ಮುಗೇರಡ್ಕ ದೈವಸ್ಥಾನದ ಬ್ರಹ್ಮಕಲಶೋತ್ಸವ-ಧಾರ್ಮಿಕ ಸಭೆ ನಿಸ್ವಾರ್ಥ ಸೇವೆಯೇ ಭಗವಂತನಿಗೆ ದೊಡ್ಡ ಸಂಪತ್ತು: ಬ್ರಹ್ಮಾನಂದ ಸ್ವಾಮೀಜಿ

Puttur_Advt_NewsUnder_1
Puttur_Advt_NewsUnder_1

105ಪುತ್ತೂರು: ಉಪ್ಪಿನಂಗಡಿ ಸಮೀಪದ ಮೊಗ್ರು ಗ್ರಾಮದ ಮುಗೇರಡ್ಕ ಶ್ರೀ ಮೂವರು ದೈವಗಳ ದೈವಸ್ಥಾನದಲ್ಲಿ ಕಲ್ಕುಡ ಮತ್ತು ಪಿಲಿಚಾಮುಂಡಿ ದೈವಸ್ಥಾನದ ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವದ 2ನೇ ದಿನವಾದ ಜ.14ರಂದು ವಿವಿಧ ಕಾರ್ಯಕ್ರಮಗಳು ನಡೆಯಿತು.
ಬೆಳಿಗ್ಗೆ ಮಹಾಗಣಪತಿ ಹೋಮ, ಸ್ಥಳ ಶುದ್ಧಿ, ತಿಲಹೋಮ, ಸಾಯುಜ್ಯ ಪೂಜೆ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಸಂಜೆ ಮುಗೇರಡ್ಕ ಕ್ಷೇತ್ರಕ್ಕೆ ದೇವಶ್ಯ ಮತ್ತು ಅಂತರ ಭಂಡಾರ ಚಾವಡಿಯಿಂದ ದೈವಗಳ ಭಂಡಾರ ಆಗಮಿಸಿತು. ರಾತ್ರಿ ಸ್ವಸ್ತೀ ಪುಣ್ಯಾಹವಾಚನ, ಪ್ರಸಾದ ಶುದ್ಧಿ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಪೂಜಾ ಬಲಿ,ಪ್ರಕಾರ ಬಲಿ, ದುರ್ಗಾ ಪೂಜೆ ನಡೆಯಿತು. ಬಳಿಕ ಅನ್ನಸಂತರ್ಪಣೆ ನಡೆಯಿತು.

ಧಾರ್ಮಿಕ ಸಭೆ: ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಧರ್ಮಸ್ಥಳ ನಿತ್ಯಾನಂದ ನಗರ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಜಗತ್ತಿನ ಉದ್ದಾರಕ್ಕೆ, ಧರ್ಮದ ಕೈಂಕರ್ಯಕ್ಕೆ ಭಗವಂತ ಮಾನವ ಜನ್ಮ ನೀಡಿದ್ದಾನೆ. ಆದರೆ ಅದರ ಪರಿಕಲ್ಪನೆ ನಮ್ಮೊಳಗೆ ಕಾಣುತ್ತಿಲ್ಲ. ಪರಸ್ಪರ ಅಪನಂಬಿಕೆ, ದ್ವೇಷ ಬಿಟ್ಟು ಭಗವಂತನ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಭಗವಂತನಿಗೆ ಹಣ, ಶ್ರೀಮಂತಿಕೆ ಯಾವುದು ಬೇಡ. ನಿಸ್ವಾರ್ಥ ಸೇವೆಯೇ ದೊಡ್ಡ ಸಂಪತ್ತು ಎಂದು ನುಡಿದರು. ಜ್ಞಾನ, ಭಕ್ತಿ ಪಡೆಯಲು ಪುಣ್ಯ ಕ್ಷೇತ್ರಗಳ ಅಗತ್ಯವಿದೆ. ಇಂತಹ ಪುಣ್ಯ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಕೈಜೋಡಿಸುವ ಮೂಲಕ ಸತ್ಪ್ರಜೆಗಳಾಗಿ ಬೆಳೆಯೋಣ ಎಂದು ಸ್ವಾಮೀಜಿ ಹೇಳಿದರು.

