Breaking News

ಎತ್ತಿನ ಹೊಳೆ ಯೋಜನೆ ವಿರೋಧಿಸಿ ಪ್ರತಿಭಟನಾ ಸಭೆ : ಗ್ರಾಮ ಗ್ರಾಮಗಳನ್ನು ಸಂಪರ್ಕಿಸಿ ಸಂಘಟನೆ ಬಲಪಡಿಸಲು ನಿರ್ಣಯ

Puttur_Advt_NewsUnder_1
Puttur_Advt_NewsUnder_1

ettu20160110_103132 (1)

*ಯೋಜನೆಗೆ ಖರ್ಚಾಗಲಿದೆ ಊಹೆಗೂ ನಿಲುಕದ ದೊಡ್ಡ ಮೊತ್ತ:

*ವಿದೇಶಿ ಸಾಲಮುಂದಿನ ಪೀಳಿಗೆಗೆ ಮಾರಕ:

*ಮೇಲೆ ಡ್ಯಾಂಕೆಳಗೆ ಸುರಂಗ ಮಾರ್ಗ:

*ಜನರಿಗೆ ಮಣ್ಣೆರಚುವ  ಯೋಜನೆಗಳು:

*ಪೈಪ್‌ನಲ್ಲಿ ನೀರು ಹೋಗುವುದಿಲ್ಲವಾಹನ ಹೋಗುತ್ತದೆ

ಪುತ್ತೂರು:ಎತ್ತಿನ ಹೊಳೆ ಯೋಜನೆ ಕುಡಿಯುವ ನೀರಿನ ಯೋಜನೆಯಾಗಿರದೆ ಕೆರೆಗಳಲ್ಲಿ ನೀರನ್ನು ತುಂಬಿಸಿ ಮಾರಾಟ ಮಾಡುವ ಯೋಜನೆ ಎಂದು ಪರಿಸರ ತಜ್ಞ ಜೋಡುಮಾರ್ಗ ಸುಂದರ ರಾವ್ ಹೇಳಿದರು.

ಎತ್ತಿನ ಹೊಳೆ ಯೋಜನೆ ವಿರುದ್ಧ ಎತ್ತಿನಹೊಳೆ ಯೋಜನಾ ವಿರೋಧಿ ಜೀವ ಜಲ ಸಂರಕ್ಷಣಾ ಸಮಿತಿ ಪುತ್ತೂರು ವತಿಯಿಂದ ಇಲ್ಲಿನ ಪುರಭವನದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. ಯೋಜನೆಯ ಸಮಿತಿಯ 10 ಮಂದಿಯ ತಂಡ ಎತ್ತಿನ ಹೊಳೆಗೆ ಬಂದು ಸಮೀಕ್ಷೆ ನಡೆಸಿ ಇದೊಂದು ಕುಡಿಯುವ ನೀರಿನ ಯೋಜನೆ ಎಂದರು. ಆದರೆ ಯೋಜನೆ ಕುಡಿಯುವ ನೀರಿನ ಯೋಜನೆ ಅಲ್ಲವೆಂಬುದಕ್ಕೆ ಡಿಪಿಆರ್‌ನಲ್ಲಿ ಸಾಕಷ್ಟು ಸಾಕ್ಷಿಗಳಿವೆ.ಸಣ್ಣ ನೀರಾವರಿ ಕೆರೆಗಳಲ್ಲಿ ಬರುವ ಸುಮಾರು 500 ಕೆರೆಗಳನ್ನು ತುಂಬಿಸುವ ಕುರಿತು ಯೋಜನೆಯಲ್ಲಿ ಹೇಳಿದ್ದಾರೆ.ನೀರಾವರಿ ಇಲಾಖೆಯಲ್ಲಿ ಬರುವ ಎಲ್ಲಾ ಕೆರೆಗಳು ಕೃಷಿಗಾಗಿ ನೀರನ್ನು ಕೊಡುತ್ತವೆ ಹೊರತು ಕುಡಿಯಲು ಅಲ್ಲ. ಈ ಆಧಾರದಿಂದಾಗಿ ಇದು  ಕುಡಿಯುವ ನೀರಿನ ಯೋಜನೆ ಅಲ್ಲವೆಂಬುದು ಸ್ಪಷ್ಟವಾಗಿದೆ.ಕೆರೆಗಳಲ್ಲಿ ನೀರು ತುಂಬಿದಾಗ ಅಂತರ್‌ಜಲ ತುಂಬುತ್ತವೆ.ಇದರಿಂದ ಕೊಳವೆ ಬಾವಿಗಳಿಗೆ ನೀರು ತುಂಬುತ್ತವೆ. ಕೊಳವೆ ಬಾವಿಗಳ ಮೂಲಕ ಚಿಕ್ಕಬಳ್ಳಾಪುರ, ಬೆಂಗಳೂರು, ಕೋಲಾರಕ್ಕೆ ನೀರನ್ನು ಮಾರಾಟ ಮಾಡುವ ದಂಧೆಯೇ ಈ ಯೋಜನೆಯಲ್ಲಿ ಅಡಗಿದೆ.ಈ ನಿಟ್ಟಿನಲ್ಲಿ ಒಂದು ಹಂತದಲ್ಲಿ ಯೋಜನೆ ವಿರುದ್ಧ ಹೋರಾಟ ನಡೆಯುತ್ತಿದ್ದಂತೆ ಮತ್ತೊಂದು ಕಡೆಯಲ್ಲಿ ಯೋಜನೆ ಅನುಷ್ಠಾನದ ಪರವಾಗಿ ಸುಲಲಿತವಾದ ಕಾರ‍್ಯಕ್ರಮ ನಡೆಯುತ್ತಾ ಇದೆ ಎಂದವರು ಹೇಳಿದರು.

