ಬಲಾತ್ಕಾರದ ಬಂದ್, ಗಲಭೆಗಳನ್ನು ಬೆಂಬಲಿಸುವವರನ್ನು ಶಿಕ್ಷೆಗೆ ಗುರಿಪಡಿಸಿ, ಬಹಿಷ್ಕರಿಸಿ, ಅತ್ಯಾಚಾರಕ್ಕೆ ಸಮನಾದ ಆ ಬಂದ್‌ಗಳನ್ನು ವೈಭವೀಕರಿಸದೆ, ಸಮರ್ಥಿಸದೇ- ತೊಂದರೆಗೊಳಗಾದ ಜನಸಾಮಾನ್ಯರ ರಕ್ಷಣೆಗೆ ನಿಲ್ಲಲು ಮಾಧ್ಯಮಗಳಿಗೆ ಕರೆ

Puttur_Advt_NewsUnder_1
Puttur_Advt_NewsUnder_1
ಡಾ.ಯು.ಪಿ.ಶಿವಾನಂದ ಸಂಚಾಲಕರು ಸುದ್ದಿ ವೇದಿಕೆ
ಡಾ.ಯು.ಪಿ.ಶಿವಾನಂದ
ಸಂಚಾಲಕರು ಸುದ್ದಿ ವೇದಿಕೆ

‘ಸುದ್ದಿ ವೇದಿಕೆ’ಯ ವತಿಯಿಂದ ಪುತ್ತೂರು, ಸುಳ್ಯ, ಬೆಳ್ತಂಗಡಿಗಳಲ್ಲಿ ಪ್ರಾರಂಭವಾದ ಬಲಾತ್ಕಾರದ ಬಂದ್, ಕೋಮು ಯಾ ಯಾವುದೇ ಗಲಭೆ ವಿರುದ್ಧದ ಆಂದೋಲನ ಇಡೀ ತಾಲೂಕುಗಳಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲಿ-ರಾಜ್ಯದಲ್ಲಿ ಪ್ರತಿಧ್ವನಿಸಿದೆ. ಜಿಲ್ಲಾಡಳಿತ, ಹಲವು ಸಂಘಟನೆಗಳು ಮತ್ತು ಮಾಧ್ಯಮಗಳು ದ.ಕ. ಜಿಲ್ಲೆಯನ್ನು ಬಂದ್ ಮತ್ತು ಕೋಮು ಗಲಭೆ ಮುಕ್ತ ಜಿಲ್ಲೆಯನ್ನಾಗಿಸುವ ಸುದ್ದಿ ವೇದಿಕೆಯ ಪ್ರಯತ್ನಕ್ಕೆ ತಮ್ಮದೇ ಆದ ರೀತಿಯಲ್ಲಿ ಬೆಂಬಲ ನೀಡಿವೆ.