ನೇತ್ರಾವತಿ ಉಳಿಯಲಿ: ನಳಿನ್: ಮುಖ್ಯ ಅತಿಥಿಯಾಗಿದ್ದ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ದೈವಕ್ಕೆ ಅಸ್ಪ್ರಶ್ಯತೆ ಇಲ್ಲ. ದೈವದ ಎದುರು ಎಲ್ಲರೂ ಒಂದೇ. ಇದು ಸಾಮರಸ್ಯದ ಸಂಕೇತವೂ ಹೌದು. ಸಾಮಾಜಿಕ ನ್ಯಾಯ ದೈವಸ್ಥಾನಗಳಲ್ಲಿ ಇದೆ. ದೈವದ ನ್ಯಾಯ ಪರಮೋಚ್ಛ ನ್ಯಾಯವಾಗಿದೆ ಎಂದು ಹೇಳಿದರು.ದೈವಸ್ಥಾನ, ನಾಗಬನ, ಪ್ರಕೃತಿ, ನದಿ ಉಳಿದಲ್ಲಿ ಮಾತ್ರ ತುಳುನಾಡು ಉಳಿಯಲಿದೆ. ನೇತ್ರಾವತಿ ನದಿ ತುಳುನಾಡಿನ ಸಂಸ್ಕೃತಿ. ಮುಗೇರಡ್ಕ ದೈವಗಳ ಸಾನಿಧ್ಯದಲ್ಲಿ ಹರಿಯುವ ನೇತ್ರಾವತಿ ನದಿ ತಿರುವು ಮಾಡಲು ಹೊರಟವರಿಗೆ ದೈವವೇ ಬುದ್ಧಿ ಕಲಿಸಲಿ ಎಂದು ನಳಿನ್ ಕುಮಾರ್ ಹೇಳಿದರು. ಬೆಳ್ತಂಗಡಿ ತಾಲೂಕು ಗೌಡ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ, ಕೇಂದ್ರ ಸರ್ಕಾರದ ಅಭಿಯೋಜಕರು, ರಾಜ್ಯ ಹೈಕೋರ್ಟ್ ನ್ಯಾಯವಾದಿ ಕರುಣಾಕರ ಗೌಡ, ಇನ್ನೋರ್ವ ಹೈಕೋರ್ಟ್ ನ್ಯಾಯವಾದಿ ಹರೀಶ್ ಪೂಂಜ, ತೂಗುಸೇತುವೆ ತಂತ್ರಜ್ಞ ಗಿರೀಶ್ ಭಾರಧ್ವಾಜ್, ಬೆಳ್ತಂಗಡಿಯ ನ್ಯಾಯವಾದಿ ಪ್ರತಾಪ್ ಸಿಂಹ ನಾಯಕ್ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರೂ ಆದ ಸುಂದರ ಗೌಡ ಅರ್ಬಿ ಉಪ್ಪಿನಂಗಡಿ ಅಧ್ಯಕ್ಷತೆ ವಹಿಸಿದ್ದರು. ಕೇಶವ ಜಾಲ್ನಾಡೆ, ರಾಮಣ್ಣ ಗೌಡ ಎರ್ಮಾಳ, ಸಾಂತಪ್ಪ ಗೌಡ ಅಲೆಕ್ಕಿ, ಉದಯ ಭಟ್ ಅಲೆಕ್ಕಿ, ಚಂದ್ರಹಾಸ ದೇವಶ್ಯ, ಜಗದೀಶ್ ಅರ್ಬಿ, ವಿಜಯ ಪೂಜಾರಿ ದಂಬೆತ್ತಿಮಾರು ಅತಿಥಿಗಳಿಗೆ ಶಾಲು, ಹೂ ನೀಡಿ ಗೌರವಿಸಿದರು.

