Breaking News

ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಪ್ರಕರಣ: ಮಂಗಳೂರು ಸಿ.ಸಿ.ಬಿ ಪೊಲೀಸರ ಮಿಂಚಿನ ಕಾರ್ಯಾಚರಣೆ ಭೂಗತ ಪಾತಕಿ ವಿಟ್ಲದ ವಿಕ್ಕಿ ಶೆಟ್ಟಿಯ ಸಹಚರ ಸರ್ವೆಯ ಸಚಿನ್ ಸಹಿತ 8 ಮಂದಿ ಬಂಧನ

Puttur_Advt_NewsUnder_1
Puttur_Advt_NewsUnder_1

 sachin

 ಪುತ್ತೂರು: ಭೂಗತ ಪಾತಕಿ ವಿಕ್ಕಿ ಶೆಟ್ಟಿಯ ಸಹಚರನಾಗಿರುವ ಸರ್ವೆ ಸೊರಕೆ ನೇರ್ಲತ್ತಡ್ಕದ ಸಚಿನ್ ಗೌಡ(31ವ) ಸಹಿತ ಎಂಟು ಮಂದಿಯನ್ನು ಮಂಗಳೂರಿನ ಸಿಸಿಬಿ ಪೊಲೀಸರು ತಮ್ಮ ಬಲೆಗೆ ಕೆಡವಿದ್ದಾರೆ. ವಿಟ್ಲ ಸಮೀಪದ ಪಟ್ಲ ನಿವಾಸಿಯಾಗಿದ್ದು ಪಾತಕ ಪ್ರಪಂಚದಲ್ಲಿ ನಟೋರಿಯಸ್ ಪಾತಕಿಯಾಗಿ ಗುರುತಿಸಿಕೊಂಡು ಕರಾವಳಿ ಭಾಗದಲ್ಲಿ ತನ್ನ ಕುಕೃತ್ಯಗಳಿಂದ ಸುದ್ದಿ ಮಾಡುತ್ತಿರುವ ವಿಕ್ಕಿ ಶೆಟ್ಟಿ ಯಾನೆ ಬಾಲಕೃಷ್ಣ ಶೆಟ್ಟಿ ಪ್ರಸ್ತುತ ವಿದೇಶದಲ್ಲಿ ಭೂಗತನಾಗಿದ್ದಾನೆ ಎಂದು ಹೇಳಲಾಗುತ್ತಿದ್ದು ಆತನ ಬಣದಲ್ಲಿ ಗುರುತಿಸಿಕೊಂಡು ಹಫ್ತಾ ವಸೂಲಿಯೂ ಸೇರಿದಂತೆ ವಿವಿಧ ಕಾನೂನು ಬಾಹಿರ ಕೃತ್ಯ ಎಸಗುತ್ತಿರುವ ಸರ್ವೆ ಸೊರಕೆಯ ನೇರ್ಲತ್ತಡ್ಕದ ಸಚಿನ್ ಗೌಡ, ಮಂಗಳೂರು ಬಜಾಲ್‌ನ ಗೌರೀಶ್ ಯಾನೆ ಸುಜಿತ್ ಯಾನೆ ಗೌರಿ(೨೬) ಬೋಂದೆಲ್ ಕೆಎಚ್‌ಬಿ ಕಾಲನಿಯ ಜಯೇಶ್ ಯಾನೆ ಸಚ್ಚು (23) ಆಕಾಶಭವನ ಆನಂದನಗರದ ನವೀನ್‌ಶೆಟ್ಟಿ ಯಾನೆ ಪಿಲಿ ನವೀನ್, ಕುಲಶೇಖರ್ ನಿಡ್ಡೇಲ್‌ನ ಹರ್ಷಿತ್(22), ಬಜಾಲ್ ಕೌಡಡ್ಕದ ಗುರುಪ್ರಸಾದ್(30), ಬಂಟ್ವಾಳ ತಾಲೂಕು ಗೋಳ್ತಮಜಲಿನ ಪ್ರವೀಣ್ ಕುಮಾರ್ ಯಾನೆ ಕೆ.ಪಿ.ಪ್ರವೀಣ್ (26) ಮತ್ತು ಮಂಗಳೂರು ಶಕ್ತಿನಗರದ ಮುಗ್ರೋಡಿಯ ಪವನ್ ಶೆಟ್ಟಿ (21) ಎಂಬವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು ಅವರಿಂದ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳುವ ಮೂಲಕ ಸಂಭಾವ್ಯ ದುಷ್ಕೃತ್ಯಗಳನ್ನು ತಡೆದಿದ್ದಾರೆ.

