Breaking News

ಟೆಂಟ್ ಮೇಳ ಕಟ್ಟಲು ಹೊರಟ ಕನಸುಗಾರ, ಯಕ್ಷಗಾನ ಪ್ರೇಮಿ ಕುಂಬ್ರ ಬಾಲಕೃಷ್ಣ ರೈ

Puttur_Advt_NewsUnder_1
Puttur_Advt_NewsUnder_1

IMG_20151229_114823ಕಾಲಮಿತಿ ಯಕ್ಷಗಾನದಿಂದ ಯಕ್ಷಗಾನಕ್ಕೆ ಬೆಲೆ ಕಮ್ಮಿಯಾಗುತ್ತಿದೆ

@ ಸಿಶೇ ಕಜೆಮಾರ್.

ಯಕ್ಷಗಾನ ಒಂದು ಸಂಕೀರ್ಣ ರಂಗಕಲೆ. ಇದು ತುಳುನಾಡಿನಲ್ಲಿಯೇ ಹುಟ್ಟಿ ಬೆಳೆಯಿತೇನೋ ಎನ್ನುವಷ್ಟರ ಮಟ್ಟಿಗೆ ಇಲ್ಲಿ ಯಕ್ಷಗಾನ ಪ್ರಸಿದ್ಧಿ ಪಡೆದಿರುವುದು ಸತ್ಯ.ನೂರಾರು ವರ್ಷಗಳಿಂದ ತುಳುನಾಡಿನ ಮಣ್ಣಿನಲ್ಲಿ ಆಳವಾಗಿ ಹಬ್ಬಿ ಬೇರೂರಿದ ಕರಾವಳಿಯ ಗಂಡುಕಲೆ. ದಕ್ಷಿಣ ಭಾರತದಾದ್ಯಂತ ಬೇರೆ ಬೇರೆ ರೂಪಗಳಿಂದ ಪಸರಿಸಿಕೊಂಡಿರುವ ಕಲೆ ಇದಾದುದರಿಂದ ಇದರ ಮೂಲ ಎಲ್ಲಿ ಎಂಬುದನ್ನು ಶೋಧಿಸುವುದು ಸ್ವಲ್ಪ ಕಷ್ಟಸಾಧ್ಯ. ಕರ್ನಾಟಕದಲ್ಲಿ ಯಕ್ಷಗಾನ ಎಂದು ಪ್ರಸಿದ್ಧಿ ಪಡೆದ ಈ ಕಲೆ ತಮಿಳುನಾಡು, ಆಂಧ್ರ, ಕೇರಳದಲ್ಲಿಯೂ ಬೇರೆ ಬೇರೆ ರೂಪ ಹೆಸರುಗಳಿಂದ ಜೀವಂತವಾಗಿದೆ.ಕೇರಳದಲ್ಲಿ ಕೊಡಿಯಾಟಂ, ಕೃಷ್ಣನಾಟಂ,ರಾಮನಾಟಂ, ಕಥಕ್ಕಳಿ ಮುಂತಾದ ಕಲೆಗಳು ಕೂಡ ಯಕ್ಷಗಾನವನ್ನು ಹೋಲುತ್ತವೆ.ತಮಿಳಿನ ತೆರವುಕೊತ್ತು ಮತ್ತು ಆಂಧ್ರದ ವೀಥನಾಟಕ ಕೂಡ ಯಕ್ಷಗಾನ ಶೈಲಿಯಲ್ಲಿಯೇ ಇದೆ.