ಕೆ.ಎನ್.ಎನ್.ನಿಂದ ಕಾನೂನು ವಿರೋಧಿ ಕೆಲಸ: ಯೋಜನಾ ವರದಿಯಲ್ಲಿ ಯಾವ ವಿಷಯವನ್ನು ತೆಗೆಯದೆ ಅರಣ್ಯವನ್ನು ಕಡಿಯಬಹುದು ಎಂದು ಹೇಳಿದರು.ಆದರೆ ಇಲ್ಲಿ ಕಾನೂನು ಶರತ್ತನ್ನು ಉಲ್ಲಂಘನೆ ಮಾಡಿ ಮರ ಕಡಿಯಲಾಗಿದೆ. ಇದಕ್ಕೆ ಸಮಿತಿಯವರು ತೇಪೆ ಹಾಕುವ ದಂಡ ಹಾಕುತ್ತಾರೆ ಎಂದರು.

ಯೋಜನೆಗೆ ಖರ್ಚಾಗಲಿದೆ ಊಹೆಗೂ ನಿಲುಕದ ದೊಡ್ಡ ಮೊತ್ತ: ಇದು ರೂ.13 ಸಾವಿರ ಕೋಟಿ ರೂಪಾಯಿಯ ಯೋಜನೆಯಾಗಿದ್ದು 2018ರರಲ್ಲಿ ಮುಗಿಯತ್ತದೆ ಎಂದು ನೀರಾವರಿ ಸಚಿವ ಎಂ.ಬಿ.ಪಾಟೀಲ್‌ರವರು ತಿಳಿಸಿದ್ದಾರೆ.ಆದರೆ ಯೋಜನೆ ಪ್ರಪೋಸಲ್ ಕೊಡುವಾಗ 2020ರಲ್ಲಿ ಮುಗಿಯಲಿದೆ ಎಂದು ಹೇಳಲಾಗಿದೆ. ಸಮಿತಿಯ  ವರದಿಯಲ್ಲಿ 2023ರಲ್ಲಿ ಮುಗಿಯಲಿದೆ ಎಂದು ದಾಖಲಾಗಿದೆ.ಒಟ್ಟು 8 ವರ್ಷದಲ್ಲಿ ಎಲ್ಲರ ಊಹೆಗೂ ನಿಲುಕದ ದೊಡ್ಡ ಮೊತ್ತ ಯೋಜನೆಗೆ ಖರ್ಚಾಗಲಿದೆ ಎಂದು ಸುಂದರ ರಾವ್ ಹೇಳಿದರು.

ವಿದೇಶಿ ಸಾಲ ಮುಂದಿನ ಪೀಳಿಗೆಗೆ ಮಾರಕ: ಯೋಜನೆಗೆ ಅಷ್ಟೊಂದು ದೊಡ್ಡ ಮೊತ್ತ ಕೊಡಲು ಆರ್ಥಿಕ ಸಮಿತಿಯಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಸಹಭಾಗಿತ್ವ ಇದೆ ಎಂದು ತಿಳಿಸಲಾಗಿತ್ತು. ಆದರೆ ಬಳಿಕ ಕೇಂದ್ರ ಸರಕಾರದ ಪಾಲು ಇಲ್ಲವೆಂಬುದು ಮಾಹಿತಿ ಹಕ್ಕಿನ ಮೂಲಕ ತಿಳಿಯಿತು.ಆ ಬಳಿಕ ನೀರಾವರಿ ಸಚಿವರು ಇತ್ತೀಚೆಗೆ ಜಪಾನಿನ ಜೈಕಾ ಸಂಸ್ಥೆಯಿಂದ ಸಾಲ ಪಡೆಯಲಾಗಿದೆ ಎಂದರು.ಇದರಿಂದಾಗಿ ಸಾಲದ ಹೊರೆ ಹೆಚ್ಚಾಗಿ ನಮ್ಮ ಮಕ್ಕಳು, ಮೊಮ್ಮಕ್ಕಳು ನಮಗೆ ಆಸ್ತಿ ಮಾಡದಿದ್ದರೂ ಪರವಾಗಿರಲಿಲ್ಲ. ಸಾಲ ಮಾಡಿ ಇಟ್ಟದ್ದು ಯಾಕೆ ಎಂದು ಕೇಳುವ ಪರಿಸ್ಥಿತಿ ಬರಲಿದೆ ಎಂದು ಸುಂದರ ರಾವ್ ಹೇಳಿದರು.

ಮೇಲೆಡೇಮ್ ಕೆಳಗೆ ಸುರಂಗ ಮಾರ್ಗ: ಎತ್ತಿನ ಹೊಳೆ ಯೋಜನೆ ನಡೆಯುವ ಸಕಲೇಶಪುರ ಮಾರನಹಳ್ಳಿಯ ಎಡ ಮತ್ತು ಬಲ ಭಾಗದ ಸುತ್ತ 8 ಡ್ಯಾಮ್‌ಗಳು ನಿರ್ಮಾಣಗೊಂಡು.ಅದರ ಮೂಲಕ ನೀರನ್ನು ಸಂಗ್ರಹಿಸಿ ಮೇಲಕ್ಕೆ ಕೊಂಡೊಯ್ಯವ ಯೋಜನೆ ಒಂದು ಕಡೆಯಲ್ಲಿ ನಡೆದರೆ, ಇನ್ನೊಂದು ಕಡೆ ಅದೇ ಡ್ಯಾಮ್‌ಗಳ ಕೆಳಗೆ ಶಿರಾಡಿ ರಸ್ತೆಗೆ ಸುರಂಗ ತೋಡುವ ಯೋಜನೆಯೂ ಇದೆ. ಈ ಎರಡೂ ಯೋಜನೆಯಿಂದ ಭೂಕುಸಿತ ಉಂಟಾದರೆ ಬಹುದೊಡ್ಡ ಸಮಸ್ಯೆ ಉಂಟಾಗಲಿದೆ ಎಂದು ಹೇಳಿದ ಸುಂದರ್ ರಾವ್‌ರವರು ಎರಡೂ ಯೋಜನೆಗೂ ಜಪಾನಿನ ಜೈಕಾ ಸಂಸ್ಥೆ ಸಾಲ ನೀಡುತ್ತಿದೆ ಎಂದರಲ್ಲದೆ ಒಟ್ಟಿನಲ್ಲಿ ಕರ್ನಾಟಕವನ್ನು ಜಪಾನಿಗೆ ಅಡವಿಡಲು ಹೋಗುವ ಸಂಭವ ಹೆಚ್ಚಾಗಿದೆ.ಒಂದು ಕಡೆ ಕಾಡು ಬೆಳೆಸಿ ಪರಿಸರ ಉಳಿಸಿ ಎಂದು ಹೇಳುತ್ತಿದ್ದರೆ ಇನ್ನೊಂದು ಕಡೆ ಕಾಡು ಕಡಿದು ನೀರು ಬರಿಸುವ ಯೋಜನೆಗೆ ಸರಕಾರ ಕೈ ಹಾಕಿದೆ ಎಂದರು.

