‘ಗಲಭೆ, ಬಂದ್‌ಗಳು ಬೇಡ-ಅಪರಾಧಿಗಳಿಗೆ ಬೆಂಬಲ ಇಲ್ಲ’ ಎಂದು 18 ವರ್ಷದ ಹಿಂದೆಯೇ ಪುತ್ತೂರಿನಲ್ಲಿ ನಿರ್ಣಯ ಆಗಿತ್ತು…, ‘ಸುದ್ದಿ’ಯ ಸಂಪಾದಕ ಡಾ. ಯು.ಪಿ. ಶಿವಾನಂದರವರ ಒಂಟಿ ಧ್ವನಿಯನ್ನು ಸಾಮೂಹಿಕವಾಗಿ ಬಲಪಡಿಸಲು ಅಂದು ಕರೆ ನೀಡಲಾಗಿತ್ತು…

Puttur_Advt_NewsUnder_1
Puttur_Advt_NewsUnder_1

ಮಾಜಿ ಶಾಸಕ ಉರಿಮಜಲು ರಾಮ ಭಟ್ ಸಹಿತ ಹಲವರು ಸಭೆಯ ನಿರ್ಣಯಕ್ಕೆ ಬೆಂಬಲ ನೀಡಿದ್ದರು

ಬಂದ್ ಬೇಡಬಂದ್ ಕರೆ ಕೊಟ್ಟ ನಾಯಕರೇ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಡಾ. ಎಂ.ಕೆ. ಪ್ರಸಾದ್ ಹೇಳಿದ್ದರು

ಪುತ್ತೂರು: ‘ಗಲಭೆ, ಬಂದ್‌ಗಳು ಬೇಡ-ಅಪರಾಧಿಗಳಿಗೆ ಬೆಂಬಲ ಇಲ್ಲ’ ಎಂದು ಕಳೆದ 18 ವರ್ಷಗಳ ಹಿಂದೆಯೇ ಪುತ್ತೂರಿನಲ್ಲಿ ವಿವಿಧ ಸಂಘ ಸಂಸ್ಥೆಗಳು ನಿರ್ಣಯ ಅಂಗೀಕರಿಸಿದ್ದವು.