ಸನ್ಮಾನ: ತೂಗುಸೇತುವೆ ತಂತ್ರಜ್ಞ ಗಿರೀಶ್ ಭಾರದ್ವಾಜ್,ವೀರಪ್ಪ ಗೌಡ ಕಲ್ಲಡ್ಕ, ಕಿನ್ಯಣ್ಣ ಗೌಡ ಒರುಂಗುಡೇಲು, ವೆಂಕಪ್ಪ ಗೌಡ ಪರಕ್ಕಜೆ, ದಿ.ಅಣ್ಣು ಗೌಡದ ಪತ್ನಿ ಸೀತಮ್ಮ ಹಾಗೂ ದಾಮೋದರ ಶಾಂತಿನರ ಅನಾಲುಕೊಳಿಕೆಯವರನ್ನು ಕಾರ್‍ಯಕ್ರಮದಲ್ಲಿ ಸನ್ಮಾನಿಸಲಾಯಿತು. ಅಲ್ಲದೇ ವಿವಿಧ ರೀತಿಯಲ್ಲಿ ಸಹಕರಿಸಿದ ಪುರುಷೋತ್ತಮ ಗೌಡ ಬಲ್ನಾಡು, ಬಾಬು ಗೌಡ, ಕುಶಾಲಪ್ಪ ಗೌಡ, ಮೋಹನ ನಾಯ್ಕ್‌ರವರಿಗೆ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆ ಸಮಿತಿ ಸದಸ್ಯೆ ಹಿರಣ್ಯ ದೇವಶ್ಯ ಸ್ವಾಗತಿಸಿದರು. ಪುರಂದರ ವಂದಿಸಿದರು. ಚೇತನ್ ಆನೆಗುಂಡಿ ಕಾರ್‍ಯಕ್ರಮ ನಿರೂಪಿಸಿದರು. ಗೀತಾಲಕ್ಷ್ಮಿ ಕೊಳಬ್ಬೆ ಪ್ರಾರ್ಥಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ರಾತ್ರಿ ವಿಟ್ಲ ವಿಠಲ ನಾಯಕ್ ಮತ್ತು ಬಳಗದವರಿಂದ ವಿನೂತನ ಶೈಲಿಯ ಕಾರ್ಯಕ್ರಮ “ಗೀತಾ ಸಾಹಿತ್ಯ ಸಂಭ್ರಮ” ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಜೆ ಬಿಳಿನೆಲೆ ಶಾರದಾಂಬಾ ಕಲಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ಜ.15 ಪುನ:ಪ್ರತಿಷ್ಠೆ, ಸಮಾರೋಪ

ಜ.15ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು ಬೆಳಿಗ್ಗೆ 8.52ರ ಕುಂಭ ಲಗ್ನದಲ್ಲಿ ಕಲ್ಕುಡ ಮತ್ತು ಪಿಲಿಚಾಮುಂಡಿ ದೈವಗಳ ಪುನ: ಪ್ರತಿಷ್ಠೆ ನಡೆಯಲಿದೆ. ಬಳಿಕ ಶಿರಾಡಿ, ಕಲ್ಕುದ ಮತ್ತು ಪಿಲಿಚಾಮುಂಡಿ ದೈವಗಳ ಸಾನಿಧ್ಯದಲ್ಲಿ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ ನಡೆಯಲಿದೆ. ಬಳಿಕ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಹಿಸಲಿದ್ದು ಹಲವು ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ ಗುತ್ತು ಧೂಮಾವತಿ ದೈವಸ್ಥಾನದಲ್ಲಿ ಪ್ರಾರ್ಥನೆ ನಂತರ ವಾರ್ಷಿಕ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ನಡೆಯಲಿದೆ. ಮಧ್ಯಾಹ್ನ ದೈವಗಳ ಭಂಡಾರ, ಭಂಡಾರ ಚಾವಡಿಗೆ ಹಿಂತಿರುಗಿದ ನಂತರ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಬೆಳಿಗ್ಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

106

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.