ಕಡಬ ಗ್ರಾ.ಪಂ.ನ ಸಾಮಾನ್ಯ ಸಭೆ: ಬಲಾತ್ಕಾರದ ಬಂದ್, ಕೋಮು ಅಥವಾ ಯಾವುದೇ ಗಲಭೆ ವಿರುದ್ಧದ ಸುದ್ದಿ ಆಂದೋಲನಕ್ಕೆ ಸಂಪೂರ್ಣ ಬೆಂಬಲ, ಸಾರ್ವಜನಿಕರಿಗೆ ರಕ್ಷಣೆಗೆ ನಿರ್ಣಯ

Puttur_Advt_NewsUnder_1
Puttur_Advt_NewsUnder_1

kdb g.p1ಕಡಬ: ಬಲಾತ್ಕಾರದ ಬಂದ್, ಕೋಮು ಅಥವಾ ಯಾವುದೇ ಗಲಭೆ ವಿರುದ್ದದ ಸುದ್ದಿ ಆಂದೋಲನಕ್ಕೆ ಸಂಪೂರ್ಣ ಬೆಂಬಲ ನೀಡಲು ಹಾಗೂ ಈ ಸಂಬಂಧ ಸಾರ್ವಜನಿಕರಿಗೆ ರಕ್ಷಣೆ ನೀಡಲು ಕಡಬ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸಭೆ ಗ್ರಾ.ಪಂ.ಅಧ್ಯಕ್ಷ ಬಾಬು ಮೊಗೇರರವರ ಅಧ್ಯಕ್ಷತೆಯಲ್ಲಿ ಜ.6ರಂದು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಕೆ.ಎಂ.ಹನೀಫ್‌ರವರು ಬಲಾತ್ಕಾರದ ಬಂದ್‌ಗಳಿಂದ ಜನ ಸಾಮಾನ್ಯರಿಗೆ, ಯಾತ್ರಾರ್ಥಿಗಳಿಗೆ, ಶಾಲಾ ಮಕ್ಕಳಿಗೆ, ಅನಾರೋಗ್ಯ ಪೀಡಿತರಿಗೆ, ಕಾರ್ಯಕ್ರಮಗಳಿಗೆ ತೊಂದರೆಯಾಗುತ್ತದೆ. ಕೆಲ ಸಂದರ್ಭಗಳಲ್ಲಿ ಪ್ರಾಣಹಾನಿಗಳು ಉಂಟಾಗುತ್ತವೆ. ಬಲಾತ್ಕಾರದ ಬಂದ್ ಮುಕ್ತ ಸಮಾಜ ನಿರ್ಮಾಣ ಮಾಡಲು ಸುದ್ದಿ ಪತ್ರಿಕೆಯವರು ಕೈಗೊಂಡಿರುವ ಜಾಗೃತಿ ಅಭಿಯಾನ ಸಾರ್ವಜನಿಕರನ್ನು ಬಡಿದೆಬ್ಬಿಸಿದ್ದು ಎಲ್ಲರಿಗೂ ಪ್ರೇರಣೆಯಾಗಿದೆ. ಜನರ ಹಿತಕ್ಕೋಸ್ಕರ ಸುದ್ದಿ ಪತ್ರಿಕೆ ಕೈಗೊಂಡಿರುವ ಅಭಿಯಾನದಲ್ಲಿ ಕೈಜೋಡಿಸುವುದು ಎಲ್ಲರ ಕರ್ತವ್ಯವಾಗಿದೆ. ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದಕ್ಕೆ ಉಪಾಧ್ಯಕ್ಷೆ ಜ್ಯೋತಿ ಡಿ.ಕೋಲ್ಪೆ, ಸದಸ್ಯರಾದ ಫಝಲ್ ಕೋಡಿಂಬಾಳ, ಅಶ್ರಫ್ ಶೇಡಿಗುಂಡಿ, ಶರೀಫ್ ಎ.