ಕುಂಬ್ರ:ಬೈಕ್-ಸ್ಕಾರ್ಪಿಯೋ ಡಿಕ್ಕಿ-ಸಹ ಸವಾರ ಸುಳ್ಯದ ಸಚಿನ್ ಮೃತ್ಯು-ಸವಾರ ರಾಕೇಶ್ ಗಂಭೀರ ಗಾಯ

Puttur_Advt_NewsUnder_1
Puttur_Advt_NewsUnder_1

kumbra

ಪುತ್ತೂರು: ಮಾಣಿ-ಮೈಸೂರು ರಸ್ತೆಯ ಕುಂಬ್ರ ಸಮೀಪ ಬೈಕ್ ಹಾಗೂ ಸ್ಕಾರ್ಪಿಯೋ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸಹಸವಾರ ಸುಳ್ಯ ಜಟ್ಟಿಪಳ್ಳದ ಸಚಿನ್ ಮೃತಪಟ್ಟಿದ್ದಾರೆ. ಸವಾರ ತೀವ್ರ ಗಾಯಗೊಂಡು ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜ.೧೦ರಂದು ತಡರಾತ್ರಿ ನಡೆದಿದೆ

ಸುಳ್ಯ ತಾಲೂಕು ಪೆರಾಜೆ ಗ್ರಾ.ಪಂ ಮಾಜಿ ಸದಸ್ಯ, ಮೂಲತಃ ಪೆರಾಜೆ ರಾಮಕಜೆಯವರಾಗಿದ್ದು ಪ್ರಸ್ತುತ ಜಟ್ಟಿಪಳ್ಳ ನಿವಾಸಿ ಆರ್.ಡಿ ಆನಂದರವರ ಪುತ್ರ ಸಚಿನ್ ಮೃತಪಟ್ಟವರು. ಸಹ ಸವಾರ ಕುಂದಲ್ಪಾಡಿ ಕೆ.ಎಸ್ ಬಾಲಕೃಷ್ಣರವರ ಪುತ್ರ ರಾಕೇಶ್‌ರವರು ತೀವ್ರ ಗಾಯಗೊಂಡು ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಚಿನ್ ಜ.10ರಂದು ಸುಳ್ಯ ಚೆನ್ನಕೇಶವ ದೇವಸ್ಥಾನದ ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು. ಬಳಿಕ ಕಾರ್ಯನಿಮಿತ್ತ ತನ್ನ ಸಂಬಂಧಿಕ ರಾಕೇಶ್‌ರವರೊಂದಿಗೆ ಬೈಕ್‌ನ ಹಿಂಬದಿ ಸವಾರನಾಗಿ ಪುತ್ತೂರಿಗೆ ಬಂದಿದ್ದರು. ಸುಳ್ಯಕ್ಕೆ ಹಿಂತಿರುಗುವ ವೇಳೆ ಕುಂಬ್ರ ಸಮೀಪ ಎದುರಿನಿಂದ ಬಂದ ಮಹೀಂದ್ರಾ ಸ್ಕಾರ್ಪಿಯೋ ಡಿಕ್ಕಿ ಹೊಡೆದಿದೆ. ಘಟನೆಯಿಂದ ತೀವ್ರ ಗಾಯಗೊಂಡಿದ್ದ ಬೈಕ್ ಸವಾರರನ್ನು ಅದೇ ಸ್ಕಾರ್ಪಿಯೋದಲ್ಲಿ ಮಂಗಳೂರು ತೇಜಸ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸಹ ಸವಾರ ಸಚಿನ್ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಸವಾರ ರಾಕೇಶ್‌ರವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಭಾಕರ ರೈ ಪೆರಾಜೆ ನೀಡಿರುವ ದೂರಿನ ಮೇರೆಗೆ ಸ್ಕಾರ್ಪಿಯೋ ಚಾಲಕ ಸುದರ್ಶನ್ ವಿರುದ್ದ ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕಾರ್ಪಿಯೋದಲ್ಲಿದ್ದವರಿಗೆ ಹಲ್ಲೆ: ಘಟನೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಉದ್ರಿಕ್ತ ಸಾರ್ವಜನಿಕರು ಅಪಘಾತಕ್ಕೆ ಕಾರಣವಾದ ಆಕ್ರೋಶದಲ್ಲಿ ಸ್ಕಾರ್ಫಿಯೋದಲ್ಲಿದ್ದವರಿಗೆ ಹಲ್ಲೆ ನಡೆಸಿರುವುದಾಗಿ ಹೇಳಲಾಗಿದೆ. ಬಳಿಕ ಸ್ಕಾರ್ಫಿಯೋದಲ್ಲಿದ್ದವರೇ ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.