Breaking News

ಮುಗೇರಡ್ಕ ಕಲ್ಕುಡ, ಪಿಲಿಚಾಮುಂಡಿ ದೈವದ ಪುನ: ಪ್ರತಿಷ್ಠೆ, ಸಮಾರೋಪ

Puttur_Advt_NewsUnder_1
Puttur_Advt_NewsUnder_1

20160115005557

ಬ್ರಹ್ಮಕಲಶೋತ್ಸವದ ಜೊತೆಗೆ ನಮ್ಮ ಆತ್ಮ ಶುದ್ಧೀಕರಣವೂ ಆಗಬೇಕು: ರಮಾನಾಥ ರೈ

ಪುತ್ತೂರು: ದೇವಸ್ಥಾನ, ದೈವಸ್ಥಾನಗಳ ಬ್ರಹ್ಮಕಲಶೋತ್ಸವದ ಜೊತೆ ನಮ್ಮ ಆತ್ಮ ಶುದ್ಧೀಕರಣವೂ ಆಗಬೇಕು. ಇನ್ನೊಬ್ಬರೊಂದಿಗೆ ಪ್ರೀತಿ ಹುಟ್ಟಬೇಕೇ ಹೊರತು, ದ್ವೇಷ ಬೇಡ ಎಂದು ರಾಜ್ಯ ಅರಣ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬಿ.ರಮಾನಾಥ ಹೇಳಿದರು.

ಅವರು ಉಪ್ಪಿನಂಗಡಿ ಸಮೀಪದ ಮೊಗ್ರು ಗ್ರಾಮದ ಮುಗೇರಡ್ಕ ಶ್ರೀ ಮೂವರು ದೈವಗಳ ದೈವಸ್ಥಾನದಲ್ಲಿ ಜ.15ರಂದು ನಡೆದ ಕಲ್ಕುಡ ಮತ್ತು ಪಿಲಿಚಾಮುಂಡಿ ದೈವಸ್ಥಾನದ ನವೀಕರಣ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಧಾರ್ಮಿಕ ಸಭೆಗಳು ನಮ್ಮ ಧರ್ಮದ ಲೋಪದೋಷಗಳ ಕುರಿತು ಚರ್ಚಿಸುವ ವೇದಿಕೆಯಾಗಬೇಕೇ ಹೊರತು ಇನ್ನೊಂದು ಧರ್ಮದ ದಾಳಿಗೆ ಬಳಕೆಯಾಗಬಾರದು. ನಮ್ಮ ಹಕ್ಕುಗಳು, ನಡವಳಿಕೆಗಳ ಬಗ್ಗೆ ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕೆಂದ ಅವರು ಹಿಂದಿನ ಕಾಲದಲ್ಲಿ ರಾಜಾಶ್ರಯದಲ್ಲಿ ದೇವಾಲಯಗಳ ಜೀರ್ಣೋದ್ಧಾರ ಕಾರ‍್ಯ ನಡೆಯುತ್ತಿತ್ತು. ಇಂದು ಜನಾಶ್ರಯದಲ್ಲಿ ಜೀರ್ಣೋದ್ಧಾರ ಕಾರ‍್ಯಗಳು ನಡೆಯುತ್ತಿವೆ. ಈ ಮೂಲಕ ನಾವು ಸಾಮಾಜಿಕ ಬದಲಾವಣೆ ಕಾಣಬಹುದು ಎಂದು ರಮಾನಾಥ ರೈ ಹೇಳಿದರು.