1997ರ ಆಗಸ್ಟ್ 7ರಂದು ತರಗತಿ ಮುಗಿಸಿ ಮನೆಗೆ ಹೋಗುತ್ತಿದ್ದ ಪುತ್ತೂರು ವಿವೇಕಾನಂದ ಪದವಿ ಕಾಲೇಜ್‌ನ ವಿದ್ಯಾರ್ಥಿನಿ ಸೌಮ್ಯಾ ಭಟ್‌ರವರ ಕೊಲೆ ನಡೆದ ಬಳಿಕ ಪುತ್ತೂರಿನಲ್ಲಿ ಕೋಮು ಗಲಭೆ, ಹಿಂಸಾಚಾರ, ಕರ್ಫ್ಯೂ ಜಾರಿಯಂತಹ ಘಟನೆಗಳು ನಡೆದಾಗ ‘ಸುದ್ದಿ ಬಿಡುಗಡೆ’ ಪತ್ರಿಕೆಯಲ್ಲಿ ನಿರಂತರ ಸಂಪಾದಕೀಯದ ಮೂಲಕ ಜನಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗಿತ್ತು. ‘ಬಲಾತ್ಕಾರದ ಬಂದ್ ಬೇಡ, ನ್ಯಾಯಕ್ಕಾಗಿ ಮತ್ತೊಬ್ಬರಿಗೆ ಅನ್ಯಾಯ ಆಗುವುದು ಬೇಡ’ ಎಂದು ಸಂಪಾದಕೀಯದಲ್ಲಿ ಕರೆ ನೀಡಲಾಗಿತ್ತು. ಕೆಮ್ಮಿಂಜೆ ದೇವಳಕ್ಕೆ ದನದ ಮಾಂಸ ಬಿಸಾಡಿದ ಘಟನೆ ನಡೆದಾಗ “ಮತಾಂಧರ ಪತ್ತೆ ಮಾಡಲು ಮುಸ್ಲಿಮರು ಮುಂಚೂಣಿಯಲ್ಲಿ ನಿಲ್ಲಬೇಕು” ಎಂದೂ, “ಅನ್ಯರ ಧಾರ್ಮಿಕ ಸ್ಥಳದ ಹಾನಿಗಿಂತ ತಮ್ಮದನ್ನು ರಕ್ಷಿಸಿಕೊಳ್ಳುವುದು ಮೇಲು” ಎಂದೂ ಅಂದು “ಪತ್ರಿಕೆ” ತನ್ನ ಸಂಪಾದಕೀಯದಲ್ಲಿ ಒತ್ತಾಯಿಸಿತ್ತು. ಕೋಮು ದಳ್ಳುರಿಯಲ್ಲಿ ಜನಸಾಮಾನ್ಯರು ನರಳಾಡಿದಾಗ, ಕರ್ಫ್ಯೂ ಜಾರಿಯಾಗಿ ದಿನ ನಿತ್ಯದ ಆಹಾರ ಸಾಮಗ್ರಿಗೂ ಜನರು ಪರದಾಡಬೇಕಾದ ಸನ್ನಿವೇಶ ಸೃಷ್ಠಿಯಾದಾಗ, ಸಾವು-ನೋವಿನ ಸಮಯದಲ್ಲಿ ಜನರು ಆಸ್ಪತ್ರೆಗೆ ಬರಲೂ ಅಸಾಧ್ಯವಾಗುವಂತಹ ಅಸಹನೀಯ ಪರಿಸ್ಥಿತಿ ಉಂಟಾಗಿದ್ದಾಗ “ಸುದ್ದಿ ಬಿಡುಗಡೆ ಪತ್ರಿಕೆ”ಯು ತನ್ನ ಸಂಪಾದಕೀಯದಲ್ಲಿ ಜನಪರ ಧ್ವನಿ ಎತ್ತಿತ್ತು. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ 1997ರ ಆಗಸ್ಟ್ 28ರಂದು ಪುತ್ತೂರಿನ ವರ್ತಕ ಸಂಘದ ಕಛೇರಿಯಲ್ಲಿ ಉದ್ಯಮಿ ಜಿ.ಎಲ್. ಬಲರಾಮ ಆಚಾರ್ಯರವರ ನೇತೃತ್ವದಲ್ಲಿ ಸಂಘ-ಸಂಸ್ಥೆಗಳ ಸಭೆ ನಡೆದಿತ್ತು. ಪುತ್ತೂರಿನಲ್ಲಿ ಶಾಂತಿ ನೆಲೆಸಲು ಅಗತ್ಯವುಳ್ಳ ಕ್ರಮ ಕೈಗೊಳ್ಳಲು ಅಂದಿನ ಸಭೆ ನಿರ್ಧರಿಸಿತ್ತು. ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಬಲರಾಮ ಆಚಾರ್ಯರವರು, ಸಭೆಯ ಉದ್ದೇಶವನ್ನು ವಿವರಿಸಿ, ಗಲಭೆ, ಬಂದ್‌ಗಳನ್ನು ವಿರೋಧಿಸುವ ರಾಜಕೀಯೇತರ ಜನರು ಸಂಘಟಿತರಾಗಿ ಪ್ರಬಲ ಧ್ವನಿಯಾಗಿ ಶಕ್ತಿಯಾಗಿ ರೂಪುಗೊಳ್ಳಲು ಅವಶ್ಯ ಎಂದು ತಿಳಿದು ಸಮಾನ ಮನಸ್ಕರನ್ನೊಳಗೊಂಡ ಸೇವಾ ಸಂಘಟನೆಗಳನ್ನು ಸಭೆಗೆ ಆಹ್ವಾನಿಸಿರುವುದಾಗಿ ತಿಳಿಸಿದ್ದರು. ಈ ನಿಟ್ಟಿನಲ್ಲಿ ಒಂಟಿ ಧ್ವನಿಯಾಗಿದ್ದ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಡಾ.ಯು.ಪಿ. ಶಿವಾನಂದರವರ ಧ್ವನಿಯನ್ನು ಸಾಮೂಹಿಕವಾಗಿ ಬಲಪಡಿಸಬೇಕೆಂದು ಬಲರಾಮ ಆಚಾರ್ಯರವರು ಸಭೆಯಲ್ಲಿ ಕರೆ ನೀಡಿದ್ದರು.