ಪಿಸ್ತೂಲು, ಸಜೀವ ಗುಂಡು ಪತ್ತೆ; ಸಿಸಿಬಿ ಪೊಲೀಸರು ಮಂಗಳೂರು ನಗರದ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಸಮೀಪದ ಕೀರ್ತಿ ಮಹಲ್ ಲಾಡ್ಜ್ ಪರಿಸರದಲ್ಲಿ ಠಳಾಯಿಸುತ್ತಲಿದ್ದ ಸಚಿನ್ ಗೌಡ ಮತ್ತು ಪವನ್ ಶೆಟ್ಟಿಯವರನ್ನು ದಸ್ತಗಿರಿ ಮಾಡಿದ್ದು ಅವರಿಂದ ಮೊಬೈಲ್ ಫೋನ್, ಪಿಸ್ತೂಲು, ಮತ್ತು ೫ ಸಜೀವ ಮದ್ದುಗುಂಡುಗಳನ್ನು ವಶ ಪಡೆಸಿಕೊಂಡಿದ್ದಾರೆ. ವಿಕ್ಕಿ ಶೆಟ್ಟಿಯ ಅಣತಿಯ ಮೇರೆಗೆ ಕಾರ್ಯ ನಿರ್ವಹಿಸುತ್ತಿರುವ ಇವರು ಆಕ್ರಮವಾಗಿ ಪಿಸ್ತೂಲು ಹೊಂದಿದ್ದು ದುಷ್ಕೃತ್ಯ ಎಸಗಲು ಕಾಯುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು ತಮ್ಮ ಬಲೆಗೆ ಕೆಡವುವಲ್ಲಿ ಯಶಸ್ವಿಯಾಗಿದ್ದಾರೆ. ಸರ್ವೆಯ ಸಚಿನ್ ಗೌಡ ೨೦೦೪ರಲ್ಲಿ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ರಾಜೇಶ್ ಕೊಲೆ ಪ್ರಕರಣ ಮತ್ತು ೨೦೧೪ರಲ್ಲಿ ಮಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಡಕಾಯಿತಿ ಯತ್ನ ಪ್ರಕರಣದ ಆರೋಪಿಯಾಗಿದ್ದಾನೆ.