..ಜಿಲ್ಲೆಗೇ ಅನ್ಯಾಯ:ಡಾ|ತಾಳ್ತಜೆ

ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಧ್ಯಾಪಕ ಡಾ| ತಾಳ್ತಜೆ ವಸಂತ ಕುಮಾರ್ ಮಾತನಾಡಿ ಮಹದಾಯಿ ಯೋಜನೆ, ಕೃಷ್ಣ ಜಲಭಾಗ್ಯ ನಿಗಮ, ನೀರು ಹಂಚಿಕೆ, ದ.ಕ.ಕಾವೇರಿ ನದಿ ನೀರು ಹಂಚಿಕೆ ವಿಚಾರ ಗಮನಿಸಿದಾಗ ಎಲ್ಲಾ ಸಂದರ್ಭದಲ್ಲೂ ಕರ್ನಾಟಕಕ್ಕೆ ಅತ್ಯಂತ ಗರಿಷ್ಠ ಪ್ರಮಾಣದ ಅನ್ಯಾಯವಾಗಿದೆ.ಇದೀಗ ಎತ್ತಿನ ಹೊಳೆ ಯೋಜನೆಯಲ್ಲೂ ದ.ಕ.ಜಿಲ್ಲೆಗೂ ಅನ್ಯಾಯವಾಗಲಿದೆ.ಕೇವಲ 10 ಹಾರ‍್ಸ್‌ನ 5 ಪಂಪ್ ಚಾಲೂ ಮಾಡುವ ಹಳ್ಳದಲ್ಲಿ ಮಾಲೆ ರೂಪದ ಅಣೆಕಟ್ಟು ಕಟ್ಟಿದ್ದರೆ ಪರಿಸ್ಥಿತಿ ಏನಾಗಬಹುದು ಎಂದು ಯೋಚಿಸಬೇಕಾಗಿದೆ.ದ.ಕ.ಜಿಲ್ಲೆಯ ಜನರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಒಕ್ಕೊರಳಿನಿಂದ ಎಚ್ಚೆತ್ತುಕೊಳ್ಳದಿದ್ದರೆ ಸಮಸ್ಯೆಗೆ ಸಿಕ್ಕಿಕೊಳ್ಳುತ್ತೇವೆ : ಅಧಿಕಾರಿ ವರ್ಗದವರಿಂದ ತೊಡಗಿ ಇತ್ತ ನಮ್ಮನ್ನು ಆಳುವ ವರ್ಗದ ತನಕ ಎಲ್ಲ ಕಡೆ ಭ್ರಷ್ಟಾಚಾರದ ವಾತಾವರಣ ಇರುವುದರಿಂದ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ.ಪಕ್ಷ ಭೇದ ತೊರೆದು ಎತ್ತಿನ ಹೊಳೆ ಯೋಜನೆ ವಿರುದ್ಧ ಒಕ್ಕೊರಳಿನಿಂದ ಹೋರಾಟ ನಡೆಸಬೇಕಾಗಿದೆ ಎಂದು ಡಾ|ತಾಳ್ತಜೆ ವಸಂತ ಕುಮಾರ್ ಹೇಳಿದರು.ಇಲ್ಲಿ ಒಂದು ತರ ಹೇಳಿಕೆ ನೀಡುವ ಅಲ್ಲಿ ಒಂದು ತರ ಮಾತನಾಡುವ ರಾಜಕಾರಣಿಗಳನ್ನು ಬಿಟ್ಟು ಬಿಡೋಣ.ರಾಜಕಾರಣಿಗಳು ಗೂಬೆ ಕೂರಿಸುವಲ್ಲೇ ಕಾಲ ಕಳೆಯುತ್ತಾರೆ.ಅವರು ನಮ್ಮ ನೈಜ ಉದ್ದೇಶವನ್ನು ಕೂಡಾ ಹೈಜ್ಯಾಕ್ ಮಾಡಿ ಆಪಾರ್ಟಿಗೆ ಕ್ರೆಡಿಟ್ ತರುವ ಕುರಿತು ಯೋಚನೆ ಮಾಡುತ್ತಾರೆ ನಮ್ಮ ಸುತ್ತ ಅವರೇ ತುಂಬಿದ್ದಾರೆ.ಯೋಜನೆಯ ಹಣವನ್ನು ಎಷ್ಟೆಷ್ಟು ತಮ್ಮ ಕಿಸೆಗೆ ತುಂಬಿಸಬಹುದು ಎಂಬುದೊಂದೇ ಅವರ ಲೆಕ್ಕಾಚಾರ.ಇದು ಕೇವಲ ಪುತ್ತೂರಿಗೆ ಸಂಬಂಧಿಸಿದ ಹೋರಾಟವಲ್ಲವೆಂದರಲ್ಲದೆ ಪ್ರಕೃತಿ ವಿರುದ್ಧ ನಡೆಯುವ ಕೆಲಸಕ್ಕೆ ನಮ್ಮ ಸಹಮತಿ ಇಲ್ಲ ಎಂದರು.

