವಾ ಬಲಾತ್ಕಾರದ ಬಂದ್‌ಗೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿ ಅರಿಯಡ್ಕ ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯು ಗ್ರಾ.ಪಂ ಅಧ್ಯಕ್ಷೆ ಸವಿತಾ ಎಸ್ ಅವರ ಅಧ್ಯಕ್ಷತೆಯಲ್ಲಿ ಜ.೪ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು. ಬಲಾತ್ಕಾರದ ಬಂದ್ ಕೋಮು ಯಾ ಇತರ ಗಲಭೆಗಳ ಕುರಿತು ಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಸದಸ್ಯರಾದ ಶಶಿಕಲಾ ಚೌಟ, ತಿಲಕ್ ರೈ ಮತ್ತಿತರರು ಬಲಾತ್ಕಾರದ ಬಂದ್ ಅಥವಾ ಗಲಭೆಗಳಿಗೆ ವಿರೋಧವಿದೆ ಎಂದು ಹೇಳಿದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಉಪಾಧ್ಯಕ್ಷ ಲೋಕೇಶ್ ಚಾಕೋಟೆ ರವರು ಬಲಾತ್ಕಾರದ ಬಂದ್‌ಗೆ ನಮ್ಮ ವಿರೋಧವಿದೆ ಈ ಬಗ್ಗೆ ತೀರ್ಮಾನ ಕೈಗೊಳ್ಳುವ ಎಂದರು. ಬಳಿಕ ಮಾತನಾಡಿದ ಅಧ್ಯಕ್ಷೆ ಸವಿತಾ ಎಸ್ ಅವರು ಬಲಾತ್ಕಾರದ ಬಂದ್‌ಗೆ ಯಾವತ್ತೂ ನಮ್ಮ ವಿರೋಧವಿದೆ ಎಂದು ಹೇಳಿದರು. ಬಳಿಕ ಎಲ್ಲ ಸದಸ್ಯರ ಒಮ್ಮತದ ಅಭಿಪ್ರಾಯದ ಮೇರೆಗೆ ಬಲಾತ್ಕಾರದ ಬಂದ್‌ಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳಲಾಯಿತು.

ಪರವಾನಿಗೆ ಪಡೆಯದೆ ಕಟ್ಟಡ ನಿರ್ಮಾಣಕ್ರಮಕ್ಕೆ ಆಗ್ರಹ: ಸದಸ್ಯ ಸಂತೋಷ್ ಕುಮಾರ್ ಮಾತನಾಡಿ ಕೌಡಿಚ್ಚಾರಿನಲ್ಲಿ ಗ್ರಾ.ಪಂನಿಂದ ಅನುಮತಿ ಪಡೆಯದೆಯೇ ಕಟ್ಟಡ ನಿರ್ಮಾಣವಾಗಿದೆ ಈ ಬಗ್ಗೆ ಪಿಡಿಒ ರವರು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಅಜಿತ್ ಕುಮಾರ್ ರವರು ಅದನ್ನು ಪಿಡಬ್ಲ್ಯೂಡಿ ಇಲಾಖೆಗೆ ಬರೆಯುತ್ತೇನೆ ಎಂದು ಹೇಳಿದರು. ಆಕ್ಷೇಪ ವ್ಯಕ್ತಪಡಿಸಿದ ಸಂತೋಷ್ ಕುಮಾರ್ ಅವರು ಪಿಡಬ್ಲ್ಯುಡಿ ಇಲಾಖೆಗೆ ಬರೆಯುವುದಾದರೆ ಇಲ್ಲಿ ನಮಗೆ ಅಷ್ಟೂ ಅಧಿಕಾರವಿಲ್ಲವೇ ಎಂದು ಪ್ರಶ್ನಿಸಿದರಲ್ಲದೆ ಇನ್ನಷ್ಟು ಅನಧಿಕೃತ ಕಟ್ಟಡಗಳು ತಲೆ ಎತ್ತಿದರೆ ಅವೆಲ್ಲವನ್ನೂ ಪಿಡಬ್ಲ್ಯುಡಿ ಇಲಾಖೆಗೆ ಬರೆಯುತ್ತಾ ಇರುವುದೇ ಎಂದು ಪ್ರಶ್ನಿಸಿದರು. ಧ್ವನಿಗೂಡಿಸಿದ ಹೊನ್ನಪ್ಪ ಪೂಜಾರಿ ರವರು ಅನುಮತಿ ಪಡೆಯದೇ ಕಟ್ಟಡ ನಿರ್ಮಸುವವರ ಮೇಲೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹೇಳಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಉಪಾಧ್ಯಕ್ಷರು ಅವರು ಈಗಾಗಲೇ ಪರವಾನಿಗೆ ಪಡೆಯದೆಯೇ ಕಟ್ಟಡ ನಿರ್ಮಾಣ ಮಾಡಿದ್ದು ಗಮನಕ್ಕೆ ಬಂದಿದೆ. ಮುಂದೆ ಆ ಕಟ್ಟಡದಲ್ಲಿ ಯಾವುದೇ ವ್ಯವಹಾರ ನಡೆಸದಂತೆ ಸೂಚನೆ ನೀಡುತ್ತೇವೆ ಎಂದು ಹೇಳಿದರು.