4 ಕತ್ತಿ, 2 ಕಾರು:ಕಾವೂರು ಸಮೀಪದ ಮರಕಡ ಗ್ರಾಮದ ಗುಂಡೂರಾವ್ ಲೇನ್‌ನ ಆನಾಥಾಶ್ರಮ ಒಂದರ ಎದುರು ಬಿಳಿ ಬಣ್ಣದ ರಿಟ್ಜ್ ಕಾರು ಮತ್ತು ಮಾರುತಿ ಸ್ವಿಫ್ಟ್ ಕಾರುಗಳನ್ನು ನಿಲ್ಲಿಸಿ ದುಷ್ಕೃತ್ಯ ಎಸಗಲು ಸಂಚು ರೂಪಿಸಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಸುಜಿತ್ ಯಾನೆ ಗೌರಿ, ಜಯೇಶ್, ಪಿಲಿ ನವೀನ್, ಹರ್ಷಿತ್, ಗುರುಪ್ರಸಾದ್ ಮತ್ತು ಕೆ.ಪಿ. ಪ್ರವೀಣ್‌ರವರನ್ನು ಬಂಧಿಸಿದ್ದು ಅವರಿಂದ ೪ ಕತ್ತಿಗಳನ್ನು ಮತ್ತು ೨ ಕಾರುಗಳನ್ನು ಹಾಗೂ ೬ ಮೊಬೈಲ್ ಫೋನ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ. ಬಂಧಿತ ಎಂಟು ಮಂದಿಯೂ ಪಾತಕಿ ವಿಕ್ಕಿ ಶೆಟ್ಟಿಯ ಸಹಚರರಾಗಿದ್ದು ಸಿಸಿಬಿ ಇನ್ಸ್ಪೆಕ್ಟರ್ ವೆಲೆಂಟೈನ್ ಡಿ”ಸೋಜಾ ಮತ್ತು ಸಿಬಂದಿಗಳು ದಾಳಿ ಕಾರ‍್ಯಾಚರಣೆ ನಡೆಸಿ ಇವರನ್ನು ಬಂಧಿಸಿದ್ದಾರೆ. ೨೦೧೫ರಲ್ಲಿ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ವಿಕ್ಕಿ ಯಾನೆ ವಿಕ್ರಂ ಬೋಳೂರು ಕೊಲೆ ಪ್ರಕರಣ ಮತ್ತು ೨೦೧೩ರಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಶಾಂತ್ ಯಾನೆ ಪಚ್ಚು ಕೊಲೆ ಪ್ರಕರಣದಲ್ಲಿ ಬಂಧಿತರು ಭಾಗಿಯಾಗಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ. ಆರೋಪಿ ಗೌರೀಶ್ 2011ರಲ್ಲಿ ಮೂಡುಶೆಡ್ಡೆಯಲ್ಲಿ ನಡೆದ ಮುರುಗೇಶ್ ಮತ್ತು ಉಪೇಂದ್ರ ಕೊಲೆ ಪ್ರಕರಣ, ೨೦೧೨ರಲ್ಲಿ ದೇರೆಬೈಲ್ ಕೊಂಚಾಡಿಯಲ್ಲಿ ನಡೆದಿದ್ದ ಕುಮಾರ್ ಕೊಲೆ ಪ್ರಕರಣ ಮತ್ತು ೨೦೧೫ರಲ್ಲಿ ತೊಕ್ಕೋಟಿನಲ್ಲಿ ನಡೆದಿದ್ದ ವಿಕ್ಕಿ ಯಾನೆ ವಿಕ್ಕಿ ಬೋಳಾರ್ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಜಯೇಶ್ ೨೦೧೧ರಲ್ಲಿ ಬಂಟ್ವಾಳದ ರಾಮಲ್‌ಕಟ್ಟೆಯಲ್ಲಿ ನಡೆದಿದ್ದ ಬದ್ರುದ್ದೀನ್ ಕೊಲೆ ಪ್ರಕರಣ, ೨೦೧೩ರಲ್ಲಿ ಪಾಂಡೇಶ್ವರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಪ್ರಶಾಂತ್ ಯಾನೆ ಪಚ್ಚು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದೆ. ನವೀನ್ ಶೆಟ್ಟಿ ವಿರುದ್ಧ ಪ್ರಶಾಂತ್ ಯಾನೆ ಪಚ್ಚು ಕೊಲೆ ಪ್ರಕರಣ ಹಾಗೂ ಕಾವೂರು ಠಾಣೆಯಲ್ಲಿ ಡಕಾಯಿತಿ ಯತ್ನದ ಕೇಸಿದೆ. ಪ್ರವೀಣ್ ಕುಮಾರ್ ವಿರುದ್ಧ ಬಂಟ್ವಾಳದ ಬದ್ರುದ್ದೀನ್ ಮತ್ತು ಮಂಗಳೂರಿನ ಪ್ರಶಾಂತ್ ಯಾನೆ ಪಚ್ಚು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದೆ. ಹರ್ಷಿತ್ ೨೦೧೪ರಲ್ಲಿ ನಡೆದಿದ್ದ ದುರ್ಗಾಪ್ರಸಾದ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಹಾಗೂ ಗುರು ಪ್ರಸಾದ್ ಪ್ರಶಾಂತ್ ಯಾನೆ ಪಚ್ಚು ಕೊಲೆ ಪ್ರಕರಣದಲ್ಲಿ ಹಾಗೂ ಪವನ್ ಶೆಟ್ಟಿ ೨೦೧೪ರ ಪಾಂಡೇಶ್ವರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ದುರ್ಗಾಪ್ರಸಾದ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಕೊಲೆ ಕೇಸ್‌ಗೆ ಸಂಬಂಧಿಸಿ ಪ್ರಸ್ತುತ ಜೈಲಿನಲ್ಲಿರುವ ಆಕಾಶ ಭವನ್ ಶರಣ್ ಮತ್ತು ಭೂಗತ ಪಾತಕಿ ವಿಕ್ಕಿ ಶೆಟ್ಟಿ ನಡುವೆ ನಂಟು ಇರುವ ಕುರಿತು ತನಿಖೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ. ಚಂದ್ರಶೇಖರ್ ತಿಳಿಸಿದ್ದಾರೆ. ಸಂಘಟಿತ ಅಪರಾಧ ಕೃತ್ಯಗಳ ಬಗ್ಗೆ ಸಿಸಿಬಿ ಪೊಲೀಸರು ಸತತ ನಿಗಾ ಇರಿಸಿದ್ದು, ಆಗಿಂದಾಗ್ಗೆ ಗಂಭೀರ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದು ತಿಳಿಸಿರುವ ಆಯುಕ್ತ ಎಂ. ಚಂದ್ರಶೇಖರ್‌ರವರು ಎರಡು ಪ್ರಕರಣಗಳನ್ನು ಭೇದಿಸಿ ಸಂಭಾವ್ಯ ದುಷ್ಕೃತ್ಯಗಳನ್ನು ತಡೆದ ಸಿಸಿಬಿ ಪೂಲೀಸ್ ತಂಡಕ್ಕೆ ೧೫,೦೦೦ ರೂ ನಗದು ಬಹುಮಾನವನ್ನು ಪ್ರಕಟಿಸಿದ್ದಾರಲ್ಲದೆ, ಪ್ರಶಂಸಾ ಪತ್ರಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