ನೇತ್ರಾವತಿ ತಿರುವು ಯೋಜನೆಯ ಸಣ್ಣ ಕೂಸು: ಡಾ|ಶ್ರೀಶ ಕುಮಾರ್: ವಿವೇಕಾನಂದ ಕಾಲೇಜಿನ ಉಪನ್ಯಾಸಕ ಡಾ| ಶ್ರೀಶಕುಮಾರ್ ಮಾತನಾಡಿ ಸರಕಾರ ನಮ್ಮನ್ನು ನೇರವಾಗಿ ಕೊಲ್ಲದೆ ದೇಹದ ಅಂಗಾಂಗಳನ್ನು ಒಂದೊಂದಾಗಿ ಕತ್ತರಿಸಿ ಕೊಲ್ಲುತ್ತಿದೆ.2003ರಲ್ಲಿ ಲೋಕೋಪಯೋಗಿ ಇಲಾಖೆಯ ನಿವೃತ್ತ ಇಂಜಿನಿಯರ್ ಪರಮಶಿವಯ್ಯ ಎಂಬವರು ಕೋಲಾರ, ದೊಡ್ಡಬಳ್ಳಾಪುರ ಜಿಲ್ಲೆಗಳಿಗೆ ಕುಡಿಯಲು ನೀರಿನ ಯೋಜನೆಗೆಂದು ಸಲ್ಲಿಸಿದ್ದ ನೇತ್ರಾವದಿ ನದಿ ತಿರುವು ಯೋಜನೆ ಅದ್ಭುತ ಎಂದು ಸರಕಾರ ಹೇಳಿತ್ತಾದರೂ ಇದರಿಂದ ಜನತೆ ಪೂರ್ಣಪ್ರಮಾಣದಲ್ಲಿ ಗೊಂದಲಕ್ಕೊಳಗಾಗುವ ದ.ಕ.ಜಿಲ್ಲೆ ಮಾತ್ರ ಎಚ್ಚೆತ್ತುಕೊಳ್ಳಲಿಲ್ಲ.2003ರ ಜೂ.5ಕ್ಕೆ ಪುತ್ತೂರಿನಲ್ಲಿ ಮೊದಲ ಪ್ರತಿಭಟನೆ ಆಗಿತ್ತು.ಕುಮಾರಧಾರ ಉಳಿಸಿ ಆಂದೋಲನ ಜೀವ ಜಲ ಕುರಿತು ಫಿಲೋಮಿನಾ ರೋವರ್ ರೇಂಜರ‍್ಸ್ ಪ್ರತಿಭಟನೆ ನಡೆಸಿತ್ತು.2004ರಲ್ಲಿ ಮತ್ತೆ ಪುತ್ತೂರಿನಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ನಡೆಯಿತು.ಆಗ ಎಲ್ಲರೂ ನಮಗೆ ಹುಚ್ಚು ಎಂದರು.ನೇತ್ರಾವತಿ ನದಿ ತಿರುವು ಯೋಜನೆ ಹೇಗಿರುತ್ತದೆ ಎಂಬುದನ್ನು ಡಿವಿಡಿ ಮೂಲಕ ಪುತ್ತೂರಿನ ಪುರಭವನದಲ್ಲಿ ಪ್ರದರ್ಶಸಲಾಗಿತ್ತು.ಇಡೀ ಯೋಜನೆ ಹೇಗೆ ಬರುತ್ತದೆ ಎಂಬುದರ ಜೊತೆಗೆ ದ.ಕ.ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯುತ್ತಾ ಹೋದ ಹಾಗೆ ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ಪ್ರಾಣವಾದರೂ ಕೊಟ್ಟೇನು ನೇತ್ರಾವತಿ ನದಿ ತಿರುಗಿಸಲು ಬಿಡುವುದಿಲ್ಲ ಎಂದಿದ್ದರು.ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆದ ಬಳಿಕ ನೇತ್ರಾವತಿ ತಿರುವು ಯೋಜನೆ ಬಿಟ್ಟು ಅದರ ಇನ್ನೊಂದು ಸಣ್ಣ ಕೂಸಾಗಿ ಬಂದಿದ್ದು ಎತ್ತಿನ ಹಳ್ಳ ಯೋಜನೆ ಎಂದರು.