ಅರ್ಜಿಗಳನ್ನು ಕಥೆ ಓದಿದ ಹಾಗೆ ಓದಿದರೆ ಏನು ಪ್ರಯೋಜನ: ಸದಸ್ಯೆ ಶಶಿಕಲಾ ಚೌಟ ಮಾತನಾಡಿ, ಪಂಚಾಯತ್‌ಗೆ ಸಾರ್ವಜನಿಕವಾಗಿ ಬಂದಿರುವ ಅರ್ಜಿಗಳನ್ನು ಕೇವಲ ಕಥೆ ಓದಿದ ಹಾಗೆ ಓದುತ್ತಾ ಹೋದರೆ ಏನು ಪ್ರಯೋಜನ ಅದರ ಅನುಷ್ಠಾನಗಳ ಬಗ್ಗೆ ಚರ್ಚೆಯಾಗಬೇಕಲ್ಲವೇ ಎಂದು ಪ್ರಶ್ನಿಸಿದರು. ಉತ್ತರಿಸಿದ ಉಪಾಧ್ಯಕ್ಷರು ಇಲ್ಲಿ ಅರ್ಜಿಗಳನ್ನು ಓದುವಾಗ ಆಯಾ ವಾರ್ಡ್‌ನ ಸದಸ್ಯರು ಮಾತನಾಡಬೇಕು ಕೇವಲ ಸುಮ್ಮನೆ ಕುಳಿತುಕೊಳ್ಳುವುದಲ್ಲ ಎಂದು ಹೇಳಿದರು. ಸದಸ್ಯ ಮಾಲಿಂಗ ಮಾತನಾಡಿ ನಾವು ಕೇಳಿದರೆ ನೀವು ‘ಮತೆ’ ನೋಡುವ ಎಂದು ಹೇಳುತ್ತೀರಿ ಎಂದರು. ಇದಕ್ಕೆ ಸದಸ್ಯ ನವೀನ ಬಿ.ಡಿ ಧ್ವನಿಗೂಡಿಸಿದರು. ಮಧ್ಯ ಪ್ರವೇಶಿಸಿ ಮಾತನಾಡಿದ ಪಿಡಿಒ ರವರು ಅರ್ಜಿಗಳಲ್ಲಿ ಕೆಲವೊಂದು ವೈಯಕ್ತಿಕ ಅರ್ಜಿಗಳಾಗಿರುತ್ತದೆ ಅದನ್ನು ಮಂಜೂರು ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು. ಉಪಾಧ್ಯಕ್ಷರು ಮಾತನಾಡಿ, ತಪ್ಪುಗಳಾದರೆ ಸದಸ್ಯರಾದ ನೀವು ಪ್ರಶ್ನಿಸಿ, ಅದು ಬಿಟ್ಟು ಜಗಳ ಮಾಡಬೇಡಿ ಎಂದರಲ್ಲದೇ ಇಲ್ಲಿ ಸುಮ್ಮನೆ ಮಾತನಾಡುತ್ತೀರಿ ಕೆಲವೊಮ್ಮೆ ನಿಮಗೆ ನಿಮ್ಮ ವಾರ್ಡ್ ವಿಚಾರದಲ್ಲಿ ಫೋನ್ ಮಾಡಿದರೆ ನೀವು ಪ್ರತಿಕ್ರಿಸುವುದೇ ಇಲ್ಲ ಎಂದು ಹೇಳಿದರು.

