Breaking News

ತೆಗ್ಗು ಶಾಲಾ ಕಟ್ಟಡದ ಮತ್ತೊಂದು ಕೊಠಡಿಯ ಮಾಡಿನ ಹಂಚು ಕುಸಿತ ಭಯದ ನೆರಳಲ್ಲಿ ವಿದ್ಯಾರ್ಥಿಗಳು-ಪ್ರಾ.ಶಾ.ಶಿಕ್ಷಕರ ಸಂಘದಿಂದ ಪರಿಶೀಲನೆ

Puttur_Advt_NewsUnder_1
Puttur_Advt_NewsUnder_1

2ಪುತ್ತೂರು: ಕೆಯ್ಯೂರು ಗ್ರಾಮದ ತೆಗ್ಗು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದು ಭಾಗದ ಕೊಠಡಿಯ ಮಾಡಿನ ಹಂಚುಗಳು ಜ.8 ರಂದು ಧಿಡೀರ್ ಕುಸಿತಕ್ಕೊಳಗಾಗಿದ್ದು ಮಕ್ಕಳು ಜೀವ ಭಯದ ನೆರಳಲ್ಲೇ ಪಾಠ ಆಲಿಸಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಈಗಾಗಲೇ ಶಾಲೆಯ ಒಂದು ಭಾಗದ ಎರಡು ಕೊಠಡಿಗಳ ಗೋಡೆ ಬಿರುಕು ಬಿಟ್ಟಿದ್ದು ಅಲ್ಲದೆ ಮಾಡು ಕೂಡ ಬಿದ್ದಿರುತ್ತದೆ. ಇದನ್ನು ದುರಸ್ತಿ ಮಾಡುವ ಸಲುವಾಗಿ ಶಿಕ್ಷಣ ಇಲಾಖೆಯಿಂದ ಯಾವುದೇ ಅನುದಾನ ಮಂಜೂರುಗೊಳ್ಳದೇ ಇರುವುದರಿಂದ ಗ್ರಾಮಸ್ಥರು ರೊಚ್ಚಿಗೆದ್ದಿದ್ದರು. ತೆಗ್ಗು ಶಾಲಾ ರಕ್ಷಣಾ ಸಮಿತಿ ರಚಿಸಿಕೊಂಡು ಸಮಿತಿಯ ಮೂಲಕ ಗ್ರಾಮಸ್ಥರ ಸಹಕಾರದಿಂದ ಶಾಲಾ ಕಟ್ಟಡ ದುರಸ್ತಿ ಮಾಡುವುದು ಎಂದು ನಿರ್ಣಯ ಕೂಡ ಮಾಡಿದ್ದರು. ಇದರ ಬೆನ್ನಲ್ಲೆ ಶಾಲೆಯ ಇನ್ನೊಂದು ಕೊಠಡಿಯ ಮಾಡಿನ ಪಕ್ಕಾಸು ಮುರಿದಿದ್ದು ಹಂಚುಗಳು ಕೊಠಡಿಯೊಳಗೆ ಬಿದ್ದಿದೆ.ಆದರೆ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ. ಶಾಲೆಯು ಎಲ್ ಆಕಾರದಲ್ಲಿದ್ದು ೫ ಕೊಠಡಿಗಳು ಹಾಗೂ ಒಂದು ಸಭಾಂಗಣವನ್ನು ಒಳಗೊಂಡಿರುತ್ತದೆ. ಇದೀಗ ಒಂದು ಕೊಠಡಿಯಲ್ಲಿ ಮಾತ್ರ ಪಾಠ ನಡೆಯುತ್ತಿದ್ದರೆ, ಇನ್ನೊಂದು ಕೊಠಡಿಯಲ್ಲಿ ಶಾಲಾ ಕಛೇರಿ ಇರುತ್ತದೆ. ಉಳಿದಂತೆ ಎಲ್ಲಾ ಕೊಠಡಿಗಳಿಗೆ ಬೀಗ ಹಾಕಲಾಗಿದ್ದು ಅಕ್ಕ ಪಕ್ಕದಲ್ಲಿ ಮಕ್ಕಳು ಓಡಾಡದಂತೆ ಬೇಲಿಯನ್ನು ಹಾಕಲಾಗಿದೆ. ಇದೀಗ ಕಛೇರಿಯ ಪಕ್ಕದ ಕೊಠಡಿಯ ಮಾಡಿನ ಹಂಚುಗಳು ಕೂಡ ಬೀಳಲು ಆರಂಭವಾಗಿದ್ದು ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಭಯ ಶುರುವಾಗಿದೆ. ಪಾಠ ನಡೆಯುತ್ತಿರುವ ಕೊಠಡಿಯ ಮಾಡಿನ ರೀಪುಗಳು ಕೂಡ ಕಳಚಿಕೊಂಡಿದ್ದು ಅಪಾಯದ ಅಂಚಿನಲ್ಲಿವೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳಿಂದ ಪರಿಶೀಲನೆ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಾಮಚ್ಚನ್, ಕಾರ್ಯದರ್ಶಿ ಸುರೇಶ್ ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪುಷ್ಪಾ, ಸದಸ್ಯ ಸುಧಾಕರ ರೈರವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ಮಾಡಿದ ಬೆನ್ನಲ್ಲೆ ಈ ಘಟನೆ ನಡೆದಿದೆ.

ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿ ಹೋಗಿದ್ದಾರೆ-ಚಂದ್ರಶೇಖರ ಗೌಡ ನೆಲ್ಲಿಗುರಿ. ಅಧ್ಯಕ್ಷರು, ಎಸ್‌ಡಿಎಂಸಿ ತೆಗ್ಗು: ಶಾಲೆಯು ಎಲ್ ಆಕಾರದಲ್ಲಿರುವುದರಿಂದ 2 ಕೊಠಡಿ ಕೆಡಹುವಾಗ ಎಲ್ಲಾ ಕೊಠಡಿಗಳು ಬೀಳಲು ಸಾಧ್ಯವಿದೆ. ಇಂಜಿನಿಯರ್‌ರವರು ಶಾಲೆಗೆ ಬಾರದೇ, ಕಟ್ಟಡ ನೋಡದೇ ಅಂದಾಜುಪಟ್ಟಿ ತಯಾರಿಸಿದ್ದಾರೆ. 2  ಕೊಠಡಿ ನಾಶ ಮಾಡಿ ಅದರ ಸಾಮಾಗ್ರಿಗಳನ್ನು ಏಲಂ ಮಾಡಿ ಬಂದ ಹಣವನ್ನು ಶಿಕ್ಷಣ ಇಲಾಖೆಗೆ ಪಾವತಿಸಲು ಶಿಕ್ಷಣಾಧಿಕಾರಿ ನೋಟೀಸ್ ನೀಡಿದ್ದಾರೆ. ಹಾಗಾದರೆ ನಾವು ಕಟ್ಟಡ ಕೆಡವಿಯೂ ಏನೂ ಪ್ರಯೋಜನ. ನಮಗೆ ದುರಸ್ತಿ ಮಾಡಲು ಹಣ ಎಲ್ಲಿದೆ. ಇದ್ದ ಕಟ್ಟಡವನ್ನು ನಾಶ ಮಾಡಿ ಕುಳಿತುಕೊಂಡರೆ ನಮ್ಮ ಮಕ್ಕಳ ಗತಿ ಏನಾಗಬೇಕು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಶಾಲೆಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿ, ಶಾಲೆಯ ಬಗ್ಗೆ ಪತ್ರಿಕೆಗಳಲ್ಲಿ ಕೊಡಬೇಡಿ ಎಲ್ಲಾ ವ್ಯವಸ್ಥೆ ಮಾಡುವ ಎಂದು ಹೇಳಿ ಹೋಗಿದ್ದಾರೆ.ಅವರಿಗೆ ಶಾಲೆಯ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಮಕ್ಕಳ ಜೀವಕ್ಕೆ ಅಪಾಯ ಸಂಭವಿಸಿದರೆ ಅದಕ್ಕೆ ಅಧಿಕಾರಿಗಳೇ ನೇರ ಹೊಣೆಗಾರರು ಎಂದು ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ ಗೌಡ ನೆಲ್ಲಿಗುರಿ ಹೇಳಿದರು.