‘ಸುದ್ದಿ ವೇದಿಕೆ’ ಪುತ್ತೂರು, ಸುಳ್ಯ, ಬೆಳ್ತಂಗಡಿ, ಮಂಗಳೂರು ಮತ್ತು ಬೆಂಗಳೂರುಗಳಲ್ಲಿ ಮಾಧ್ಯಮಗಳ ಮುಂದೆ ಈ ಆಂದೋಲನದ ಉದ್ದೇಶವನ್ನು ವಿವರಿಸಿ ಬೆಂಬಲವನ್ನು ಕೇಳಿದೆ. ರಾಜ್ಯದಲ್ಲಿ ಅತ್ಯಂತ ಕೋಮುಸೂಕ್ಷ್ಮ, ಬಂದ್, ಗಲಭೆ ಕೇಂದ್ರವಾದ ಪುತ್ತೂರಿನಲ್ಲಿ ತೊಂದರೆಗೊಳಗಾದ ಸಾಮಾನ್ಯ ಜನತೆ ಆಂದೋಲನಕ್ಕೆ ನೀಡುತ್ತಿರುವ ಪ್ರೋತ್ಸಾಹ, ಜನನಾಯಕರು ನೀಡುತ್ತಿರುವ ಬೆಂಬಲ ಮಾತ್ರವಲ್ಲ ತೊಂದರೆಗೆ ಒಳಗಾದವರಿಗೆ ರಕ್ಷಣೆಯ ಭರವಸೆ ಹಾಗೂ ಅಲ್ಲಲ್ಲಿ ಬಂದ್ ವಿರೋಧಿ ಫಲಕಗಳ ಅಳವಡಿಕೆ ಅವರಿಗೆಲ್ಲಾ ಆಶ್ಚರ್ಯ ತಂದಿದೆ. ಈ ನಡುವೆ ಮಂಗಳೂರಿನಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಕರೆದ ಸಭೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು, ಪಕ್ಷಗಳ ಸಂಘಟನೆಯ ಮುಖಂಡರು, ವಿವಿಧ ಸಂಸ್ಥೆಯವರು ಭಾಗವಹಿಸಿ ಚರ್ಚಿಸಿದ್ದಾರೆ. ಬಲಾತ್ಕಾರದ ಬಂದ್, ಕೋಮು ಗಲಭೆ ಬೇಡ ಎಂಬ ಸುದ್ದಿ ವೇದಿಕೆಯ ಘೋಷಣೆ ಅಲ್ಲಿ ಮೊಳಗಿದೆ. ಮರುದಿನ ಮಂಗಳೂರಿನ ಪತ್ರಿಕಾ ಮಾಧ್ಯಮದವರು ಮತ್ತು ಜಿಲ್ಲಾಡಳಿತ ನಡೆಸಿದ ಕೋಮು ಗಲಭೆ ಮುಕ್ತ ಜಿಲ್ಲೆಯ ಅದಾಲತ್‌ನಲ್ಲಿ ಧಾರ್ಮಿಕ ಮುಖಂಡರುಗಳು, ಅಧಿಕಾರಿಗಳು, ನಿವೃತ್ತ ನ್ಯಾಯಮೂರ್ತಿಗಳು ಪತ್ರಕರ್ತರು ಭಾಗವಹಿಸಿ ಕೋಮುಗಲಭೆಗಳಿಗೆ ಕಾರಣರಾಗದೇ ಶಾಂತಿ ಸೌಹಾರ್ದತೆಯಿಂದ ಬಾಳಲು ಕರೆಕೊಟ್ಟಿದ್ದಾರೆ.

ಅತ್ಯಾಚಾರಕ್ಕೆ ಸಮನಾದ ಬಲಾತ್ಕಾರದ ಬಂದ್ ಯಶಸ್ವಿ ಎಂದರೆ ಏನಾದೀತು?

ಇಷ್ಟರವರೆಗೆ ಆಗಿರುವ ಬಲಾತ್ಕಾರದ ಬಂದ್‌ಗಳು ಯಶಸ್ವಿ ಎಂದು ಕರೆದು ಅದಕ್ಕೆ ಅಪೂರ್ವ ಜನಬೆಂಬಲ ಎಂದು ಬಣ್ಣಿಸಿ ಬಂದ್ ಗಲಭೆಗಳನ್ನು ನಾವೆಲ್ಲಾ ಮಾಧ್ಯಮದವರು, ನಾಯಕರು ವೈಭವೀಕರಿಸಿದ್ದೇವೆ. ಬಂದ್, ಹಾನಿ ಮಾಡಿದವರು ಮಾಧ್ಯಮಗಳ ಮುಂದೆ ಬಂದು ತಮ್ಮ ದುಷ್ಕೃತ್ಯಗಳನ್ನು ಸಮರ್ಥಿಸಿಕೊಂಡು ಹೀರೋಗಳಾಗಿ ಮೆರೆದಿದ್ದಾರೆ. ಬಲಾತ್ಕಾರದ ಬಂದ್ ಕಾನೂನು ಬಾಹಿರ ಅದು ಅತ್ಯಾಚಾರಕ್ಕೂ ಮಿಗಿಲಾದುದು ಎಂದು ಸುಪ್ರಿಂಕೋರ್ಟ್ ಹೇಳಿರುವಾಗ ಇಲ್ಲಿ ಬಲಾತ್ಕಾರದ ಬಂದ್ ಯಶಸ್ವಿ ಅದಕ್ಕೆ ಅಪೂರ್ವ ಜನ ಬೆಂಬಲ ಇದೆ ಅಂದರೆ ಸಾಮೂಹಿಕ ಅತ್ಯಾಚಾರ ಯಶಸ್ವಿ ಅದಕ್ಕೆ ಅಪೂರ್ವ ಜನ ಬೆಂಬಲವಿದೆ ಎಂದು ಹೇಳಿದಂತಾಗುವುದಿಲ್ಲವೇ…? ಡೆಲ್ಲಿಯ ನಿರ್ಭಯ ಕೇಸಿನಲ್ಲಿ ಅತ್ಯಾಚಾರ ಮಾಡಿದವರಿಗೆ ಗಲ್ಲುಶಿಕ್ಷೆಯಾಗಬೇಕೆಂದು ಮಾಧ್ಯಮದವರು ಸೇರಿ ಎಲ್ಲರೂ ವಾದಿಸಿರುವಾಗ ನಾವು ಇಲ್ಲಿ ಕೂಡ ತೊಂದರೆಗೊಳಗಾದ ಜನರ ಪರ ನಿಂತು – ಬಲಾತ್ಕಾರದ ಬಂದ್ ಮಾಡುವುದರ ಮೂಲಕ ಜನರಿಗೆ ಅನ್ಯಾಯ ಮಾಡಿದವರಿಗೆ (ಅತ್ಯಾಚಾರ ಮಾಡಿದವರಿಗೆ) ಶಿಕ್ಷೆಯಾಗಬೇಕೆಂದು ವಾದಿಸಬೇಕಲ್ಲವೇ. ಅದರ ಬದಲು ಬಂದ್‌ಗೆ ಕಾರಣರಾದವರಿಗೆ ಹೆಚ್ಚು ಪ್ರೋತ್ಸಾಹ ಕೊಟ್ಟರೆ ಏನಾಗಬಹುದು ಎಂದು ಹೇಳಬೇಕು. ಇನ್ನು ಮುಂದೆ ಮಾಧ್ಯಮದವರು  ಜನನಾಯಕರು ಬಲಾತ್ಕಾರದ ಬಂದ್ ಕೋಮು ಯಾ ಯಾವುದೇ ಗಲಭೆಗಳಿಗೆ ಬೆಂಬಲವಿಲ್ಲ ಎಂದು ನಿರ್ಧಾರ ಮಾಡಿದರೆ ಅವುಗಳು ನಿಲ್ಲುವುದು ಮಾತ್ರವಲ್ಲ ಕಾರಣಕರ್ತರಿಗೆ ಶಿಕ್ಷೆಯಾಗಿ ಅವರು ಬಹಿಷ್ಕಾರಗೊಳ್ಳುವುದು ಖಂಡಿತ. ಅದಕ್ಕಾಗಿ ಬಲಾತ್ಕಾರದ ಬಂದ್ ಗಲಭೆಗಳಾದಾಗ ಅದಕ್ಕೆ ಕರೆಕೊಟ್ಟವರು, ಕಾರಣಕರ್ತರಾದವರ ಮತ್ತು ಅದರ ಬೆಂಬಲಿಗರ ಕೃತ್ಯಗಳನ್ನು ಫೋಟೋ ದಾಖಲೆ ಸಹಿತ ಸಂಗ್ರಹಿಸಿ ಮಾಧ್ಯಮಗಳಲ್ಲಿ ಪ್ರಕಟಿಸಬೇಕು. ಪೊಲೀಸರಿಗೆ ಆ ಮಾಹಿತಿ ನೀಡಬೇಕು. ಹೆದರಿ ಬಂದ್ ಮಾಡಿ ತೊಂದರೆಗೊಳಗಾದ ನಿರಪರಾಧಿ ಜನರ, ಕೂಲಿ ಕೆಲಸ, ದಿನ ವ್ಯವಹಾರ ಮಾಡಿ ಬದುಕುವವರ, ರೋಗಿಗಳ, ವಿದ್ಯಾರ್ಥಿಗಳ ಹಾಗೆಯೇ ಹಾನಿಗೊಳಗಾದವರ ಬಳಿ ತೆರಳಿ ಅವರ ಪರಿಸ್ಥಿತಿಯನ್ನು ಜನತೆಯ ಮುಂದಿಡಬೇಕು. ಜನನಾಯಕರ, ಆಡಳಿತದ ಕಣ್ಣು ತೆರೆಸಬೇಕು. ಆ ಮೂಲಕ ಜನತೆಗೆ ನ್ಯಾಯ ಒದಗಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗುವಂತೆ ಮಾಡಬೇಕು.