 ವಿಟ್ಲದ ವಿಕ್ಕಿ ಶೆಟ್ಟಿಗೂ ಸರ್ವೆಯ ಸಚಿನ್ ಗೌಡನಿಗೂ ಲಿಂಕ್

ಪ್ರಸ್ತುತ ವಿದೇಶದಲ್ಲಿ ಭೂಗತರಾಗಿರುವ ಕಲಿ ಯೋಗೀಶ ಯಾನೆ ಯೋಗೀಶ ಬಂಗೇರ ಹಾಗೂ ವಿಕ್ಕಿ ಶೆಟ್ಟಿ ಯಾನೆ ಬಾಲಕೃಷ್ಣ ಶೆಟ್ಟಿಯ ಸಹಚರರು ಕರ್ನಾಟಕದ ಕರಾವಳಿ ಭಾಗದಲ್ಲಿ ಪ್ರತ್ಯೇಕ ತಂಡದಲ್ಲಿ ಗುರುತಿಸಿಕೊಂಡು ಪಾತಕ ಕೃತ್ಯಗಳನ್ನು ನಡೆಸುತ್ತಿರುವ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಪರಸ್ಪರ ಪ್ರತೀಕಾರ ನಡೆಸಲು ಹವಣಿಸುತ್ತಿರುವ ಕಲಿ ಯೋಗೀಶ ಹಾಗೂ ವಿಕ್ಕಿ ಶೆಟ್ಟಿಯ ಸಹಚರರ ಮೇಲೆ ಕಣ್ಗಾವಲು ಇಟ್ಟಿರುವ ಪೊಲೀಸರ ತಂಡವು ಹಲವರಿಗೆ ಬಲೆ ಬೀಸಿದೆ. ವಿಟ್ಲ ಬಳಿಯ ಪಟ್ಲದವರಾಗಿದ್ದು ಯಕ್ಷಗಾನ ಕ್ಷೇತ್ರದಲ್ಲಿ ಬಹಳಷ್ಟು ಹೆಸರು ಪಡೆದಿರುವ ಭಾಗವತರೋರ್ವರ ಸಹೋದರನಾಗಿರುವ ವಿಕ್ಕಿ ಶೆಟ್ಟಿಯ ಜತೆ ಸರ್ವೆಯ ಸಚಿನ್ ಗೌಡ ಲಿಂಕ್ ಹೊಂದಿರುವುದು ಈ ಹಿಂದೆಯೇ ಬಹಿರಂಗವಾಗಿತ್ತು.  ಸರ್ವೆ ಗ್ರಾಮದ ನೇರೋಳ್ತಡ್ಕ ನಿವಾಸಿ ಪುರುಷೋತ್ತಮ ಗೌಡರವರ ಪುತ್ರ ಸಚಿನ್ ಗೌಡ ವಿಕ್ಕಿಯ ಸೂಚನೆಯಂತೆ ದುಷ್ಕೃತ್ಯಕ್ಕೆ ಸಂಚು ರೂಪಿಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಸಿಸಿಬಿ ತಂಡ ಆತನನ್ನು ತಮ್ಮ ಬಲೆಗೆ ಕೆಡವಿದೆ. ಸರ್ವೆ ಕಲ್ಪಣೆ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದಿರುವ ಸಚಿನ್ ಗೌಡ ಸ್ಥಳೀಯವಾಗಿ ಎಲ್ಲರೊಂದಿಗೆ ಉತ್ತಮವಾಗಿ ಬೆರೆಯುತ್ತಿದ್ದನಾದರೂ ಕ್ರಿಮಿನಲ್ ಲೋಕಕ್ಕೆ ಎಂಟ್ರಿ ಕೊಟ್ಟ ಬಳಿಕ ಹೆಚ್ಚಾಗಿ ಊರಿಗೆ ಬರುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಕಳೆದ ೧೦ ವರ್ಷಗಳಿಂದ ಕ್ರಿಮಿನಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಆತನ ವಿರುದ್ಧ ಮಂಗಳೂರಿನ ಹಲವು ಠಾಣೆಗಳಲ್ಲಿ ವಿವಿಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದೆ. ಸಚಿನ್ ಗೌಡ ಪುತ್ತೂರು ತಾಲೂಕಿನವನಾದರೂ ಆತ ಈ ಭಾಗದಲ್ಲಿ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಮತ್ತು ಪುತ್ತೂರಿನ ಠಾಣೆಗಳಲ್ಲಿ ಅವನ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಸಚಿನ್ ಗೌಡ ವಿಕ್ಕಿಯ ಸಹಚರನಾದ ಬಳಿಕ ಪಾತಕ ಲೋಕದಲ್ಲಿ ಸಕ್ರಿಯನಾಗಿದ್ದು ಕೊಲೆ, ಕೊಲೆಯತ್ನ ಮುಂತಾದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ೨೦೦೪ರಲ್ಲಿ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ರಾಜೇಶ್ ಎಂಬವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ೨೦೧೪ರಲ್ಲಿಮಂಗಳೂರಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಯತ್ನ ಪ್ರಕರಣದ ಆರೋಪಿಯೂ ಆಗಿದ್ದಾನೆ. ವರ್ಷಗಳ ಹಿಂದೆ ಮಂಗಳೂರಿನ ರೈಲ್ವೇ ಬ್ರಿಡ್ಜೊಂದರ ಸಮೀಪ ದುಷ್ಕೃತ್ಯಕ್ಕೆ ಹೊಂಚು ಹಾಕುತ್ತಿದ್ದ ವೇಳೆ ಮಾರಕಾಸ್ತ್ರಗಳೊಂದಿಗೆ ಸಚಿನ್ ಗೌಡ ಹಾಗೂ ಇತರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಜಾಮೀನಿನ ಮೇಲೆ ಹೊರಗೆ ಬಂದಿದ್ದ ಆತ ಮಂಗಳೂರು ಬಿಜೈಯಲ್ಲಿ ವಾಸವಾಗಿದ್ದ. ಇದೀಗ ಆತನ ಸಹಿತ ವಿಕ್ಕಿಯ ಎಂಟು ಮಂದಿ ಸಹಚರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. .

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.