ಮಾಡ್ನೂರಿನಲ್ಲಿ ನೀರಿನ ಬಿಲ್ ಪಾವತಿ ಕಡಿಮೆ: ಅರಿಯಡ್ಕ ಗ್ರಾಮಕ್ಕೆ ಹೋಲಿಸಿದರೆ ಮಾಡ್ನೂರು ಗ್ರಾಮದಲ್ಲಿ ನೀರಿನ ಬಿಲ್ ಬಹಳ ಕಡಿಮೆ ಕಲೆಕ್ಷನ್ ಆಗುತ್ತಿದೆ ಎಂಬ ವಿಚಾರ ಪ್ರಸ್ತಾಪವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷ ಲೋಕೇಶ್ ಚಾಕೋಟೆ ರವರು ಮಾಡ್ನೂರಿನಲ್ಲಿ ಬಡವರೇ ಜಾಸ್ತಿಯಾಗಿದ್ದಾರೆ ಅವರ ಬಿಲ್ ಬಾಕಿಯಾಗಿರಬಹುದು ಎಂದು ಹೇಳಿದರು. ಆಕ್ಷೇಪಿಸಿದ ಸದಸ್ಯರು ನೀರಿನ ಕಲೆಕ್ಷನ್ ಪಡೆದುಕೊಳ್ಳುವುದೇ ಬಡವರು ಹಾಗಾಗಿ ರಿಯಾಯಿತಿ ಮಾಡುವ ಹಾಗಿಲ್ಲ ಎಂದರು. ಸದಸ್ಯರಾದ ರಾಜೇಶ್ ಹಾಗೂ ಸಂತೋಷ್ ಕುಮಾರ್ ರವರು ಈ ಬಗ್ಗೆ ಸರಿಯಾದ ತೀರ್ಮಾನ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಉತ್ತರಿಸಿದ ಪಿಡಿಒ ರವರು ಮುಂದಿನ ದಿನಗಳಲ್ಲಿ ಸರಿಯಾಗಿ ನೀರಿನ ಬಿಲ್ ಕಲೆಕ್ಷನ್ ಮಾಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅರಿಯಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಮೀಟರ್ ಅಳವಡಿಸಲು ಬಾಕಿ ಇರುವವರು ತಕ್ಷಣವೇ ಅಳವಡಿಸಿಕೊಳ್ಳಬೇಕು ಅಳವಡಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ದುಪ್ಪಟ್ಟು ಚಾರ್ಜ್ ಹಾಕಲಾಗುವುದು ಎಂದು ಉಪಾಧ್ಯಕ್ಷರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಮೇಕೆಗಳನ್ನು ರಸ್ತೆಗಳಿಗೆ ಬಿಡಬಾರದು: ಕೌಡಿಚ್ಚಾರು ಮತ್ತಿತರ ಕಡೆಗಳಲ್ಲಿ ಕೆಲವೊಂದು ಮನೆಯವರ ನಿರ್ಲಕ್ಷ್ಯದಿಂದ ಮೇಕೆಗಳು ರಸ್ತೆಗೆ ಬರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದ್ದು ಈ ಹಿಂದೆ ಇದರಿಂದಾಗಿಯೇ ಅಪಘಾತಗಳು ಸಂಭವಿಸಿದೆ ಎಂದು ಸದಸ್ಯ ಸಂತೋಷ್ ಸಭೆಯ ಗಮನಕ್ಕೆ ತಂದರು. ಬಳಿಕ ಮುಂದಕ್ಕೆ ಮೇಕೆ ಸಾಕುವವರು ರಸ್ತೆಗೆ ಬಿಡದೆ ತಮ್ಮ ಮನೆಯಲ್ಲಿಯೇ ಸಾಕುವ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸೂಚಿಸಲು ತೀರ್ಮಾನಿಸಲಾಯಿತು.