ದಕ್ಷಿಣ ಶ್ರೀಲಂಕಾದ ಯಕಂ ಫೌಹಾ ಮತ್ತು ಕೋಲಂ, ಮಹಾರಾಷ್ಟ್ರದ ತಮಾಷಾ ಇವೆಲ್ಲವೂ ಯಕ್ಷಗಾನದ ಒಂದು ಭಾಗವಾಗಿವೆ ಎಂದರೆ ತಪ್ಪಾಗಲಾರದು. ಸುಮಾರು ೬ ಶತಮಾನಗಳ ಇತಿಹಾಸ ಕರಾವಳಿಯ ಯಕ್ಷಗಾನಕ್ಕೆ ಇದೆ.ಸಂಶೋಧಕರ ಪ್ರಕಾರ ರಾಮ ಪುತ್ರನಾದ ವಿಷ್ಣು ಕ್ರಿ.ಶ.೧೫೬೪ ರಲ್ಲಿರಚಿಸಿದ ಯಕ್ಷಗಾನ ಪ್ರಸಂಗ “ವಿರಾಟ ಪರ್ವ”ಕ್ಕಿಂತ ಮೊದಲಿನ ಪ್ರಸಂಗಗಳು ದೊರೆತಿಲ್ಲ ಎನ್ನುತ್ತಾರೆ. ಯಕ್ಷಗಾನದ ಪ್ರಸಂಗ ರಚನೆಯ ಆಧಾರದ ಮೇಲೆ ಅದರ ಕಾಲಮಿತಿಯನ್ನು ನಿರ್ಣಯಿಸಬಹುದು. ಹಿಂದಿನ ಕಾಲದಲ್ಲಿ ರಾತ್ರಿ ೯.೩೦ ರಿಂದ ಆರಂಭವಾದ ಯಕ್ಷಗಾನ ಬೆಳಗ್ಗೆಯ ತನಕ ನಡೆಯುತ್ತಿತ್ತು. ಆದರೆ ಇಂದು ಹಾಗೆ ಇಲ್ಲ. ಯಕ್ಷಗಾನವನ್ನು ಒಂದು ಕಾಲಮಿತಿಯಲ್ಲಿ ಆಡಿ ತೋರಿಸಲು ಕಲಾವಿದರು ಮುಂದೆ ಬಂದಿದ್ದಾರೆ. ಇದಕ್ಕೆಲ್ಲಾ ಕಾರಣಗಳು ಹಲವು. ಆದರೆ ಒಂದು ಕಾಲದಲ್ಲಿ ಪುತ್ತೂರು ತಾಲೂಕಿನ ಒಳಮೊಗ್ರು( ಆಗಿನ ಬಾಂದಲಪ್ಪು) ಎಂಬಂತ ಹಳ್ಳಿಯ ಸುತ್ತಲಿನ ನೂರಾರು ಮಂದಿಗೆ ಯಕ್ಷಗಾನದ ಸೊಗಡು, ಖುಷಿಯನ್ನು ಹಂಚಿದವರು ಬಾಲಕೃಷ್ಣ ರೈ ಕುಂಬ್ರ. ತನ್ನ ೬ ನೇ ವಯಸ್ಸಿನಿಂದಲೇ ಯಕ್ಷಗಾನದ ಆಸಕ್ತಿ ಹುಟ್ಟಿಸಿಕೊಂಡು ರೈಗಳು ತನ್ನ 65 ನೇ ವಯಸ್ಸಿನವರೆಗೂ ಯಕ್ಷಗಾನ ಪ್ರಸಂಗಗಳನ್ನು ಆಡಿಸಿದ್ದಾರೆ. ಇದೀಗ ತಾನೇ ಒಂದು ಟೆಂಟ್ ಮೇಳವನ್ನು ಕಟ್ಟುತ್ತೇನೆ ಎಂದು ಹೇಳುವ ರೈಯವರೊಂದಿಗೆ ನಡೆಸಿದ ಒಂದು ಚಿಟ್‌ಚಾಟ್ ಇಲ್ಲಿದೆ.