ಮಾಧ್ಯಮದವರಿಗೆ ಬಂದ್‌ಗಳ ವಕ್ತಾರರಾಗದೆ ಜನರ ವಕ್ತಾರರಾಗಲು ಕರೆ

ಈ ಮಾತನ್ನು  ನಾನು ಪತ್ರಿಕೆಯವನಾಗಿ ಹೇಳುತ್ತಿಲ್ಲ ‘ಸುದ್ದಿ ವೇದಿಕೆ’ ವತಿಯಿಂದ ಜನಸಾಮಾನ್ಯರ ಧ್ವನಿಯಾಗಿ ಅವರೆಲ್ಲರ ಬೇಡಿಕೆಯಾಗಿ ಮಾಧ್ಯಮಗಳ, ಜನನಾಯಕರ ಮತ್ತು ಆಡಳಿತದ ಮುಂದಿಡುತ್ತಿದ್ದೇನೆ. ನಮ್ಮ ಈ ಮಾತನ್ನು ಸುಳ್ಯದ ಪತ್ರಕರ್ತರು ಒಪ್ಪಿ ಬಂದ್, ಗಲಭೆ ವಿರೋಧಿ ನಿರ್ಣಯ ಮಾಡಿದ್ದಾರೆ. ಇನ್ನು ಮುಂದೆ ಸುದ್ದಿ ವೇದಿಕೆಯ  ಆಂದೋಲನಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ. ಪುತ್ತೂರಿನ ಪರ್ತಕರ್ತರು ಸುದ್ದಿ ವೇದಿಕೆಗೆ ಬೆಂಬಲ ಸೂಚಿಸಿದ್ದಾರೆ. ಮಂಗಳೂರು, ಬೆಂಗಳೂರುಗಳಲ್ಲಿ ಕೆಲವು ಪತ್ರಕರ್ತರು ಅದನ್ನು ಒಪ್ಪಿದ್ದಾರೆ. ಹೆಚ್ಚಿನವರು ಸಹಮತ ನೀಡಿದ್ದಾರೆ. ಯಾರೂ ವಿರೋಧ ವ್ಯಕ್ತಪಡಿಸಲಿಲ್ಲ. ಆದರೆ ಬೆಳ್ತಂಗಡಿಯ ಪತ್ರಿಕಾಗೋಷ್ಠಿಯಲ್ಲಿ ಅಲ್ಲಿಯ ಕೆಲವು ಪತ್ರಕರ್ತರು ಒಪ್ಪುವುದಿರಲಿ, ಬಲಾತ್ಕಾರದ ಬಂದ್ ಅನಿವಾರ್ಯ ಎಂದೇ ವಾದಿಸಿದ್ದಾರೆ. ಇನ್ನು ಕೆಲವರು ಬೆಳ್ತಂಗಡಿಯಲ್ಲಿ ಬಲಾತ್ಕಾರದ ಬಂದ್ ನಡೆಯಲಿಲ್ಲ ಎಂದು ಹೇಳಿದ್ದಾರೆ. ಜನಸಾಮಾನ್ಯರ ಬಳಿಗೆ ಹೋಗಿ ವಿಚಾರಿಸಿ ಅವರು ಹೆದರಿ ಬಂದ್ ಮಾಡಿರುವುದೇ ಎಂದು ತಿಳಿಯಿರಿ. ಬಂದ್‌ನಿಂದ ಅವರಿಗೆ ತೊಂದರೆಯಾಗಿದೆಯೇ ವಿಚಾರಿಸಿ ಎಂದು ನಾವು ಹೇಳಿದಾಗ ಅದನ್ನು ತಿಳಿದುಕೊಳ್ಳುವುದು ಆಂದೋಲನದವರ ಕರ್ತವ್ಯ, ಪತ್ರಕರ್ತರದ್ದಲ್ಲ ಎಂದು