ಭವ್ಯ ಇತಿಹಾಸ ತೆರೆದುಕೊಳ್ಳುತ್ತಿದೆ ಕಾರಣಿಕ ನೆಲೆ ಅಗರಿಗುತ್ತು ಗರಡಿ

Puttur_Advt_NewsUnder_1
Puttur_Advt_NewsUnder_1

7p-agari*ಪ್ರವೀಣ್ ಕುಮಾರ್ ಚೆನ್ನಾವರ

ಸವಣೂರು  : ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರು ನಡೆದಾಡಿದ ಪ್ರದೇಶದಲ್ಲಿ ಹಲವೆಡೆ ಗರಡಿ ನಿರ್ಮಾಣವಾಗಿ ನೇಮ ನಡೆಯುತ್ತಿದೆ. ಕೆಲವೆಡೆ ವಿವಿಧ ಕಾರಣಗಳಿಂದ ಅಜೀರ್ಣಾವಸ್ಥೆಗೆ ತಲುಪಿರುವ ಹಲವು ಗರಡಿಗಳಿವೆ.

ಇಂತಹ ಗರಡಿಗಳಲ್ಲಿ ಒಂದಾದ ಸಾವಿರಾರು ಇತಿಹಾಸ ಇರುವ, 33 ವರ್ಷಗಳಿಂದ ಆರಾಧನೆಗೆ ಒಳಪಡದ ಸವಣೂರು ಗ್ರಾಮದ ಅಗರಿಗುತ್ತು ಕೋಟಿ-ಚೆನ್ನೆಯ ಗರಡಿ ಹಾಗೂ ಗರಡಿಮನೆಯ ಸುತ್ತಲಿನ ಹಿನ್ನೆಲೆ ಮಹತ್ವವಾದದು. ಜೀರ್ಣೋದ್ಧಾರದ ಹಂತದಲ್ಲಿರುವ ಗರಡಿಗೆ ಸಂಬಂಧಪಟ್ಟಂತೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕ್ಷೇತ್ರದ ಹಿನ್ನೆಲೆಗಳು ತೆರೆದುಕೊಂಡಿದೆ.

ಕುಮಾರಧಾರ ನದಿ ತಟದಿಂದ ಕೂಗಳತೆ ದೂರದಲ್ಲಿನ ಅಗರಿ ಗುತ್ತು ಮನೆತನದ ಪ್ರದೇಶ ಇಂಥ ಚಾರಿತ್ರಿಕ ಸಾಕ್ಷಿಗಳನ್ನು ಮಡಿಲಲ್ಲಿ ಇಟ್ಟುಕೊಂಡಿದ್ದು, ಭವ್ಯ ಪರಂಪರೆಯ ಪುನರ್ ನಿರ್ಮಾಣದ ಹಾದಿಯತ್ತ ಹೊರಳಿಕೊಂಡಿದೆ..!

 ಸತ್ಯದ ನೆಲೆ

 “ಸುತ್ತು ಪಡಿಪಿರೆ’ ಹೊಂದಿದ್ದ ಪ್ರಾಚೀನ ಬೃಹತ್ ಮನೆ, ನ್ಯಾಯ ತೀರ್ಮಾನ ಹೇಳುತ್ತಿದ್ದ ಧರ್ಮ ಚಾವಡಿಯೂ ಇತ್ತು. ಈಗ ಯುದ್ಧವಿದ್ಯಾ ಗರಡಿಯ ಪಂಚಾಂಗ ಕುಸಿದು ಬಿದ್ದು ಹೋದ ಧರ್ಮ ಚಾವಡಿಯ ಅವಶೇಷ ಮಾತ್ರ ಉಳಿದಿದೆ. ಅಂಗಳದಲ್ಲಿ  ಕಟ್ಟಿದ್ದ ಬೃಹತ್ ಗಾತ್ರದ ತುಳಸಿ ಕಟ್ಟೆ ಗತ ಕಾಲದ ಇತಿಹಾಸಕ್ಕೆ ಸಾಕ್ಷಿಯೆನಿಸಿದೆ. ಅದರ ಹಿಂಬದಿಯ ಎತ್ತರದ ಜಾಗದಲ್ಲಿ  ಗರಡಿಯ ಪಂಚಾಂಗ ದಿಣ್ಣೆಯ ರೂಪದಲ್ಲಿದೆ. ಇದೇ ಪ್ರದೇಶದಲ್ಲಿ ನೇತ್ರಾವತಿ ಗರಡಿ ಇದೆ. ಅದರಲ್ಲಿ ಆರಾಧನಾ ಮೂರ್ತಿಗಳಲ್ಲಿ. ಧರ್ಮ ಚಾವಡಿಯಲ್ಲಿ ಮೂರು ಸುರಿಯ ಇತ್ತು. ಅದು ಕ್ಷೇತ್ರಕ್ಕೆ ಸಂಬಂಧಪಟ್ಟ ಕುಟುಂಬಸ್ಥರ ಮನೆಯಲ್ಲಿದೆ.

ಧರ್ಮಚಾವಡಿಯ ಎದುರಿರುವ ಗದ್ದೆಯ ಪಕ್ಕದಲ್ಲಿ ದೈವಗಳ ಸ್ಥಾನವಿದೆ. ಹತ್ತಿರದ ಪ್ರದೇಶದಲ್ಲಿ ಇರುವ ತಾವು ಗರಡಿಯಲ್ಲಿ ಆರಾಧನಾ ಮೂರ್ತಿಗಳಿತ್ತು. ಅಲ್ಲಿಂದ ಭಂಡಾರ ತಂದು ಈ ಗರಡಿಯಲ್ಲಿಟ್ಟು ಪಕ್ಕದ ಬಾಕಿತಿಮಾರ್ ಗದ್ದೆಯಲ್ಲಿ ನೇಮೋತ್ಸವ ನಡೆಯುತ್ತಿತ್ತು’ ಎಂದು ಕುಟುಂಬಸ್ಥರು ಹೇಳುತ್ತಾರೆ.

ಪ್ರಾಚೀನ ಕಾಲದಲ್ಲಿ ತುಳುನಾಡಿನೆಲ್ಲೆಡೆ ಯುದ್ಧ ವಿದ್ಯೆ ಕಲಿಸುವ ಗರಡಿಗಳು ಅರಮನೆ ಪರಿಸರದಲ್ಲಿ ಇರುತ್ತಿದ್ದು, ಇದರಲ್ಲಿ ಬಹುಪಾಲು ನಾಶವಾಗಿವೆ. ಸ್ವತಃ ಯುದ್ಧ ವೀರರಾಗಿದ್ದ ಕೋಟಿ – ಚೆನ್ನಯರು ತಮ್ಮ ಜೀವಿತಾವಧಿಯಲ್ಲಿ ಇಂಥ 66 ಯುದ್ಧ ಗರಡಿಗಳನ್ನು ನಿರ್ಮಿಸಿದ್ದರು ಎಂಬ ಉಲ್ಲೇಖ ಬೈದೆರ್ಲೆ ಪಾಡ್ದನದಲ್ಲಿಯೂ ಇದೆ. ಕೋಟಿ – ಚೆನ್ನಯರ ಕಾಲಾನಂತರ ಈ ಗರಡಿಗಳು ಆರಾಧನಾ ಕೇಂದ್ರಗಳಾಗಿ ಪರಿವರ್ತನೆಯಾಗಿದ್ದಲ್ಲದೆ, ಇನ್ನಷ್ಟು ಹೊಸ ಗರಡಿಗಳು ಆರಾಧನೆ ಉದ್ದೇಶದಿಂದಲೇ ಹುಟ್ಟಿಕೊಂಡವು ಎಂಬುದು ಇತಿಹಾಸ ದಾಖಲಿಸಿದ ಸಂಗತಿ. ಈ ಬೆಳಕಿನಲ್ಲಿ ನೋಡುವಾಗ ಈ ಗರಡಿ ಕೂಡ ಯುದ್ಧ ವಿದ್ಯೆ ಕಲಿಸುತ್ತಿದ್ದ ಕೇಂದ್ರವಾಗಿದ್ದಿರಬಹುದು. ಕೇವಲ ಆಯುಧ ಮಾತ್ರ ಇದ್ದಿದ್ದು, ಅರಮನೆ ಪಕ್ಕದಲ್ಲೇ ಇರುವುದು, ಪ್ರಾಚೀನ ಗರಡಿಯ ಆಯವನ್ನೇ ಹೋಲುವುದು ಇದಕ್ಕೆ ಕಾರಣವಾಗಿದೆ. ಇಲ್ಲಿರುವ  ಕೋಟಿಚೆನ್ನಯರ ಬಿಂಬವು ಉಳಿದ ಎಲ್ಲಾ ಕಡೆಗಳಲ್ಲಿರುವ ಬಿಂಬಕ್ಕಿಂತ ದೊಡ್ಡದು ಮಾತ್ರವಲ್ಲ ತಾವು ಎಂದು ಕರೆಯಲ್ಪಡುವ ಕೋಟಿಚೆನ್ನಯರ ಗರಡಿಮನೆಯ ಸುತ್ತ ಈಗಲೂ ನಾಗರಹಾವು ಪ್ರತ್ಯಕ್ಷವಾಗಿ ಗೋಚರಿಸುತ್ತದೆ.ಅಲ್ಲದೆ ಇಲ್ಲಿರುವ ಸುರಿಯವನ್ನು ಸ್ವತಃ ಕೋಟಿಚೆನ್ನಯರೇ ತಯಾರಿಸಿದ್ದು ಎಂದು ನಂಬಲಾಗಿದೆ.