ಮಾತಿನ ಚಕಮಕಿ: ಹಲವು ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಸದಸ್ಯೆ ಶಶಿಕಲಾ ಚೌಟ ಹಾಗೂ ಉಪಾಧ್ಯಕ್ಷ ಲೋಕೇಶ್ ಚಾಕೋಟೆ ಮಧ್ಯೆ ಪದೇ, ಪದೇ ಮಾತಿನ ಚಕಮಕಿ ನಡೆಯಿತು. ಪಿಡಿಒ ಅಜಿತ್ ಕುಮಾರ್ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ ಚೌಟ ಅವರು ಪಿಡಿಒ ಕಾರ್ಯವೈಖರಿಯ ಬಗ್ಗೆ ಆಕ್ಷೇಪಿಸಿದರು. ಗ್ರಾಮಸ್ಥರ ಯಾವುದೇ ವಿಚಾರಗಳಿಗೂ ತಕ್ಷಣ ಸ್ಪಂದಿಸಬೇಕೆಂದು ಚೌಟ ಅವರು ಪಿಡಿಒ ರವರಲ್ಲಿ ಹೇಳುತ್ತಿದ್ದಂತೆಯೇ ಉಪಾಧ್ಯಕ್ಷರು ಮಧ್ಯ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಚೌಟ ರವರು ನಾನು ನಿಮ್ಮಲ್ಲಿ ಮಾತಾಡಿಲ್ಲ ಪಿಡಿಒ ರವರಲ್ಲಿ ಮಾತಾಡಿದ್ದು ಅವರು ಉತ್ತರಿಸಲಿ ಎಂದು ಹೇಳಿದರು. ಇದಕ್ಕೆ ಆಕ್ಷೇಪಿಸಿದ ಉಪಾಧ್ಯಕ್ಷ ಚಾಕೋಟೆ ರವರು ಎಲ್ಲದಕ್ಕೂ ಪಿಡಿಒ ಅವರೇ ಮಾತನಾಡಬೇಕೆಂದೇನಿಲ್ಲ ನನಗೂ ಜವಾಬ್ದಾರಿಯಿದೆ ನಾನೂ ಮಾತನಾಡುತ್ತೇನೆ ಎಂದು ಹೇಳಿದರು. ಬಳಿಕ ಸದಸ್ಯರ ಆಗ್ರಹದ ಮೇರೆಗೆ ಮುಂದಿನ ವಿಷಯದ ಬಗ್ಗೆ ಚರ್ಚೆ ನಡೆಯಿತು.

ಸದಸ್ಯ ತಿಲಕ್ ರೈ ಮಾತನಾಡಿ ಇಲ್ಲಿ ಬಿ.ಎಸ್.ಎನ್.ಎಲ್ ಟವರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಕರೆಂಟ್ ಹೋದರೆ ಬಿ.ಎಸ್.ಎನ್.ಎಲ್ ಮೊಬೈಲ್ ಸ್ಥಬ್ದವಾಗುತ್ತದೆ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದರು. ಉಪಾಧ್ಯಕ್ಷರು  ಮಾತನಾಡಿ ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಬರೆದಿದೆ. ಎಂ.ಪಿ ಗಮನಕ್ಕೂ ತರಲಾಗಿದೆ ಎಂದರು. ಸದಸ್ಯೆ ಶಶಿಕಲಾ ಚೌಟ ರವರು ಸೋಮವಾರ ಯಾವುದೇ ಕಾರಣಕ್ಕೂ ಗ್ರಾಮ ಸಭೆ ಇಡಲೇಬಾರದು ಎಂದು ಆಗ್ರಹಿಸಿದರು.

ಸದಸ್ಯರಾದ ಸದಾನಂದ, ಸುಂದರ, ದಿವ್ಯನಾಥ ಶೆಟ್ಟಿ, ಸೀತರಾಮ ಮೇಲ್ಪಾದೆ, ರಾಜೇಶ್ ಎಚ್, ಹೇಮಾವತಿ, ಪ್ರೇಮಲತಾ ರೈ, ಸಾವಿತ್ರಿ, ಅಮೃತ, ನವೀನ ಬಿ.ಡಿ, ನಿರ್ಮಲ ಎಸ್.ಪಿ ಉಪಸ್ಥಿತರಿದ್ದರು.

ಲೆಕ್ಕ ಸಹಾಯಕ ರವೀಂದ್ರ ಪಾಟೀಲ್ ಸ್ವಾಗತಿಸಿ ವಂದಿಸಿದರು. ಸಿಬ್ಬಂದಿಗಳಾದ ಪ್ರಭಾಕರ್, ಬೇಬಿ, ರೋಹಿಣಿ, ಯೋಗೀಶ್, ಶಶಿಕುಮಾರ್  ಸಹಕಾರ ನೀಡಿದರು.

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.