Breaking News

ಪಡುಮಲೆ ಕ್ಷೇತ್ರದಲ್ಲಿ ಹಿಂದಿನ ವ್ಯವಸ್ಥಾಪನಾ ಸಮಿತಿಯ ಸಾರಥ್ಯದಲ್ಲೇ ಜಾತ್ರೆ ಪ್ರಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ತುಳುನಾಡಿನ ವೀರಪುರುಷರೆಂಬ ಐತಿಹಾಸಿಕ ಹಿನ್ನಲೆಯುಳ್ಳ ಕೋಟಿ ಚೆನ್ನಯರ ಜನ್ಮಸ್ಥಳವಾದ ಬಡಗನ್ನೂರು ಗ್ರಾಮದ  ಪಡುಮಲೆ ಕ್ಷೇತ್ರಕ್ಕೆ ಸಂಬಂಧಿಸಿದ ಕೂವೆ ಶಾಸ್ತಾರ ವಿಷ್ಣು ಮೂರ್ತಿ ದೇವಸ್ಥಾನ ಮತ್ತು ಪಡುಮಲೆ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಆಡಳಿತ ಹಸ್ತಾಂತರ ವಿವಾದದ ನಡುವೆಯೇ ದೇವಸ್ಥಾನದಲ್ಲಿ  ಹಿಂದಿನ ವ್ಯವಸ್ಥಾಪನಾ ಸಮಿತಿಯ ಸಾರಥ್ಯದಲ್ಲಿ ವರ್ಷಾವಧಿ ಜಾತ್ರೆ  ಜ.12ರಿಂದ ಆರಂಭಗೊಂಡು ಮುಂದುವರಿದಿದೆ.

ವ್ಯವಸ್ಥಾಪನಾ ಸಮಿತಿಯ ಆಡಳಿತಾವಧಿ ಮುಕ್ತಾಯಗೊಂಡಿದ್ದರೂ ಆಡಳಿತಾಧಿಕಾರಿ ಕೈಗೆ ಅಧಿಕಾರ ಹಸ್ತಾಂತರಿಸದೆ ಸತಾಯಿಸಿದ  ಮತ್ತು ಕಾನೂನು ಬಾಹಿರವಾಗಿ ಸಭೆ ನಡೆಸಿದ ಆರೋಪ-ದೇವಸ್ಥಾನ ಮತ್ತು ದೈವಸ್ಥಾನಕ್ಕೆ ಸಂಬಂಧಿಸಿದ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ ,ಸ್ಥಿರ ಚರ ಸೊತ್ತುಗಳನ್ನು, ಬ್ಯಾಂಕ್ ಖಾತೆ  ಮತ್ತು  ದಾಖಲೆಪತ್ರಗಳನ್ನು ದುರುಪಯೋಗಪಡಿಸಿಕೊಂಡು ಆಡಳಿತಾಧಿಕಾರಿಗಳಿಗೆ ಹಸ್ತಾಂತರಿಸದೆ ವಂಚಿಸಿದ ದೂರು ಮೊದಲಾದ ಪ್ರಕರಣಗಳ ಹಿನ್ನಲೆಯಲ್ಲಿ ಈ ಕ್ಷೇತ್ರ ವಿವಾದಕ್ಕೆ ಕಾರಣವಾಗಿತ್ತು.