ತಾ.ಪಂ.ನಲ್ಲಿ ನಿರ್ಣಯ ಆಗಿರುವುದರಿಂದ ಏನೂ ಮಾಡಲು ಸಾಧ್ಯವಿಲ್ಲ-ಮಾಮಚ್ಚನ್, ಅಧ್ಯಕ್ಷರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ: ತೆಗ್ಗು ಶಾಲೆಯು ಎಲ್ ಆಕಾರದಲ್ಲಿದ್ದು, 2 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದ್ದು ಇದನ್ನು ಕೆಡವಲು ಶಾಲೆಯ ಹಿಂದಿನ ಎಸ್‌ಡಿಎಂಸಿಯ ಮನವಿಯಂತೆ ಈಗಾಗಲೇ ಇಂಜಿನಿಯರ್‌ರವರು ಅಂದಾಜುಪಟ್ಟಿ ತಯಾರಿಸಿದ್ದು, ತಾ.ಪಂ ಸ್ಥಾಯಿ ಸಮಿತಿಯಲ್ಲಿ ನಿರ್ಣಯ ಆಗಿರುತ್ತದೆ. ಎಲ್ಲಾ ಕೊಠಡಿಗಳನ್ನು ದುರಸ್ತಿ ಮಾಡಲು ಸುಮಾರು 2 ಲಕ್ಷ ರುಪಾಯಿ ಬೇಕಾಗಿರುವುದು ಸತ್ಯ. ಆದರೆ ಈ ೨ ಕೊಠಡಿಗಳನ್ನು ಈ ಕೂಡಲೇ ನಾಶ ಮಾಡಲೇ ಬೇಕಾಗಿದೆ. ಇಲ್ಲದಿದ್ದರೆ ಮುಂದೆ ಆಗುವ ಎಲ್ಲಾ ಅವಘಡಗಳಿಗೆ ನೇರ ಎಸ್‌ಡಿಎಂಸಿ ಮತ್ತು ಶಿಕ್ಷಕರು ಹೊಣೆಯಾಗುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೂ ನಾವು ಎಲ್ಲಾ ಮಾಹಿತಿ ನೀಡಿದ್ದೇವೆ. ಅವರು ಕೂಡ ಪರಿಶೀಲನೆ ಮಾಡಲಿದ್ದಾರೆ. ಇಂಜಿನಿಯರ್ ಸ್ಥಳಕ್ಕೆ ಬಾರದೇ ಅಂದಾಜುಪಟ್ಟಿ ತಯಾರಿಸಿದ್ದಾರೆ ಎಂಬುದು ಎಸ್‌ಡಿಎಂಸಿಯವರ ಆರೋಪ. ಸದನದಲ್ಲಿ ನಿರ್ಣಯ ಆಗಿರುವುದರಿಂದ ಈ ಬಗ್ಗೆ ನಾನೇನು ಹೇಳಲಾರೆ. ಕಟ್ಟಡ ಸಾಮಾಗ್ರಿ ಏಲಂನಿಂದ ಬಂದ ಹಣವನ್ನು ಇಲಾಖೆಗೆ ಪಾವತಿಸಬೇಕಾಗುತ್ತದೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಧ್ಯಕ್ಷ ಮಾಮಚ್ಚನ್ ತಿಳಿಸಿದರು.

1254

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.