* ಸರ್..ನಿಮ್ಮ ಯಕ್ಷಗಾನ ಪ್ರೀತಿ ಯಾವಾಗ ಆರಂಭವಾಯಿತು?

1956-57 ನೇ ಇಸವಿ. ನನಗೆ ೬ ವರ್ಷ ಪ್ರಾಯ. ಕೊರಗ ಶೆಟ್ಟಿಯವರ ವ್ಯವಸ್ಥಾಪಕತ್ವದ ಇರಾಶ್ರೀ ಸೋಮನಾಥೇಶ್ವರ ಯಕ್ಷಗಾನ ಮಂಡಳಿ ಕುಂಡಾವು ಇವರು ಕುಂಬ್ರದಲ್ಲಿ 3 ದಿನಗಳ ಕಾಲ “ಕಚದೇವಯಾನಿ” ಹಾಗೂ ಇನ್ನೆರಡು ಯಕ್ಷಗಾನ ಪ್ರಸಂಗ ಆಡಿದ್ದರು.ದೊಡ್ಡ ಟೆಂಟ್ ಹಾಕಿದ್ದರು. ಆಗ ಎತ್ತರದ ವೇದಿಕೆ ಇರಲಿಲ್ಲ. ಸುತ್ತಲೂ ಮಾವಿನ ಎಲೆಗಳನ್ನು ಕಟ್ಟಿ ವೇದಿಕೆ ಮಾಡುತ್ತಿದ್ದರು. ಗ್ಯಾಸ್‌ಲೈಟ್‌ನ ಬೆಳಕು. ನೆಲಕ್ಕೆ ನಾಲ್ಕಣೆ, ಗೌರವ ಪಾಸ್ ಅಂದರೆ 2 ರುಪಾಯಿ. ನನ್ನ ತಂದೆ ಕೆ.ಬಿ.ಲಿಂಗಪ್ಪ ರೈಯವರು ಮೇಳದ ಕಲಾವಿದರಿಗೆ ತನ್ನ ಮನೆಯಲ್ಲಿ ಊಟೋಪಚಾರ ನೀಡಿದ್ದರು.ಇಲ್ಲಿಂದ ನನ್ನ ಯಕ್ಷಗಾನ ಪ್ರೀತಿ ಆರಂಭವಾಯಿತು.

* ಯಕ್ಷಗಾನ ಆಡಿಸಲು ನಿಮಗೆ ಸ್ಪೂರ್ತಿ ಯಾರು?

1963-64 ರಲ್ಲಿ ಕೊರಗ ರೈಯವರ ಮಗ ವಿಠಲ ಶೆಟ್ಟಿಯವರ ವ್ಯವಸ್ಥಾಪಕತ್ವದಲ್ಲಿ ಕರ್ನಾಟಕ ಯಕ್ಷಗಾನ ನಾಟಕ ಸಭಾದವರು ಮಂಗಳೂರಿನಲ್ಲಿ ಯಕ್ಷಗಾನದಲ್ಲಿ ಒಂದು ವಿನೂತನ ಪ್ರಯೋಗ ನಡೆಸಿದರು. ಅದನ್ನು ಕಂಡ ನನಗೆ ತುಂಬಾ ಖುಷಿಯಾಯಿತು.ಅಲ್ಲಿಂದ ನಾನು ಯಕ್ಷಗಾನ ಮೇಳದವರ ಒಡನಾಡಿಯಾದೆ. ಅವರಿಗೆ ಸಹಕಾರ ನೀಡುವುದು ಎಲ್ಲಾ ಮಾಡುತ್ತಿದ್ದೆ. ಆಗ ಅವರಿಗೂ ನನ್ನ ಮೇಲೆ ಪ್ರೀತಿ ಹುಟ್ಟಿತು. 1982 ರಲ್ಲಿ ಕದ್ರಿ ಮಂಜುನಾಥೇಶ್ವರ ಯಕ್ಷಗಾನ ನಾಟಕ ಸಭಾದವರು ಕುಂಬ್ರ “ಅಲ್ಲಂಗಾರ್ ಗದ್ದೆ”ಯಲ್ಲಿ “ಗೆಜ್ಜೆದ ಪೂಜೆ” ಎಂಬ ಯಕ್ಷಗಾನ ಆಡಿದರು. ಆಗ ನಾನು ಗದ್ದೆಯನ್ನು ಅವರಿಗೆ ಉಚಿತವಾಗಿ ನೀಡಿದ್ದೆ. ಇದರಿಂದ ಖುಷಿಗೊಂಡ ಮೇಳದವರು ನನ್ನೊಂದಿಗೆ ತುಂಬಾ ಆತ್ಮೀಯವಾಗಿ ನಡೆದುಕೊಂಡರು. ನನಗೆ ಯಕ್ಷಗಾನ ಆಡಿಸಲು ಸ್ಪೂರ್ತಿ ಎಂದರೆ ಎಲ್ಲಾ ಕಲಾವಿದರು ಹಾಗೂ ಮೇಳದ ವ್ಯವಸ್ಥಾಪಕರು.