ಈ ವಿವಾದಗಳ ನಡುವೆಯೇ ಮನೋಜ್ ರೈ ಪೇರಾಲು ಅವರ ನೇತೃತ್ವದ  ಹಿಂದಿನ ವ್ಯವಸ್ಥಾಪನಾ ಸಮಿತಿಯವರು ದೇವಾಲಯದ ವರ್ಷಾವಧಿ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಿ  ಹಂಚಿಕೆ ಮಾಡಿದ್ದರು.  ಇದರ  ಬೆನ್ನಲ್ಲೇ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರು ದೇವಸ್ಥಾನ ಮತ್ತು ದೈವಸ್ಥಾನದ ದೈನಂದಿನ ಆಡಳಿತವನ್ನು ಸುಗಮವಾಗಿ ನೋಡಿಕೊಳ್ಳುವ ಸಲುವಾಗಿ ಮುಂದಿನ ಆರು ತಿಂಗಳ ತನಕ ಅಥವಾ ಹೊಸದಾಗಿ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ತನಕ ನೂತನ ಆಡಳಿತಾಧಿಕಾರಿಯಾಗಿ ಪಡುವನ್ನೂರು ಗ್ರಾಮಕರಣಿಕರನ್ನು ನೇಮಕ ಮಾಡಿ ಆದೇಶಿಸಿದ್ದರು.  ಆಡಳಿತಾಧಿಕಾರಿಯಾಗಿ ನೇಮಕಗೊಂಡಿದ್ದ ಗ್ರಾಮಕರಣಿಕ ರವಿ ಅವರು ಹಿಂದಿನ ವ್ಯವಸ್ಥಾಪನಾ ಸಮಿತಿಯವರು ಅಧಿಕಾರ ಹಸ್ತಾಂತರಿಸದಿರುವ ಮತ್ತು  ಜಾತ್ರೆಯ ಆಮಂತ್ರಣ ಹಂಚಿಕೆ ಮಾಡಿ ಹಣ ಸಂಗ್ರಹಿಸುತ್ತಿರುವ ಆರೋಪ ಹೊರಿಸಿ ಇಲಾಖೆಯ ಆಯುಕ್ತರಿಗೆ ದೂರು ನೀಡಿದ್ದರು. ಈ ನಡುವೆ ಮನೋಜ್ ರೈ ಪೇರಾಲು ಅವರು ಹೈಕೋರ್ಟು ಮೆಟ್ಟಲೇರಿ ನಡೆದ ಪ್ರಕ್ರಿಯೆಗಳಿಗೆ ತಡೆಯಾಜ್ಞೆ ತಂದಿದ್ದರು.

ಅವಧಿ ಮುಗಿದರೂ,ಆಡಳಿತಾಧಿಕಾರಿಯ ನೇಮಕವಾಗಿದ್ದರೂ ದೇವಸ್ಥಾನ ಮತ್ತು ದೈವಸ್ಥಾನದ ಆಡಳಿತವನ್ನು ಆಡಳಿತಾಧಿಕಾರಿಯ ಕೈಗೆ ಹಸ್ತಾಂತರಿಸದ ಮನೋಜ್ ರೈ ಪೇರಾಲು ಅವರ ನೇತೃತ್ವದ ಹಿಂದಿನ ವ್ಯವಸ್ಥಾಪನಾ ಸಮಿತಿಯ ವಿರುದ್ಧ ಬಡಗನ್ನೂರು ಗ್ರಾಮದ ಅಣಿಲೆ ನಿವಾಸಿ ಜಯರಾಜ್ ಶೆಟ್ಟಿ ಅವರು ಕಾನೂನು ಹೋರಾಟ ಆರಂಭಿಸಿದ್ದರು. ದೇವಸ್ಥಾನ ಮತ್ತು ದೈವಸ್ಥಾನಕ್ಕೆ ಸಂಬಂಧಿಸಿದ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣ ,ಸ್ಥಿರ ಚರ ಸೊತ್ತುಗಳನ್ನು, ಬ್ಯಾಂಕ್ ಖಾತೆ  ಮತ್ತು  ದಾಖಲೆಪತ್ರಗಳನ್ನು ದುರುಪಯೋಗಪಡಿಸಿಕೊಂಡು ಆಡಳಿತಾಧಿಕಾರಿಗಳಿಗೆ ಹಸ್ತಾಂತರಿಸದೆ ವಂಚಿಸಿರುವ  ಆರೋಪ ಹೊರಿಸಿ ಮತ್ತು ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿಕೊಳ್ಳುವಂತೆ ಆಗ್ರಹಿಸಿ ಅವರು ಇಲಾಖೆಯ ಸಚಿವರಿಗೆ, ಇಲಾಖೆಯ ಮೇಲಧಿಕಾರಿಗಳಿಗೆ, ಜಿಲ್ಲಾಧಿಕಾರಿಗೆ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿಯೇ ನೂತನ ಆಡಳಿತಾಧಿಕಾರಿಯ ನೇಮಕವೂ ಆಗಿತ್ತು.  ಆದರೆ ತಡೆಯಾಜ್ಞೆಯ ಹಿನ್ನಲೆಯಲ್ಲಿ ಆ ಎಲ್ಲಾ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ.