ಜನರಿಗೆ ಮಣ್ಣೆರೆಚುವ ಯೋಜನೆಗಳು: ಕುಡಿಯುವ ನೀರು ಸರಬರಾಜು ಮಂಡಳಿಯಿಂದ ಕುಡಿಯುವ ನೀರಿನ ಯೋಜನೆ ಆಗಬೇಕು. ಆದರೆ ಇಲ್ಲಿ ಕೃಷಿಗೆ ಪೂರಕವಾದ ಯೋಜನೆ ರೂಪಿಸುವ ಕರ್ನಾಟಕ ನೀರಾವರಿ ನಿಗಮ ಯೋಜನೆಯನ್ನು ಕೈಗೆತ್ತಿಕೊಂಡಿದೆ.ಈ ನಿಟ್ಟಿನಲ್ಲಿ ಯೋಜನೆ ಸಂಪೂರ್ಣ ಕೃಷಿಗೆ, ಕುಡಿಯುವ ನೀರಿಗಾಗಿ ಅಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಡಾ| ಶ್ರೀಶಕುಮಾರ್ ಹೇಳಿದರು.ಇಂತಹ ಯೋಜನೆಗಳ ಮೂಲಕ ಲಾಭ ಪಡೆಯುವುದು ಕೈಗಾರಿಕಾ ಸಂಸ್ಥೆಗಳು. ಜೊತೆಗೆ ರಾಜಕಾರಣಿಗಳು ಮತ್ತು ಕನ್‌ಸ್ಟ್ರಕ್ಷನ್‌ಗಳಿಗೆ ಲಾಭವಾಗಲಿದೆ.ಈ ನಿಟ್ಟಿನಲ್ಲಿ ಇದೊಂದು ‘ಅಳಿಯ ಅಲ್ಲ ಮಗಳ ಗಂಡ’ಯೋಜನೆಯಾಗಿದೆ ಎಂದರು.

