ಕೊಯಿಲ ಪಶು ಸಂಗೋಪನಾ ರಸ್ತೆ ಯಥಾಸ್ಥಿತಿ ಕಾಪಾಡುವಂತೆ ಜಿಲ್ಲಾಧಿಕಾರಿ ಸೂಚನೆ

pashu1.jpg2

pashu1

*ಮುಖ್ಯ ರಸ್ತೆ ದುರಸ್ತಿಗೆ ಜಿಲ್ಲಾಧಿಕಾರಿ ನಿಧಿಯಿಂದ 2 ಲಕ್ಷ ರೂಪಾಯಿ ಅನುದಾನ

*ಒಳ ರಸ್ತೆಗಳ ದುರಸ್ತಿಗೆ ಅನುಮತಿ ನೀಡುವಂತೆ ಸೂಚನೆ

ಉಪ್ಪಿನಂಗಡಿ: ಕೊಲದಲ್ಲಿ ಕಾರ‍್ಯಾಚರಿಸುತ್ತಿರುವ ಕೊಲ ಪಶು ಸಂಗೋಪನಾ ಕ್ಷೇತ್ರದ ಒಳಗೆ ಹಾದು ಹೋಗುವ ರಸ್ತೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಊರ್ಜಿತದಲ್ಲಿಟ್ಟು ಯಥಾಸ್ಥಿಯನ್ನು ಕಾಪಾಡಿಕೊಳ್ಳಬೇಕು ಎಂದು ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಆದೇಶ ನೀಡಿದರು.

 ಗುರುವಾರ ಕ್ಷೇತ್ರಕ್ಕೆ ಭೇಟಿ ನೀಡಿ ಸುಳ್ಯ ಶಾಸಕ ಎಸ್. ಅಂಗಾರ ಹಾಗೂ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಆಶಾ ತಿಮ್ಮಪ್ಪ ಗೌಡರವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಗಿ, ಬಳಿಕ ರಸ್ತೆಯನ್ನು ಪರಿಶೀಲನೆ ನಡೆಸಿ ಕ್ಷೇತ್ರದ ಸಹಾಯಕ ನಿರ್ದೇಶಕ ರಮೇಶ್ ಕುಮಾರ್ ಅವರಿಗೆ ಈ ಆದೇಶ ನೀಡಿದರು.

 ಕ್ಷೇತ್ರದ ಒಳಗೆ ಆಧುನಿಕ ಡೈರಿ ಹಾಗೂ ಕೋಳಿ ಮರಿ ಸಾಕಾಣಿಕೆ ಕೇಂದ್ರ ಅನುಷ್ಟಾನದ ಹಿನ್ನೆಲೆಯಲ್ಲಿ, ರಕ್ಷಣೆ ಸಲುವಾಗಿ ಇಲ್ಲಿ ಒಳಗಡೆ ಇದ್ದ ಉಪ ರಸ್ತೆಗಳನ್ನು ಮುಚ್ಚಿ ಅಗಳು ನಿರ್ಮಾಣ ಮಾಡಲಾಗಿತ್ತು. ಕ್ಷೇತ್ರದ ಮಧ್ಯೆ ಹಾದು ಹೋಗುವ ಮುಖ್ಯ ರಸ್ತೆಗೆ ಗೇಟ್ ನಿರ್ಮಾಣ ಮಾಡಲಾಗಿತ್ತು. ಹೀಗಾಗಿ ನೂರಾರು ವರ್ಷಗಳಿಂದ ಊರ್ಜಿತದಲ್ಲಿ ಇದ್ದ ರಸ್ತೆಯನ್ನು ಬಂದ್ ಮಾಡಿ, ನೂತನ ಗೇಟ್ ನಿರ್ಮಿಸುವುದಾಗಿ ಕ್ಷೇತ್ರದ ಅಧಿಕಾರಿಗಳು ಹೇಳಿಕೆ ನೀಡಿದ್ದರು.  ಇದರಿಂದ ಅಸಹಾಯಕರಾದ ಕೊನೆಮಜಲು, ಪಲ್ಲಡ್ಕ, ಪಟ್ಟೆ, ಆತೂರು ದೇವಸ್ಥಾನ, ಮಸೀದಿ, ಕೊಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಗೆ ದಾರಿ ಇಲ್ಲದಂತಾಗುತ್ತದೆ, ಈಗಾಗಲೇ ಊರ್ಜಿದಲ್ಲಿದ್ದ ದಾರಿ ಹಾಗೂ ರಸ್ತೆಗಳನ್ನು ಮುಚ್ಚಿರುವುದರಿಂದ ಜನತೆ ತೊಂದರೆ ಅನುಭವಿಸುತ್ತಿದ್ದಾರೆ, ಮುಖ್ಯ ರಸ್ತೆಯನ್ನು ಮುಚ್ಚಿದರೆ ನಮಗೆಲ್ಲಾ ದಾರಿ ಇಲ್ಲದಂತಾಗುತ್ತದೆ ಎಂದು ಸ್ಥಳೀಯರು ಇಲಾಖೆಗೆ, ಜಿಲ್ಲಾಧಿಕಾರಿಗೆ, ಶಾಸಕ ಅಂಗಾರ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಅವರಿಗೆ ಮನವಿ ಸಲ್ಲಿಸಿ, ಸಮಸ್ಯೆಯನ್ನು ನಿವೇದಿಸಿಕೊಂಡಿದ್ದರು.

 ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂರವರು ಕ್ಷೇತ್ರಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿ, ಪರಿಶೀಲನೆ ನಡೆಸಿ ಕ್ಷೇತ್ರದ ಎಲ್ಲಾ ರಸ್ತೆಗಳ ಸಮಸ್ಯೆಗೆ ಸಂಬಂಧಪಟ್ಟಂತೆ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ನಡೆದ ಬಳಿಕ ಮತ್ತೊಮ್ಮೆ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು, ಸಧ್ಯಕ್ಕೆ ಇರುವ ಮುಖ್ಯ ರಸ್ತೆಯನ್ನು ಮುಚ್ಚುವುದು ಬೇಡ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

 ರಸ್ತೆ ದುರಸ್ತಿಗೆ ಅನುದಾನ: ರಸ್ತೆ ತೀರಾ ಹದಗೆಟ್ಟಿರುವ ಬಗ್ಗೆ ಜಿಲ್ಲಾಧಿಕಾರಿಯವರ ಗಮನ ಸೆಳೆದಾಗ ಇಲ್ಲಿನ ಮುಖ್ಯ ರಸ್ತೆ ದುರಸ್ತಿಗೆ ಜಿಲ್ಲಾಧಿಕಾರಿಯವರ ನಿಧಿಯಿಂದ ಎರಡು ಲಕ್ಷ ರೂಪಾಯಿ ಅನುದಾನ ನೀಡಿ ನಿರ್ಮಿತಿ ಕೇಂದ್ರದವರಿಂದ ದುರಸ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು. ಮತ್ತೆ ಸಾರ್ವಜನಿಕರು ಮಾತನಾಡಿ ಕ್ಷೇತ್ರದ ಒಳಗೆ ಹಾಗೂ ಹೊರಗಡೆ ಇರುವ ರಸ್ತೆಗಳು ತೀರಾ ಹದಗೆಟ್ಟಿವೆ, ಇದನ್ನು ದುರಸ್ತಿ ಮಾಡಲು ಗ್ರಾಮ ಪಂಚಾಯಿತಿ ಮುಂದೆ ಬಂದರೂ ಇಲ್ಲಿನ ಅಧಿಕಾರಿಗಳು ಬಿಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು ರಸ್ತೆಗಳ ದುರಸ್ತಿಗೆ ಅನುಮತಿ ನೀಡುವಂತೆ ಆದೇಶಿಸಿದರು.

 ಪುತ್ತೂರು ಸಹಾಯಕ ಕಮೀಷನರ್ ಡಾ| ರಾಜೇಂದ್ರ, ಕಡಬ ವಿಶೇಷ ತಹಸೀಲ್ದಾರ್ ಬಿ. ಲಿಂಗಯ್ಯ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸದಸ್ಯ ಬಾಲಕೃಷ್ಣ ಬಾಣಜಾಲು, ಎ.ಪಿ.ಎಂ.ಸಿ ನಿರ್ದೇಶಕ ಶೀನಪ್ಪ ಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಧರ್ಮಪಾಲ ರಾವ್, ಕೊಲ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಗೌಡ, ರವಿಕಿರಣ್ ಕೊಲ, ಸದಸ್ಯ ಕೆ.ಎ. ಸುಲೈಮಾನ್, ವಿನೋಧರ ಗೌಡ, ಪ್ರಮುಖರಾದ ಸೋಮನಾಥ ಗೌಡ ಪಲ್ಲಡ್ಕ, ವೀರಪ್ಪ ದಾಸಯ್ಯ, ಧರ್ಣಪ್ಪ ಗೌಡ, ಮಹಮ್ಮದ್ ಹಾಜಿ, ಎ.ಕೆ. ಬಶೀರ್, ಅಬ್ದುಲ್ ಖಾದರ್ ಮೊದಲಾದವರು ಉಪಸ್ಥಿತರಿದ್ದರು.

 ಪಶು ಸಂಗೋಪನಾ ಕ್ಷೇತ್ರದ ಅಧಿಕಾರಿಗಳಾದ ಹೊನ್ನಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.