ವ್ಯವಸ್ಥಾಪನಾ ಸಮಿತಿ ಲೆಕ್ಕಪತ್ರ ಸಲ್ಲಿಸಬೇಕು, ಆಡಳಿತಾಧಿಕಾರಿ ಮೇಲುಸ್ತುವಾರಿ ನೋಡಿಕೊಳ್ಳಬೇಕು: ಹೈಕೋರ್ಟ್ ಮಧ್ಯಂತರ ಆದೇಶ

ಪುತ್ತೂರು: ಪಡುಮಲೆ ಕ್ಷೇತ್ರದಲ್ಲಿ ನಡೆಯುತ್ತಿರುವ ವರ್ಷಾವಧಿ ಜಾತ್ರೋತ್ಸವಕ್ಕೆ ಸಂಬಂಧಿಸಿದ ಖರ್ಚುವೆಚ್ಚಗಳ ಕುರಿತು ಲೆಕ್ಕಪತ್ರ ನೀಡಬೇಕು ಎಂದು ರಾಜ್ಯ ಹೈಕೋರ್ಟ್ ವ್ಯವಸ್ಥಾಪನಾ ಸಮಿತಿಗೆ ಆದೇಶಿಸಿದೆ.ಮಾತ್ರವಲ್ಲದೆ ಜಾತ್ರೋತ್ಸವದ ಮೇಲುಸ್ತುವಾರಿ ನೋಡಿಕೊಂಡು ಈ ಕುರಿತು ವರದಿ ಸಲ್ಲಿಸುವಂತೆ ನೂತನ ಆಡಳಿತಾಧಿಕಾರಿಯವರಿಗೆ ಆದೇಶಿಸಿದೆ.ಜ.೬ರಂದು ನೀಡಿದ್ದ ಮಧ್ಯಂತರ ಆದೇಶಕ್ಕೆ ಹೆಚ್ಚುವರಿಯಾಗಿ ಹೈಕೋರ್ಟ್ ಜ.13ರಂದು ಈ ಆದೇಶ ನೀಡಿದೆ.

ದೇವಳದ ವ್ಯವಸ್ಥಾಪನಾ ಸಮಿತಿಯ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ದೇವಳಕ್ಕೆ ಆಡಳಿತಾಧಿಕಾರಿಯನ್ನು ನೇಮಕಗೊಳಿಸಿ ದ.೩೧ರಂದು ಹೊರಡಿಸಲಾದ ಆದೇಶದ ವಿರುದ್ಧ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು ಅವರು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಆಡಳಿತಾಧಿಕಾರಿ ನೇಮಕಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿ ಜ.6ರಂದು ಆದೇಶಿಸಿತ್ತು.ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು.ಈ ಮಧ್ಯೆ ದೇವಳದಲ್ಲಿ ಜ.12ರಂದು ಜಾತ್ರೋತ್ಸವ ಪ್ರಾರಂಭಗೊಂಡಿದ್ದರಿಂದ ವ್ಯವಸ್ಥಾಪನಾ ಸಮಿತಿಯವರು ಜಾತ್ರಾ ಸಂದರ್ಭದಲ್ಲಿ ಸೇವೆ, ದೇಣಿಗೆ ಮತ್ತಿತರ ರೂಪದಲ್ಲಿ ದೇವಳದಲ್ಲಿ ಸಂಗ್ರಹವಾಗುವ ಹಣದ ಕುರಿತ ಲೆಕ್ಕಪತ್ರವನ್ನು ನೀಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.ಮಾತ್ರವಲ್ಲದೆ,ದೇವಳದ ಆಡಳಿತಾಧಿಕಾರಿಯಾಗಿ ನೇಮಕಗೊಂಡಿರುವವರು ಜಾತ್ರೋತ್ಸವದ ಮೇಲುಸ್ತುವಾರಿ ನೋಡಿಕೊಳ್ಳಬೇಕು ಮತ್ತು ಈ ಕುರಿತು ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದೂ ಆದೇಶಿಸಿದೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.