ಡಾ. ಯು.ಪಿ. ಶಿವಾನಂದರವರು ಅಂದಿನ ಸಭೆಯಲ್ಲಿ ಮಾತನಾಡಿ, ಕೋಮು ಗಲಭೆಗಳಲ್ಲಿ ಅಪರಾಧಿಗಳು ಹೀರೋಗಳಾಗುತ್ತಾರೆ, ಪರಿಸ್ಥಿತಿಗೆ ಹೆದರಿ ಇತರರು ಅವರೊಂದಿಗೆ ಅನಿವಾರ್ಯವಾಗಿ ಸೇರಿಕೊಳ್ಳುತ್ತಾರೆ, ಪ್ರತಿಯೊಬ್ಬನಿಗೂ ಅದರಿಂದ ತೊಂದರೆಯಿರುವುದರಿಂದ ತಮ್ಮ ತಮ್ಮ ರಕ್ಷಣೆಗಾಗಿಯಾದರೂ ಶಾಂತಿ, ಸಾಮರಸ್ಯವನ್ನು ಬಯಸುವ ಜನರು ಸಂಘಟಿತರಾಗುವುದು ಅವಶ್ಯ ಎಂದು ಹೇಳಿದ್ದರು. ಕೋಮು ಸೂಕ್ಷ್ಮತೆಯನ್ನು ವಿವರಿಸಿದ್ದ ಡಾ. ಶಿವಾನಂದರವರು, ಸುಳ್ಯದ ಕಲ್ಲುಗುಂಡಿಯಲ್ಲಿ ನಡೆದ ಗಲಭೆ ಮತ್ತು ಅಲ್ಲಿ ಶಾಂತಿ ನೆಲೆಸಿದ ವಿಧಾನವನ್ನು ತಿಳಿಸಿದ್ದರಲ್ಲದೆ, ಗಲಭೆ ಮಾಡುವವರು ಮತ್ತು ಅದರಿಂದ ಲಾಭ ಪಡೆಯುವವರು ಎರಡೂ ಕಡೆಗಳಲ್ಲಿ ಇದ್ದಾರೆ, ಅಂತವರನ್ನು ಪ್ರತ್ಯೇಕಿಸಿ ಅವರೊಂದಿಗೆ ತಾವು ಇಲ್ಲ ಎಂದು ಗುರುತಿಸಿಕೊಳ್ಳುವುದು ಪ್ರಥಮ ಆದ್ಯತೆಯಾಗಿದೆ,  ಆ ರೀತಿ ಮಾಡಿದರೆ ಗಲಭೆಕೋರರಿಗೆ ಆಶ್ರಯ ದೊರಕದೆ ಶಾಂತಿ ನೆಲೆಸಲು ಸಾಧ್ಯವಿದೆ ಎಂದು ಹೇಳಿದ್ದರು. ಉದ್ಯಮಿಗಳಾದ ಗಣಪತಿ ನಾಯಕ್, ವಿಶ್ವಪ್ರಸಾದ್, ಶ್ರೀಮತಿ ನವೀನಾ.ಎನ್.ರೈ, ಸುರೇಶ್ ಬಾಬು, ಉಮ್ಮರ್ ಶಾಫಿ, ಜಗನ್ನಿವಾಸ ಸೇಡಿಯಾಪು ರಾವ್, ಇಸಾಖ್ ಖಾನ್, ಡಾ. ನವೀನ್ ರೈ, ಜಿ.ಎಲ್.ಆಚಾರ್ಯ, ಎಂ.ಎ.ಹುಸೇನ್, ಪಿ.ಬಿ.ಹಸನ್, ಇಸ್ಮಾಯಿಲ್, ಸುರೇಶ್ ಶೆಟ್ಟಿ, ಕೇಶವ ಪೈ, ವಿಜಯ ರೆ|ಹಾರ್ವಿನ್, ಸುಬ್ರಹ್ಮಣ್ಯ ಕೊಳತ್ತಾಯ, ರೆ.ಫಾ.ಗೊನ್ಸಾಲ್ವಿಸ್, ಗೋಪಿಕೃಷ್ಣ ಶೆಣೈ, ದೇವಿಪ್ರಸಾದ್ ಸೇಡಿಯಾಪು ಬೈಲಾಡಿ ಮೊದಲಾದವರು ಗಲಭೆಗಳಿಂದ ಜನರಿಗೆ ಆಗುತ್ತಿರುವ ತೊಂದರೆಗಳನ್ನು ವಿವರಿಸಿ ಬಂದ್‌ಗಳು ನಡೆಯಲೇಬಾರದು ಎಂದು ಒತ್ತಾಯಿಸಿದ್ದರು. ಗಲಭೆ-ಬಂದ್ ನಡೆಯದಂತೆ ಆಗಲು ಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಸಭೆಯ ಕೊನೆಯಲ್ಲಿ ಮಾತನಾಡಿದ್ದ ಡಾ.ಯು.ಪಿ. ಶಿವಾನಂದರವರು, ಪತ್ರಿಕೆಯು ಖಾಯಂ ಆಗಿ ಜನರ ಧ್ವನಿಯಾಗಲಿದೆ. ಬಂದ್ ವಿರುದ್ಧದ ಹೋರಾಟಕ್ಕೆ ಪತ್ರಿಕೆ ಸದಾ ಬೆಂಬಲ ನೀಡುತ್ತದೆ ಎಂದು ತಿಳಿಸಿದ್ದರು.