ಎಸ್, ಕೃಷ್ಣಪ್ಪ ಪೂಜಾರಿ, ಆನಂದ ಪಡೆಜ್ಜಾರು, ನೀಲಾವತಿ ಶಿವರಾಂ, ಶಾಲಿನಿ ಸತೀಶ್ ನೈಕ್, ಜಯಂತಿ ಗಣಪಯ್ಯ ಗೌಡ ಸಹಿತ ಸದಸ್ಯರೆಲ್ಲರೂ ಬೆಂಬಲ ಸೂಚಿಸಿ ಇದೊಂದು ಅತ್ಯುತ್ತಮ ವಿಚಾರವಾಗಿದೆ. ನಾವೆಲ್ಲರೂ ಅಭಿಯಾನದಲ್ಲಿ ಕೈಜೋಡಿಸಿ ಜನರ ರಕ್ಷಣೆಗೆ ಬದ್ಧರಾಗೋಣ ಎಂದರು. ಬಳಿಕ ಮಾತನಾಡಿದ ಅಧ್ಯಕ್ಷ ಬಾಬು ಮೊಗೇರರವರು, ಕಡಬ ಗ್ರಾ.ಪಂ. ಬಲಾತ್ಕಾರದ ಬಂದ್ ಮುಕ್ತ ಗ್ರಾಮ ಪಂಚಾಯತ್ ಆಗಬೇಕು. ಪಂಚಾಯತ್ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸುವುದು. ಎಲ್ಲರಿಗೂ ರಕ್ಷಣೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಪನ್ಯ ಕಾಲೋನಿಯಲ್ಲಿ ಗ್ರಾಮದವರಿಗೆ ಜಾಗ ಇಲ್ಲ:
ನಿವೇಶನ ರಹಿತರಾಗಿರುವ ಸದಸ್ಯೆ ಜಯಲಕ್ಷ್ಮಿಯವರು ಕೋಡಿಂಬಾಳ ಗ್ರಾಮದ ಪನ್ಯ ಕಾಲೋನಿಯಲ್ಲಿ ಮನೆ ನಿರ್ಮಿಸಿದ ಬಳಿಕ ಸದಸ್ಯ ಆದಂ ಕುಂಡೋಳಿಯವರು ಎಲ್ಲಿಂದಲೋ 10-15 ಕುಟುಂಬಗಳನ್ನು ಕರೆತಂದು ಅವರಿಗೆ ಗುಡಿಸಲು ನಿರ್ಮಿಸಲು ಸಹಕರಿಸಿ ಜಾಗ ಅತಿಕ್ರಮಕ್ಕೆ ಸಹಕರಿಸುತ್ತಿದ್ದಾರೆ. ಆದಂರವರ ಕುಮ್ಮಕ್ಕಿನಿಂದಲೇ ಸುರೇಶ್ ಎಂಬವರು ಅಲ್ಲಿ ಗುಡಿಸಲು ನಿರ್ಮಿಸಿ ಸುಮಾರು ಅರ್ಧ ಎಕ್ರೆಯಷ್ಟು ಜಾಗ ಅತಿಕ್ರಮಿಸಿಕೊಂಡಿದ್ದಾರೆ. ಇವರು ಶಾಸಕರ ಮೇಲೂ ಒತ್ತಡ ತರುತ್ತಿದ್ದಾರೆ. ಇನ್ನೊಂದು ಕಡೆಯಿಂದ ಎಲ್ಲಾ ಗುಡಿಸಲುಗಳನ್ನು ತೆರವುಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಸದಸ್ಯ ಅಶ್ರಫ್ ಆರೋಪಿಸಿದರು. ಇದಕ್ಕೆ ಆಕ್ಷೇಪಿಸಿ ಮಾತನಾಡಿದ ಸದಸ್ಯ ಆದಂ ಕುಂಡೋಳಿಯವರು, ಈ ಆರೋಪದಲ್ಲಿ ಹುರುಳಿಲ್ಲ. ನಾನು ಯಾರನ್ನೂ ಕರೆ ತಂದು ಗುಡಿಸಲು ನಿರ್ಮಿಸಲು ಮುಂದಾಗಿಲ್ಲ. ಎಲ್ಲರೂ ಅವರಷ್ಟಕ್ಕೆ ಗುಡಿಸಲು ನಿರ್ಮಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ವೇಳೆ ಮಾತನಾಡಿದ ಸದಸ್ಯ ಹನೀಫ್‌ರವರು, ಸೂರು ಇಲ್ಲದವರನ್ನು ಯಾವುದೇ ಕಾರಣಕ್ಕೂ ಅಲ್ಲಿಂದ ತೆರವುಗೊಳಿಸುವುದು ಸರಿಯಲ್ಲ. ಅಲ್ಲಿದ್ದ ಜಾಗವನ್ನು ಕಂದಾಯ ಇಲಾಖೆಯಿಂದ ಅಳತೆ ಮಾಡಿಸಿ ಪಂಚಾಯತ್ ವಶಕ್ಕೆ ಪಡೆದುಕೊಂಡು ಬಳಿಕ ನಿವೇಶನ ರಹಿತರಿಗೆ ನಿವೇಶನ ಹಂಚಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಸದಸ್ಯೆ ಜಯಲಕ್ಷ್ಮೀ ಮಾತನಾಡಿ, ನಿವೇಶನ ರಹಿತರಿಗೆ ಅಲ್ಲಿ ನಿವೇಶನ ನೀಡುವಂತೆ ಈ ಮೊದಲೇ ನಿರ್ಣಯಿಸಲಾಗಿದೆ. ನಾನು ಅಲ್ಲಿ ಮನೆ ನಿರ್ಮಿಸಿ ವಾಸವಾಗಿದ್ದೇನೆ. ನನಗೂ ನಿವೇಶನ ನೀಡಬೇಕೆಂದು ಒತ್ತಾಯಿಸಿದರು. ಸದಸ್ಯ ಅಶ್ರಫ್ ಮತ್ತೆ ಮಾತನಾಡಿ, ಕಳೆದ ಅವಧಿಯಲ್ಲಿಯೇ ಅಲ್ಲಿ ೬೦ ಸೆಂಟ್ಸ್ ಜಾಗವನ್ನು ನಿವೇಶನಕ್ಕೆ ಕಾದಿರಿಸಲು ನಿರ್ಣಯಿಸಲಾಗಿತ್ತು. ಆದರೆ ಆದಂ ಕುಂಡೋಳಿಯವರು ಆ ಜಾಗ ಪನ್ಯ ಶಾಲೆಗೆ ಬೇಕೆಂದು ಅಲ್ಲಿಯ ಎಸ್‌ಡಿಎಂಸಿ ಮೂಲಕ ಅರ್ಜಿ ಸಲ್ಲಿಸಿದರು. ಬಳಿಕ ಶಾಲೆಗೆ ಬೇರೆ ಜಾಗ ಇದೆ ಎಂದು ಹೇಳಿ ಈ ಜಾಗದಲ್ಲಿ ಬೇರೆಯವರಿಗೆ ಗುಡಿಸಲು ನಿರ್ಮಿಸಲು ಸತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿ, ೬೦ ಸೆಂಟ್ಸ್ ಜಾಗ ಅತಿಕ್ರಮಿಸಿ ಮನೆ ನಿರ್ಮಿಸಿರುವ ಸುರೇಶ್‌ರವರು ಬೇರೆ ಯಾರು ಅಲ್ಲಿಗೆ ಬರದಂತೆ ಒತ್ತಡ ತರುತ್ತಿದ್ದಾರೆ ಎಂದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ಪಿಡಿಒ ರವಿಚಂದ್ರರವರು, ಸದ್ರಿ ಜಾಗವನ್ನು ಕಂದಾಯ ಇಲಾಖೆಯಿಂದ ಅಳತೆ ಮಾಡಿಸಿ ಪಂಚಾಯತ್ ವಶಕ್ಕೆ ಪಡೆದುಕೊಂಡು ನಿವೇಶನ ರಹಿತರಿಂದ ಅವರಿಗೆ ಬೇರೆ ಎಲ್ಲೂ ಜಾಗವಿಲ್ಲದ ಬಗ್ಗೆ ಎನ್‌ಒಸಿ ಪಡೆದು ನಿವೇಶನ ಹಂಚಲು ಕ್ರಮ ಕೈಗೊಳ್ಳಲಾಗುವುದು ಎಂದರು. ಬಳಿಕ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ನಿವೇಶನ ರಹಿತರಿಗೆ 5 ಸೆಂಟ್ಸ್ ನೀಡಲು ಮಾತ್ರ ಕಾನೂನಿನಲ್ಲಿ ಅವಕಾಶವಿದೆ. ಆದರೆ ಕೆಲವರು 5 ಸೆಂಟ್ಸ್‌ಗಿಂತ ಹೆಚ್ಚಿನ ಜಾಗ ಸ್ವಾಧೀನ ಪಡಿಸಿಕೊಂಡಿರುವ ಬಗ್ಗೆ ಪಂಚಾಯತ್‌ಗೆ ದೂರು ಬಂದಿದೆ ಎಂದು ಪಿಡಿಒ ರವಿಚಂದ್ರರವರು ಸಭೆಯ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಹನೀಫ್‌ರವರು, ನಿವೇಶನಕ್ಕೆ ಕಾದಿರಿಸಿದ ಜಾಗದಲ್ಲಿ ಯಾರೇ ವಾಸ್ತವ್ಯವಿದ್ದರೂ ಅವರಿಗೆ ೫ ಸೆಂಟ್ಸ್‌ಗಿಂತ ಹೆಚ್ಚು ಜಾಗಕ್ಕೆ ಆರ್‌ಟಿಸಿ ಆಗುವುದಿಲ್ಲ. ಆದ್ದರಿಂದ 5 ಸೆಂಟ್ಸ್‌ಗಿಂತ ಹೆಚ್ಚಿನ ಜಾಗವಿದ್ದಲ್ಲಿ ಅದನ್ನು ಪಂಚಾಯತ್ ವಶಕ್ಕೆ ಪಡೆದು ಬೇರೆಯವರಿಗೆ ಅವಕಾಶ ನೀಡಬೇಕೆಂದು ಆಗ್ರಹಿಸಿದರು. ಇದಕ್ಕೆ ಆಕ್ಷೇಪಿಸಿ ಮಾತನಾಡಿದ ಸದಸ್ಯ ಫಝಲ್ ಕೋಡಿಂಬಾಳ, ಅಲ್ಲಿ ಈಗಾಗಲೇ ವಾಸ್ತವ್ಯವಿರುವವರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದು ಬೇಡ. ಏನಿದ್ದರೂ ಅವರವರ ಜಾಗವನ್ನು ಅವರು ಸ್ವಾಧೀನ ಪಡಿಸಿಕೊಂಡು ಮನೆ ಹಾಗೂ ಅಲ್ಪಸ್ವಲ್ಪ ಕೃಷಿ ಅಭಿವೃದ್ದಿ ಪಡಿಸುತ್ತಿದ್ದಾರೆ. ಅದು ಹಾಗೆಯೇ ಇರಲಿ ಎಂದರು.

