ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ ಕುಮ್ಕಿ ಜಮೀನನ್ನು ಜಿಲ್ಲಾಧಿಕಾರಿ ಸ್ವಾಧೀನ ಪಡಿಸಿಕೊಳ್ಳಬಹುದು-ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ

Puttur_Advt_NewsUnder_1
Puttur_Advt_NewsUnder_1

 ಶಶಿಧರ ವಿ.ಎನ್

ನರಿಮೊಗರು: ಸುಮಾರು 130  ವರ್ಷಗಳ ಹಿಂದೆ ಬ್ರಿಟಿಷ್ ಆಡಳಿತ ಕದೀಂ ವರ್ಗದ ಜಮೀನುದಾರರಿಗೆ  ನೀಡಿದ್ದ  ಕುಮ್ಕಿ ಹಕ್ಕಿನ ಸವಲತ್ತನ್ನು ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ ಅದನ್ನು ಜಿಲ್ಲಾಧಿಕಾರಿ ವಿರಹಿತ ಪಡಿಸಿ ಸ್ವಾದೀನಕ್ಕೆ ತೆಗೆದುಕೊಳ್ಳಬಹುದು ಎಂಬ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.

ಸುಪ್ರೀಂಗೆ ಮೇಲ್ಮನವಿ: ಕರ್ನಾಟಕ ಭೂ ಸುಧಾರಣ ಕಾಯ್ದೆಯ ಸೆಕ್ಷನ್ 79  (2) ವ್ಯಾಪ್ತಿಯಲ್ಲಿ ವಿಶೇಷ ಆದೇಶ ಅಥವಾ ಸಾಮಾನ್ಯ ಆದೇಶ ಜಾರಿ ಮಾಡುವ  ಮೂಲಕ ಸಾರ್ವಜನಿಕ ಉದ್ದೇಶಕ್ಕೆ ಅಗತ್ಯವಿದ್ದಲ್ಲಿ ಕುಮ್ಕಿ ಜಮೀನನ್ನು ಜಿಲ್ಲಾಧಿಕಾರಿಯವರು ವಿರಹಿತ ಪಡಿಸಿ ಸ್ವಾದೀನ ಪಡಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಯವರಿಗೆ ಕರ್ನಾಟಕ ಸರಕಾರ ಅಧಿಕಾರ ನೀಡಿತ್ತು. ಜಿಲ್ಲಾಧಿಕಾರಿಯವರಿಗೆ ನೀಡಲಾಗಿದ್ದ ಈ ಅಧಿಕಾರವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಪೋಳ್ಯ ಶ್ಯಾಂ ಭಟ್ ಎಂಬವರು ಸುಪ್ರೀಂ ಕೋರ್ಟ್‌ಗೆ 2014 ನೇ ಇಸವಿಯಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದರು. ಕುಮ್ಕಿ ಜಮೀನು ಸಂಪೂರ್ಣ ಕೃಷಿಕರಿಗೆ ಸೇರಿದ್ದಾಗಿದೆ. ಇದರಲ್ಲಿ ಸರಕಾರ ಅಧಿಕಾರ ಸ್ಥಾಪಿಸಲು ಸಾಧ್ಯವಿಲ್ಲ. ಕುಮ್ಕಿಯನ್ನು ವಿರಹಿತ ಪಡಿಸಲು ಸರಕಾರ ಜಿಲ್ಲಾಧಿಕಾರಿಯವರಿಗೆ ನೀಡಿರುವ ಅಧಿಕಾರ ಕೃಷಿಕರ ಹಕ್ಕನ್ನು ಕಸಿದುಕೊಂಡಂತೆ ಆಗುತ್ತದೆ. ಒಂದು ವೇಳೆ ಕುಮ್ಕಿ ಭೂಮಿಯನ್ನು ಸರಕಾರದ ವಶಕ್ಕೆ ನೀಡಬೇಕಾಗಿ ಬಂದರೆ ಸರಕಾರ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮೇಲ್ಮನವಿಯಲ್ಲಿ ವಾದಿಸಲಾಗಿತ್ತು.