ಸೇತುವೆ ನಿರ್ಮಾಣ: ರಾಷ್ಟ್ರೀಯ ಹೆದ್ದಾರಿಯಿಂದ ಮುಗೇರಡ್ಕಕ್ಕೆ ನೇತ್ರಾವತಿ ನದಿಗೆ ಶಾಶ್ವತ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಮುಗೇರಡ್ಕ ಜನತೆ ಪರವಾಗಿ ವೇದಿಕೆಯಲ್ಲಿ ರಮಾನಾಥ ರೈಯವರು ಮನವಿ ಸಲ್ಲಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ರಮಾನಾಥ ರೈ, ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ದೇವಸ್ಥಾನಗಳ ಆಡಳಿತ ಮಂಡಳಿಯ ಸಹಕಾರ ಪಡೆದುಕೊಂಡು ಅರಣ್ಯ ಇಲಾಖೆಯ ವಿವಿಧ ಯೋಜನೆಯಡಿ ಗಿಡ ನೆಡುವ ಕಾರ‍್ಯಕ್ರಮ ಹಮ್ಮಿಕೊಳ್ಳುವಂತೆ ರಮಾನಾಥ ರೈಯವರು ವೇದಿಕೆಯಲ್ಲಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಹರೀಶ್ ಗೌಡರಿಗೆ ಸೂಚನೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಎನ್.ಕೆ.ಜಗನ್ನೀವಾಸ ರಾವ್ ಮಾತನಾಡಿ, ದೇವಸ್ಥಾನ ದೈವಸ್ಥಾನಗಳು ಧಾರ್ಮಿಕ ಪ್ರಜ್ಞೆ, ಸಂಸ್ಕಾರ ಬೆಳೆಸಲು ಹಾಗೂ ಹಿಂದೂ ಸಮಾಜದ ಸಂಘಟನೆಗಾಗಿ ಅಗತ್ಯವಾಗಿದೆ. ಈ ಉದ್ದೇಶವಿಟ್ಟುಕೊಂಡೇ ಹಿರಿಯರು ದೇವಾಲಯ, ದೈವಸ್ಥಾನ ನಿರ್ಮಿಸಿದ್ದಾರೆ. ತಂತ್ರ ವರ್ಗ, ಅರ್ಚಕ ವೃಂದ, ಆಡಳಿತ ವರ್ಗ ಹಾಗೂ ಭಕ್ತಾದಿಗಳು ಸಕ್ರಿಯವಾಗಿ ಪಾಲ್ಗೊಂಡಲ್ಲಿ ದೇವಸ್ಥಾನ, ದೈವಸ್ಥಾನ ಬೆಳೆಯಲು ಸಾಧ್ಯವಿದೆ. ರಾಜಕೀಯ ಪ್ರವೇಶಿಸಿದಲ್ಲಿ ಬೆಳೆಯಲು ಸಾಧ್ಯವಿಲ್ಲ. ಹಿಂದೂ ಸಮಾಜ ಹಲವಾರು ಸಮಸ್ಯೆ ಎದುರಿಸುತ್ತಿದೆ. ಇದಕ್ಕೆ ಧಾರ್ಮಿಕ ನಾಯಕರ ಕೊರತೆಯೇ ಕಾರಣ. ದೇವಾಲಯಗಳು ಆರಾಧನಾ ಕೇಂದ್ರಗಳಾಗದೇ ಕಲೆ, ಸಂಗೀತ, ಸಂಸ್ಕೃತಿಯ ಕೇಂದ್ರಗಳಾಗಿ ಬೆಳೆಯಬೇಕೆಂದು ಹೇಳಿದರು. ಇನ್ನೋರ್ವ ಅತಿಥಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎನ್.ಹರೀಶ್ ಗೌಡ ಮಾತನಾಡಿ, ನಾಗಬನ, ದೇವಸ್ಥಾನ, ದೈವಸ್ಥಾನಗಳು ಸುಸ್ಥಿತಿಯಲ್ಲಿದ್ದಲ್ಲಿ ಊರು ಸುಭಿಕ್ಷೆಯಾಗಿರಲಿದೆ. ಭಕ್ತರು ದೇವರಿಗೆಂದೇ ಮರ ಬೆಳೆಸಬೇಕು. ಇದರಿಂದ ಪರಿಸರದ ಬಗ್ಗೆ ಕಾಳಜಿಯೂ ಮೂಡಲಿದೆ ಎಂದರು.

ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮನೋಹರ ಗೌಡ ಮಾತನಾಡಿ, ಊರಿನವರ ಸಹಕಾರದೊಂದಿಗೆ ನಾಲ್ಕು ತಿಂಗಳ ಅವಧಿಯಲ್ಲಿ ಕಲ್ಕುಡ, ಪಿಲಿಚಾಮುಂಡಿ ದೈವಗಳ ಗುಡಿ ಪುನರ್ ನಿರ್ಮಾಣಗೊಂಡಿದೆ. ಇದರೊಂದಿಗೆ ಶಾಶ್ವತ ಗೋಪುರ, ಚಪ್ಪರ, ನೀರಿನ ಟ್ಯಾಂಕ್ ಸೇರಿದಂತೆ ಹಲವು ಅಭಿವೃದ್ಧಿ ಕಾರ‍್ಯಗಳು ನಡೆದಿವೆ. ಹಿರಿಯರ ಮಾರ್ಗದರ್ಶನ ಹಾಗೂ ಯುವಕರ ಶ್ರಮದಿಂದ ಪ್ರತಿಯೊಂದು ಕಾರ‍್ಯಗಳು ಅಚ್ಚುಕಟ್ಟಾಗಿ ನಡೆದಿದೆ. ಇದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸಮುದಾಯ ಅಭಿವೃದ್ಧಿ ಯೋಜನೆ ನಿರ್ದೇಶಕ ಜಯರಾಮ ನೆಲ್ಲಿತ್ತಾಯ, ಮಾಜಿ ಶಾಸಕ ಪ್ರಭಾಕರ ಬಂಗೇರ, ನೋಟರಿ ಪಬ್ಲಿಕ್ ಮತ್ತು ಹಿರಿಯ ನ್ಯಾಯವಾದಿ ರಾಮಚಂದ್ರ ಗೌಡ ಕೆ., ಡಿ.ಬಿ.ಬಾಲಕೃಷ್ಣ ದೊಡ್ಡಡ್ಕ ಪೆರಾಜೆ, ಮುಗೇರಡ್ಕ ದೈವಗಳ ಸೇವಾ ಸಮಿತಿ ಅಧ್ಯಕ್ಷ ಡಿ.ರಾಮಣ್ಣ ಗೌಡ ದೇವಶ್ಯಗುತ್ತು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಸುಂದರ ಗೌಡ ಉಪ್ಪಿನಂಗಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಮೇಶ್ ಪರಕಾಜೆ, ಜನಾರ್ದನ ಪುಣಿಕೆದಡಿ, ಯಶವಂತ ಮುಗೇರಡ್ಕ, ಸುಂದರ ಗೌಡ ಪರಾರಿ, ದಿಕ್ಷೀತ್ ನಾಮಾರು, ರತನ್ ಪೂಜಾರಿ ಮುಗೇರಡ್ಕ, ಅಶ್ವತ್ ಗೌಡ ಜಾಲ್ನಾಡೆ, ಭರತೇಶ್, ಕೇಶವ ಗೌಡ ಮನ್ಕುಡೆ, ಕೊರಗಪ್ಪ ಗೌಡ ಅತಿಥಿಗಳಿಗೆ ಶಾಲು ಹಾಕಿ, ಹೂ ನೀಡಿ ಗೌರವಿಸಿದರು.