ಸ್ಮಶಾನ ದುರಸ್ತಿಗೆ ಒತ್ತಾಯ

ಕೋಡಿಂಬಾಳ ಗ್ರಾಮದ ಸ್ಮಶಾನ ಪೊದೆಗಳಿಂದ ಕೂಡಿದ್ದು ಅಲ್ಲಿ ಹಾವುಗಳು ಓಡಾಡುತ್ತಿವೆ. ಇದರಿಂದ ಜನರಿಗೆ ಓಡಾಟಕ್ಕೆ ಭಯವಾಗುತ್ತಿದೆ. ಆದ್ದರಿಂದ ಸ್ಮಶಾನ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಸದಸ್ಯರಾದ ಫಝಲ್ ಕೋಡಿಂಬಾಳ, ಆದಂ ಕುಂಡೋಳಿ ಒತ್ತಾಯಿಸಿದರು. ಸ್ಮಶಾನದಲ್ಲಿ ಕುಂಬಳಕಾಯಿ ಕೃಷಿ ಮಾಡಲಾಗುತ್ತಿದೆ ಎಂದು ಸದಸ್ಯ ಅಶ್ರಫ್ ದೂರಿದರು. ಬಳಿಕ ಮತ್ತೆ ಮಾತನಾಡಿದ ಫಝಲ್‌ರವರು, ಸ್ಮಶಾನ ದುರಸ್ತಿ ಹಾಗೂ ಚಿತಾಗಾರಕ್ಕೆ 4 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದರೂ ಇಲ್ಲಿಯ ತನಕ ಕಾಮಗಾರಿ ನಡೆದಿರುವುದಿಲ್ಲ. ಅನುದಾನ ಲ್ಯಾಪ್ಸ್ ಆದರೆ ಯಾರು ಹೊಣೆ ?, ತಕ್ಷಣ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮೀಟರ್ ಅಳವಡಿಸಿಯೇ ಸಂಪರ್ಕ ಕೊಡಿ: ಕುಡಿಯುವ ನೀರಿನ ವಿಚಾರದ ಕುರಿತಂತೆ ನಡೆದ ಚರ್ಚೆ ವೇಳೆ ಮಾತನಾಡಿದ ಸದಸ್ಯ ಫಝಲ್, ಕುಡಿಯುವ ನೀರಿನ ಸಂಪರ್ಕ ನೀಡುವ ವೇಳೆ ಮೀಟರ್ ಅಳವಡಿಸಿಯೇ ನೀಡಬೇಕು. ಅಲ್ಲದೆ ಈಗಾಗಲೇ ಸಂಪರ್ಕ ಪಡೆದುಕೊಂಡವರಿಗೂ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕೆಂದು ನಿರ್ಣಯಿಸಲು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಕೋಡಿಂಬಾಳ ಕುಡಿಯುವ ನೀರಿನ ಸಮಿತಿ ಅಧ್ಯಕ್ಷ ಶರೀಫ್ ಎ.ಎಸ್.ರವರು, ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡಿದ್ದು ಎಲ್ಲರಿಗೂ ಸಮರ್ಪಕವಾಗಿ ನೀರು ಒದಗಿಸಲಾಗುತ್ತಿದೆ ಎಂದರು.

ಬೀದಿ ದೀಪ ಅಳವಡಿಸಲು ಒತ್ತಾಯ: ವಾರ್ಡ್ 2ರಲ್ಲಿ ಬೀದಿ ದೀಪಗಳನ್ನು ಅಳವಡಿಸುವಂತೆ ಸದಸ್ಯೆ ಸರೋಜಿನಿ ಎಸ್. ಆಚಾರ್ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ರವಿಚಂದ್ರರವರು, ಈಗಾಗಲೇ ಎಲ್ಲಾ ಕಡೆಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಿ ಬೆಳಕಿನ ಪಂಚಾಯತ್‌ನ್ನಾಗಿ ನಿರ್ಮಾಣ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ತಮ್ಮ ವಾರ್ಡ್ ಹಾಗೂ ಮನೆಯ ಹತ್ತಿರ ಕೂಡಾ ದೀಪಗಳನ್ನು ಅಳವಡಿಸಲಾಗಿದೆ ಎಂದರು.