ಪುತ್ತೂರಿನ ಸೇವಾ ಸಂಘ ಸಂಸ್ಥೆಗಳ ಜಂಟಿ ಸಭೆಯಲ್ಲಿ ಕೈಗೊಂಡಿದ್ದ ನಿರ್ಣಯಗಳು: ಗಲಭೆ ಮತ್ತು ಬಂದ್‌ಗಳನ್ನು ನಿಲ್ಲಿಸಿ ಶಾಂತಿ ಸ್ಥಾಪಿಸುವ ಉದ್ದೇಶದಿಂದ 1997ರ ಆಗಸ್ಟ್ 28ರಂದು ಪುತ್ತೂರಿನ ವರ್ತಕ ಸಂಘದ ಕಛೇರಿಯಲ್ಲಿ ಸ್ವಯಂ ಸೇವಾ ಸಂಘಗಳ ಪದಾಧಿಕಾರಿಗಳ ಮತ್ತು ಊರ ಪ್ರಮುಖರ ಸಭೆಯು “ ಇಷ್ಟರವರೆಗೆ ಆದ ಗಲಭೆಗಳಿಗೆ ನಾವು ಜವಾಬ್ದಾರರಲ್ಲ, ನಮ್ಮ ಬೆಂಬಲವೂ ಅದಕ್ಕಿರಲಿಲ್ಲ” ಎಂದು ನಿರ್ಣಯ ಅಂಗೀಕರಿಸಿತ್ತು. “ಇನ್ನು ಮುಂದೆ ಇಂತಹ ಗಲಭೆಗಳು ನಡೆಯಬಾರದು, ತಪ್ಪಿತಸ್ಥರು ಯಾರೇ ಆದರೂ ಅವರಿಗೆ ಶಿಕ್ಷೆಯಾಗಲೇಬೇಕು, ಅವರಿಗೆ ನಮ್ಮ ರಕ್ಷಣೆಯೂ ಇಲ್ಲ, ಬೆಂಬಲವೂ ಇಲ್ಲ, ಇನ್ನು ಮುಂದೆ ಇಂತಹ ಪ್ರತಿಭಟನೆಗಳು ಆಗುವುದಿದ್ದರೆ ಅದರ ಉದ್ದೇಶ ಮತ್ತು ಲಾಭ ನಷ್ಟಗಳನ್ನು ನಮಗೆ ಮನವರಿಕೆ ಮಾಡಿ ಮನವೊಲಿಸಿ ಭಾಗವಹಿಸುವಂತೆ ಕೇಳಿಕೊಳ್ಳಬೇಕು, ಬಲಾತ್ಕಾರವಾಗಿ, ಮನಸ್ಸಿಗೆ ವಿರೋಧವಾಗಿ ಬಂದ್‌ಗಳನ್ನು ಮಾಡಿಸುವುದಕ್ಕೆ ಸ್ಪಷ್ಟ ವಿರೋಧವಿದೆ, ಅಂತಹ ಸಂದರ್ಭದಲ್ಲಿ ಅನಿವಾರ್ಯ ಎಂದು ತಾವು ತೋರಿಸಿಕೊಟ್ಟರೆ ಅದಕ್ಕೆ ಸಾಕಷ್ಟು ಸಮಯಾವಕಾಶ ನೀಡಬೇಕು, ಬಂದ್ ಮತ್ತು ಪ್ರತಿಭಟನೆಗಳು ನಡೆದಾಗ ಅದರಿಂದ ನಮಗೆ ಮತ್ತು ನಮ್ಮವರಿಗೆ ಆಗುವ ಕಷ್ಟ ನಷ್ಟಗಳಿಗೆ ಬಂದ್ ಮಾಡಿಸಿದವರು ಜವಾಬ್ದಾರಿ ವಹಿಸಿಕೊಳ್ಳಬೇಕು” ಎಂದು ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಗಿತ್ತು.