ಗರಡಿಮನೆ(ತಾವು)ಯ ಪಂಚಾಂಗ ಈಗಲೂ ಉಳಿದುಕೊಂಡಿದ್ದು ಕೋಟಿಚೆನ್ನಯರು ತಮ್ಮ ಅಂಗಸೌಷ್ಟವ,ದೇಹದಾರ್ಢ್ಯತೆ ಬೆಳೆಸಿಕೊಳ್ಳಲು ಇದೇ ಗರಡಿಮನೆಯನ್ನೆ ಬಳಸುತ್ತಿದ್ದರು ಎಂದು ನಂಬಲಾಗಿದೆ.ಕೋಟಿಚೆನ್ನಯರ ಗರಡಿ ಹಲವೆಡೆ ಇದ್ದರೂ ಗರಡಿಮನೆ (ತಾವು) ಎಲ್ಲೂ ಕಾಣಸಿಕ್ಕಿಲ್ಲ.

ಇಂತಹ ಭವ್ಯಪರಂಪರೆ ಹೊಂದಿರುವ ಇಲ್ಲಿ ಸುಮಾರು ಶತಮಾನಗಳ ಹಿಂದೆ ಮುತ್ತಮ್ಮ ಎಂಬವರ ನೇತೃತ್ವದಲ್ಲಿ  19ವರ್ಷ ಹಾಗೂ 1978 ಹಾಗೂ 1979ರಲ್ಲಿ ವಿಶ್ವನಾಥ ಸಾಲಿಯಾನ್‌ರು ನೇಮೋತ್ಸವ ನಡೆಸಿದರು ಎಂದು ಬರೆದಿಟ್ಟ ಲಿಖಿತ ದಾಖಲೆ ಈಗಲೂ ಇದೆ.

ಪ್ರಾಚೀನ ಅರಸು ಮನೆತನವೇ ಕ್ರಮೇಣ ಗುತ್ತು ಆಗಿ ಪರಿವರ್ತನೆಗೊಂಡಿರುವ ಬಗ್ಗೆ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. “ಭವಿಷ್ಯದಲ್ಲಿ ಇಡೀ ಅಗರಿ ಗುತ್ತು ಪರಿಸರವನ್ನು ಪುನರುತ್ಥಾನಗೊಳಿಸಿ ಐತಿಹಾಸಿಕ ವೈಭವ ಮರುಕಳಿಸುವಂತೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಅಷ್ಟಮಂಗಲ ಚಿಂತಕ  ಶಶಿಧರನ್  ಮಾಂಗಾಡ್ ಹಾಗೂ ರಾಜೇಶ್ ಎರಿಯಾ ಅವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನಾಚಿಂತನೆ ಮುಗಿದಿದ್ದು ಫೆ.18ರಂದು ಬಾಲಾಲಯ ಪ್ರತಿಷ್ಟೆ ಮತ್ತು ಮಾ.6ರಂದು ಗರಡಿನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗುವುದು ಎಂದು ಅಗರಿಗುತ್ತು  ಕುಟುಂಬದ  ಪ್ರಮುಖರು ತಿಳಿಸಿದ್ದಾರೆ .

ಜನಜನಿತ ಐತಿಹ್ಯಗಳು

* ಪ್ರಾಚೀನ ಕಾಲದಲ್ಲಿ ಬಿಲ್ಲವ ಮನೆತನ ಇಲ್ಲಿ ಆಳ್ವಿಕೆ ಮಾಡುತ್ತಿದ್ದು, ಬಳಿಕ ಅದು ಬಲ್ಲಾಳ ವಂಶಸ್ಥರ ಪಾಲಾಯಿತು. ಕೋಟಿ- ಚೆನ್ನಯರ ನೆರವಿನಿಂದ ಮತ್ತೆ ಬಿಲ್ಲವ ವಂಶಸ್ಥರು ಯುದ್ಧ ಮಾಡಿ ಮರು ವಶಪಡಿಸಿಕೊಂಡರು ಎಂಬ ಮಾತು ಇಲ್ಲಿ ಜನಜನಿತ.