* ಕುಂಬ್ರ ಅಲ್ಲಂಗಾರ್ ಗದ್ದೆಯಲ್ಲಿ ನೀವು ಆಡಿಸಿದ ಯಕ್ಷಗಾನ ಪ್ರಸಂಗಗಳು ಎಷ್ಟು?

ಕುಂಬ್ರ ಅಲ್ಲಂಗಾರ್ ಗದ್ದೆ ಎಂದರೆ ಒಂದು ಕಾಲದಲ್ಲಿ ಆಟದ ಗದ್ದೆ ಎಂದೇ ಪ್ರಸಿದ್ಧಿಯನ್ನು ಪಡೆದಿತ್ತು. ೧೯೮೭ ರಲ್ಲಿ ಪ್ರಥಮವಾಗಿ ನಾನು ಕದ್ರಿ ಮೇಳದವರ “ಧರ್ಮಚಾವಡಿ” ಎಂಬ ಪ್ರಸಂಗ ಆಡಿಸಿದೆ. ೧೯೮೮ ರಲ್ಲಿ “ಗರುಡ ಕೇಂಜವ”, ೧೯೮೯ ರಲ್ಲಿ ಕಾಂತವರ ಮೇಳದವರ “ಮಂತ್ರಿ ಚಂದನೆ”, ೧೯೯೦ ರಲ್ಲಿ ಕರ್ನಾಟಕ ಮೇಳದ “ಬ್ರಹ್ಮ ಬಲಾಂಡಿ”, ೧೯೯೧ ರಲ್ಲಿ ಕರ್ನಾಟಕ ಮೇಳದ “ಮತ್ತೂರ ಬೀರೆ” ಇವಿಷ್ಟು ಅಲ್ಲಂಗಾರ್ ಗದ್ದೆಯಲ್ಲಿ ಆಡಿಸಿದ ಆಟಗಳು. ೧೯೯೪ ರಲ್ಲಿ ಬೆಳ್ಳಾರೆಯಲ್ಲಿ “ಕರ್ಪೂರ ಕರ್ನಗೆ” ಆಟ ಆಡಿಸಿದೆ.

* ಯಕ್ಷಗಾನಕ್ಕೆ ಜನರ ಬೆಂಬಲ ಹೇಗಿತ್ತು? ನಿಮಗೆ ನಷ್ಟ ಉಂಟಾದ ಘಟನೆ ನೆನಪಿದೆಯಾ?