ಉದ್ಧಟತನದಿಂದ ಉತ್ತರಿಸಿದ್ದಾರೆ. ಅದು ಪತ್ರಿಕಾಗೋಷ್ಠಿಯಾದ್ದರಿಂದ ನಾವು ಚರ್ಚೆಗೆ ಇಳಿಯಲಿಲ್ಲ. ಅದೇ ದಿವಸ ಪತ್ರಕರ್ತರೋರ್ವರು ನಮ್ಮ ಬಳಿ ಬಂದು ಬೆಳ್ತಂಗಡಿಯಲ್ಲಿ ಇತ್ತೀಚೆಗೆ ನಡೆದ ಬಂದ್ ಸಂದರ್ಭದಲ್ಲಿ ತಾನು ಪತ್ರಕರ್ತ ಎಂದು ರಸ್ತೆ ತಡೆ ಮಾಡಿದವರಿಗೆ ಗುರುತು ಚೀಟಿ ತೋರಿಸಿದರೂ ಹೋಗದಂತೆ ಬಲಾತ್ಕಾರವಾಗಿ ಹೇಗೆ ತಡೆದಿದ್ದಾರೆ ಎಂದು ವಿವರಿಸಿದ್ದರು. ಬೆಳ್ತಂಗಡಿಯ ಸಂತೆಕಟ್ಟೆಯ ಕಟ್ಟಡದ ಮಾಲಕರು ಗಲಭೆಗಳಿಗೆ ಹೆದರಿ ಬಂದ್ ಮಾಡಿದ ನೋವನ್ನು ಹೇಳಿಕೊಂಡಿದ್ದರು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ದ.ಕ. ಜಿಲ್ಲೆಯ ಎಲ್ಲಾ ನಾಯಕರು ಪತ್ರಕರ್ತರು ಭಾಗವಹಿಸಿದ ಸಭೆಯಲ್ಲಿ ದ.ಕ. ಜಿಲ್ಲೆಯನ್ನು ಕೋಮು ಗಲಭೆ ಮುಕ್ತ, ಬಲಾತ್ಕಾರದ ಬಂದ್ ಮುಕ್ತ ಜಿಲ್ಲೆಯನ್ನು ಮಾಡುವ ಕುರಿತು ಚರ್ಚಿಸಿದ್ದರು. ಮರುದಿನ ಮಂಗಳೂರಿನ ಕರ್ನಾಟಕ ಪತ್ರಕರ್ತ ಸಂಘದವರು ಏರ್ಪಡಿಸಿದ ಧಾರ್ಮಿಕ ಮುಖಂಡರು ಮತ್ತು ಅಧಿಕಾರಿಗಳು ಸೇರಿ ನಡೆದ ಶಾಂತಿ ಸೌಹಾರ್ದ ಅದಾಲತ್‌ನಲ್ಲಿ ಕೂಡ ಕೋಮು ಗಲಭೆ ಬಂದ್ ಮುಕ್ತ ಜಿಲ್ಲೆಯನ್ನಾಗಿ ಮಾಡುವ ಕುರಿತು ಚರ್ಚೆಯಾಯಿತು. ಈ ಮೇಲಿನ ಸಭೆಗಳಲ್ಲಿ ಎಲ್ಲಿಯೂ ಬೆಳ್ತಂಗಡಿಯನ್ನು ಹೊರತುಪಡಿಸಿದ ದ.ಕ. ಜಿಲ್ಲೆ ಎಂದು ಪ್ರಸ್ತಾಪವಾಗಲಿಲ್ಲ ಅಥವಾ ಬೆಳ್ತಂಗಡಿಯಲ್ಲಿ ಬಲಾತ್ಕಾರದ ಬಂದ್‌ಗಳು ನಡೆಯಲಿಲ್ಲ, ನಡೆಯುವುದೂ ಇಲ್ಲ ಎಂದು ಯಾರೂ ಹೇಳಿರಲಿಲ್ಲ.