ಎಂಡೋ ಪೀಡಿತರಿಗೆ ದೃಢಪತ್ರ ನೀಡಲು ಒತ್ತಾಯ: ಕೋಡಿಂಬಾಳ ಗ್ರಾಮದ ವಿಕಲ ಚೇತನ ಅನಿಲ್ ಮ್ಯಾಥ್ಯು ಎಂಬವರಿಗೆ ಎಂಡೋ ಪೀಡಿತ ದೃಢ ಪತ್ರ ನೀಡಲು ಜಿಲ್ಲಾ ಆರೋಗ್ಯ ಅಧಿಕಾರಿ ಸತಾಯಿಸುತ್ತಿದ್ದಾರೆ ಎಂದು ಸದಸ್ಯ ಫಝಲ್ ಸಭೆಯ ಗಮನ ಸೆಳೆದು ಇವರಿಗೆ ದೃಢಪತ್ರ ನೀಡಲು ಕ್ರಮ ಕೈಗೊಳ್ಳುವಂತೆ ನಿರ್ಣಯಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುವಂತೆ ಒತ್ತಾಯಿಸಿದರು.

ಕೋಡಿಂಬಾಳ ಮಜ್ಜಾರು ರಸ್ತೆ ವಿವಾದ-ಚರ್ಚೆ: ಕೋಡಿಂಬಾಳ ಗ್ರಾಮದ ಮಜ್ಜಾರು ಎಂಬಲ್ಲಿ ದಲಿತ ಕಾಲೋನಿಗೆ ಹೋಗುವ ರಸ್ತೆಯ ಬಗ್ಗೆ ಈಗಾಗಲೇ ವಾದ ವಿವಾದಗಳು ನಡೆಯುತ್ತಿದ್ದು ಪಂಚಾಯತ್‌ನಿಂದ ೫ ಮೀಟರ್ ಅಗಲದಲ್ಲಿ ರಸ್ತೆ ನಿರ್ಮಿಸಿ ಕೊಡುವಂತೆ ದಲಿತ ಸಂಘರ್ಷ ಸಮಿತಿಯ ವತಿಯಿಂದ ಬಂದ ಅರ್ಜಿಯ ಕುರಿತಂತೆ ಚರ್ಚೆ ನಡೆಸಲಾಯಿತು. ಈ ಬಗ್ಗೆ ಸಭೆಗೆ ವಿವರ ನೀಡಿದ ಕಾರ್‍ಯದರ್ಶಿ ಆನಂದರವರು, ಈಗಾಗಲೇ ೧೪ ಅಡಿ ಅಗಲದ ರಸ್ತೆ ನಿರ್ಮಿಸಲಾಗಿದ್ದು ಇನ್ನು ೨ ಕಡೆಯ ಖಾಸಗಿ ವ್ಯಕ್ತಿಗಳ ರಬ್ಬರ್ ಮರಗಳನ್ನು ಕಡಿದು ಮುಂದಕ್ಕೆ ರಸ್ತೆ ಅಗಲಗೊಳಿಸಬೇಕಾಗುತ್ತದೆ ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ಸದಸ್ಯ ಅಶ್ರಫ್‌ರವರು ಸಾರ್ವಜನಿಕ ಉಪಯೋಗಕ್ಕೆ ಅಲ್ಲಿ ರಸ್ತೆ ನಿರ್ಮಿಸಲಾಗಿದೆ. ಇನ್ನು ಪಂಚಾಯತ್‌ನಿಂದ ಏನು ಮಾಡಲು ಸಾಧ್ಯವಿಲ್ಲ ಎಂದರು. ಉಪಾಧ್ಯಕ್ಷೆ ಜ್ಯೋತಿ ಡಿ.ಕೋಲ್ಪೆ ಮಾತನಾಡಿ, ಪಂಚಾಯತ್ ವತಿಯಿಂದ ನ್ಯಾಯೋಚಿತವಾಗಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಮುಂದೆ ಅಲ್ಲಿಗೆ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು. ಬಳಿಕ ಮಾತನಾಡಿದ ಅಧ್ಯಕ್ಷ ಬಾಬು ಮೊಗೇರರವರು, ಪಂಚಾಯತ್‌ನಿಂದ ೧೪ ಅಡಿ ಅಗಲದ ರಸ್ತೆಯನ್ನು ಮಾನವೀಯ ನೆಲೆಯಲ್ಲಿ ನಿರ್ಮಿಸಲು ಸಹಕರಿಸಲಾಗಿದೆ. ಕಂದಾಯ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಂಡಿರುತ್ತಾರೆ. ಮತ್ತೆ ೫ ಮೀಟರ್ ಅಗಲದ ರಸ್ತೆ ಬೇಕೆಂದಾದರೆ ಕಾನೂನಿನ ಪ್ರಕಾರ ಪಡೆದುಕೊಳ್ಳಲಿ. ಪಂಚಾಯತ್‌ನಿಂದ ಈ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲ ಎಂದರು.