ಒಳ್ಳೆಯ ಪ್ರಸಂಗಕ್ಕೆ ಜನ ಬರುತ್ತಿದ್ದರು. ಆಗ ಒಂದು ಮೇಳಕ್ಕೆ 4 ರಿಂದ 5 ಸಾವಿರ ರುಪಾಯಿ ಕೊಡಬೇಕಿತ್ತು. 1994 ರಲ್ಲಿ ನನಗೆ ಬಹಳ ನಷ್ಟವಾಯಿತು. ಏನು ಮಾಡುವುದು ಎಂದು ತೋಚಲಿಲ್ಲ.1996 ರಲ್ಲಿ ಕರ್ನಾಟಕ ಮೇಳದವರಿಂದ “ಕೋಟಿ ಚೆನ್ನಯ” ಆಟವನ್ನು ಕುಂಬ್ರ ನಿರಾಳ ಗದ್ದೆಯಲ್ಲಿ ಆಡಿಸಿದೆ. ಆಟದ ಮೊದಲ ದಿನ ರಾಮಜಾಲು ಗರಡಿಯಲ್ಲಿ ಪ್ರಾರ್ಥನೆ ಮಾಡಿಕೊಂಡೆ. ಕೋಟಿ ಚೆನ್ನಯರೇ ನನ್ನನ್ನು ಉಳಿಸಿ, ಮುಂದೆಯೂ ಆಟ ಆಡಿಸಬೇಕಾದರೆ ನೀವು ನನ್ನನ್ನು ಉಳಿಸಬೇಕು ಎಂದು. ಕೋಟಿ ಚೆನ್ನಯರು ದಯಪಾಲಿಸಿದ್ರು. ಇಡೀ ಕುಂಬ್ರದ ಚರಿತ್ರೆಯಲ್ಲಿ ಈ ಆಟ ಅದ್ಭುತ ದಾಖಲೆಯ ಹಣ ತಂದು ಕೊಟ್ಟಿತು. ಈ ಹುರುಪಿನಿಂದ ೧೯೯೭ ರಲ್ಲಿ ನಿರಾಳಗದ್ದೆಯಲ್ಲಿ “ಶಬರಿಮಲೆ ಅಯ್ಯಪ್ಪ” ,1996 ರಲ್ಲಿ “ಕಾಡ ಮಲ್ಲಿಗೆ”, 1999 ರಲ್ಲಿ “ಮೀನ ಮಚ್ಚೆ”ಆಟ ಆಡಿಸಿದೆ. 2000 ರಲ್ಲಿ ಕರ್ನಾಟಕ ಮೇಳ ನಿಂತಿತು. ೨೦೦೬ ರಲ್ಲಿ ಮಂಗಳಾದೇವಿ ಮೇಳದವರಿಂದ ಕುಂಬ್ರ ಶಾಲಾ ಮೈದಾನದಲ್ಲಿ “ಭಾಗ್ಯಲಕ್ಷ್ಮೀ” ಪ್ರಸಂಗ, ೨೦೦೮ ರಲ್ಲಿ “ಮಲ್ಲಿಗೆ ಸಂಪಿಗೆ” ಆಡಿಸಿದೆ. ಇದೇ ವರ್ಷ ಮೇಳದ ೩ ಮಂದಿ ಕಲಾವಿದರಿಗೆ ಸನ್ಮಾನ ಮಾಡಿಸಿದೆ. 2009 ರಲ್ಲಿ ಮತ್ತೆ ಮಂಗಳಾದೇವಿ ಮೇಳದವರಿಂದ “ಕೋಟಿ ಚೆನ್ನಯ” ಆಡಿಸಿದೆ. ಸ್ವಲ್ಪಮಟ್ಟಿನ ನಷ್ಟವಾಯಿತು. ೨೦೧೦ ರಲ್ಲಿ ಮಂಗಳಾದೇವಿ ಮೇಳ ಕೂಡ ನಿಂತಿತು.

* ಆಟದ ಅನೌನ್ಸ್‌ನಿಂದ ಹಿಡಿದು ಪೋಸ್ಟರ್ ಅಂಟಿಸುವುದು ಎಲ್ಲಾ ನೀವೇ ಮಾಡುತ್ತಿದ್ದೀರಿ ಅಂತೆ ಹೌದಾ?

ಯಕ್ಷಗಾನದ ಮೇಲಿನ ಅಭಿಮಾನ, ಪ್ರೀತಿ ಇದೆಲ್ಲವನ್ನು ಮಾಡುತ್ತಿತ್ತು. ರಿಕ್ಷಾ, ಜೀಪಲ್ಲಿ ಅನೌನ್ಸ್ ಮಾಡುವುದು, ಅಲ್ಲಲ್ಲಿ ಪೋಸ್ಟರ್ ಅಂಟಿಸುವುದು. ಕಲಾವಿದರಿಗೆ ಊಟ,ಚಹಾದ ವ್ಯವಸ್ಥೆ ಎಲ್ಲವೂ ನಾನೇ ಮಾಡುತ್ತಿದ್ದೆ. ಆದ್ದರಿಂದಲೇ ಮೇಳದವರು ನನ್ನನ್ನು ತುಂಬಾ ಹಚ್ಚಿಕೊಂಡಿದ್ದರು. ಈಗಲೂ ಯಾರಾದರೂ ಯಕ್ಷಗಾನ ಬೇಕೆಂದರೆ ನನಗೆ ಫೋನ್ ಮಾಡಿ ಹೇಳುವುದುಂಟು. ಆದರೆ ಇಂದು ಟೆಂಟ್ ಮೇಳಗಳೇ ಕಡಿಮೆಯಾಗಿರುವುದು ಬೇಸರ ತಂದಿದೆ. ಕುಂಬ್ರದಲ್ಲಿ ಒಂದು ತಿಂಗಳಲ್ಲಿ ಎಂಟು ಟೆಂಟ್ ಮೇಳಗಳು ಯಕ್ಷಗಾನ ಪ್ರದರ್ಶನ ಮಾಡಿದ ವರ್ಷಗಳು ಇವೆ. ಆಗ ಬಹಳ ಪ್ರಸಿದ್ಧಿಯನ್ನು ಪಡೆದ ಅರುವ ಮೇಳ, ಪುತ್ತೂರು ಮೇಳ, ಕದ್ರಿ, ಕರ್ನಾಟಕ, ಕಾಂತೇಶ್ವರ, ಕೂಡ್ಲು, ಅರುವ,ಸುರತ್ಕಲ್ ಹಾಗೂ ಧರ್ಮಸ್ಥಳ ಮೇಳಗಳು ಟೆಂಟ್ ಮೇಳಗಳಿಗೆ ಹೆಸರುವಾಸಿಯಾಗಿದ್ದವು.