ಈ ಎರಡೂ ಸಭೆಗಳ ವರದಿಗಳು ಅಲ್ಲದೇ ಸುದ್ದಿ ವೇದಿಕೆಯವರು ಪುತ್ತೂರು, ಸುಳ್ಯ, ಮಂಗಳೂರು, ಬೆಂಗಳೂರುಗಳಲ್ಲಿ ಮಾಡಿದ ಪತ್ರಿಕಾಗೋಷ್ಠಿಯ ವರದಿಗಳು ರಾಜ್ಯದ ಜಿಲ್ಲೆಯ ಎಲ್ಲಾ ಪತ್ರಿಕೆಗಳಲ್ಲಿ ಬಂದಿವೆ. ಬೆಳ್ತಂಗಡಿಯ ಪತ್ರಕರ್ತರು ಪ್ರತಿನಿಧಿಸುವ ಮತ್ತು ಅವರ ಮೇಲಿರುವ ಜಿಲ್ಲೆಯ ಮತ್ತು ರಾಜ್ಯದ ಪತ್ರಕರ್ತರು ಬೆಳ್ತಂಗಡಿಯಲ್ಲಿ ಬಲಾತ್ಕಾರದ ಬಂದ್‌ಗಳು ನಡೆಯುವುದೇ ಇಲ್ಲ ಎಂದು ಹೇಳಲಿಲ್ಲ ಯಾಕೆ…? ಈ ಪತ್ರಕರ್ತರು ನಮ್ಮನ್ನು ಪ್ರಶ್ನಿಸುವ ಬದಲು ಬೆಳ್ತಂಗಡಿಯ ನಾಯಕರನ್ನು ಅವರ ಮೇಲಿನ ಪತ್ರಿಕೆಯವರನ್ನು ಪ್ರಶ್ನಿಸಿದ್ದರೆ ಅವರಿಗೆ ಉತ್ತರ ದೊರಕಬಹುದಿತ್ತಲ್ಲಾ ಎಂಬುದು ನಮ್ಮ ಸಲಹೆ. ಬೆಳ್ತಂಗಡಿಯ ಆ ಪತ್ರಕರ್ತರು ಬಲಾತ್ಕಾರದ ಬಂದ್ ಮಾಡಿಸುವವರ ವಕ್ತಾರರೇ ಅಥವಾ ಜನಸಾಮಾನ್ಯರ ಭಾವನೆಯನ್ನು ಅರ್ಥಮಾಡಿಕೊಳ್ಳದ, ಅಂತವರ ಸಂಪರ್ಕ ಇಲ್ಲದ, ಉಳ್ಳವರ, ಅಧಿಕಾರಸ್ಥರ, ನಾಯಕರುಗಳ ಪಿ.ಆರ್.ಓ.ಗಳೇ ಎಂದು ಅರ್ಥವಾಗಲೇ ಇಲ್ಲ. ಅದು ಏನೇ ಇದ್ದರೂ ಬೆಳ್ತಂಗಡಿಯಲ್ಲಿ ಮತ್ತು ಇತರ ಕಡೆಗಳಲ್ಲಿಯೂ ನಮ್ಮ ಆಂದೋಲನ ಯಶಸ್ವಿಯಾಗಬೇಕಾದರೆ ಆ ಪತ್ರಕರ್ತರು ಮತ್ತು ಅದೇ ರೀತಿ ಚಿಂತಿಸುವವರ ಮನಪರಿವರ್ತನೆಯಾಗಬೇಕಿದೆ. ಆ ನಿಟ್ಟಿನಲ್ಲಿ ಬೆಳ್ತಂಗಡಿಯಲ್ಲಿ ಮಾತ್ರವಲ್ಲ ಸುಳ್ಯ, ಪುತ್ತೂರು, ಮಂಗಳೂರು, ಬೆಂಗಳೂರುಗಳಲ್ಲಿ ಅಂತವರೊಂದಿಗೆ ಬಹಿರಂಗ ಚರ್ಚೆ ಮಾಡುವ ಮೂಲಕ ಈ ಆಂದೋಲನವನ್ನು ಯಶಸ್ವಿ ಮಾಡುವ ಯೋಜನೆ ಹಾಕಿಕೊಂಡಿದ್ದೇವೆ. ಬಂದ್ ಗಲಭೆಗಳಿಂದ ತೊಂದರೆಗೊಳಗಾಗಿರುವ ಜನರು ನಮ್ಮ ವೇದಿಕೆಯ ಉದ್ದೇಶದೊಂದಿಗೆ ಸಹಮತವಿರುವವರು ಬೆಂಬಲ ಪ್ರೋತ್ಸಾಹ ನೀಡಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

ಈ ಆಂದೋಲನದ ಯಶಸ್ಸನ್ನು ಪರಿಶೀಲಿಸಲು ಪತ್ರಕರ್ತರಿಗೆ, ನಾಯಕರಿಗೆ ಆಹ್ವಾನ

ಕೊನೆಯಲ್ಲಿ ಒಂದು ಮಾತು. ಸುದ್ದಿ ಆಂದೋಲನಕ್ಕೆ ಪುತ್ತೂರಿನಲ್ಲಿ ಸಿಕ್ಕಿರುವ ಅಪೂರ್ವ ಬೆಂಬಲದ ಹಿನ್ನಲೆಯಲ್ಲಿ ಮಂಗಳೂರು, ಬೆಂಗಳೂರಿನ ಪತ್ರಕರ್ತರಿಗೆ, ಸಂಘಟನೆಗಳಿಗೆ, ಅಧಿಕಾರಿಗಳಿಗೆ, ಪಕ್ಷದವರಿಗೆ ಈ ತಿಂಗಳ ಅಂತ್ಯಕ್ಕೆ ಪುತ್ತೂರಿಗೆ ಭೇಟಿ ನೀಡುವಂತೆ ಕರೆಕೊಟ್ಟಿದ್ದೇವೆ. ರಾಜ್ಯದಲ್ಲಿ ಅತೀ ಸೂಕ್ಷ್ಮ ಕೋಮು ಗಲಭೆ ಬಂದ್ ಕೇಂದ್ರವಾಗಿದ್ದ ಪುತ್ತೂರು-ಬಂದ್ ಮುಕ್ತ, ಗಲಭೆ ಮುಕ್ತ ತಾಲೂಕು ಆಗುತ್ತಿದೆ ಮಾತ್ರವಲ್ಲ ಅಂತಹ ಸಂದರ್ಭಗಳಲ್ಲಿಯೂ ರಾಜ್ಯದಲ್ಲೇ ಅತ್ಯಂತ ಸುರಕ್ಷಿತ ತಾಲೂಕು ಕೇಂದ್ರವಾಗಿ ಪರಿವರ್ತನೆಗೊಳ್ಳುತ್ತಿದೆ. ಅದು ಹೇಗೆ ಸಾಧ್ಯವಾಗಿದೆ ಎಂದು ತಿಳಿಯಲಿಕ್ಕಾಗಿ ಮತ್ತು ನಮ್ಮ ವೇದಿಕೆಯ ಮಾತಿನ ಸತ್ಯಾಸತ್ಯತೆಯನ್ನು ಪರಿಶೀಲಿಸಲಿಕ್ಕಾಗಿಯಾದರೂ ನಮ್ಮ ವೇದಿಕೆಯ ವೆಚ್ಚದಲ್ಲಿ ಬನ್ನಿ ಎಂದು ಆಹ್ವಾನಿಸಿದ್ದೇವೆ. ರಾಜ್ಯದ ಅತೀ ಹೆಚ್ಚು ಗಲಭೆಕೇಂದ್ರವಾಗಿದ್ದ ಪುತ್ತೂರು ಬದಲಾದರೆ ಉಳಿದ ಕಡೆ ಆ ರೀತಿ ಬದಲಾವಣೆ ಆಗುವುದು ಸಮಸ್ಯೆಯೇ ಅಲ್ಲ. ಪುತ್ತೂರಿನ ಮಾದರಿಯನ್ನು ಅನುಸರಿಸಿದರೆ ದ.