ಸರಕಾರದ ವಾದ: ಕುಮ್ಕಿ ಜಮೀನು ಸರಕಾರಕ್ಕೆ ಸೇರಿದ ಭೂಮಿ, ಇದರ ಮೇಲೆ ಸರಕಾರಕ್ಕೆ ಪೂರ್ಣ ಹಕ್ಕಿದೆ. ಬಳಕೆಯಾಗದೆ ಇದ್ದ ಭೂಮಿಯನ್ನು ರೈತರು ಬಳಸಿಕೊಂಡರು ಎಂದ ಮಾತ್ರಕ್ಕೆ ಭೂಮಿಯ ಮೇಲೆ ರೈತರಿಗೆ ಹಕ್ಕಿದೆ ಎಂದಲ್ಲ. ಭೂಮಿಯನ್ನು ಬಳಸಿಕೊಳ್ಳಲು ಅವರಿಗೆ ವಿಶೇಷ ಅಧಿಕಾರ ನೀಡಲಾಗಿತ್ತು ಅಷ್ಟೆ. ಆದರೆ ಅದು ಆಸ್ತಿ ಹಕ್ಕಿನ ವ್ಯಾಪ್ತಿಗೆ ಬರುವುದಿಲ್ಲ. ಕರ್ನಾಟಕ ಭೂ ಸುಧಾರಣಾ ಕಾಯ್ದೆಯ ಸೆಕ್ಷನ್ 79 (2) ವ್ಯಾಪ್ತಿಯಲ್ಲಿ ವಿಶೇಷ ಆದೇಶ ಅಥವಾ ಸಾಮಾನ್ಯ ಆದೇಶ ಜಾರಿ ಮಾಡುವ ಮೂಲಕ ಶತಮಾನಗಳಿಂದ ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದ ರೈತರ ಕುಮ್ಕಿ ಹಕ್ಕನ್ನು ಜಿಲ್ಲಾಧಿಕಾರಿಯವರು ಮೊಟಕುಗೊಳಿಸಬಹುದು  ಎಂದು ಈಗಿನ ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿತ್ತು.

ಮೇಲ್ಮನವಿ ವಜಾ: ಶ್ಯಾಂ ಭಟ್‌ರವರ ಮೇಲ್ಮನವಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್ ಠಾಕೂರು ನೇತೃತ್ವದ ತ್ರಿ ಸದಸ್ಯ ಪೀಠವು, ಕುಮ್ಕಿ ಭೂಮಿಯ ಬಳಕೆಯ ಕುರಿತಂತೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬಹುದು ಎಂಬ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದು, ಈ ಆದೇಶದಲ್ಲಿ ಯಾವುದೇ ತಿದ್ದುಪಡಿ ಮಾಡಬೇಕೆಂದು ನಮಗೆ ಅನಿಸುತ್ತಿಲ್ಲ. ಹೀಗಾಗಿ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದು ತೀರ್ಪು ನೀಡಿದೆ. ಇದರಿಂದಾಗಿ ರಾಜ್ಯದ ವಿವಿಧೆಡೆ ಇರುವ 3-4  ಲಕ್ಷ ಕುಮ್ಕಿದಾರರು ಆತಂಕಕ್ಕೀಡಾಗಿದ್ದಾರೆ. ಈ ಸಂಬಂಧ ರಾಜ್ಯ ಸರಕಾರ ಮುಂದೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಕುತೂಹಲ ಸೃಷ್ಠಿಸಿದೆ.

ಕುಮ್ಕಿ ಎಂದರೆ ಏನು?:

ದ.ಕ, ಉಡುಪಿ, ಕೊಡಗು ಜಿಲ್ಲೆಗಳಲ್ಲಿ ಬ್ರಿಟಿಷ್ ಕಾಲದಲ್ಲಿ ಕದೀಂ ವರ್ಗದ ಜಮೀನು ಹೊಂದಿರುವ ರೈತರಿಗೆ ತನ್ನ ಕದೀಂ ವರ್ಗದ ಜಮೀನಿನ ಸುತ್ತಲು ಇರುವ ಸರಕಾರಿ ಭೂಮಿಯಲ್ಲಿ 450  ಲಿಂಕ್ಸ್ ವ್ಯಾಪ್ತಿಯಲ್ಲಿ ಕುಮ್ಕಿ ಸವಲತ್ತನ್ನು ನೀಡಲಾಗಿತ್ತು. ಸದ್ರಿ ಸವಲತ್ತನ್ನು ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ, ಸೊಪ್ಪು, ಕಟ್ಟಿಗೆ, ಹಸಿರೆಲೆ, ಗಿಡಗಂಟಿಗಳಿಗಾಗಿ ಉಪಯೋಗಿಸಿಕೊಳ್ಳುವ ಹಕ್ಕನ್ನು ಬ್ರಿಟಿಷ್ ಆಡಳಿತ ನೀಡಿತ್ತು. ಕುಮ್ಕಿ ಎಂಬುವುದು ಖಾಲಿ ಬಿದ್ದ ಭೂಮಿಯಾಗಿದ್ದರಿಂದ ಷರತ್ತಿನ ಅನ್ವಯ ಕೃಷಿ ಚಟುವಟಿಕೆ ನಡೆಸಲು ಭೂ ಮಾಲಿಕರಿಗೆ ಈ ಸವಲತ್ತು ನೀಡಲಾಗಿತ್ತು. ಆದರೆ ಕುಮ್ಕಿ ಜಮೀನಿನ ಅಧೀನತೆಯನ್ನು ಸರಕಾರವೇ ಹೊಂದಿತ್ತು. ರೈತರಿಗೆ ಕುಮ್ಕಿ ಜಮೀನಿನಲ್ಲಿ ಸೀಮಿತ ಹಕ್ಕನ್ನು ಮಾತ್ರ ನೀಡಲಾಗಿತ್ತು.  ಕುಮ್ಕಿ ಎಂಬುವುದು ಕದೀಂ ವರ್ಗದ ರೈತರಿಗೆ ನೀಡಲಾಗಿರುವ ವಿಶೇಷ ಸವಲತ್ತು, ಇದು ಪ್ರಾಪರ್ಟಿ ರೈಟ್ ಎಂದು ಸುಪ್ರೀಂ ಕೋರ್ಟ್ ಬಣ್ಣಿಸಿತ್ತು. ಆದರೆ ರೈತರಿಗೆ ಇಲ್ಲಿ ಸೀಮಿತ ಅಧಿಕಾರವಿದ್ದು, ಕೃಷಿ ಚಟುವಟಿಕೆ ನಡೆಸುವ ಮುನ್ನ ಶಾಸನ ಬದ್ಧ ನಿಯಮಗಳನ್ನು ರೈತರು ಅನುಸರಿಸಬೇಕಾಗುತ್ತದೆ ಎಂದು 1976 ರ ಚಂದ್ರ ಶೇಖರ ಅಡಿಗ ಪ್ರಕಟರಣದಲ್ಲಿ ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಇದರನ್ವಯ ಕುಮ್ಕಿ ಸವಲತ್ತು ಊರ್ಜಿತದಲ್ಲೇ ಇದೆ.