ಪೈಪ್‌ನಲ್ಲಿ ನೀರು ಹೋಗುವುದಿಲ್ಲ ವಾಹನ ಹೋಗುತ್ತದೆ: ಕರ್ನಾಟಕದಲ್ಲಿ 40 ಸಾವಿರ ಕೆರೆಗಳಿದ್ದುವು ಎಂಬುದು ಇವತ್ತು ಇತಿಹಾಸ.ಸುಮಾರು 12 ಸಾವಿರ ಕೆರೆಗಳು ಕೋಲಾರದಲ್ಲಿತ್ತು.ಕೋಲಾರದ ಜನಪದಹಾಡು ಅಲ್ಲಿದ್ದ ಕೆರೆಗಳ ಮಾಹಿತಿ ಕೊಡುತ್ತದೆ. ಶ್ರೀಮಂತ ಕೋಲಾರದಲ್ಲಿ ಕುಡಿಯಲು ನೀರಿಲ್ಲ ಎಂಬುದು ಯಾಕೆ ಬಂತೆಂದರೆ ಅದು ಕೋಲಾರದವರು ಮಾಡಿಕೊಂಡ ಸ್ವಯಂಕೃತ ಅಪರಾಧದಿಂದ.ಕೆರೆಗಳು ಮುಚ್ಚಿ ಅದರ ಮೇಲೆ ಬಸ್‌ಸ್ಟೇಂಡ್,ಸೈಟ್‌ಗಳು, ಕಟ್ಟಡಗಳು ಆಗಿವೆ. ಅದರ ಬದಲು ಅದೇ ಕೆರೆಗಳನ್ನು ಪುನಶ್ಚೇತನ ಮಾಡಿದರೆ ಕೋಲಾರಕ್ಕೆ ಶಾಶ್ವತ ನೀರಿನ ಯೋಜನೆ ಕೊಡಲು ಸಾಧ್ಯವಿದೆ.ಎತ್ತಿನ ಹೊಳೆ ಯೋಜನೆಯಿಂದ ಅಲ್ಲಿಗೆ ನೀರು ಕೊಂಡೊಯ್ಯುವ ಯೋಜನೆಗೆ ರೂ.೧೩,೦೦೦ ಕೋಟಿ ಖರ್ಚು, ಕಾಮಗಾರಿ ಮುಗಿಯುವ ವೇಳೆ ಸುಮಾರು ರೂ.೪೦ ಸಾವಿರ ಕೋಟಿ ಖರ್ಚಾಗಬಹುದು.ಆದರೆ ಆ ಪೈಪ್‌ನಲ್ಲಿ ನೀರು ಹೋಗುವುದಿಲ್ಲ,ಸಕಲೇಶ್‌ಪುರದಿಂದ ಬೆಂಗಳೂರಿಗೆ ಪೈಪ್ ಲೈನ್‌ಗೆ ಒಳ್ಳೆಯ ವ್ಯವಸ್ಥೆ ಮಾಡಿದರೆ ಅದರೊಳಗೆ ವಾಹನ ಓಡಾಟಕ್ಕೆ ಅವಕಾಶ ಕಲ್ಪಿಸಬಹುದು.ಒಂದು ವೇಳೆ ಪ್ರಾಜೆಕ್ಟ್ ಮುಗಿದು ನೀರು ಹೋಗುತ್ತದೆ ಎಂದಾದರೆ ೧೦ ವರ್ಷದಲ್ಲಿ ದ.ಕ.ಜಿಲ್ಲೆ ಮರುಭೂಮಿ ಆಗುವುದು ಗ್ಯಾರೆಂಟಿ.ಇಲ್ಲವಾದಲ್ಲಿ ನಾವು ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಬೇಕು.ನಮ್ಮ ಮಕ್ಕಳು ಶುದ್ದ ನೀರು-ಗಾಳಿ ಸ್ವೀಕಾರ ಮಾಡಬೇಕು ಎಂಬ ಆಸೆ ಇದ್ದರೆ ಎತ್ತಿನ ಹೊಳೆ, ನೇತ್ರಾವತಿ ಯೋಜನೆಯನ್ನು ವಿರೋಧಿಸುವ ಎಂದರು.

ಪಕ್ಷಗಳ ಆರೋಪ ಪ್ರತ್ಯಾರೋಪ ವಿಷಾದನಿಯ: ಪುತ್ತೂರು ನಗರಸಭೆಯಲ್ಲಿ 53 ಸಾವಿರ  ಜನಸಂಖ್ಯೆ ಇದ್ದಾರೆ. ಅವರೆಲ್ಲಾ ನೇತ್ರಾವತಿ, ಕುಮಾರಧಾರ ನದಿಯ ನೀರನ್ನೇ ಅವಲಂಬಿಸಿದ್ದಾರೆ.ಕೆಲವರಿಗೆ ಬಾವಿ ಕೆರೆಗಳಿದ್ದರೂ ನೀರಿನ ಸಂಪನ್ಮೂಲ ನೇತ್ರಾವದಿ ನದಿ ಎಂಬುದು ನೆನಪಿಟ್ಟುಕೊಳ್ಳಬೇಕು.ಈ ನಿಟ್ಟಿನಲ್ಲಿ ಪುತ್ತೂರಿಗೆ ನೇತ್ರಾವದಿ ನದಿ ಶ್ರೀರಕ್ಷೆ ಇದ್ದಂತೆ ಎಂದು ಹೇಳಿದ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರುರವರು ಎತ್ತಿನ ಹೊಳೆ ಯೋಜನೆ ವಿರುದ್ಧ ಪಕ್ಷ ಭೇದ ಮರೆತು ಹೋರಾಟ ಮಾಡಬೇಕು.ರಾಜಕೀಯ ಪಕ್ಷಗಳು ಆರೋಪ ಪ್ರತ್ಯಾರೋಪ ಮಾಡುವುದರಲ್ಲೇ ನಿರತವಾಗಿರುವುದು ವಿಷಾಧನೀಯವಾಗಿದೆ ಎಂದರು.