ಮಾಜಿ ಶಾಸಕ ಉರಿಮಜಲು ರಾಮ ಭಟ್ ಸಹಿತ ಹಲವರು ಬೆಂಬಲ ನೀಡಿದ್ದರು…: ಬಂದ್ ಬೇಡ-ಬಂದ್ ಕರೆ ಕೊಟ್ಟ ನಾಯಕರೇ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದು ಡಾ. ಎಂ.ಕೆ. ಪ್ರಸಾದ್ ಹೇಳಿದ್ದರು…: ಬಂದ್ ಹಾಗೂ ಗಲಭೆಗಳನ್ನು ವಿರೋಧಿಸಿ ನಡೆದಿದ್ದ ಸಭೆಗೆ ಮಾಜಿ ಶಾಸಕ ಉರಿಮಜಲು ರಾಮ ಭಟ್ ಬೆಂಬಲ ಸೂಚಿಸಿ ಹೇಳಿಕೆ ನೀಡಿದ್ದರು. ಶಾಂತಿ ಪಾಲನಾ ಸಭೆಯಲ್ಲಿ ಕೈಗೊಂಡ ನಿರ್ಣಯಕ್ಕೆ ನಾವೆಲ್ಲರೂ ಒಪ್ಪಿಗೆ ಸೂಚಿಸಿದ್ದೇವೆ ಎಂದು ರಾಮ ಭಟ್ ಹೇಳಿದ್ದರು. ಹಿಂದೂ ಸಂಘಟನೆಗಳ ಮುಖಂಡ ಡಾ. ಎಂ.ಕೆ.ಪ್ರಸಾದ್ ಭಂಡಾರಿಯವರು 1997ರ ಸೆಪ್ಟೆಂಬರ್ ೩ರ ಸುದ್ದಿ ಬಿಡುಗಡೆ ಪತ್ರಿಕೆಯ ಸಂಚಿಕೆಗೆ ಹೇಳಿಕೆ ನೀಡಿ “ ಬಂದ್ ಬೇಡ. ಅಂತಹ ಅನಿವಾರ್ಯ ಪರಿಸ್ಥಿತಿ ಬಂದರೆ ಸ್ವ ಇಚ್ಚೆಯಿಂದ ಮಾಡಬೇಕೇ ಹೊರತು ಬಲಾತ್ಕಾರದಿಂದ ಮಾಡಕೂಡದು, ಬಂದ್‌ನಿಂದ ಜನ ಸಾಮಾನ್ಯರಿಗೆ ತೀರಾ ತೊಂದರೆಯಾಗುವುದರಿಂದ ಬಂದನ್ನು ಸಾಂಕೇತಿಕವಾಗಿ ಆಚರಿಸಬೇಕು, ಯಾವುದೇ ಅನಿವಾರ್ಯ ಸ್ಥಿತಿಯಲ್ಲಿಯೂ ಒಂದು ದಿನಕ್ಕಿಂತ ಹೆಚ್ಚು ಕಾಲ ಬಂದ್ ಆಚರಿಸಬಾರದು, ಬಂದ್‌ಗೆ ಕರೆ ಕೊಟ್ಟ ನಾಯಕರೇ ಜವಾಬ್ದಾರಿ ಮತ್ತು ಜನತೆಗೆ ತಿಳುವಳಿಕೆ ನೀಡಬೇಕು” ಎಂದು ಡಾ. ಎಂ.ಕೆ. ಪ್ರಸಾದ್‌ರವರು ಅಭಿಪ್ರಾಯ ನೀಡಿದ್ದರು. ಡಾ. ಪ್ರಸಾದ್‌ರವರು ಮಾತ್ರವಲ್ಲದೆ ಪುತ್ತೂರಿನ ಮುಖಂಡರಾದ ಕೆ.ಪಿ. ಅಬ್ದುಲ್ಲಾ, ಕುಂಟಿಕಾನ ಲಕ್ಷ್ಮಣ ಗೌಡ, ಲೋಕೇಶ್ ಹೆಗ್ಡೆ, ಜೀವನ್ ಭಂಡಾರಿ, ಕಲಾವತಿ ಪೂವಪ್ಪ, ಕಾವು ಹೇಮನಾಥ ಶೆಟ್ಟಿ ಮತ್ತು ವಿವೇಕಾನಂದ ಕಾಲೇಜ್‌ನ ಪ್ರಾಂಶುಪಾಲ ಡಿ.ಎಸ್.ಭಟ್‌ರವರು ಬಂದ್ ಮತ್ತು ಗಲಭೆ ವಿರೋಧಿಸಿ ನೀಡಿದ್ದ ಹೇಳಿಕೆ 1997ರ ಸೆಪ್ಟೆಂಬರ್ 3ನೇ ತಾರೀಕಿನಂದು “ಸುದ್ದಿ”ಯ ಪ್ರಥಮ ಪುಟದಲ್ಲಿ ವರದಿಯಾಗಿತ್ತು.

18

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.