ಸಿಬ್ಬಂದಿಗಳ ವೇತನ ಪರಿಷ್ಕರಣೆ: ಗ್ರಾ.ಪಂ. ನೌಕರರ ಹಲವು ತಿಂಗಳ ಬೇಡಿಕೆಯಾದ ವೇತನ ಪರಿಷ್ಕರಣೆಯನ್ನು ಅವರ ಸೇವೆಗೆ ಅನುಗುಣವಾಗಿ ಮಾಡಲಾಯಿತು. ಸರಿಯಾಗಿ ಕರ್ತವ್ಯ ನಿರ್ವಹಿಸದ ನೌಕರರ ವೇತನವನ್ನು ತಡೆಯುವಂತೆ ಇಲ್ಲವೆ ಪರಿಷ್ಕರಣೆಯನ್ನು ಹಿಂದಕ್ಕೆ ಪಡೆಯಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಪಂಚಾಯತ್ ವತಿಯಿಂದ ಈಗಾಗಲೇ ವಸತಿ ಸಾಲ ಯೋಜನೆಯಲ್ಲಿ ಸಾಲ ಪಡೆದುಕೊಂಡ ಫಲಾನುಭವಿಗಳ ಸಾಲ ಮನ್ನಾ ಮಾಡಲಾಗಿದ್ದು ಅವರಿಗೆ ಋಣ ಮುಕ್ತ ಪತ್ರ ಬಾಕಿ ಇದ್ದವರಿಗೆ ಕೂಡಲೇ ನೀಡಲು ಸಭೆಯಲ್ಲಿ ನಿರ್ಣಯಿಸಲಾಯಿತು. ಋಣ ಮುಕ್ತ ಪತ್ರ ಪಡೆದುಕೊಳ್ಳದವರು ಕೂಡಲೇ ಪಡೆದುಕೊಳ್ಳುವಂತೆ ಸಂಬಂಧ ಪಟ್ಟ ವಾರ್ಡ್ ಸದಸ್ಯರು ಫಲಾನುಭವಿಗಳಿಗೆ ಮಾಹಿತಿ ನೀಡಬೇಕೆಂದು ಪಿಡಿಒ ರವಿಚಂದ್ರರವರು ಸಭೆಗೆ ತಿಳಿಸಿದರು.
ಸದಸ್ಯರಾದ ಹರ್ಷ, ನಾರಾಯಣ ಪೂಜಾರಿ, ಆನಂದ ಗೌಡ ಪಡೆಜ್ಜಾರು, ಮಾಧವ ಕೆ, ಕೃಷ್ಣಪ್ಪ ಪೂಜಾರಿ, ಶಾಲಿನಿ ಸತೀಶ್ ನೈಕ್ , ಜಯಂತಿ ಗಣಪಯ್ಯ, ಸರೋಜಿನಿ ಎಸ್ ಆಚಾರ್, ಜಯಲಕ್ಷ್ಮೀ, ಜಾನಕಿ, ನೀಲಾವತಿ ಶಿವರಾಂ, ಸಂದ್ಯಾ ಮೋಹನ, ಇಂದಿರಾ, ಯಶೋಧ ಚರ್ಚೆಯಲ್ಲಿ ಪಾಲ್ಗೊಂಡರು. ಕಾರ್ಯದರ್ಶಿ ಆನಂದ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.