* ಇಂದಿನ ಯಕ್ಷಗಾನದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಇಂದಿನ ಕಾಲಮಿತಿ ಯಕ್ಷಗಾನದಿಂದಾಗಿ ಯಕ್ಷಗಾನಕ್ಕೆ ಇದ್ದ ನಿಜವಾದ ಬೆಲೆ ಕಡಿಮೆಯಾಗುತ್ತಿದೆ. ಪೌರಾಣಿಕ ಕಥೆಯನ್ನು ಕಾಲಮಿತಿ ಯಕ್ಷಗಾನದಲ್ಲಿ ಹೇಳಲು ಸಾಧ್ಯವಿಲ್ಲ. ಯಕ್ಷಗಾನ ಯಾವತ್ತಿದ್ದರೂ ರಾತ್ರಿಯಿಂದ ಬೆಳಗ್ಗಿನ ತನಕ ನಡೆದರೆ ಮಾತ್ರ ಅದಕ್ಕೆ ನಿಜವಾದ ಅರ್ಥ. ಇಂದು ಕಟೀಲು ಮೇಳ ಒಂದು ಬಿಟ್ಟರೆ ಟೆಂಟ್ ಮೇಳಗಳು ಕಣ್ಮರೆಯಾಗುತ್ತಿವೆ. ಟೆಂಟ್ ಅಡಿಯಲ್ಲಿ ಕೂತು ಆಟ ನೋಡುವ ಮಜಾ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಒಂದು ಟೆಂಟ್ ಮೇಳ ಮಾಡಬೇಕೆಂಬ ಕನಸು ನನಗಿದೆ.ಯಕ್ಷಗಾನ ಮೇಳ ನಿರ್ವಹಣೆಯ ಬಗ್ಗೆ ನನಗೆ ಗೊತ್ತಿರುವುದರಿಂದ ಈ ಬಗ್ಗೆ ಭಯ ಇಲ್ಲ.ಯಕ್ಷಗಾನವನ್ನು ಉಳಿಸಿ ಬೆಳೆಸುವುದೇ ನನ್ನ ಗುರಿ. ಯಕ್ಷಗಾನ ಆಡಿಸುವುದರಿಂದ ಹಣ ಮಾಡಲು ಸಾಧ್ಯವಿಲ್ಲ. ಇದೊಂದು ಕಲೆ. ಇಂದು ಈ ಕಲೆಯನ್ನು ಹಣ ಮಾಡಲಿಕ್ಕಾಗಿ ಉಪಯೋಗಿಸುವುದಕ್ಕೆ ನನ್ನ ವಿರೋಧ ಇದೆ. ಯಕ್ಷಗಾನ ಪಾತ್ರಧಾರಿಯಾಗಿಯೂ ಅಭಿನಯಿಸಿದ್ದೇನೆ. ಪ್ರಸಂಗವೊಂದರಲ್ಲಿ ಪಂಜದ ಅರಸು ಪಾತ್ರದ ಮೂಲಕ ಯಕ್ಷಲೋಕದಲ್ಲಿ ಬಣ್ಣದ ವೇಷ ಹಾಕಿದ್ದೇನೆ. ನೋಡಿ ತಿಳಿ, ಮಾಡಿ ಕಲಿ ಎಂಬ ನಿಯಮದಂತೆ ಯಕ್ಷಗಾನ ನೋಡಿಯೇ ಎಲ್ಲವನ್ನು ಕಲಿತುಕೊಂಡಿದ್ದೇನೆ.ನಾಟಕದಲ್ಲಿಯೂ ಪಾತ್ರ ಮಾಡಿದ ಅನುಭನ ನನಗಿದೆ.