ಸನ್ಮಾನ: ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಯಶಸ್ಸಿನ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ಮನೋಹರ ಗೌಡ ಅಂತರ ಹಾಗೂ ಮುಗೇರಡ್ಕ ದೈವಗಳ ಸೇವಾ ಸಮಿತಿ ಅಧ್ಯಕ್ಷ ಡಿ.ರಾಮಣ್ಣ ಗೌಡ ದೇವಶ್ಯಗುತ್ತುರವರನ್ನು ಗ್ರಾಮಸ್ಥರ ಪರವಾಗಿ ರಮಾನಾಥ ರೈ ಸನ್ಮಾನಿಸಿದರು. ಕು.ಸೌಮ್ಯ ಹಾಗೂ ಸಹನಾ ಮನೋಹರ ಗೌಡರವರು ಸನ್ಮಾನಿತರನ್ನು ಪರಿಚಯಿಸಿದರು. ದೈವ ನರ್ತಕರಾದ ಸುಬ್ಬ ನಲಿಕೆ, ಕರಿಯ ಪರವ, ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಸಹಕಾರ ನೀಡಿದ ಗಿರಿಯಪ್ಪ ಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಗೋಪುರದ ಕೆಲಸ ನಿರ್ವಹಿಸಿದ ಪ್ರಮೋದ್ ಪೂಜಾರಿ ಮುಗೇರಡ್ಕ, ರುಕ್ಮಯ ಪೂಜಾರಿ, ಇತರೇ ಕೆಲಸಗಳಲ್ಲಿ ಸಹಕರಿಸಿದ ನಂದಕುಮಾರ್ ಮೈಸೂರು, ಸಂತೋಷ್ ಕುಮಾರ್ ಮೈಸೂರು, ನೇಮಿಚಂದ್ರ ಪರಾರಿಗುತ್ತು, ಬಾಬು ಗೌಡ ಪೊಯ್ಯ ಇವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.  ಭರತೇಶ್ ಸನ್ಮಾನಿತರ ಪಟ್ಟಿ ವಾಚಿಸಿದರು.

ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆ ಉಪನ್ಯಾಸಕ ಚೇತನ್ ಆನೆಗುಂಡಿ ಸ್ವಾಗತಿಸಿದರು. ಕುಶಾಲಪ್ಪ ಗೌಡ ವಂದಿಸಿದರು. ಬಂದಾರು ಗ್ರಾ.ಪಂ.ಕಾರ‍್ಯದರ್ಶಿ ಗದಿಗೇಶ್ ಕಾರ‍್ಯಕ್ರಮ ನಿರೂಪಿಸಿದರು. ಆಶಾಲಕ್ಷ್ಮಿ ಹಾಗೂ ವಿದ್ಯಾಲಕ್ಷ್ಮಿ ಪ್ರಾರ್ಥಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ವಿವಿಧ ಕಾರ‍್ಯಕ್ರಮ ನಡೆಯಿತು. ಸಭಾ ಕಾರ‍್ಯಕ್ರಮದ ಬಳಿಕ ಸುಗಮ ಸಂಗೀತ ಕಾರ‍್ಯಕ್ರಮ ನಡೆಯಿತು.

ಪುನ: ಪ್ರತಿಷ್ಠೆ: ಜ.15ರಂದು ಬೆಳಿಗ್ಗೆ ಮಹಾಗಣಪತಿ ಹೋಮ, ಬ್ರಹ್ಮಕಲಶ ಪೂಜೆ ನಡೆದು 8.52ರ ಕುಂಭ ಲಗ್ನದಲ್ಲಿ ಕಲ್ಕುಡ ಮತ್ತು ಪಿಲಿಚಾಮುಂಡಿ ದೈವಗಳ ಪುನ: ಪ್ರತಿಷ್ಠೆ ನಡೆಯಿತು. ಬಳಿಕ ಶಿರಾಡಿ, ಕಲ್ಕುಡ ಮತ್ತು ಪಿಲಿಚಾಮುಂಡಿ ದೈವಗಳ ಸಾನಿಧ್ಯದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಿತು. ಬಳಿಕ ತಂಬಿಲ ಸೇವೆ ನಡೆಯಿತು. ಬಳಿಕ ಗುತ್ತು ಧೂಮವತಿ ದೈವಸ್ಥಾನದಲ್ಲಿ ಪ್ರಾರ್ಥನೆ ನಂತರ ವಾರ್ಷಿಕ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ ನಡೆಯಿತು. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವೈದಿಕ ಕಾರ‍್ಯಕ್ರಮ ನಡೆಯಿತು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ಮಧ್ಯಾಹ್ನ ದೈವಗಳ ಭಂಡಾರ-ಭಂಡಾರ ಚಾವಡಿಗೆ ಹಿಂತಿರುಗಿದ ನಂತರ ಕಾರ್ಯಕ್ರಮ ಮುಕ್ತಾಯಗೊಂಡಿತು.

20160115005557 (1) 20160115005557 (2) 20160115005557 (3)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.