ಕ. ಜಿಲ್ಲೆ ಮಾತ್ರವಲ್ಲ ರಾಜ್ಯವೇ ಸುರಕ್ಷಿತ ಕೇಂದ್ರವಾಗಬಹುದು ಎಂದು ತೋರಿಸುವುದು ಸುದ್ದಿ ವೇದಿಕೆಯ ಉದ್ದೇಶವಾಗಿದೆ. ಈ ಉದ್ದೇಶದ ಈಡೇರಿಕೆಗಾಗಿ ಗಲಭೆಕೋರರ ಎದೆಯಲ್ಲಿ ನಡುಕ ಹುಟ್ಟಿಸಬೇಕಾಗಿದೆ. ಅದಕ್ಕಾಗಿ ಪುತ್ತೂರಿನ ಗ್ರಾಮ ಗ್ರಾಮಗಳಲ್ಲಿ, ಸಂಸ್ಥೆಗಳಲ್ಲಿ, ಮಳಿಗೆಗಳಲ್ಲಿ, ವಾಹನಗಳಲ್ಲಿ ಮತ್ತು ಅಲ್ಲಲ್ಲಿ ‘ಸುದ್ದಿ ವೇದಿಕೆ’ ಆಂದೋಲನದ ‘ಬಲಾತ್ಕಾರದ ಬಂದ್ ಕೋಮು ಯಾ ಯಾವುದೇ ಗಲಭೆ ವಿರೋಧಿ’ ಘಲಕಗಳನ್ನು ಅಳವಡಿಸಿ ಊರನ್ನೇ ಸಿಂಗರಿಸಬೇಕಾಗಿದೆ. ಅದನ್ನು ಸುಳ್ಯ ಮತ್ತು ಬೆಳ್ತಂಗಡಿಗಳಲ್ಲಿಯೂ ಅನುಸರಿಸಬೇಕಾಗಿದೆ. ನಮ್ಮ ಈ ವಿಶ್ವಾಸವನ್ನು ಉಳಿಸುವ ಜವಾಬ್ದಾರಿಯನ್ನು ಪುತ್ತೂರಿನ, ಸುಳ್ಯದ ಮತ್ತು ಬೆಳ್ತಂಗಡಿಯ ಹಾಗೂ ದ.ಕ ಜಿಲ್ಲೆಯ ಜನತೆಯ ಮೇಲಿರಿಸಿದ್ದೇವೆ ಎಂದು ತಿಳಿಸಲು ಇಚ್ಚಿಸಿದ್ದೇವೆ.

[email protected]                                               ಡಾ| ಯು.ಪಿ. ಶಿವಾನಂದ. ಸಂಚಾಲಕರು

Mob: 7353140049                                                                         ಸುದ್ದಿ ವೇದಿಕೆ ಪುತ್ತೂರು, ಸುಳ್ಯ, ಬೆಳ್ತಂಗಡಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.