ಜಾರಿಯಾಗದ ಕರಡು ಅದಿಸೂಚನೆ

ಕುಮ್ಕಿ ಜಮೀನನ್ನು ಕದೀಂ ವರ್ಗದ ರೈತರಿಗೆ ನೀಡುವ ಕುರಿತು ದಿನಾಂಕ:೦8-೦2-2013 ರಂದು ನಂ.ಆರ್.ಡಿ 46  ಎಲ್.ಜಿ.ಪಿ. 2012 (ಪಿ-1) ರಂತೆ ಅಂದಿನ ಕರ್ನಾಟಕ ಸರಕಾರ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಕರಡು ಅದಿಸೂಚನೆಯನ್ನು ಹೊರಡಿಸಿತ್ತು. ನಂತರ ಹಾಲಿ ರಾಜ್ಯ ಸರಕಾರ ಈ ಕುರಿತಂತೆ ಸಂಪುಟ ಸಭೆಯಲ್ಲೂ ಮಂಜೂರಾತಿಗಾಗಿ ತೀರ್ಮಾನ ತೆಗೆದುಕೊಂಡಿತ್ತು. ಕಾನೂನು ಇಲಾಖೆಯ ಅನುಮೋದನೆಯನ್ನು ಪಡೆಯಲಾಗಿತ್ತು. ಆದರೆ ಇದುವರೇಗೆ ರಾಜ್ಯ ಸರಕಾರ ಕುಮ್ಕಿ ಜಮೀನನ್ನು ರೈತರಿಗೆ ನೀಡುವಲ್ಲಿ ಯಾವುದೇ ಸೂಕ್ತ ಕ್ರಮ ಕೈಗೊಂಡಿಲ್ಲ.

ಸಾರ್ವಜನಿಕ ಉದ್ದೇಶಗಳಿಗೆ ಬೇಕು

ಕುಮ್ಕಿಭೂಮಿಯ ಹಕ್ಕನ್ನು ರೈತರಿಗೆ ಕೊಟ್ಟರೆ ಅವರಿಗೆ ಅನುಕೂಲವೇನೋ ಆಗಬಹುದು. ಆದರೆ ಸರಕಾರಿ ಉದ್ದೇಶಗಳಿಗೆ ಬಳಸಿಕೊಳ್ಳಲು ಜಮೀನಿನ ಕೊರತೆ ಇದ್ದು, ಮುಂದೆ ಹಾಸ್ಟೆಲ್, ಆಸ್ಪತ್ರೆ, ನಿರ್ಮಾಣದಂತಹ ಸಾರ್ವಜನಿಕ ಉದ್ದೇಶಗಳಿಗೆ ಭೂಮಿಯೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣಗಬಹುದು. ಹೀಗಾಗಿ ಈ ಕುರಿತು ಎಚ್ಚರಿಕೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್‌ರವರು ವಿಧಾನ ಪರಿಷತ್‌ನಲ್ಲಿ ಹೇಳಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.