* ನಿಮ್ಮನ್ನು ಪಠೇಲ್ ಎಂದು ಕರೆಯುವ ಹಿಂದಿನ ರಹಸ್ಯ ಏನು?

ಬ್ರಿಟೀಷರ ಕಾಲದಲ್ಲಿ ನಮ್ಮ ಮನೆತನಕ್ಕೆ ಪಠೇಲ್ ಗಿರಿ ಕೊಟ್ಟಿದ್ದರು.ನನ್ನ ಅಜ್ಜ ಪಠೇಲ್ ಜತ್ತಪ್ಪ ರೈ, ಮಾವ ಪಠೇಲ್ ಗುಡ್ಡಪ್ಪ ರೈ. ಆದ್ದರಿಂದ ನನ್ನನ್ನು ಕೂಡ ಪಠೇಲ್ ಎಂದು ಜನ ಕರೆಯುತ್ತಿದ್ದಾರೆ. ಅಜ್ಜ ಕುಂಬ್ರ ಚೆನ್ನಪ್ಪ ರೈಯವರ ಮನೆಗೆ “ಕುಂಬ್ರ ಮನೆ” ಎಂದು ಹೆಸರು ಇತ್ತು. ಅದೇ ಹೆಸರನ್ನು ಇದೀಗ ಒಳಮೊಗ್ರು ಗ್ರಾಮದ ಪೇಟೆಯಾಗಿರುವ ಕುಂಬ್ರಕ್ಕೆ ಇಡಲಾಗಿದೆ. ಕುಂಬ್ರ ಚೆನ್ನಪ್ಪ ರೈ ಮತ್ತು ಎಂ.ಎಲ್.ಸಿ ಕುಂಬ್ರ ಜತ್ತಪ್ಪ ರೈಯವರ ಹೆಸರಿನಲ್ಲಿ ನಿರ್ಮಿಸಿದ ಕುಂಬ್ರ ಅಶ್ವತ್ಥ ಕಟ್ಟೆ ಈಗಲೂ ಇದೆ. ೧೯೬೯ ರಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ನಾನು ಎಂ.ಎಲ್.ಸಿ ಕುಂಬ್ರ ಜತ್ತಪ್ಪ ರೈಯವರ ಶಿಷ್ಯನಾಗಿ ಕಳೆದ ೩೫ ವರ್ಷಗಳಿಂದ ರಾಜಕೀಯದಲ್ಲಿಯೂ ಬಹಳಷ್ಟು ದುಡಿದಿದ್ದೇನೆ. ಗ್ರಾಮ ಪಂಚಾಯತ್ ಸದಸ್ಯನಾಗಿ ಬಹಳಷ್ಟು ಕೆಲಸ ಮಾಡಿದ್ದೇನೆ.  ಅಭಿಮಾನಿಗಳ ಪ್ರೋತ್ಸಾಹದ ಹುರುಪಿನಲ್ಲಿ ೬೫ ರ ಹರೆಯದಲ್ಲೂ ಮತ್ತೆ ಟೆಂಟ್ ಮೇಳ ಕಟ್ಟುವ ಯೋಚನೆ ಮಾಡಿದ್ದೇನೆ. ಜನ ನನಗೆ ಪ್ರೋತ್ಸಾಹ ನೀಡುತ್ತಾರೆ ಎಂಬ ಭರವಸೆ ಇದೆ. ಒಟ್ಟಿನಲ್ಲಿ ಯಕ್ಷಗಾನವನ್ನು ಉಳಿಸಿ ಬೆಳೆಸಬೇಕು. ಹಿಂದಿನ ಕಾಲದ ಟೆಂಟ್ ಮೇಳ ಮತ್ತೆ ಬರಬೇಕೆಂಬುದೇ ನನ್ನ ಆಸೆ, ಗುರಿ.

ಸಂದರ್ಶನ @ ಸಿಶೇ ಕಜೆಮಾರ್.

ಜಂಗಮವಾಣಿ: ೯೪೮೧೨೧೨೪೦೯

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.