 * ಎಣ್ಮೂರಿನಲ್ಲಿದ್ದ ಸಂದರ್ಭ ಇಲ್ಲಿಗೆ ಬಂದಿದ್ದ ಕೋಟಿ – ಚೆನ್ನಯರು ಯುವಕರ ಸೈನ್ಯ ಕಟ್ಟಿ ಗರಡಿ ನಿರ್ಮಿಸಿ ಹೋದರು ಎಂಬುದು ಮತ್ತೊಂದು ಐತಿಹ್ಯ.

 * ಇಕ್ಕೇರಿ ಅರಸರ ಸೈನ್ಯ ತುಳುನಾಡಿಗೆ ದಾಳಿ ಮಾಡಿದಾಗ ಇಲ್ಲಿಗೂ ಬಂದಿದ್ದು, ಆಗ ಇಲ್ಲಿನ ಅರಮನೆಯಲ್ಲಿ 101 ತೊಟ್ಟಿಲು ಇರುವುದು ಕಂಡು ಸೈನಿಕರು ಬೆರಗಾಗಿದ್ದರಂತೆ.

 * ಶತಮಾನದ ಹಿಂದಿನವರೆಗೂ ಇಲ್ಲಿ ಆನೆ ಸಾಕಲಾಗುತ್ತಿತ್ತಂತೆ.

 * ಕೊಡಗಿನಲ್ಲಿ ಹೋಗಿ ನೆಲೆ ನಿಂತಿದ್ದ ಮುತ್ತಮ್ಮ ಎಂಬವರು ಆಗಾಗ ಊರಿಗೆ ಬಂದಾಗ ಬ್ರಿಟಿಷ್ ಅಧಿಕಾರಿಗಳೂ ಗೌರವ ಕೊಡುತ್ತಿದ್ದರಂತೆ.

 ಇಲ್ಲಿ ದೊರೆತಿರುವ ಅಪೂರ್ವ ವಿಗ್ರಹಗಳು

 * ಕುಸಿದು ಹೋದ ಧರ್ಮ ಚಾವಡಿಯ ಪಕ್ಕದಲ್ಲಿ ಯುದ್ಧ ಗರಡಿಯ ಕುರುಹು ಇದ್ದು, ಅಲ್ಲಿಂದ ಕೆಳಗೆ ಬೈಲಿನಲ್ಲಿ ಅರಸು ದೈವಗಳ ಸ್ಥಾನ ಮತ್ತು ಬ್ರಹ್ಮಬೈದರ್ಕಳ ತಾವು ಇದೆ. ಇಲ್ಲಿ ಧರ್ಮರಸು ಉಳ್ಳಾಕುಲು, ಕೊಡಮಣಿತ್ತಾಯ, ಪಿಲಿ ಚಾಮುಂಡಿ, ಮಹಿಷಂದಾಯ, ಬೊಟ್ಟಿ ಜುಮಾದಿ, ಮುಂತಾದ ರಾಜನ್ ದೈವಗಳು ಒಟ್ಟಿಗೇ ಇರುವುದನ್ನು ನೋಡಿದರೆ ಇದೊಂದು ಅರಸು ಸಂಸ್ಥಾನವಾಗಿತ್ತು ಎನ್ನುವ ನಂಬಿಕೆಗೆ ಇಂಬು ಕೊಡುತ್ತದೆ.

 * ತಾವು ಎಂದರೆ ಮನೆ ಗರಡಿ. ಇಲ್ಲಿ ಆಳಿದ್ದ ಬಿಲ್ಲವ ಮಾಂಡಳಿಕರು, ಕೋಟಿ – ಚೆನ್ನಯರ ಕಾಲಾನಂತರ ಅವರು ಕಟ್ಟಿಸಿದ ಯುದ್ದ ಗರಡಿಯ ಸನಿಹದಲ್ಲೇ ಆರಾಧಾನಾ ತಾವು ನಿರ್ಮಿಸಿರಬಹುದು.

 * ಎಲ್ಲ ರಾಜನ್ ದೈವಗಳ ಅಪೂರ್ವ ವಿಗ್ರಹಗಳು ಇಲ್ಲಿದ್ದು, ಜತೆಗೆ ಕೋಟಿ – ಚೆನ್ನಯ ಹಾಗೂ ನಾಗಬ್ರಹ್ಮ ವಿಗ್ರಹಗಳೂ ಇವೆ.

1101PLD 1

1101PLD 1A

1101PLD 1B

1101PLD 1C

1101PLD 1D

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.