ತಾಲೂಕಿನಲ್ಲೇ ಬೃಹತ್ ಹೋರಾಟ ನಡೆಸಬೇಕು: ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳನ್ನು ಸಂಪರ್ಕಿಸಬೇಕಾಗಿದೆ.ಬಳಿಕ ಸಮಾಲೋಚನಾ ಸಭೆ ನಡೆಸಬೇಕು.ಇನ್ನೊಬ್ಬರ ಕುರಿತು ಯೋಚನೆ ಮಾಡದ ಸಂಘಟನೆ ಇದಾಗಬಾರದು.ಬೇರೆ ಬೇರೆ ರೀತಿಯಲ್ಲಿ ಎಲ್ಲರನ್ನು ಸಂಪರ್ಕ ಮಾಡಿ ಸಂಘಟನೆ ಬಲಪಡಿಸಿ, ಯೋಜನೆಯ ದುಷ್ಪರಿಣಾಮಗಳನ್ನು ತಿಳಿಸುವ ಕೆಲಸ ಆಗಬೇಕು ಎಂದು ಸಮಿತಿ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಹೇಳಿದರು.ಸಮಿತಿ ಉಪಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಸ್ವಾಗತಿಸಿ, ನಿರತ ನಿರಂತ ಸಂಚಾಲಕ ಐ.ಕೆ.ಬೊಳುವಾರು ವಂದಿಸಿದರು.ಕೋಶಾಧಕಾರಿ ಬಿ.ಪುರಂದರ ಭಟ್ ಕಾರ‍್ಯಕ್ರಮ ನಿರೂಪಿಸಿದರು.

ಗ್ರಾಮ ಗ್ರಾಮದಲ್ಲಿ ಸಂಘಟನೆ ಬಲಪಡಿಸಬೇಕು

ರಾಜಕೀಯವಾಗಿ ನಡೆಯಬೇಕಾದ ವಾತಾವರಣ ಇಲ್ಲಿ ನ್ಯಾಯಯುತವಾಗಿ ನಡೆದಿಲ್ಲ. ನಾವು ನಮ್ಮ ಸಂವಿಧಾನದತ್ತವಾದ ವಾಕ್‌ಸ್ವಾತಂತ್ರ್ಯವನ್ನು ಸದುಪಯೋಗ ಮಾಡಿಕೊಳ್ಳಬೇಕಾಗಿದೆ. ಗ್ರಾಮ ಗ್ರಾಮಗಳಲ್ಲಿ ಸಂಘಟನೆ ಬಲಪಡಿಸಬೇಕಾಗಿದೆ. ರಾಜಕೀಯ ಪಕ್ಷಗಳು ಮೌಲ್ಯಯುತವಾಗಿಲ್ಲ.ಈ ನಿಟ್ಟಿನಲ್ಲಿ ಸಂಘಟನೆಯ ಮೂಲಕವಾದರೂ ನಾವು ನಮ್ಮನ್ನು ರಕ್ಷಿಸಿಕೊಳ್ಳಬೇಕಾಗಿದೆ. ಯೋಜನೆಯಿಂದಾಗುವ ತೊಂದರೆಗಳ ಕುರಿತು ಚೆನೈಯ ಹಸಿರು ಪೀಠಕ್ಕೆ ಮನವಿ ಮಾಡಿದ ಪುತ್ತೂರು ನಗರಸಭೆಗೆ ಮತ್ತು ಅದನ್ನು ಸಭೆಯಲ್ಲಿ ಪ್ರಸ್ತಾಪ ಮಾಡಿದ ರಾಜೇಶ್ ಬನ್ನೂರುರವರಿಗೆ ಕೃತಜ್ಞತೆಗಳು.

ಬಿ.ಪುರಂದರ ಭಟ್, ಕೋಶಾಧಿಕಾರಿ

ಎತ್ತಿನ ಹೊಳೆ ಯೋಜನಾ ವಿರೋಧಿ ಜೀವಜಲ ಸಂರಕ್ಷಣಾ ಸಮಿತಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.